ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday 1 November, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೮

‘ಜರ್ನಿ’ಗೆ ‘ಬ್ರೇಕ್’ ಕೊಡುವ ಸೆಡಾರ್ ಬ್ರೇಕ್ಸ್....

ಸೆಪ್ಟೆಂಬರ್ ೩ ಗುರುವಾರ
ಸೆಡಾರ್ ಸಿಟಿಯಿಂದ ಇನ್ನಷ್ಟು ರಿಲ್ಯಾಕ್ಸ್ ಆಗಿ, ಮುಂದಿನ ದಿನಗಳಿಗೆ ಬಟ್ಟೆಗಳನ್ನು ಸರಿಯಾಗಿ ಹೊಂದಿಸಿಟ್ಟುಕೊಂಡು, ಕೆಲವೊಂದು ಪುಟ್ಟ ಚೀಲಗಳಲ್ಲಿ ಧರಿಸಿಯಾದ ಒಗೆಯಲಿರುವ ಬಟ್ಟೆಗಳನ್ನು ತುಂಬಿಸಿ ಕಾರ್ ಟ್ರಂಕಿನ ಮೂಲೆಗೆ ತಳ್ಳಿ, ಹೊರಟಾಗಲೇ ಸುಮಾರು ೧೧ ಗಂಟೆ. ಸೆಡಾರ್ ಬ್ರೇಕ್ಸ್ ತಲುಪಿದಾಗ ೧೨.



ಇದೊಂದು ಸಣ್ಣ ಸ್ಥಳ (ಬೇರೆಯವುಗಳಿಗೆ ಹೋಲಿಸಿದರೆ). ಇಲ್ಲಿ ವಿಸಿಟರ್ ಸೆಂಟರಿನ ಹಿಂದೆಯೇ ಒಂದು ನೋಟಕತಾಣ.









ಅಲ್ಲಿಂದ ಮುಂದೆ ಎರಡು ಮೂರು ತಾಣಗಳು, ಕಣಿವೆಯ ಮೇಲ್ಬದಿಯಲ್ಲೇ ಡ್ರೈವ್. ಇಲ್ಲಿಯೂ ಕೆಲವೊಂದು ಹೈಕಿಂಗ್ ಟ್ರೈಲ್ಸ್ ಇವೆ. ಸಮಯದ ಪರಿಮಿತಿಯಿಂದಾಗಿ ನಾವು ಅವ್ಯಾವುದಕ್ಕೂ ನಮ್ಮ ಶೂಧೂಳಿ ಇರಿಸಲಿಲ್ಲ. ಡ್ರೈವ್ ಮಾತ್ರ ಹೋಗಿ ನೋಟಕತಾಣಗಳಿಂದ ಕೆಳಗೆ ಇಣುಕಿ ಕಂಡಷ್ಟನ್ನು ಚಿತ್ರಪೆಟ್ಟಿಯೊಳಗೆ ಸೇರಿಸಿಕೊಂಡೆವು.











ಅಲ್ಲಿ ಕೊನೆಯಲ್ಲಿ ಸಿಕ್ಕಿತು, ಮೂರು ದಿನಗಳಿಂದ ‘ಇವತ್ತು ರಾತ್ರಿ ನಿಮ್ಮ ಟೆಂಟ್ ಎಬ್ಬಿಸ್ಲಾ?’ ಅಂತ ಗುಡುಗಿ ಹಬ್ಬಿ ಹೆದರಿಸುತ್ತಿದ್ದ ಸ್ಟಾರ್ಮ್. ಎಷ್ಟೋ ವರ್ಷಗಳ ನಂತರ ಮೈಮೇಲೆ ಆಲಿಕಲ್ಲು ಬಿತ್ತು. ಮನಸ್ಸು ಖುಷಿಯಿಂದ ಕುಣಿಯಿತು.





ಆಗಲೇ ದೂರದಲ್ಲಿ ಕೋಲ್ಮಿಂಚು, ಬಳ್ಳಿ ಮಿಂಚುಗಳು. ಗುಡುಗಿನ ಅಬ್ಬರ. ಅವು ಖುಷಿಯನ್ನು ಹಿಂದೆ ತಳ್ಳಿ ಕಾರಿನೊಳಗೆ ಕೂತಿರುವಂತೆ ಆದೇಶಿಸಿದವು. ಕಣಿವೆಯ ಮೇಲಿನ ಬದಿಗಳಲ್ಲಿ ಮಿಂಚು-ಸಿಡಿಲಿನ ಹೊಡೆತಗಳ ಸಾಧ್ಯತೆಗಳು ಜಾಸ್ತಿಯಾದ್ದರಿಂದ ‘ದೊಡ್ಡ ಮಳೆ ಮೋಡಗಳಿದ್ದರೆ, ಮಿಂಚು ಗುಡುಗು ಇದ್ದರೆ, ರಿಮ್ ಕಡೆಗೆ ಬರಬೇಡಿ, ಕಾರಿನೊಳಗೆ ಸುರಕ್ಷಿತವಾಗಿ ಕೂತಿರಿ’ ಅನ್ನುವ ಸೂಚನಾ ಫಲಕಗಳು ಎಲ್ಲ ಕಡೆಯೂ ಕಾಣಸಿಕ್ಕಿದ್ದವು; ಇಲ್ಲೂ ಅಷ್ಟೇ. ಅದನ್ನು ಪಾಲಿಸಿದೆವೆನ್ನಿ.

ಕಾರಿನೊಳಗಿಂದಲೇ ಸುರಿಯುತ್ತಿದ್ದ ಆಲಿಕಲ್ಲುಗಳಿಗೆ, ದಪ್ಪ ದಪ್ಪನೆಯ ನೀರ ಹನಿಗಳಿಗೆ ಕಿವಿಯಾಗಿ ಕಣ್ಣಾಗಿ ಹತ್ತು ನಿಮಿಷ ಕೂತಿದ್ದು ಮತ್ತೆ ಪಯಣ. ರಸ್ತೆ ಬದಿಯಲ್ಲೆಲ್ಲ ಆಲಿಕಲ್ಲುಗಳ ರಾಶಿ- ಹಿಮಪಾತವಾದಂತೆ.



ಅಲ್ಲಿಂದ ಹೊರಟು, ಮಧ್ಯಾಹ್ನದ ಊಟಕ್ಕೆ ಪ್ಯಾಂಗ್ವಿಚ್ ಲೇಕ್ ಬದಿಗೆ ಬಂದೆವು, ಒಂದೂವರೆಗೆ. ಯಾರೂ ಇಲ್ಲದ ಸಂಪೂರ್ಣ ನಿರ್ಜನ ತಾಣ. ಎದುರಿಗೆ ಬೂದು-ನೀಲಿ ಆಗಸದಡಿಯಲ್ಲಿ ಹರಡಿರುವ ಸರೋವರ. ಅದರ ಸುತ್ತೆಲ್ಲ ಗುಡ್ದ-ಬೆಟ್ಟ. ಪ್ರಶಾಂತವಾಗಿತ್ತು.







ಪಕ್ಕದಲ್ಲಿ ಆಡುತ್ತಿದ್ದ ಪುಟ್ಟ ಪುಟ್ಟ ಚಿಪ್‌ಮಂಕ್ (ಸಣ್ಣ ಜಾತಿಯ ಅಳಿಲು)ಗಳ ಆಟ ನೋಡುತ್ತಾ ಊಟ ಮುಗಿಸಿ ಹೊರಟಾಗ ಎರಡು ಗಂಟೆ (ಅವು ನಮ್ಮ ಕ್ಯಾಮರಾ ಕಣ್ಣಿಗೆ ಸಿಕ್ಕಲೇ ಇಲ್ಲ, ಅಷ್ಟೂ ಚುರುಕು. ಚಿತ್ರ ತೆಗೀಲಿಕ್ಕೇಂತ ಸುಮಾರು ಇಪ್ಪತ್ತು ನಿಮಿಷ ಅಲ್ಲೆಲ್ಲ ಓಡಾಡಿದ್ದೇ ಬಂತು!).

ಮುಖ್ಯ ರಸ್ತೆಗೆ ಬಂದು ಸೇರಿಕೊಳ್ಳುವಲ್ಲಿ, ಬದಿಯ ದಿಬ್ಬದ ಮೇಲೆ, ಇವರು ಆರಾಮಾಗಿ ನಿಂತಿದ್ದರು. ಕಾರ್ ನಿಲ್ಲಿಸಿ ಕೆಲವು ಫೋಟೋ ತೆಗೆದುಕೊಂಡೆ, ನೀವೂ ನೋಡಿ ಅವರ ಚಂದ:



ಗಂಟೆ ಎರಡು ನಲ್ವತ್ತು ಆದಾಗ ಬ್ರೈಸ್ ಕ್ಯಾನಿಯನ್ನಿನ ಗೇಟ್ ವೇ ಅನ್ನಬಹುದಾದ ರೆಡ್ ಕ್ಯಾನಿಯನ್ ಒಳಗೆ ಬಂದಿದ್ದೆವು. ಅಲ್ಲೊಂದೆರಡು ಚಿತ್ರಗಳಾದವು.





ಅಲ್ಲಿಂದ ಮುಂದೆ ಸಾಗಿ ಬ್ರೈಸ್ ಕ್ಯಾನಿಯನ್ ತಲುಪಿದಾಗ ಮೂರೂವರೆ. ಕ್ಯಾಂಪ್ ಸೈಟ್ ಕಡೆ ಹೋಗಿ, ಅಲ್ಲಿ ನಮಗೆ ನಿಗದಿಯಾದ ಸ್ಥಳದಲ್ಲಿ ನಮ್ಮ ಹೆಸರಿನ ಚೀಟಿಯಿರುವುದನ್ನು ನೋಡಿಕೊಂಡು ವಿಸಿಟರ್ ಸೆಂಟರಿಗೆ ಬಂದು ಬೇಕಾದ ವಿವರಗಳನ್ನು ಪಡೆದು ಬೇಸಗೆಯಲ್ಲಿ ಬ್ರೈಸಿನ ಸೌಂದರ್ಯ ನೋಡಲು ಹೊರಟೆವು, ನಾಲ್ಕುಕಾಲಕ್ಕೆ.

ಚಳಿಗಾಲದಲ್ಲಿ ಹಿಮದಡಿಯಲ್ಲಿ ಬ್ರೈಸ್ ಹೇಗಿತ್ತು? ಪ್ರವಾಸ ಪುರವಣಿಯ ಮೊದಲ ಕಂತಿನ ಎರಡನೇ ಚಿತ್ರ ನೋಡಿ.

9 comments:

ಗೌತಮ್ ಹೆಗಡೆ said...

akkayya neenu hakkiyaagi huttabekittu:):) eshtondu kade biduve irade valase hakki thara oorindoorige bheti kodteeya:)

ಸುಪ್ತದೀಪ್ತಿ suptadeepti said...

ಹಕ್ಕಿಯಾಗಿ ರೆಕ್ಕೆಯಿಲ್ಲದಿದ್ದರೇನು, ಚಕ್ರಗಳಿವೆಯಲ್ಲ; ಭೂಮಿ ಮೇಲೇ ಸುತ್ತುತ್ತೇನೆ, ಸಾಲ್ದಾ ತಮ್ಮಾ?

ಸೀತಾರಾಮ. ಕೆ. / SITARAM.K said...

ಅದ್ಭುತವಾದ ಛಾಯಾ ಚಿತ್ರಗಳು. ವಿವರಣೆ ಸೊಗಸಾಗಿದೆ.

Sri said...

ಕ್ಯಾನಿಯನ್ ಕಂಟ್ರಿ ಪ್ರವಾಸ ಕಥನ ಸುಂದರವಾಗಿ ಮೂಡಿಬರುತ್ತಿದೆ. ಯುತ-ಅರಿಜೋನ ಅಮೆರಿಕದಲ್ಲಿ ನನ್ನ ಅತ್ಯಂತ ಮೆಚ್ಚಿನ ಸ್ಥಳಗಳು. ಅದರಲ್ಲೂ ಸಾಮಾನ್ಯವಾಗಿ ಬಹಳ ಜನ ಹೋಗದ ಸೀಡರ್ ಬ್ರೆಕ್ಸ್ ಬಗ್ಗೆ ಬರೆದದ್ದು ನೋಡಿ ಖುಷಿಯಾಯ್ತು. ನಾವು ಕೂಡ ಜುಲೈ ೪ ವಾರಾಂತ್ಯ ಹೋಗಿದ್ದೆವು - ಈ ಸೀಡರ್ ಬ್ರೆಕ್ಸ್ ನ ಅಗಲ ಹಾಗು ಆಳ ಎರಡು ಕಾಣಿಸುವಂಥ ಒಂದು ಪ್ಯಾನ್ ಚಿತ್ರ ಇದ್ದಿದ್ದರೆ ಹಾಕಿ.
ಬ್ರೈಸ್ ನಲ್ಲಿರುವಂಥ "ಹೂಡು"ಗಳ ಜೊತೆಯಲ್ಲೇ ನಿತ್ಯಹರಿದ್ವರ್ಣ (ಎವರ್ಗ್ರೀನ್) ಕಾಡಿನ ಹಾಗೂ ಇರುವ ಪ್ರಕೃತಿ ಸೌಂದರ್ಯ ಅವರ್ಣನೀಯ.
ಸಾಧ್ಯವಾದರೆ ಈ ಲೇಖನದ ಜೊತೆ ವೀಡಿಯೊ ಕ್ಲಿಪ್ಸ್ ಹಾಕಬೇಕೆಂದು ಕೋರಿಕೆ.

sritri said...

"ನೀವೂ ನೋಡಿ ಅವರ ಚಂದ"

ಏನ್ಹೇಳ್ಳೀ ಅದರ ಅಂದಾವಾ? :)

ಸುಪ್ತದೀಪ್ತಿ suptadeepti said...

ಸೀತಾರಾಮ್, ಶ್ರೀ, ವೇಣಿ,
ಧನ್ಯವಾದಗಳು.

ಶ್ರೀ,
ಕಣಿವೆಗಳ ಆಳ-ಅಗಲ ಸರಿಯಾಗಿ ಸೆರೆಹಿಡಿಯುವ ಕ್ಯಾಮರಾ ನಮ್ಮಲ್ಲಿಲ್ಲ. ಪೂರ್ಣ ವ್ಯಾಪ್ತಿಯನ್ನು ಹಿಡಿಯಲಾಗಿಲ್ಲ, ಅಥವಾ ನಾವು ಚಿತ್ರ ತೆಗೆದ ಕೋನ ಸರಿಯಾಗಿದ್ದಿಲ್ಲ.
ವಿಡಿಯೋ ಬಗ್ಗೆ:- ಈಗಲೇ ಪುಟ ತೆರೆದುಕೊಳ್ಳಲು ಸಾಕಷ್ಟು ಸಮಯ ತಗೊಳ್ತಿದೆ. ವಿಡಿಯೋ ಕ್ಲಿಪ್ಸ್ ಹಾಕಿದ್ರೆ ಇನ್ನೂ ಕಷ್ಟ; ಅದ್ಕೇ ಹಾಕೋ ಯೋಜನೆ ಇಲ್ಲ. ಜೊತೆಗೆ ಅಷ್ಟೆಲ್ಲ ಟೆಕ್ಕೀ ನಾನಾಗಿಲ್ಲಪ್ಪ ಇನ್ನೂ.

ಗೌತಮ್ ಹೆಗಡೆ said...

saakappa saaku:):)

shivu.k said...

ಮೇಡಮ್,

ಉತ್ತಮವಾದ ಚಿತ್ರಗಳೊಂದಿಗೆ ಮತ್ತೊಮ್ಮೆ ಪ್ರವಾಸದ ವಿವರ ನೀಡಿದ್ದೀರಿ. ನಾನು ಈಗ ನಿಮ್ಮ ಜೊತೆ ಸಿದ್ಧನಿದ್ದೇನೆ.

ಸುಪ್ತದೀಪ್ತಿ suptadeepti said...

ಗೌತಮ್, :) :) :)


ಶಿವು,
ನಿಮ್ಮ ಟೂರ್ ಮುಗಿಸಿ ಬಂದ್ರಾ? ಹೇಗಾಯ್ತು? ಎಲ್ಲಿ ಹೋಗಿದ್ರಿ? ಬರಿತೀರಿ ತಾನೆ?