ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday 13 January, 2010

ತಾಕಲಾಟಗಳ ಮುಖಾಮುಖಿ: ಸಂಸ್ಕಾರ-ಅವಸ್ಥೆ

ಡಾ. ಯು. ಆರ್. ಅನಂತಮೂರ್ತಿಯವರ ಇಬ್ಬರು ನಾಯಕರು

ಪೂರ್ವಪೀಠಿಕೆ:

ಜ್ಞಾನಪೀಠಿಗ ಡಾ. ಯು.ಆರ್.ಎ. ಅವರ ಕುರಿತು ನನಗೆ ಏನೇನೂ ತಿಳಿದಿಲ್ಲ ಅನ್ನಬಲ್ಲೆ. ಯಾಕೆಂದರೆ ತಿಳಿದ ಕೆಲವೊಂದು ವಿಚಾರಗಳು ಅಲ್ಲಿ-ಇಲ್ಲಿ ಮಾಧ್ಯಮ ನೀಡಿದ ಅದರದೇ ಬಣ್ಣ ಬೆರೆಸಿದ ವರದಿಗಳು. ಅದು ಹೊರತು, ಸ್ನೇಹಿತರಿಂದ ಕೇಳಿ ಬಂದ ಅವರದೇ ಬಣ್ಣ ಸೇರಿದ ಸುದ್ದಿಗಳು. ವೈಯಕ್ತಿಕವಾಗಿ ಈ ಹಿರಿಯ ಸಾಹಿತಿಯ ಪರಿಚಯ ನನಗೇನೂ ಎಂದೂ ಆಗಿದ್ದಿಲ್ಲ. ಅಲ್ಲೊಂದು ಇಲ್ಲೊಂದು ಎಂಬಂತೆ ಅವರ ಸಣ್ಣ ಕಥೆಗಳನ್ನು ಓದಿದ್ದು ಬಿಟ್ಟರೆ, ಅವರ ಯಾವುದೇ ಕಾದಂಬರಿಗಳನ್ನು ಓದುವದಾಗಿರಲಿಲ್ಲ ನನಗೆ.

ಹಿರಿಯ ಅಮೆರಿಕನ್ನಡಿಗರೂ ನನ್ನ ಹಿತೈಷಿಯೂ ಆದ ಶ್ರೀ ನಾಗ ಐತಾಳರು, ‘ಯು.ಆರ್.ಎ. ಬಗ್ಗೆ ಒಂದು ಗ್ರಂಥ ಹೊರತರುವ ಉದ್ದೇಶ ನನ್ನದು. ಅದಕ್ಕೆ ಒಂದು ಲೇಖನ ಬರೀಬೇಕು ನೀನು’ ಅಂತ ಕರೆ ಮಾಡಿದಾಗ ಮೊದಲಿಗೆ ನಕಾರವಾಗಿಯೇ ಉತ್ತರಿಸಿದ್ದೆ. ನನ್ನೊಳಗೇ ಗೊಂದಲವಿತ್ತು. ಮತ್ತೆ ಮತ್ತೆ ನನ್ನನ್ನೇ ಕೇಳಿಕೊಂಡೆ. ಯು.ಆರ್.ಎ. ಕೃತಿಗಳನ್ನು ಓದಲು ಸದವಕಾಶ ಅಂತ ‘ಕಾಯುತ್ತಿರುವ’ ನನಗೆ ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೆಲ್ಲಿ ಸಿಕ್ಕೀತು! ಮತ್ತೆ ಐತಾಳರೊಂದಿಗೆ ಮಾತಾಡುವಾಗ ನನ್ನ ಒಪ್ಪಿಗೆ ತಿಳಿಸಿದೆ. ಅವರ ರಾಜಕೀಯ/ಸಾಮಾಜಿಕ ನಿಲುವು/ಹೇಳಿಕೆಗಳಿಂದಾಗಿ, ನನಗೆ ಯು.ಆರ್.ಎ. ಕುರಿತಾಗಿ ಒಳ್ಳೆಯ ಅಭಿಪ್ರಾಯ ಇಲ್ಲವಾದರೂ ಬರೆಯಬೇಕು. ನನ್ನ ಈ ‘ಮಾಧ್ಯಮ ರಾಜಕೀಯ ಪ್ರೇರಿತ’ ದೃಷ್ಟಿಯನ್ನು ಬದಿಗಿರಿಸಿ ಸಾಹಿತ್ಯಿಕವಾಗಿಯೇ ಅವರ ಕೃತಿಗಳನ್ನು ಓದಿ (ಬೇರೆ ಯಾರ ವಿಮರ್ಶೆ, ವಿವರಣೆ, ವಿಶ್ಲೇಷಣೆ, ಲೇಖನಗಳನ್ನೂ ಓದದೆ) ನನ್ನದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಅಂತಂದುಕೊಂಡು ಈ ಬರವಣಿಗೆಗೆ ಕೈಹಾಕಿದ್ದೇನೆ.

ಇಂಥ ಒಂದು ಸಂದರ್ಭ ಒದಗಿಸಿಕೊಟ್ಟ ಶ್ರೀ ಐತಾಳರಿಗೂ ಪುಸ್ತಕಗಳನ್ನು ನೀಡಿದ ಗೆಳತಿ ಶಾಂತಲಾಳಿಗೂ ಮೊದಲೇ ವಂದನೆಗಳು. ‘ಸಂಸ್ಕಾರ’ ಮತ್ತು ‘ಅವಸ್ಥೆ’ ಕಾದಂಬರಿಗಳನ್ನು ನನ್ನ ಓದಿಗೆ ಆಯ್ಕೆ ಮಾಡಿಕೊಂಡಾಗ, ಸ್ನೇಹಿತರೊಬ್ಬರು ‘ಅವಸ್ಥೆ’ಯ ಕುರಿತಾಗಿ ಕೆಲವೊಂದು ‘ಸುದ್ದಿ’ಗಳನ್ನು ಹಂಚಿಕೊಂಡರು. ಅದರಿಂದಲೂ ನನ್ನನ್ನು ಹೊರತಾಗಿಸುವ ಪ್ರಯತ್ನಪಟ್ಟೆ. ಅದೆಲ್ಲವನ್ನೂ ಬಿಟ್ಟು, ಅದರಾಚೆ ನಿಂತು ಒಂದು ಕೃತಿಯನ್ನು ಓದಲು ಸಾಧ್ಯವಿಲ್ಲವೆ? ಸಾಧ್ಯವಾಗಿಸಿಕೊಳ್ಳಬೇಕು ಎನಿಸಿತು. ಆ ನೆಲೆಯಲ್ಲೇ ಪುಸ್ತಕಗಳನ್ನು ಎತ್ತಿಕೊಂಡೆ. ‘ಸಂಸ್ಕಾರ’ ಮತ್ತು ‘ಅವಸ್ಥೆ’- ಎರಡರಲ್ಲೂ ಕಂಡುಬರುವ ನಾಯಕ ಪಾತ್ರಗಳ ವೈಯಕ್ತಿಕ ಮಾನಸಿಕ ತಾಕಲಾಟಗಳನ್ನು, ಘರ್ಷಣೆಗಳನ್ನು ಈ ಲೇಖನದ ಕೇಂದ್ರವಸ್ತುವಾಗಿ ಇರಿಸಿಕೊಂಡಿದ್ದೇನೆ.

೧೯೬೫ರಲ್ಲಿ ಮೊದಲಾಗಿ ಮುದ್ರಣಗೊಂಡು, ೨೦೦೮ರಲ್ಲಿ ಹೆಗ್ಗೋಡಿನ ಅಕ್ಷರ ಪ್ರಕಾಶನದ ಮೂಲಕ ಹದಿಮೂರನೇ ಪ್ರಕಟಣೆ ಹೊಂದಿದ ಕೃತಿ ‘ಸಂಸ್ಕಾರ’, ನೂರಾಎಂಟು ಪುಟಗಳ ಹೊತ್ತಗೆ. ಈ ಕೃತಿಯ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಗಳಾಗಿವೆ; ವಿಮರ್ಶೆ-ವಿಶ್ಲೇಷಣೆಗಳು ಹರಿದಾಡಿವೆ. ಕಾದಂಬರಿ ಮತ್ತು ಚಲನಚಿತ್ರಗಳ ಮೂಲಕ ಬಹುತೇಕ ಕನ್ನಡಿಗರ ಮನ ತಲುಪಿದ ಈ ಕಥೆಯನ್ನು ಪುನರುಚ್ಚರಿಸುವ ಅಗತ್ಯ ಕಾಣುವುದಿಲ್ಲ. ಹಾಗೆಯೇ, ೧೯೭೮ರಲ್ಲಿ ಮೊದಲು ಪ್ರಕಟವಾಗಿ, ೨೦೦೮ರಲ್ಲಿ ಹೆಗ್ಗೋಡಿನ ಅಕ್ಷರ ಪ್ರಕಾಶನದ ಮೂಲಕ ಐದನೇ ಮುದ್ರಣ ಕಂಡ ‘ಅವಸ್ಥೆ’, ನೂರಾಐವತ್ತೆರಡು ಪುಟಗಳ ಪುಸ್ತಕ. ಇದರ ಕುರಿತಾಗಿಯೂ ಹಲವಾರು ಲೇಖನಗಳು ಬರೆಯಲ್ಪಟ್ಟಿವೆ. ಚಲನಚಿತ್ರವಾಗಿಯೂ ಇದು ಅಲೆ ಹುಟ್ಟಿಸಿದೆ. ಇದರ ಕಥೆಯನ್ನೂ ಆವರ್ತಿಸುವ ಅವಶ್ಯಕತೆಯಿಲ್ಲ. ಇವೆರಡೂ ಕಾದಂಬರಿಗಳ ನಾಯಕರು- ‘ಸಂಸ್ಕಾರ’ದ ಪ್ರಾಣೇಶಾಚಾರ್ಯ ಮತ್ತು ‘ಅವಸ್ಥೆ’ಯ ಕೃಷ್ಣಪ್ಪ ಗೌಡ- ತಮ್ಮೊಳಗೆ ಆಂತರಿಕ ಸಂಘರ್ಷದಲ್ಲಿ ತೊಡಗಿಕೊಳ್ಳುತ್ತಾರೆ. ಗೊಂದಲದಲ್ಲಿ ಬೀಳುತ್ತಾರೆ, ವೈಚಾರಿಕತೆಯಲ್ಲಿ ಮುಳುಗುತ್ತಾರೆ. ತರ್ಕ-ವಾದ-ಸಮರ್ಥನೆಗಳ ಸರಣಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈಯೆಲ್ಲ ತಾಕಲಾಟಗಳಲ್ಲೇ ಈ ಪಾತ್ರಗಳೂ ಬೆಳೆಯುತ್ತಾ ಹೋಗುತ್ತವೆ. ಕೆಲವೊಮ್ಮೆ ಓದುಗನ ಮನದ ಪ್ರತಿಬಿಂಬದಂತೆ ಕಂಡು ಇನ್ನು ಕೆಲವೊಮ್ಮೆ ತೀರಾ ಪರಕೀಯವಾಗಿ ನಿಂತುಬಿಡುತ್ತವೆ; ವಾಸ್ತವದ ವಾಸನೆಯೇ ಇಲ್ಲದಂತೆ ಅಸಹಜವಾಗುತ್ತವೆ, ನಮ್ಮದೇ ತುಣುಕುಗಳಂತೆ ಅಂಗಳದ ನೆರಳಾಗುತ್ತವೆ.

ಕೊನೆಯಿಂದ ಮೊದಲ್ಗೊಂಡು:

ಈಯೆರಡೂ ಕಥಾನಕಗಳಲ್ಲಿ, ನಾಯಕ ಪಾತ್ರಗಳಲ್ಲಿ ಸಮಾನಾಂತರಗಳಿವೆ. ಕಥೆಗಳು ಅಂತ್ಯವೊಂದರ ಪ್ರಸ್ತಾಪದಿಂದಲೇ ಮೊದಲಾಗುವುದು, ನಾಯಕರ ಹಿರಿಮೆ ಗಳಿಸುವಂಥಾ ವ್ಯಕ್ತಿತ್ವಗಳು, ಅವರ ದೌರ್ಬಲ್ಯಗಳು, ಅದನ್ನವರು ಮೀರುವ/ಮರೆಸುವ ಸಂದರ್ಭಗಳು, ದೌರ್ಬಲ್ಯಗಳು ಅವರನ್ನು ಧುತ್ತೆಂದು ಎದುರ್ಗೊಳ್ಳುವ ಸಂದರ್ಭಗಳು... ಹೀಗೆ ಕಥಾಹೆಣಿಗೆಯಲ್ಲಿ ಸಮಾನಾಂತರಗಳಾದರೆ, ಪಾತ್ರಗಳಾಗಿ ಪ್ರಾಣೇಶಾಚಾರ್ಯ ಮತ್ತು ಕೃಷ್ಣಪ್ಪಗೌಡರದು ಸಂಕೀರ್ಣ ವ್ಯಕ್ತಿತ್ವಗಳು. ಮೇಲ್ನೋಟಕ್ಕೆ ನೇರ ಸರಳವೆಂಬಂತೆ ಕಂಡುಬಂದರೂ ಆಳದಲ್ಲಿ ತಮ್ಮೊಳಗೇ ದ್ವಂದ್ವ ಕಾಣುವ ಪಾತ್ರಗಳು.

‘ಸಂಸ್ಕಾರ’ದ ಕಥೆಯೂ ನಾಯಕನ ಗೊಂದಲವೂ ಒಂದು ಶವಸಂಸ್ಕಾರದ ಪ್ರಶ್ನೆಯಿಂದಲೇ ಶುರುವಾಗುತ್ತವೆ. ಅಗ್ರಹಾರವೆಲ್ಲ ಗೌರವಿಸುವ ಪ್ರಾಣೇಶಾಚಾರ್ಯರಿಗೆ ತಮ್ಮವನೊಬ್ಬನ ಶವಸಂಸ್ಕಾರವೇ ಪಲ್ಲಟಸ್ಥಾನವಾಗಿ ಆಚಾರ್ಯರ ವ್ಯಕ್ತಿತ್ವವೇ ಸಂಸ್ಕಾರಕ್ಕೊಳಗಾಗುತ್ತದೆ. ಅಲ್ಲಿಯತನಕ ಆತ ಗಳಿಸಿ ಉಳಿಸಿಕೊಂಡಿದ್ದ ಗೌರವ, ಪ್ರತಿಷ್ಠೆಗಳೆಲ್ಲ ನಾರಣಪ್ಪನ ಶವದಂತೆಯೇ ಏಕಾಏಕಿ ಸಮಸ್ಯೆಗಳೇ ಆಗುತ್ತವೆ. ತನ್ಮೂಲಕ ಅವರೊಳಗೆ ಗೊಂದಲಗಳು, ದ್ವಂದ್ವಗಳು, ಆತ್ಮ ವಿವೇಚನೆಗಳು, ನೆನಪುಗಳ ಮರುವಿಶ್ಲೇಷಣೆಗಳು ನಡೆಯುತ್ತವೆ. ಈ ಘರ್ಷಣೆಗಳ ಕೊನೆಯಲ್ಲಿ ಆತ ವಾಸ್ತವದೊಂದಿಗೆ ಮುಖಾಮುಖಿಯಾಗುವ ನಿರ್ಧಾರ ತಾಳುತ್ತಾರೆ ಅನ್ನುವಲ್ಲಿಗೆ ಕಥೆಗಾರ ಓದುಗರನ್ನು ತಂದು ನಿಲ್ಲಿಸುತ್ತಾರೆ. ವಾಸ್ತವದ ಮುಖಾಮುಖಿಯಾದಾಗ ಏನಾಗುತ್ತದೆ? ಇದು ಓದುಗರ ಕಲ್ಪನೆಗೆ ಸೇರಿದ್ದು, ಕಥೆಗಾರನಿಗಲ್ಲ.

‘ಅವಸ್ಥೆ’ಯ ನಾಯಕ ಕೃಷ್ಣಪ್ಪಗೌಡನ ಕಥೆಯೂ ಆತನ ಅವಲಂಬಿತ ಪರಿಸ್ಥಿತಿಯಲ್ಲಿ ‘ಇನ್ನೂ ಐವತ್ತು ತುಂಬುವುದಕ್ಕೆ ಮುಂಚೆಯೇ ಅವನು ಸಾಯುತ್ತಾ ಮಲಗಿದ್ದಾನೆ.’ ಅನ್ನುವ ವಾಕ್ಯದಿಂದ ಮೊದಲಾಗುತ್ತದೆ. ಧಾರ್ಷ್ಟ್ಯದ ಗಡಸು ವ್ಯಕ್ತಿತ್ವವಾಗಿ ಬೆಳೆದು ಬರುವ ಕೃಷ್ಣಪ್ಪ ತನ್ನೊಳಗಿನ ಹುಲಿಯನ್ನು ಸವಾರಿ ಮಾಡುವ ಪ್ರಯತ್ನ ಮಾಡುತ್ತಲೇ ಸಾವಿನ ಬಾಗಿಲಲ್ಲಿ ನಿಂತವನಾಗುತ್ತಾನೆ. ಆತನ ಸಿಡುಕು ಸ್ವಭಾವ ಆತನಲ್ಲಿರುವ ಸ್ವಾಭಿಮಾನ/ ದುರಭಿಮಾನದ ಸಂಕೇತವಾಗಿಯೂ ಆಳದಲ್ಲಿರುವ ಕೀಳರಿಮೆಯ ಗುರುತಾಗಿಯೂ ಕಾಣುತ್ತದೆ. ಇದರ ಸ್ಪಷ್ಟ ಕುರುಹು ಕಥಾನಕದ ಮೊದಲಲ್ಲೇ ಆತ ತನ್ನ ಹೆಂಡತಿಯ ಮೇಲೆ ತೋರುವ ದೌರ್ಜನ್ಯದಲ್ಲಿ, ಆಕೆಯೊಂದಿಗೆ ನಡೆದುಕೊಳ್ಳುವ ಸಿಡುಕು ವರ್ತನೆಯಲ್ಲಿ ಮತ್ತಷ್ಟು ನಿಖರವಾಗುತ್ತದೆ. ದುರಭಿಮಾನ, ಕೀಳರಿಮೆಗಳುಳ್ಳ ವ್ಯಕ್ತಿ ತನ್ನ ಸಹಾಯಕ್ಕೆ ನಿಂತವರನ್ನೂ ತನ್ನವರನ್ನೂ ದೌರ್ಜನ್ಯದಿಂದ ನಡೆಸಿಕೊಳ್ಳುವುದು ಸಾಮಾನ್ಯ. ಇದರಿಂದ ಆತನಿಗೆ ತೋರಿಕೆಗಾದರೂ ಮೇಲ್ಮೆಯ ಭಾವವುಂಟಾಗುತ್ತದೆ. ಇದಕ್ಕೆ ಕೃಷ್ಣಪ್ಪ ಉತ್ತಮ ಉದಾಹರಣೆಯಾಗುತ್ತಾನೆ. ಕಥೆಯ ಅಂತ್ಯದಲ್ಲಿ ಮಾತ್ರ ಕೃಷ್ಣಪ್ಪ ತಾನು ಈವರೆಗೆ ಕಂಡದ್ದನ್ನು, ಪಡೆದದ್ದನ್ನು ಎಲ್ಲ ಬಿಟ್ಟು ಬೇರೊಂದು ದಾರಿಯಲ್ಲಿ ಸಾಗುವ ಆಸೆ ತೋರುತ್ತಾನೆ. ಹೊಸತೊಂದು ಜೀವನದತ್ತ ಮುಖ ಮಾಡುತ್ತಾನೆ.


ತಾಕಲಾಟಗಳ ಸಮಾನಾಂತರ:

‘ಸಂಸ್ಕಾರ’ವು ಹಲವಾರು ಹಿನ್ನೆಲೆ ಸನ್ನಿವೇಶಗಳನ್ನು ಹೆಣೆದುಕೊಂಡು ಕೇವಲ ಏಳೆಂಟು ದಿನಗಳ ಕಾಲಾವಧಿಯಲ್ಲಿ ನಡೆಯುವ ವಿದ್ಯಮಾನದ ಕಥನವಾದರೆ, ‘ಅವಸ್ಥೆ’ಯು ಕೃಷ್ಣಪ್ಪಗೌಡನ ಬಹುಪಾಲು ಜೀವಿತದ ಕಥಾನಕ. ಇಬ್ಬರು ನಾಯಕರೂ ಅಹಂಭಾವವೇ ತೀವ್ರವಾಗುಳ್ಳವರು. ಪ್ರಾಣೇಶಾಚಾರ್ಯರ ಅಹಂಭಾವ ಅಷ್ಟೊಂದು ಗಾಢವಾಗಿ ಎದ್ದು ತೋರುವುದಿಲ್ಲವಾದರೂ ಅವರ ವ್ಯಕ್ತಿತ್ವದ ಮೂಲ ಧಾತು ಅಹಂ. ಕೃಷ್ಣಪ್ಪಗೌಡನ ಪಾತ್ರವೂ ಅಹಂಕಾರಕ್ಕೇ ಹೇಳಿ ಮಾಡಿಸಿದಂತಿರುವಂತಹುದು. ಈ ಗುಣದಿಂದಲೇ ಆತನಿಗೆ ವಿದ್ಯಾರ್ಥಿಗಳ, ಸಹಪಾಠಿಗಳ, ನಂತರ ಸಹಚರರ ಗೌರವ ದೊರೆಯುತ್ತದೆ.

ಪ್ರಾಣೇಶಾಚಾರ್ಯ:

‘ಒಣಗಿ ಮುರುಟಿದ ಭಾಗೀರಥಿಯ ಕೀಚುಗಾಯಿ ದೇಹಕ್ಕೆ ಸ್ನಾನ ಮಾಡಿಸಿ, ಮಡಿಯುಡಿಸಿ, ಯಥಾವತ್ತಾಗಿ ಪೂಜೆ ನೈವೇದ್ಯಾದಿಗಳು ಮುಗಿದ ಮೇಲೆ, ದೇವರ ಪ್ರಸಾದದ ಹೂ ಮುಡಿಸಿ, ತೀರ್ಥಕೊಟ್ಟು, ಅವಳಿಂದ ಕಾಲು ಮುಟ್ಟಿಸಿಕೊಂಡು ಆಶೀರ್ವದಿಸಿ, ರವೆಗಂಜಿಯನ್ನು ಬಟ್ಟಲಲ್ಲಿ ಪ್ರಾಣೇಶಾಚಾರ್ಯರು ತಂದರು.’ ಎನ್ನುವ ಏಕವಾಕ್ಯ ಪರಿಚ್ಛೇದದಿಂದ ಮೊದಲಾಗುವ ಕಾದಂಬರಿಯಲ್ಲಿ ಪ್ರಾಣೇಶಾಚಾರ್ಯರ ಪಾತ್ರದ ಮೊದಲ ಚಿತ್ರಣವೂ ಅದೇ. ಇಲ್ಲಿಯೇ ಅವರ ಧರ್ಮಶ್ರದ್ಧೆ ಎದ್ದು ಕಾಣುತ್ತದೆ. ರೋಗಿಯಾಗಿರುವ ಭಾಗೀರಥಿಯನ್ನು ತಾನೇ ಎತ್ತಿಕೊಂಡು ಹೋಗಿ ಸ್ನಾನ ಮಾಡಿಸುವ ಅವರೇ ಆ ನಂತರ ದೇವರ ಪ್ರಸಾದದ ತೀರ್ಥ-ಹೂ ಕೊಟ್ಟು ಅವಳಿಂದ ಕಾಲು ಮುಟ್ಟಿಸಿಕೊಳ್ಳುವಾಗ ಮಾತ್ರ ಪತಿ-ಪತ್ನಿಯ ಸಂಬಂಧ ಕಂಡುಬರುತ್ತದೆ. ಅದರ ಮರುಕ್ಷಣದಲ್ಲೇ ‘ನಿನ್ನ ಗಂಜಿ ಮೊದಲಾಗಲಿ’ ಎನ್ನುವಾಗ ಮತ್ತೆ ರೋಗಿ-ಶುಶ್ರೂಷಕ ಸಂಬಂಧಕ್ಕೆ ಹೋಗಿಬಿಡುತ್ತದೆ. ನಂತರದಲ್ಲಿ ಪ್ರಾಣೇಶಾಚಾರ್ಯರು, ‘ಇವಳು ರೋಗಿಯಾದ್ದರಿಂದ ನಾನು ಇನ್ನಷ್ಟು ಹದವಾದೆ’ ಎಂದು ಹಿಗ್ಗುವಾಗ, ಅವರ ಹಿಗ್ಗು ಅಹಂಭಾವದಂತೆ ತೋರುವುದೂ ಇದೇ ಕಾರಣಕ್ಕೆ. ‘ಮುಕ್ತಿಮಾರ್ಗದ ತನ್ನ ಪರೀಕ್ಷೆಗೆಂದೇ ಭಗವಂತ ತನಗೆ ಬ್ರಾಹ್ಮಣ ಜನ್ಮ ಕೊಟ್ಟು ಇಂತಹ ಸಂಸ್ಕಾರಕ್ಕೆ ತನ್ನನ್ನು ತೊಡಗಿಸಿದ’ ಎಂದುಕೊಳ್ಳುವವರು ಏಳಲಾಗದ ನಿತ್ಯರೋಗಿ ಪತ್ನಿಯಿಂದ ದಿನವೂ ಕಾಲುಮುಟ್ಟಿಸಿಕೊಳ್ಳುವದು ಅವರ ನಿಷ್ಕಾಮಕರ್ಮದ ಅಂಗದಂತೆ ಕಾಣುವುದೇ ಇಲ್ಲ. ಬ್ರಾಹ್ಮಣತ್ವದ, ಗಂಡನಾಗಿರುವ ಹಿರಿತನದ ಅಧಿಕಾರದಂತೆ ತೋರುತ್ತದೆ.

‘ಮಹಾ ತಪಸ್ವಿ, ಜ್ಞಾನಿ, ವೇದಾಂತ ಶಿರೋಮಣಿ’ ಅನ್ನಿಸಿಕೊಂಡಿದ್ದ ಪ್ರಾಣೇಶಾಚಾರ್ಯರು, ನಾರಣಪ್ಪನ ಶವ ಸಂಸ್ಕಾರದ ವಿಚಾರದಲ್ಲಿ ಮಾತ್ರ ದೂರಾಲೋಚನೆ ಮಾಡಲೇ ಇಲ್ಲ. ಬ್ರಾಹ್ಮಣ್ಯದ, ಧರ್ಮ-ಶಾಸ್ತ್ರಗಳ, ದೇವರ ಸುಳಿಯಲ್ಲಿಯೇ ಸಿಲುಕಿ ಯೋಚಿಸುತ್ತಿದ್ದ ಅವರು ಅದೆಂಥ ಜ್ಞಾನಿ? ವೇದಾಂತ ಶಿರೋಮಣಿಗೆ ಶವವೊಂದು ನಿರ್ಜೀವ ವಸ್ತು ಎನ್ನುವ ಅರಿವು ಮೂಡುವುದಿಲ್ಲ. ಆದರೆ ಅದೇ ಅರಿವು, ಅಲ್ಪಜ್ಞಳಾದ ಚಂದ್ರಿಗೆ ಎರಡನೇ ರಾತ್ರೆ ಹೊಳೆಯುತ್ತದೆ. ‘ಅದೊಂದು ಶವ, ಅದು ಕೊಳೆಯುತ್ತಿದೆ. ಅದನ್ನು ದಹಿಸಬೇಕು’ ಅನ್ನುವ ಒಂದೇ ಪ್ರಜ್ಞೆಯಿಂದ ಆಕೆ ನಾರಣಪ್ಪನ ಸ್ನೇಹಿತರಿಂದ- ಅವರು ಮುಸಲ್ಮಾನರಾದರೂ- ಆ ಕೆಲಸ ಮಾಡಿಸಿಯೇ ಊರು ಬಿಟ್ಟು ಹೊರಡುತ್ತಾಳೆ. ಇದೆಲ್ಲದರ ಸುಳಿವಿಲ್ಲದ ಆಚಾರ್ಯರಿಗೆ, ಮೇಳಿಗೆಯ ಹಾದಿಯಲ್ಲಿ, ತನ್ನೆಲ್ಲಾ ದ್ವಂದ್ವಗಳ ನಡುವಲ್ಲಿ, ತನ್ನ ಸಾತ್ವಿಕತೆಯ ಮೂಲಕ್ಕೆ ಏಟು ಬಿದ್ದಾಗಲಷ್ಟೇ ಈ ದೇಹದ ನಶ್ವರತೆಯ ಪ್ರಜ್ಞೆ ಉದಯಿಸುತ್ತದೆ. ‘ಸುಟ್ಟುಹೋಗಬೇಕಾದ ಒಂದು ವಸ್ತು ಸುಟ್ಟುಹೋಗಬೇಕಾದ ವಸ್ತುಗಳ ನಡುವೆ ಸಮಸ್ಯೆಯಾಯಿತು’ ಎಂದುಕೊಳ್ಳುತ್ತಾರೆ. ಅಲ್ಲಿ ಅವರ ಅಹಂಭಾವ ದಣಿದಿತ್ತು, ಆದ್ದರಿಂದ ಈ ದೃಷ್ಟಿ ಸಾಧ್ಯವಾಯಿತು.

‘ಯಾವತ್ತಿನಿಂದಲೂ ಈ ನಾರಣಪ್ಪ ತನಗೆ ಸಮಸ್ಯೆಯಾಗಿಯೇ ಉಳಿದ’ ಎಂದುಕೊಳ್ಳುವ ಆಚಾರ್ಯರಿಗೆ ಅವನ ಹಠವನ್ನೂ ಮೀರಿಸಿ, ತಾನು ಗೆದ್ದೇ ಗೆಲ್ಲುತ್ತೇನೆನ್ನುವ ಹಠವಿತ್ತಲ್ಲ; ಅದೂ ಅವರ ಗಮನಕ್ಕೆ ಬರುವುದು ಧರ್ಮಶಾಸ್ತ್ರಗಳಲ್ಲಿ ತಮ್ಮ ಸಮಸ್ಯೆಗೆ ಉತ್ತರ ಸಿಕ್ಕದ ನಿರಾಶೆಯ ಘಳಿಗೆಯಲ್ಲಿ. ಆಗ ಅವರ ಮೇಲ್ಮೆ ತಲೆತಗ್ಗಿಸಿದ ಹೊತ್ತು. ಆದ್ದರಿಂದ ಅವರಿಗೆ ಒಂದು ಪರಿಸ್ಥಿತಿಯ ಇನ್ನೊಂದು ಮಗ್ಗುಲು ಕಾಣುತ್ತದೆ. ನಾರಣಪ್ಪ ತನಗೆ ಸಮಸ್ಯೆಯಾಗಿದ್ದಾಗ ಆತನನ್ನು ಮೀರಿಸುವ ಹಠ ತಾನು ತೊಡುತ್ತಿದ್ದೇನೆನ್ನುವದು ಅವರ ತಿಳಿವಿಗೆ ಬರುವುದಿಲ್ಲ. ಆಗೆಲ್ಲ ಆತ ತನ್ನನ್ನು ಕಂಡು ಎದ್ದು ನಿಲ್ಲುವ, ಕುಡಿದಿದ್ದಾಗ ಮುಖ ಮುಚ್ಚಿಕೊಳ್ಳುವ ನಡವಳಿಕೆಗಳೇ ಗೌರವ ಭಾವದಂತೆ ತೋರಿ ಆಚಾರ್ಯರ ಗರ್ವ ಹೆಚ್ಚುತ್ತಿತ್ತು. ಈತನನ್ನು ತಾನು ಗೆದ್ದೇ ತೀರುವೆನೆನ್ನುವ ಛಲಕ್ಕೆ ಬೆಂಬಲವಾಗುತ್ತಿತ್ತು. ಅವರ ಅಹಮಿಕೆಗೆ ಒತ್ತು ಕೊಡುತ್ತಿತ್ತು.

ತನ್ನ ತಪಃಶಕ್ತಿಯಿಂದ ನಾರಣಪ್ಪನನ್ನು ಜರ್ಜರಗೊಳಿಸಿ ಅವನೊಳಗೆ ಅಮೃತ ಹರಿಸಬೇಕೆನ್ನುವ ಅವರ ಹಂಬಲವನ್ನು ಅವರು ಮರುಕವೆಂದು ಭಾವಿಸುತ್ತಾರೆ. ತಮ್ಮೊಳಗಿನ ಸಾತ್ವಿಕ ಶಕ್ತಿಯಿಂದ ಅವನನ್ನು ತಮ್ಮ ಪ್ರಭಾವಲಯದೊಳಗೆ ಸೆಳೆದುಕೊಳ್ಳುತ್ತೇನೆಂದು ನಂಬಿದ್ದರವರು. ಆದ್ದರಿಂದಲೇ ಆತನ ಆವೇಶ-ಆವೇಗಗಳ ಎದುರು ಹತಾಶರಾದರೂ ತೋರಗೊಡುವುದಿಲ್ಲ. ಆದರೆ ಅವರೊಳಗಿನ ತಲ್ಲಣ, ವ್ಯಾಕುಲತೆಗಳು, ‘ಚಿತ್ತವೃತ್ತಿಯ ನಿರೋಧ ಸಾಧ್ಯವಾಗಲಿಲ್ಲ’ ಎನ್ನುವಲ್ಲಿ ಎದ್ದು ತೋರುತ್ತವೆ. ಅವರಿಗೆ ತನ್ನ ಶಕ್ತಿಯ ಬಗೆಗೆ ಸಂಶಯ ಆರಂಭವಾದ ಲಕ್ಷಣವದು. ಅದರಿಂದಾಗಿಯೇ, ತಾವು ಹೇಳುತ್ತಿದ್ದ ರಸಭರಿತ ಕತೆಗಳ ಬದಲು ವ್ರತದ ನೀತಿ ಕತೆಗಳನ್ನು ಹೇಳತೊಡಗಿದರು. ಅಲ್ಲಿಯೇ ಅವರ ಅಂತಃಶಕ್ತಿಯ ಮೇಲೆ ನಾರಣಪ್ಪ ಗೆಲುವು ಸಾಧಿಸಿದಂತೆ. ಅವನು ಸೂಕ್ಷ್ಮವಾಗಿ ಹೇಳಿದ ಬೆಳ್ಳಿ-ಶ್ರೀಪತಿಯ ಕತೆಯಿಂದಾಗಿ ಈ ಬದಲಾವಣೆ ಆಗಿಹೋಯಿತು. ಇವೆಲ್ಲ ಅವರ ಅರಿವಿಗೆ ಬರುವಷ್ಟರಲ್ಲಿ ಸಮಯ ಮಿಂಚಿಹೋಗಿತ್ತು.

‘ನಾರಣಪ್ಪನ ಸವಾಲು ತ್ರಿವಿಕ್ರಮ ಪಾದವಾಗಿ ಬೆಳೆಯುತ್ತಿದೆ’ ಎನ್ನುತ್ತಲೇ ಪ್ರಾಣೇಶಾಚಾರ್ಯರು ಧೈರ್ಯಗೆಡುತ್ತಾರೆ. ಧರ್ಮಶಾಸ್ತ್ರದಲ್ಲಿ ಉತ್ತರ ಸಿಗಲಾರದಾಗ ಅವರಿಗಾಗುವ ಹತಾಶೆಯೂ ಅವರನ್ನು ಜರ್ಜರಗೊಳಿಸುತ್ತದೆ. ಅಷ್ಟರಲ್ಲೇ ದಾಸಾಚಾರ್ಯರು, ಚಂದ್ರಿ ಕೊಟ್ಟ ಚಿನ್ನದಿಂದ ಮಾರುತಿಗೆ ಕಿರೀಟ ಮಾಡಿಸಿರೆನ್ನುವ ಮಾತು ಅವರಿಗೆ ಆಶಾಕಿರಣವಾದರೂ ಮತ್ತೆ ಅವರು ಧರ್ಮಶಾಸ್ತ್ರದ ಕಡೆ ನೋಡುತ್ತಾರೆಯೇ ಹೊರತು ವಾಸ್ತವಿಕವಾಗಿ, ಮಾನವೀಯವಾಗಿ, ಕೊಳೆಯುತ್ತಿರುವ ಹೆಣದ ಬಗ್ಗೆಯಾಗಲೀ ಊಟ-ಉಪಾಹಾರವಿಲ್ಲದ ಅಗ್ರಹಾರದ ಇತರ ಬ್ರಾಹ್ಮಣರ ಬಗ್ಗೆಯಾಗಲೀ ಯೋಚಿಸುವುದೇ ಇಲ್ಲ. ಅರೆಮರುಳು ಲಕ್ಷ್ಮೀದೇವಮ್ಮನ ಬಾಯಲ್ಲಿ ಬರುವ ಸತ್ಯ- ‘ಬ್ರಾಹ್ಮಣರೆಂದು ಹೇಳತಿರೋರೆಲ್ಲ ಈಗ ಅವನ ಹೆಣಾನ ತೆಗೀದೇ ಕೂತಿದೀರಲ್ಲೋ. ಎಲ್ಲಿಗೆ ಹೋಯಿತೋ ನಿಮ್ಮ ಬ್ರಾಹ್ಮಣ್ಯ? ರೌರವ ನರಕಕ್ಕೆ ಬಿದ್ದು ಸಾಯ್ತೀರಿ... ...ಅಗ್ರಹಾರದಲ್ಲಿ ರಾತ್ರೆಯೆಲ್ಲ ಒಂದು ಹೆಣಾನ ಸಂಸ್ಕಾರ ಮಾಡದೆ ಇಟ್ಟುಕೊಂಡದ್ದು ಉಂಟ?’- ಪ್ರಾಣೇಶಾಚಾರ್ಯರಿಗೆ ಹೊಳೆಯದೇ ಹೋಗುವುದು ಆಶ್ಚರ್ಯ.

ಧರ್ಮಶಾಸ್ತ್ರಗಳಲ್ಲಿ ಸಂಸ್ಕಾರದ ಗೊಂದಲಕ್ಕೆ ಉತ್ತರ ದೊರಕದಾಗ ಆಚಾರ್ಯರಿಗೆ ತನಗಿರುವ ಅಹಂಕಾರ, ಮೇಲ್ಮೆಯ ಭಾವ, ಮಾನ-ಖ್ಯಾತಿಗಳ ಯೋಚನೆ, ಇತರರ ಮೂದಲಿಕೆಯ ಅಂಜಿಕೆ, ಎಲ್ಲವೂ ಅರಿವಿಗೆ ಬರುತ್ತವೆ. ‘...ಅಹಂಕಾರಕ್ಕಿಷ್ಟು ಬೆಂಕಿಯಿಟ್ಟಿತು...’ ಅಂತಲೂ ಅಂದುಕೊಳ್ಳುವವರು ನಿರ್ಣಯಿಸುವ ಜವಾಬ್ದಾರಿಯನ್ನು ಅಲ್ಲಿಗೇ ಬಿಡುವುದಿಲ್ಲ. ಮಾರುತಿಯ ಅಪ್ಪಣೆ ಪಡೆಯುವ ನೆಪದಲ್ಲಿ ಮತ್ತೊಂದು ದಿನ ಹೆಣವನ್ನು ನಾರಗೊಡುತ್ತಾರೆ. ಅಂದರೆ, ಹೆಣ ಕೊಳೆಯುತ್ತಿರುವ ಸಂದಿಗ್ಧಕ್ಕಿಂತಲೂ ತಮ್ಮಿಂದ ಉತ್ತರಿಸಲಾಗದ ಗೊಂದಲದ ಅವಮಾನ ಅವರಿಗೆ ಮುಖ್ಯವಾದಂತೆ ತೋರುತ್ತದೆ. ನಾರಣಪ್ಪನನ್ನು ತನ್ನ ತಪಃಶಕ್ತಿಯಿಂದ, ಪುಣ್ಯಶಕ್ತಿಯಿಂದ ವಿವೇಕಕ್ಕೆ ಎಳೆಯುತ್ತೇನೆಂದು ಅವರಿಗಿದ್ದದ್ದು ಹಠವೆಂದು ಅವರ ಗಮನಕ್ಕೆ ಬಂದರೂ ಅದರ ಪರಿಣಾಮ ಮಾತ್ರ ಆಂತರಿಕವಾಗಿ ಆಗುವುದಿಲ್ಲ.

ಒಂದಿಡೀ ಹಗಲಿನ ಫಲವಿಲ್ಲದ ಪ್ರಾರ್ಥನೆಯ ಕೊನೆ ನಿರಾಶಾದಾಯಕವಾದಾಗ ಧರ್ಮದಲ್ಲಿ ದೇವರಲ್ಲಿ ಅಪಾರ ಶ್ರದ್ಧೆಯಿರಿಸಿಕೊಂಡಿದ್ದ ಆಚಾರ್ಯರಿಗಾದ ಅವಮಾನ-ಅನುಮಾನ ಹತಾಶೆಗಳನ್ನು ಲೆಕ್ಕಹಾಕಬಹುದು. ಎಲ್ಲವನ್ನೂ ಕಳೆದುಕೊಂಡ ದೌರ್ಭಾಗ್ಯನ ದೀನತೆಯಲ್ಲಿ ರಾತ್ರೆಯಲ್ಲಿ ಕಾಡಿನಲ್ಲಿ ತಡವರಿಸಿದವರಿಗೆ ಆಧಾರವಾಗುವುದು ಚಂದ್ರಿಯ ಆರ್ದ್ರ ಹೃದಯ. ಇಲ್ಲೆಲ್ಲ ಪ್ರಾಣೇಶಾಚಾರ್ಯರ ವ್ಯಕ್ತಿತ್ವದ ಇನ್ನೊಂದೇ ಮುಖ ಕಾಣುತ್ತದೆ. ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿಯೇ ಆಸರೆಯಂತೆ ಕಾಣುವ ಹಾಗೆ ಇವರೂ ಹತಾಶೆಯ ಕತ್ತಲ ಕೂಪದಲ್ಲಿ ಒಂಟಿಯಾಗಿದ್ದಾಗ ಸಿಕ್ಕಿದ ಚಂದ್ರಿಯನ್ನು ಉದ್ವೇಗದಿಂದ ಗಾಬರಿಯಿಂದ ಆತುಕೊಂಡರು.

ಅದರ ಮುಂದಿನ ಅಂಗ ನಾಟಕೀಯವೇ ಆದರೂ ಆಚಾರ್ಯರ ಇನ್ನಷ್ಟು ಆಳದ ದ್ವಂದ್ವಕ್ಕೆ, ಸಂದಿಗ್ಧಕ್ಕೆ, ಸ್ವ-ವಿಮರ್ಶೆಗೆ ದಾರಿ ಮಾಡಿಕೊಡುತ್ತದೆ. ಅವರ ಆಂತರಿಕ ಸಂಸ್ಕಾರ ಇನ್ನೊಂದು ವಲಯದಲ್ಲಿ ಪರಿಷ್ಕಾರಕ್ಕೆ ಒಳಗಾಗುವ ಪ್ರಕ್ರಿಯೆ ತೆರೆದುಕೊಳ್ಳುತ್ತದೆ. ಈ ಕ್ರಿಯೆಯ ಆರಂಭಿಕ ಸೂಚನೆ ಆಚಾರ್ಯರು, ಕಾಡಿನಲ್ಲಿ ನಡೆದ ಘಟನೆಯನ್ನು ಉಳಿದ ಬ್ರಾಹ್ಮಣರಿಗೆ ತಿಳಿಸುವಂತೆ ಚಂದ್ರಿಯನ್ನು ಕೇಳಿಕೊಳ್ಳುವುದು, ನಡೆದದ್ದರಲ್ಲಿ ತಮ್ಮದೇನೂ ಪಾಲಿಲ್ಲ ಅಥವಾ ತಮ್ಮ ತಪ್ಪಿಲ್ಲ ಅನ್ನುವಂತೆ; ಆಕೆಯೇ ಜವಾಬ್ದಾರಳು ಅನ್ನುವಂತೆ. ಈ ಮಾತನ್ನು ಚಂದ್ರಿಗೆ ಹೇಳಿ ಅವರು ನಿರಂಬಳರಾಗುವ ಪರಿ ಜವಾಬ್ದಾರಿಯಿಂದ ಜಾರಿಕೊಳ್ಳುವವರಂತೆ ಕಾಣುತ್ತದೆಯೇ ಹೊರತು ವೇದಾಂತ ಶಿರೋಮಣಿಯಂತಲ್ಲ. ಅಲ್ಲವರು ಕೇವಲ ಗಂಡು ಮಾತ್ರವೇ ಆಗಿದ್ದರು. ತಮ್ಮ ಪಾಂಡಿತ್ಯದ ಪೊರೆ ಕಳಚಿಕೊಂಡಿದ್ದರು. ಮಾರುತಿಯಿಂದ ಉತ್ತರ ದೊರೆಯದ ಅವಮಾನದ ಹಿನ್ನೆಲೆಯಲ್ಲಿ ಈ ರೀತಿ ಪಾಂಡಿತ್ಯದ, ಬ್ರಾಹ್ಮಣ್ಯದ ಪೊರೆ ಕಳೆದುಕೊಂಡ ಪ್ರಾಣೇಶಾಚಾರ್ಯರು ಹೊಸದೊಂದು ವ್ಯಕ್ತಿಯಾಗಿ ಸಂಸ್ಕಾರಗೊಳ್ಳುವ ಹಾದಿಗೆ ತೆರೆದುಕೊಂಡರು.

ಚಂದ್ರಿಯ ಪ್ರಕರಣದ ನಂತರ ಆಚಾರ್ಯರಿಗೆ ಕೇವಲ ಮಾನವ ಭಾವನೆ-ಕಾಮನೆಗಳ ವಾಸನೆ ಗಮನಕ್ಕೆ ಬರತೊಡಗುತ್ತವೆ. ನಿತ್ಯರೋಗಿ ಪತ್ನಿ, ಇಪ್ಪತ್ತು ವರ್ಷಗಳಲ್ಲಿ ಕಂಡವಳು, ಅಂದು ಹೇಸಿಗೆಯ ಮತ್ತು ಸುತ್ತೆಲ್ಲ ಹರಡಿರುವ (ನಾರಣಪ್ಪನ ಶವದ ಮತ್ತು ಸತ್ತ ಇಲಿಗಳ) ನಾತದ ಮೂಲವೆನ್ನುವಂತೆ ಕಂಡುಬರುತ್ತಾಳೆ. ತನ್ನ ಜೀವನ ಕ್ರಮವೆಲ್ಲ ಸ್ಮೃತಿಪಟಲದಲ್ಲಿ ಹಾದುಹೋಗುತ್ತದೆ. ಹದಿನಾರನೇ ವಯಸ್ಸಿನಲ್ಲಿ ವೇದಾಂತ ಕಲಿಯಲು ಕಾಶಿಗೆ ಹೊರಟಾಗಿನ ಮನಃಸ್ಥಿತಿಗೇ ಈಗ ಹಿಂತಿರುಗಿದಂತೆ ಅವರಿಗನ್ನಿಸುತ್ತದೆ. ಇಲ್ಲೆಲ್ಲ ಅವರೊಳಗೇ ನಡೆಯುವ ತರ್ಕ-ವಾದ ಸರಣಿಗಳಲ್ಲಿ ಆಚಾರ್ಯರ ನಂಬಿಕೆಗಳು ಅಲುಗಾಡಿ ಸಡಿಲಾಗುವುದು ಕಂಡುಬರುತ್ತದೆ. ಅವರೊಳಗೆ ಎಂದೂ ಕಂಡಿರದಿದ್ದ ಕಲ್ಪನೆಗಳೆಲ್ಲ ರೂಪ ಪಡೆಯುತ್ತವೆ. ಜೊತೆಗೆ, ಮದುವೆಯಾಗಿ ಸಂಗಾತಿಯಾದವಳು ಮತ್ತು ದೇಹಸುಖ ಸಂಗಾತಿಯಾದವಳು- ಇಬ್ಬರೂ ತನ್ನನ್ನು ಬಿಟ್ಟು ಹೋದರೆ ತಾನು ಅನಾಥನೆನ್ನುವ ಭಾವ ಅವರಿಗೆ ಗೋಚರವಾಗುತ್ತದೆ. ವೇದಾಂತ ಶಿರೋಮಣಿಯ ಪಾಂಡಿತ್ಯದಲ್ಲಿ ಅದುತನಕ ಅನುಸರಣೆ ಮತ್ತು ಆಚರಣೆಗಳು ಮಾತ್ರವಿದ್ದು ಆ ಪೊಳ್ಳು ಮಹಲು ಕಾಡಿನ ಕತ್ತಲಲ್ಲಿ ಪುಡಿಯಾಗಿರುತ್ತದೆ. ತತ್ಪರಿಣಾಮ ಆಚಾರ್ಯರಿಗೆ ಅಯೋಮಯವಾಗುತ್ತದೆ. ಅದೇ ಗೊಂದಲ ಗೋಜಲಿನಲ್ಲಿ ತನ್ನತ್ತ ಮಾರ್ಗದರ್ಶನಕ್ಕಾಗಿ ದೈನ್ಯದಿಂದ ನೋಡುತ್ತಿದ್ದ ಬ್ರಾಹ್ಮಣರಿಗೆ ಅಳೆದು ತೂಗಿ ಕೊನೆಗೂ ಹೇಳಿದ್ದು ಅರ್ಧ ಸತ್ಯ- ‘ನಾನು ಸೋತೆ... ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಮಾಡಿ...’. ಸತ್ಯವನ್ನು ಎದುರಿಸುವ ಛಾತಿಯನ್ನು ಅವರು ಕಳೆದುಕೊಂಡಿದ್ದು ಬರಿಯ ಸೌಜನ್ಯದ ಮಾತಾಡಿದ್ದರು.

ಹಿಂದಿನ ಎಲ್ಲ ಘಟನೆಗಳ ಮೆಲುಕಿನಲ್ಲಿ ನಾರಣಪ್ಪ ಆಡಿದ ಮಾತುಗಳೆಲ್ಲ ನೆನಪಾಗುವಾಗ, ಆಚಾರ್ಯರಿಗೆ ನಮ್ಮ ಕರ್ಮಕ್ಕೆಲ್ಲ ಪ್ರತಿಫಲ ಇರುವಂತೆಯೇ ತದ್ವಿರುದ್ಧ ಫಲವೂ ಇರುತ್ತದೆ ಎಂದಿದ್ದ ಮಾತು ಹಾಗೂ ತಮ್ಮ ಶಾಕುಂತಲೆಯ ವರ್ಣನೆ ಕೇಳಿ ತಡೆಯಲಾಗದೆ ಹೊಲೆಯರ ಹೆಣ್ಣನ್ನು ತಬ್ಬಿಕೊಂಡಿದ್ದ ಬ್ರಾಹ್ಮಣರ ಹುಡುಗನ ಕತೆ ಮರುಕಳಿಸುತ್ತದೆ. ಹಿಂದಿನಂತಲ್ಲದೆ, ಆ ಹೆಣ್ಣು ಯಾರಿರಬಹುದೆನ್ನುವ ಯೋಚನೆಯೂ, ಅವರ ಬಾಹ್ಯ ಕಣ್ಣಿಗೆ ಗೋಚರವಾಗಿರದಿದ್ದ ಬೆಳ್ಳಿಯ ಸೌಂದರ್ಯವೂ ಈಗ ಹೊಸ ಹೊಳಹಿನಲ್ಲಿ ಎದ್ದುಬರುತ್ತವೆ. ಅವಳನ್ನು ಅನುಭವಿಸುವ ದಾಹವಾಗುತ್ತದೆ. ಧರ್ಮಕರ್ಮಕ್ಕೆ ಅಂಟಿಕೊಂಡಿದ್ದ ಆಚಾರ್ಯರು ದೇಹಧರ್ಮದ ಕರೆ ಆಲಿಸುತ್ತಾರೆ. ತಾನು ನಿರನುಭವಿಯಾಗಿ ಉಳಿದೆನೆಂದು ಹಲುಬುತ್ತಾರೆ. ತಾನು ಕಾಮವನ್ನು ಬಿಟ್ಟರೂ ಕಾಮ ತನ್ನನ್ನು ಬಿಡಲಿಲ್ಲವೆಂದು ಸಮಾಧಾನ ಹೇಳಿಕೊಳ್ಳುತ್ತಾರೆ. ಪಳಗಿಸಿ ಒಳಗೆ ಅಡಗಿದ್ದ ಹುಲಿಯಂತೆ ತನ್ನೊಳಗಿದ್ದ ಕಾಮ ಚಂದ್ರಿಯ ಸ್ಪರ್ಶದಿಂದ ತನ್ನ ಸ್ವಧರ್ಮಕ್ಕೆ ನೆಗೆದು ಹಲ್ಲು ತೋರಿಸಿತೆಂದು ಸಮಝಾಯಿಸಿಕೊಳ್ಳುತ್ತಾರೆ.

ದೇಹಧರ್ಮದ ಕರೆಗೆ ಓಗೊಟ್ಟವರೇ ಮಣ್ಣಿನಲ್ಲಿ ಮೂಗಿಟ್ಟ ಮೃಗದಂತೆ ತಾನು ಚಂದ್ರಿಯನ್ನು ಕೂಡಿದ್ದ ಕಾಡು ಹೊಕ್ಕು ಅಲ್ಲಿನ ಮಣ್ಣಿನ ವಾಸನೆ, ಹುಲ್ಲಿನ ವಾಸನೆ, ಸುಗಂಧಿಯ ಬೇರಿನ ವಾಸನೆ ಹೀರುವುದು ಅವರೊಳಗಿನ ಮಾನವ ಸಹಜ ಆಕಾಂಕ್ಷೆಗಳ ಪ್ರತೀಕವಾಗುತ್ತದೆ. ಸಂಸ್ಕಾರಫಲದಿಂದ ಪುಣ್ಯ ಸಂಚಯಕ್ಕಾಗಿ ಈ ಜನ್ಮ ಪಡೆದೆ ಎಂದೇ ಅದುತನಕ ನಂಬಿಕೊಂಡು ಬಂದಿದ್ದ ಜ್ಞಾನಿ ಕೇವಲ ಮಾನವ ಜೀವಿಯಾಗಿ ವಾಸನೆಯ ಬೆನ್ನುಹತ್ತಿರುವುದು ಜ್ಞಾನ ಮತ್ತು ಅಜ್ಞಾನಗಳ ವಲಯಗಳನ್ನು ಮಸುಕುಗೊಳಿಸುತ್ತದೆ. ಬಾಲ್ಯದಲ್ಲಿ ಮಾಡಿದ್ದಂತೆ ಹೊಳೆಯಲ್ಲಿ ಈಜುಬಿದ್ದಾಗ ಎಲ್ಲವನ್ನೂ ಬಿಟ್ಟ ಎಳೆಯ ಬಾಲಕನಾಗುವುದು, ಅದರ ಹಿಂದೆಯೇ ಹೆಂಡತಿಗೆ ಮದ್ದು ಕೊಡಬೇಕೆನ್ನುವ ನೆನಪಲ್ಲಿ ಮನೆಗೆ ಬರುವುದು- ಇವೆರಡೂ ನಿರಂಬಳ ಮನ ಮತ್ತು ಜವಾಬ್ದಾರಿ ಮನದ ಪದರಗಳು. ಅನತಿ ಕಾಲದಲ್ಲಿ ತನ್ನ ತಪೋಭೂಮಿಯೆಂದೆನಿಸಿಕೊಂಡಿದ್ದ ಪತ್ನಿ ಕರ್ಣ ಕಠೋರವಾಗಿ ಕೂಗಿಕೊಂಡು ಪ್ರಾಣಬಿಟ್ಟಾಗ ಮೊದಲೇ ಕತ್ತಲಲ್ಲಿದ್ದ ಆಚಾರ್ಯರಿಗೆ ‘ಊಳಿದಂತಹ ಧ್ವನಿ ನಿಂತೊಡನೆ ಮಿಂಚು ಥಳಿಸಿ ಕತ್ತಲಾದಂತಾಯಿತು...’.

ಆಗಲೇ, ಜೊತೆಗೊಬ್ಬರು ಬೇಕೆಂದು ಚಂದ್ರಿಯನ್ನು ಹುಡುಕುತ್ತಾ ನಾರಣಪ್ಪನ ಮನೆಗೆ ಹೋದವರು, ‘ಗುಮ್ಮ’ನ ಭಯ ಆವರಿಸಿ ಮಾಳಿಗೆಗೆ ಹೋಗದೆಯೇ ದಿಗಿಲುಪಟ್ಟು ತಮ್ಮ ಮನೆಗೆ ಮರಳುವುದು ಅವರ ಧರ್ಮಶ್ರದ್ಧೆ ಮತ್ತು ದೈವಭಕ್ತಿಯ ಅಧಃಪತನಕ್ಕೆ ಸಾಕ್ಷಿ. ಕೈಮರಕ್ಕೆ ಹೋಗಿ, ಅಲ್ಲಿಯ ಬ್ರಾಹ್ಮಣರ ಸಹಾಯದಿಂದ, ಬಹಿಷ್ಠೆಯಾಗಿದ್ದಾಗಲೇ ತೀರಿಕೊಂಡಿದ್ದ ತಮ್ಮ ಪತ್ನಿಯ ದೇಹ ಸಂಸ್ಕಾರ ಮಾಡಿ ಮುಗಿಸಿದರೂ ನಾರಣಪ್ಪನ ದೇಹಕ್ಕೆ ಸಂಸ್ಕಾರ ಆಗಬೇಕೆನ್ನುವುದು ಮತ್ತೂ ಪ್ರಶ್ನೆಯಾಗಿಯೇ ಉಳಿಯುವುದು ವಿಪರ್ಯಾಸ. ತಮ್ಮ ಕೆಲಸವೆಲ್ಲ ಮುಗಿಯಿತೆಂಬಂತೆ ಕಾಲು ಕೊಂಡಲ್ಲಿಗೆ ನಡೆಯುವ ನಿರ್ಧಾರ ಮಾಡುವ ಆಚಾರ್ಯರಿಗೆ ತಮ್ಮ ಅಗ್ರಹಾರದವನೊಬ್ಬನ ಶವ ಯಾವುದೇ ಬಾಧಕವೆನಿಸುವುದಿಲ್ಲ. ಧರ್ಮನಿಷ್ಠೆಯಿಂದ ಅವರು ಹೊರಬಂದದ್ದು ನಿಚ್ಚಳವಾಗುತ್ತದೆ.

ಇದುತನಕ ಬರಿಯ ಅಗ್ರಹಾರದ ಬ್ರಾಹ್ಮಣ್ಯದ ಸುರಕ್ಷಿತ ಜೀವನ ಕಂಡಿದ್ದ ಆಚಾರ್ಯರಿಗೆ ಇಲ್ಲಿಂದ ಮುಂದೆ, ವಾಸ್ತವ ಪ್ರಪಂಚದ, ಜನಜೀವನದ, ಬ್ರಾಹ್ಮಣರಲ್ಲದವರ ಬದುಕಿನ ಪದರಗಳು ತೆರೆದುಕೊಳ್ಳುತ್ತವೆ. ಬಹಳಷ್ಟು ಹಾದಿಯನ್ನು ಒಂಟಿಯಾಗಿ ಒಳಸಂವಾದಗಳ ಗೊಂದಲದಲ್ಲಿ ಸಾಗುವ ಆಚಾರ್ಯರಿಗೆ ಮೇಳಿಗೆಯ ದಾರಿಯಲ್ಲಿ ಸಿಗುವ ಮಾಲೇರರ ಪುಟ್ಟನ ಸಂಗಾತ ಇನ್ನೊಂದು ಆಯಾಮವನ್ನು ತೆರೆಯುತ್ತದೆ. ‘ನಾಮಸ್ಮರಣೆಯ ನೆಮ್ಮದಿಯನ್ನೂ ವರ್ಜಿಸಿ ನಿಲ್ಲು’ ಎನ್ನುವ ಆತ್ಮಸಂಸ್ಕಾರದ ಎಚ್ಚರಿಕೆಯ ಮಾತು ಹಾಗೂ ‘ಮನಸ್ಸು ಕನಕನ ಮನದಂತೆ ಬರಿಯ ಎಚ್ಚರವಾಗಿದ್ದು ಬಿಡಲಿ’ ಎನ್ನುವ ಯೋಚನೆಯ ಹಿನ್ನೆಲೆಯಲ್ಲಿ, ಪುಟ್ಟನ ಜೊತೆಯಲ್ಲಿ ಅವರು ನೋಟಕರಾಗುವ ಜಾತ್ರೆಯ ಪರಿಸರ ಬ್ರಾಹ್ಮಣರ ಸಂರಕ್ಷಿತ ಆವರಣದಾಚೆಗಿದ್ದು ಆಚಾರ್ಯರ ಪ್ರಜ್ಞೆಯನ್ನೂ ಪರಿಧಿಯಾಚೆಗೆ ಎಳೆಯುತ್ತದೆ.

ಮೇಳಿಗೆಯ ದೇವಸ್ಥಾನ ತಲುಪುವ ಮೊದಲು, ತಾನು ಬಸ್ಸು ಹಿಡಿದು ಕುಂದಾಪುರಕ್ಕೆ ಹೋಗಿ ಚಂದ್ರಿಯ ಜೊತೆಗೇ ಇದ್ದುಬಿಡುತ್ತೇನೆ, ಈ ಸಂಕಟವನ್ನೆಲ್ಲ ಕೊನೆ ಮಾಡುತ್ತೇನೆ, ತನ್ನನ್ನು ತಾನು ಪುನಃ ಸೃಷ್ಟಿಸಿಕೊಳ್ಳುತ್ತೇನೆ ಎಂದಂದುಕೊಳ್ಳುವ ಪ್ರಾಣೇಶಾಚಾರ್ಯರಿಗೆ ಕೆರೆಯಲ್ಲಿಳಿದು ಮುಖ ತೊಳೆದುಕೊಳ್ಳುವಾಗ ಯಾರಾದರೂ ಪರಿಚಯದವರು ಎದುರಾದಾರೆಂಬ ಭೀತಿ ಆವರಿಸಿಕೊಳ್ಳುವುದು ಅವರೊಳಗಿನ ದ್ವಂದ್ವಕ್ಕೆ ಮತ್ತೂ ಒಂದು ಸಾಕ್ಷಿ. ಅದರ ಹಿಂದೆಯೇ, ನಾರಣಪ್ಪ ಅವಳನ್ನು ಕೂಡಿಯೇ ಅಗ್ರಹಾರದಲ್ಲಿ ಬಾಳಿದಂತೆ ತಾನು ಬಾಳು ನಡೆಸುವುದು ಸಾಧ್ಯವಿಲ್ಲ, ಮುಖ ಮುಚ್ಚಿಕೊಂಡಿರುತ್ತೇನೇನೋ ಅನ್ನುವದೂ ಹೊಳೆಯುತ್ತದೆ. ಪುಟ್ಟನ ಜೊತೆ ಜಾತ್ರೆಯ ಗದ್ದಲದ ನಡುವೆ ಜನಜಂಗುಳಿಯಲ್ಲಿ ಸಾಗುತ್ತಾ ಕಾಣುವ ದೃಶ್ಯಗಳೆಲ್ಲ ಕಲಸುಮೇಲೋಗರವಾಗಿ ಒಂದರೊಳಗೊಂದು ಚಿತ್ರಗಳಾಗಿ ಅವರ ಅಂತಃಸತ್ವವನ್ನು ಇನ್ನಷ್ಟು ಕೆದಕುತ್ತವೆ. ಪದ್ಮಾವತಿಯನ್ನು ಕಂಡಾಗ ಆಕರ್ಷಿತರಾಗುವ ರೀತಿಯಂತೂ ಅವರಿಗೂ ನಾರಣಪ್ಪನಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಮಾಡಿಬಿಡುತ್ತದೆ.

ಆ ದಾರಿಯಲ್ಲಿಯೇ ಮುಂದಿನ ಹೆಜ್ಜೆ, ತನಗೆ ಸೂತಕವಾದರೂ ದೇವಸ್ಥಾನದೊಳಗೆ ಹೋಗಿ ಊಟಮಾಡುವುದು. ಅವರ ಒಳಮನಸ್ಸು ಒಂದಿಷ್ಟು ಹಿಂಜರಿದರೂ ಅವರ ತಾರ್ಕಿಕ ಮನಸ್ಸು ಅವರನ್ನು ಆ ಕಾರ್ಯಕ್ಕೆ ಪ್ರೇರೇಪಿಸುತ್ತದೆ. ಊಟ ಬಡಿಸುತ್ತಿದ್ದವನೊಬ್ಬ ಇವರನ್ನು ‘ದೂರ್ವಾಸಪುರದ ಪ್ರಾಣೇಶಾಚಾರ್ಯ’ರೆಂದು ಗುರುತು ಹಿಡಿದದ್ದೇ ಊಟ ಅಲ್ಲಿಗೇ ಬಿಟ್ಟು ಓಡಿಬಿಡುವುದಂತೂ ಅವರೊಳಗಿನ ದ್ವಂದ್ವವನ್ನೂ, ನಿರ್ಧಾರದ ಪೊಳ್ಳುತನವನ್ನೂ, ಸಾಮಾಜಿಕ ಭಯವನ್ನೂ ತೋರುತ್ತದೆ. ಹೊರಗೆ ಪುಟ್ಟನಿಗೂ ಸುಳ್ಳನ್ನೇ ಹೇಳಿ ಅವನಿಂದ ತಪ್ಪಿಸಿಕೊಳ್ಳಲು ನೋಡುವುದು ‘...ನ ಬ್ರೂಯಾತ್ ಸತ್ಯಮಪ್ರಿಯಮ್’ ಮಾತ್ರವೆ? ಅಥವಾ ತನ್ನ ಬಾಲ್ಯಸ್ನೇಹಿತ ಮಹಾಬಲ ಮಾಡಿದ್ದಂತೆ ಎಲ್ಲವನ್ನೂ ಬಿಟ್ಟು ಎದ್ದು ನಡೆದುಬಿಡುವ ನಿರ್ಧಾರದ ಮೊದಲ ಕಾರ್ಯರೂಪವೆ?

ಮೇಳಿಗೆಯಿಂದ ದೂರ್ವಾಸಪುರಕ್ಕೆ ಹೊರಟು ಅಲ್ಲಿ ಬ್ರಾಹ್ಮಣರಿಗೆ ಎಲ್ಲವನ್ನೂ ಇದ್ದದ್ದು ಇದ್ದಂತೆ ಹೇಳಿ ನಿರಾಳವಾಗುವ ಯೋಚನೆಯ ಹಿಂದೆಯೇ, ಹಾಗೆ ಮಾಡಿದ ಪಕ್ಷದಲ್ಲಿ ನಾರಣಪ್ಪನಂತೆಯೇ ತಾನೂ ಅಗ್ರಹಾರದ ಜೀವನವನ್ನು ಬುಡಹಿಡಿದು ಅಲುಗಾಡಿಸಿದಂತಾಗುತ್ತದೆ, ಆ ಧೈರ್ಯ ತನಗಿದೆಯೆ? ಆ ಹಕ್ಕು ತನಗಿದೆಯೆ? ಎಂದೆಲ್ಲ ಚಿಂತಿಸುವವರು ಯಾವುದೇ ನಿರ್ಧಾರ ಮಾಡದೆಯೇ ದೂರ್ವಾಸಪುರಕ್ಕೇ ಹೊರಟುಬಿಡುವುದು ಆಚಾರ್ಯರೊಳಗೆ ದ್ವಂದ್ವವು ಇನ್ನೊಂದು ಸ್ತರದಲ್ಲಿ ವಿಸ್ತರಿಸುವುದನ್ನು ಸೂಚಿಸುತ್ತದೆ. ‘ಅಮಾವಾಸ್ಯೆ ಕಳೆದಿರಬೇಕು’ ಎಂಬ ಮಾತು, ಮತ್ತು ಕಾದಂಬರಿಯ ಕೊನೆಯ ವಾಕ್ಯವೃಂದ ಇದನ್ನೇ ಇನ್ನೂ ಪುಷ್ಟೀಕರಿಸುತ್ತವೆಯೇ ಹೊರತು ಯಾವುದೇ ಗೊಂದಲ ಬಗೆಹರಿದದ್ದನ್ನಾಗಲಿ, ಆಚಾರ್ಯರ ತೀರ್ಮಾನ ಅಂತಿಮವೆಂದಾಗಲಿ ತೋರುವುದಿಲ್ಲ. ಮಾನವ ಸಹಜ ಭಾವಲೋಕದ ಏರುಪೇರುಗಳನ್ನು ಗಮನದಲ್ಲಿರಿಸಿಕೊಂಡರೆ, ಆಕಾಶದ ನಕ್ಷತ್ರಗಳು, ಗೆರೆ ಚಂದ್ರ, ಹಾಗೂ ಸಪ್ತರ್ಷಿ ಮಂಡಳ ಹೊಸತೊಂದು ಬೆಳಕಿನ ಆದರೆ ಚಲನೆಯ ಸಂಕೇತವಾದರೆ ಇದ್ದಕ್ಕಿದ್ದಂತೆ ಕೇಳುವ ಚೆಂಡೆಯ ಶಬ್ದ ಮನಸ್ಸಿನ ತದಿಗಿಣದ ಸಂಕೇತವಾಗಿ ಕಥಾನಕ ಕೊನೆಯಾಗುತ್ತದೆ. ಆಚಾರ್ಯರು ದೂರ್ವಾಸಪುರಕ್ಕೆ ಹೋದರೆ? ಉಳಿದ ಬ್ರಾಹ್ಮಣರನ್ನು ಹೇಗೆ ಎದುರಿಸಿದರು? ಏನೆಂದು ಹೇಳಿಕೊಂಡರು? ನಾರಣಪ್ಪನ ಶವ ಕಾಣೆಯಾಗಿರುವ ಬಗ್ಗೆ ಅವರೊಳಗೆ ಏನೇನು ಕೋಲಾಹಲಗಳಾದವು? ಇವಕ್ಕೆಲ್ಲ ಕಾದಂಬರಿಯಲ್ಲಿ ಉತ್ತರವಿಲ್ಲ. ಅವನ್ನೆಲ್ಲ ಓದುಗರ ಕಲ್ಪನೆಗೆ ಬಿಟ್ಟು ಕಥೆಯನ್ನು ಗಾಳಿಯಲ್ಲಿ ತೂಗಾಡಿಸಿದ್ದಾರೆ ಲೇಖಕರು.

‘ಸಂಸ್ಕಾರ’ವೆನ್ನುವುದು ನಾಯಕ ಪ್ರಾಣೇಶಾಚಾರ್ಯರ ಮಾನಸಿಕ, ಸಾಂಸ್ಕೃತಿಕ ನೆಲೆಯು ಪರಿಷ್ಕೃತಗೊಳ್ಳುವ ವಿವಿಧ ಮಜಲುಗಳನ್ನು ಅನಾವರಣಗೊಳಿಸುತ್ತಾ ವ್ಯಕ್ತಿಯಾಗಿ ಆಚಾರ್ಯರು ಹೇಗೆ ಸಂಸ್ಕಾರಕ್ಕೆ ಒಳಗಾಗುತ್ತಾರೆ ಅನ್ನುವುದನ್ನು ತೆರೆದಿಡುತ್ತದೆ. ಕರ್ಮಬಂಧಿತ ಆಚಾರ್ಯರು ಒಂದು ಅಪರಕರ್ಮದ ಪ್ರಶ್ನೆಯಿಂದ ಬಂಧಿತರಾಗಿ, ಬಾಧಿತರಾಗಿ ಎಲ್ಲ ಬಂಧನಗಳನ್ನೂ ಕಳಚಿಕೊಂಡು ಮೌಢ್ಯಗಳ ಪೊರೆ ಹರಿದು ಒಬ್ಬ ವ್ಯಕ್ತಿಮಾತ್ರರಾಗಿ ಹೊರಹೊಮ್ಮುವ ರೂಪಾಂತರ ಕ್ರಿಯೆ ಕಾದಂಬರಿಯ ಉದ್ದಕ್ಕೂ ಕಂಡುಬರುತ್ತದೆ.


ಕೃಷ್ಣಪ್ಪಗೌಡ:

ಹಿರಿತನದ ಅಹಂಕಾರ ಭಾವ ಕೃಷ್ಣಪ್ಪಗೌಡನಲ್ಲಿಯೂ ಇದೆ. ಗೌರಿಯೊಡನೆ ‘ನೀವೊಬ್ಬರೇ ನನ್ನ ಸರೀಕರು’ ಎಂದು ಅವಳ ಮನೆಗೆ ಹೋಗಿ ಹೇಳುವ ಅವನಿಗೆ, ಹೇಳಿದ ಮರುಕ್ಷಣವೇ ‘ಹಾಗೆ ಹೇಳಿ ತಾನು ಚೀಪ್ ಆದೆ’ ಎಂದೆನಿಸುವುದು ಆತನಲ್ಲಿರುವ ಅಹಮಿಕೆಯಿಂದ. ಹಾಗೆಯೇ ಬೆಟ್ಟದ ಮೇಲಿನ ಸನ್ಯಾಸಿ ತನ್ನ ಪ್ರಶ್ನೆಗೆ ಉತ್ತರ ಕೊಡದೇ ದಾರಿಹೋಕ ಹಳ್ಳಿಗನೊಬ್ಬನಿಗೆ ಮಾರ್ಗದರ್ಶನ ಮಾಡಿದಾಗಲೂ ಕೃಷ್ಣಪ್ಪ ಒಳಗೊಳಗೇ ಸಿಟ್ಟಿಗೇಳುತ್ತಾನೆ. ಇದೂ ವ್ಯಕ್ತಿಯೊಬ್ಬನ ಅಹಮಿಕೆಯ ಸೂಚನೆ. ಆದರೆ, ತುಸು ಆಲೋಚನೆಯ ಬಳಿಕ ಅವನಿಗೆ ತನ್ನದು ನೇರ ಉತ್ತರವಿರದ ಪ್ರಶ್ನೆಯೆಂದೂ ದಾರಿಹೋಕನದು ಸರಳ ನೇರವೆಂದೂ ಅರಿವಾಗುವುದೂ ಕೃಷ್ಣಪ್ಪನ ವೈಚಾರಿಕ ನಿಲುವನ್ನು ತೋರುತ್ತದೆ.

ಸಾಹಿತಿಯಾಗಲು ಹೊರಟ ಕೃಷ್ಣಪ್ಪ ವಿಫಲನಾಗಿ ಸಾಹಿತ್ಯ ಕೈಲಾಗದವರ ತೀಟೆ ಅಂದಿದ್ದಕ್ಕೆ ಪರಮೇಶ್ವರಯ್ಯನವರು ಅವನಿಗೆ ಸರಿಯಾಗಿಯೇ ಉತ್ತರಿಸುತ್ತಾರೆ. ಆಗ ಕೃಷ್ಣಪ್ಪನಿಗೆ ತನ್ನ ಮಾತುಗಳು ತನ್ನ ಗರ್ವದ ಅಭಿವ್ಯಕ್ತಿಯೆಂಬುದು ಹೊಳೆಯುತ್ತದೆ. ಅದೇ ರೀತಿ, ಹಾಸ್ಟೆಲಿನಲ್ಲಿದ್ದಾಗ ಒಮ್ಮೆ ಜ್ವರ ಬಂದಿದ್ದ ಸಂದರ್ಭದಲ್ಲಿ ತನ್ನ ಸಹಚರನಿಂದ ಹಾಸಿಗೆ ಮಾಡಿಸಿಕೊಂಡು ಅದು ಚೆನ್ನಾಗಿಲ್ಲವೆಂದು ಹಠಹಿಡಿದು, ನೆಲದ ಮೇಲೆಯೇ ಚಾಪೆ ಹಾಸಿ ಮಲಗಿ ಎಲ್ಲರನ್ನೂ ಗಾಬರಿಗೊಳಿಸಿದ್ದ ಕೃಷ್ಣಪ್ಪನದು ಗಮನ ಸೆಳೆಯಲು ಕ್ಷುಲ್ಲಕವಾಗಿ ಪಟ್ಟು ಹಿಡಿಯುವ ಅಹಂಕಾರ ಪ್ರವೃತ್ತಿಗೆ ಉದಾಹರಣೆ. ಈ ನಡವಳಿಕೆಯಿಂದ ಉಳಿದವರೆಲ್ಲ ಎಂದಿಗೂ ಆತನ ಮಾತನ್ನು ಹಗುರವಾಗಿ ಪರಿಗಣಿಸುವ ಅವಕಾಶವನ್ನೇ ಆತ ಕೊನೆಗಾಣಿಸುತ್ತಾನೆ. ಅಹಂಕಾರದ ಹಠಮಾರಿತನಕ್ಕೆ ಇದೊಂದು ಉತ್ತಮ ನಿದರ್ಶನ.

ಪಾರ್ಶ್ವವಾಯು ಪೀಡಿತನಾಗಿ ಏಳಲಾರದ ಸ್ಥಿತಿಯಲ್ಲಿದ್ದ ಕೃಷ್ಣಪ್ಪನಿಗೆ ಒಂದು ಬೆಳಗ್ಗೆ ಉಚ್ಚೆಗೆ ಅವಸರವಾಗಿ, ಪತ್ನಿ ಸೀತೆಯನ್ನು ಕೂಗಿದರೂ ಅವಳು ಬರಲಾಗದೆ ಆತನ ದೇಹ ತಡೆದುಕೊಳ್ಳದೆ ಹಾಸಿಗೆ ಒದ್ದೆಯಾಗುತ್ತದೆ. ತನ್ನ ಕೆಲಸ ಮುಗಿಸಿ ಬಂದ ಸೀತೆ ಕೃಷ್ಣಪ್ಪನ ಈ ಪರಿಸ್ಥಿತಿಯನ್ನು ಅಪಹಾಸ್ಯ ಮಾಡದೆ, ಶಾಂತವಾಗಿ ಆತನನ್ನು ಇನ್ನೊಂದು ಹಾಸಿಗೆಗೆ ವರ್ಗಾಯಿಸಿ ಬಟ್ಟೆ ಬದಲಾಯಿಸುವಾಗ ಆತನಿಗೆ ತಾನು ಸೋತೆ, ಈಕೆ ಗೆಲ್ಲುತ್ತಿದ್ದಾಳೆ ಅನ್ನುವ ಭಾವನೆ ಬರುತ್ತದೆ. ಗಂಡ ಹೆಂಡಿರ ನಡುವೆ ಇರಬೇಕಾದ್ದು ಸಮರಸ, ಸಾಮರಸ್ಯ. ತಾನು ಮೇಲೆನ್ನುವ, ತಾನು ಗೆಲ್ಲಬೇಕೆನ್ನುವ ಭಾವ ದಾಂಪತ್ಯದಲ್ಲೂ ಬಂದರೆ ಅದು ಆತನ/ಆಕೆಯ ಅಹಂಕಾರವೇ ಸರಿ. ಅದನ್ನು ಲೇಖಕರೇ ಹೇಳುತ್ತಾರೆ, ‘ಪ್ರಾರಂಭದಿಂದಲೇ ಅವಳು ಗೆದ್ದಿದ್ದಳು, ಇಲ್ಲದಿದ್ದಲ್ಲಿ ಲೂಸಿನಾ ಮತ್ತು ಗೌರಿಯರ ಕತೆಯನ್ನು ಹೆಂಡತಿಗೆ ಅವನು ಹೇಳಿ ಅವಳ ಗೌರವ ಸಂಪಾದಿಸಲು ಪ್ರಯತ್ನ ಪಡಬೇಕಾಗಿರಲಿಲ್ಲ.’ ಅದರದೇ ವಿಸ್ತರಿಕೆಯಾಗಿ, ‘...ತನ್ನ ಮೈ ಮನಸ್ಸು ಸಾಮಾನ್ಯವಾದ್ದಲ್ಲ ಎಂದು ಅವಳಿಗೆ ಅನ್ನಿಸುವಂತೆ ಮಾಡುವ ಕೃಷ್ಣಪ್ಪನ ಉಪಾಯಗಳು...’ ಎಂಬಲ್ಲಿಯೂ, ‘ಮೂಲದಲ್ಲಿ ತಾನು ಇವಳ ಮಟ್ಟದವನೇ ಇರಬೇಕು... ನನ್ನ ನಿಜವಾದ ಮಟ್ಟ ನಾನು ಮುಟ್ಟಿದೆ ಎಂದು ಖಿನ್ನನಾಗಿ ಮಲಗುತ್ತಿದ್ದ’ ಎನ್ನುವಲ್ಲಿಯೂ ಈತನ ಅಹಮಿಕೆಯನ್ನು, ‘ತಾನು ಮೇಲ್ಮಟ್ಟದವ’ನೆನ್ನುವ ಅಹಂಕಾರವನ್ನು ಲೇಖಕರೇ ಸೂಚಿಸುತ್ತಾರೆ.

ಕಾಲೇಜು ಬಿಡುವ ನಿರ್ಧಾರ ಮಾಡಿ ಊರಿನ ಗುಡ್ಡದ ಮೇಲಿನ ಗುಹೆಯ ಗಡ್ಡದ ಬೈರಾಗಿಯ ಬಳಿ ಮಾತನಾಡುವ, ತನ್ನ ಪ್ರಶ್ನೆಗೆ ಉತ್ತರ ಕೇಳುವ ಕೃಷ್ಣಪ್ಪನಿಗೆ ಆತನ ನಿರುತ್ತರದಿಂದ ಆಗುವ ಗೊಂದಲ, ಗಾಬರಿ, ರಗಳೆಗಳು ಮತ್ತು ‘ಈಡಿಯಟ್ಟಿದ್ದರೂ ಅವನು ತನ್ನನ್ನು ಗೆದ್ದಿದ್ದಾನೆ’ ಎಂದುಕೊಳ್ಳುವ ರೀತಿ, ಹಿಂಸಿಸಿಯಾದರೂ ಪ್ರತಿಕ್ರಿಯೆ ಪಡೆಯಬೇಕೆನ್ನುವ ಚಪಲ- ಎಲ್ಲವೂ ಕೃಷ್ಣಪ್ಪನ ಮೇಲ್ಮೆಯ ಅಪಕ್ವತೆಯನ್ನೇ ತೋರುತ್ತವೆ. ಇವನ್ನೆಲ್ಲ ತನ್ನ ಅಸ್ವಸ್ಥ ಪರಿಸ್ಥಿತಿಯಲ್ಲಿ ‘ಎಡಪಾರ್ಶ್ವಕ್ಕೆ ವ್ಯಾಯಾಮದಿಂದ ಜೀವಧಾತು ಹರಿಸಲು ಯತ್ನಿಸುತ್ತಾ’ ಯೋಚಿಸುವ ಕೃಷ್ಣಪ್ಪಗೌಡನಿಗೆ ‘ಪ್ರಶ್ನೆ ಫ್ಯಾಕ್ಚುವಲ್ ಆಗಿದ್ದರೆ ಮಾತ್ರ ಬೈರಾಗಿ ಉತ್ತರ ಕೊಡುತ್ತಿದ್ದ, ಅಭಿಪ್ರಾಯದ ಪ್ರಶ್ನೆಗಳಿಗಲ್ಲ...’ ಎನ್ನುವುದು ಹೊಳೆಯುತ್ತದೆ. ಜೊತೆಗೇ ಜಗತ್ತಿಗೆ ಬೇಕಾದಷ್ಟು ಮಾತ್ರ ತೆರೆದುಕೊಂಡಿದ್ದ ಅವನೊಳಗೆ ಅದೇನು ಮಾಗಿ ಫಲಬಿಟ್ಟಿತೋ ಎಂದೂ ಯೋಚಿಸುತ್ತಾನೆ. ಅದರ ಹಿಂದೆಯೇ ಅಣ್ಣಾಜಿಯಾಗಲೀ ತಾನಾಗಲೀ ಕೊನೆಗೂ ಕಡಿದದ್ದಾದರೂ ಏನೆಂದು ಖಿನ್ನನಾಗುವುದೂ ಆತ ಉನ್ನತವೆಂದುಕೊಂಡಿದ್ದ ಆತನ ಸಾಮಾಜಿಕ ಬದಲಾವಣೆಯ ಮಾರ್ಗದಲ್ಲಿ, ಆಂತರಿಕವಾಗಿ ಆತ ನಂಬಿಕೊಂಡಿದ್ದ ಆದರ್ಶದ ಮಾರ್ಗದಲ್ಲಿ ಆತನಿಗೇ ನಂಬಿಕೆಯಿರಲಿಲ್ಲವೆಂದು ಅನ್ನಿಸುವಂತೆ ಮಾಡುತ್ತದೆ. ಆತನ ದೈಹಿಕ ಅಸ್ವಾಸ್ಥ್ಯದ ಹಿನ್ನೆಲೆಯಲ್ಲಿ ಆತನಿಗೆ ತಾನಿದುವರೆಗೆ ಸಾಗಿ ಬಂದ ಹಾದಿಯೆಲ್ಲ ಖಾಲಿಯಾಗಿ ತೋರುವುದು ಖಿನ್ನತೆಯ ಸೂಚನೆಯಾಗಿಯೂ ಕಂಡುಬರುತ್ತದೆ.

ಕಾಲೇಜು ದಿನಗಳಲ್ಲಿ ತಾನು ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ ಗೌರಿಯಲ್ಲಿ ತನಗೆ ಮೋಹವಿದೆಯೆಂದು ಎಂದೂ ಹೇಳಲಾಗದ ಕೃಷ್ಣಪ್ಪ ಆಕೆಯನ್ನು ಗೌರವಿಸುತ್ತಲೇ ದೂರವುಳಿಯುತ್ತಾನೆ. ಆಕೆಯ ದೈವಿಕ ಮುಖ-ಮಾತುಗಳ ಕಾರಣವಾಗಿ ಅವಳನ್ನು ತಾನು ಸಂಭೋಗಿಸಲಾರೆ, ಅದನ್ನು ಕಲ್ಪಿಸಿಕೊಳ್ಳಲಾರೆ ಎಂದೆಲ್ಲ ಅಂದುಕೊಳ್ಳುವವನು ಅವಳ ಆರಾಧಕನಾಗಿಯೇ ಉಳಿಯುತ್ತಾನೆ. ಅವನಲ್ಲಿ ಮಾರ್ದವತೆ ಬೆಳೆಯಲು ಉಳಿಯಲು ಗೌರಿ ಕಾರಣಳಾಗುತ್ತಾಳೆ. ಅಂತಹ ಗೌರಿಯನ್ನು ಅವಳ ಹಾದಿಯಲ್ಲಿ ಹೋಗಗೊಡುವ ಕೃಷ್ಣಪ್ಪ, ಕೊನೆಯಲ್ಲಿ ತನ್ನ ಅಸ್ವಸ್ಥ ಸ್ಥಿತಿಯಲ್ಲಿ, ಅವಳಿಂದಲೇ ಪ್ರೇರಿತನಾಗಿ ಅವಳನ್ನು ಭೋಗಿಸುವುದು ಅವಳ ಮೇಲೆ ಅವನಿಗಿದ್ದ ಗೌರವವನ್ನೂ ಮೀರಿದ ಪ್ರೀತಿಯೆ? ಅವಳು ತನ್ನವಳೆನ್ನುವ ಭಾವವೆ? ಯಾರ ಹಂಗಿಲ್ಲದ ಒಂಟಿ ಹೆಣ್ಣೆನ್ನುವ ಸದರವೆ? ತನ್ನ ಸಹಾಯಕ ನಾಗೇಶನಿಗೆ ಹೇಳಿ ಗೌರಿಯನ್ನು ಬರಹೇಳಿ ಅವಳೊಂದಿಗೇ ಸಮಯ ಕಳೆದು ಅವಳನ್ನು ಭೋಗಿಸುವವನಿಗೆ ಗೌರಿ ಹೇಳಿದಾಗಲೂ ತಾನು ಪತ್ನಿ ಸೀತೆಗೆ ಅನ್ಯಾಯವೆಸಗುತ್ತಿದ್ದೇನೆಂದು ಅನ್ನಿಸುವುದಿಲ್ಲ ಎನ್ನುವುದು ವಿಶೇಷವಾಗಿ ತೋರುತ್ತದೆ. ಸೀತೆಯ ಬೆನ್ನ ಹಿಂದೆ, ಗೆಸ್ಟ್ ಹೌಸಿನ ಕೋಣೆಯಲ್ಲಿ, ಅವಳೇ ತನ್ನನ್ನು ಒಪ್ಪಿಸಿಕೊಂಡಿದ್ದರೂ, ಗೌರಿಯನ್ನು ಅನುಭವಿಸುವಾಗಿನ ಅವನ ಮನಸ್ಥಿತಿ ಮಾತ್ರ ವಿಕಲ್ಪವಾಗಿ ಕಂಡುಬರುತ್ತದೆ. ಈ ಸಂಯೋಗದ ನಂತರವೇ, ಕಾದಂಬರಿಯ ಕೊನೆಯಲ್ಲಿ, ಆತ ರಾಜಕೀಯದ ಆಟಗಳನ್ನೆಲ್ಲ ತೊರೆದು ತನ್ನ ಹಳ್ಳಿಗೆ ಹಿಂದಿರುಗುವ, ಹೊಸ ಹಾದಿಗೆ ಮುಖಮಾಡುವ ನಿರ್ಧಾರ ಮಾಡುತ್ತಾನೆ ಅನ್ನುವುದೂ ಮುಖ್ಯವಾಗುತ್ತದೆ.

ಸೌಜನ್ಯದ ವಿರೋಧಿಯಾಗಿದ್ದ ಕೃಷ್ಣಪ್ಪ, ಸತ್ಯ ಮತ್ತು ವಾಸ್ತವಗಳ ಬೆನ್ನು ಹತ್ತಿ, ವಾರಂಗಲ್‌ನಲ್ಲಿ ಪೋಲೀಸರೊಂದಿಗೆ ಜಟಾಪಟಿಗಿಳಿದು ಬಂಧನಕ್ಕೊಳಗಾಗುತ್ತಾನೆ. ಲಾಕಪ್ಪಿನಲ್ಲಿಯೂ ಅವನ ಪೊಗರು ಇಳಿಯುವುದಿಲ್ಲ. ಊಟ-ನೀರಿಗಿಟ್ಟ ತಟ್ಟೆಗಳ ಕೊಳಕಿನಿಂದಲೂ ಪ್ರೇರಿತನಾಗಿ, ತನ್ನ ಪ್ರತಿಭಟನೆಯ ರೂಪವಾಗಿ, ಉಪವಾಸ ಮಾಡುತ್ತಾನೆ. ಇದರಿಂದ ಅಲ್ಲಿನ ಪೋಲೀಸರ ಹಾಸ್ಯಕ್ಕೆ ಒಳಗಾಗುತ್ತಾನೆಯೇ ಹೊರತಾಗಿ ಬೇರೇನೂ ಉಪಯೋಗವಾಗುವುದಿಲ್ಲ. ಎರಡು-ಮೂರು ದಿನಗಳಾದರೂ ಅದನ್ನಾತ ಅರಿಯುವುದೂ ಇಲ್ಲ. ತಾನು ಗೌರವಿಸುತ್ತಿದ್ದ ಅಣ್ಣಾಜಿಯನ್ನು ಈ ಪೋಲೀಸರು ವಿಚಾರಣೆಯಿಲ್ಲದೆ ‘ಮುಖಾಮುಖಿ’ಯ ಹೆಸರಲ್ಲಿ ಕೊಲೆ ಮಾಡಿದರು ಹಾಗೂ ತನ್ನನ್ನು ಕೀಳಾಗಿ ಕಂಡರು ಎನ್ನುವ ಕಾರಣಗಳಿಗಾಗಿ ಸಿಡಿಯುವ ಆತ ತಾನು ಇದೇ ಲಾಕಪ್ಪಿನಲ್ಲಿ ಸಿಲುಕಿ ಸಾಯಬಹುದು ಎನ್ನುವ ಸಾಧ್ಯತೆಯ ಸತ್ಯವನ್ನು ಮನಗಾಣುವುದೇ ಇಲ್ಲ. ಆತನ ಸೀಮಿತ ದೃಷ್ಟಿ ದೂರಾಲೋಚನೆಯಿಂದ ಅವನನ್ನು ದೂರವಿಟ್ಟಿರುತ್ತದೆ.

ಪ್ರಜ್ಞಾಪರಿಧಿಯಾಚೆಗೆ ತನ್ನನ್ನು ನಿಲ್ಲಿಸಿಕೊಳ್ಳುವುದು ಕೃಷ್ಣಪ್ಪಗೌಡನಿಗೆ ತನ್ನ ಚಿತ್ತಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಬಗೆಯಾಗಿ ವಾರಂಗಲ್ ಲಾಕಪ್ಪಿನಲ್ಲಿ ಉಪಕರಿಸಿದ್ದರೆ ಹಿಂದೆ, ಶಾಲಾ ದಿನಗಳಲ್ಲಿ, ತನ್ನ ದಾಯಾದಿಯ ಮನೆಗೆ ಆರೋಗ್ಯ ಕಾರಣದಿಂದ ವಿಶ್ರಾಂತಿಗಾಗಿ ಹೋಗಿದ್ದಾಗ ತನ್ನ ಮೇಲ್ಮೆಯ ತೋರಿಕೆಯ ಸಾಧನವಾಗಿಸಿಕೊಂಡು ಕೊನೆಯಲ್ಲಿ ನಿಜವಾಗಿಯೂ ಬುದ್ಧಿಸ್ಥಿಮಿತ ಕಳೆದುಹೋಗಿತ್ತು. ‘ನಿನ್ನೊಳಗೊಂದು ಹುಲಿಯಿದೆಯೋ...’ ಎಂದು ಅವನಲ್ಲಿ ಅಹಮಿಕೆಯ ಭಾವವನ್ನು ಹುಟ್ಟುಹಾಕಿದ್ದ ಪರಮೇಶ್ವರಯ್ಯನವರೇ ಹೈಸ್ಕೂಲ್ ಹುಡುಗನ ದೇವಿ ಆರಾಧನೆಯ ಅಸ್ತವ್ಯಸ್ತ ಪರಿಣಾಮವನ್ನು ಸರಿಪಡಿಸಬೇಕಾಗಿ ಬಂದಿದ್ದು ಅರ್ಧತಿಳುವಳಿಕೆಯ ಅತಿರೇಕ ಪ್ರಯೋಗದ ಫಲವನ್ನು ತೋರುತ್ತದೆ.

ವಾರಂಗಲ್ಲಿನಲ್ಲಿ ಆತ ದೇವಿಯನ್ನು ಸಮಯೆ ಎಂದು ಸ್ತುತಿಸಿ ಹಾಡಿ ತನ್ನ ಬೌದ್ಧಿಕ ಪ್ರಜ್ಞೆ ತನ್ನ ಅಂಕೆಯಲ್ಲೇ ಇರುವಂತೆ ನೋಡಿಕೊಂಡಿದ್ದ. ಎರಡು ಮೂರು ದಿನಗಳ ಗಾಢ ಕತ್ತಲೆ ಕೋಣೆಯ ವಾಸ ಮತ್ತು ಉಪವಾಸಗಳಿಂದ ತಾನು ಮತಿಹೀನನಾಗದಂತೆ ಆತ ಆ ಜ್ಞಾನವನ್ನು ಉಪಯೋಗಿಸಿಕೊಂಡಿದ್ದ, ಯಾವುದೇ ದೈವ ದೇವರಲ್ಲಿ ನಂಬಿಕೆಯಿಲ್ಲದಿದ್ದರೂ. ಈ ಪಠಣಗಳಿಂದ ತನ್ನ ಕುಂಡಲಿನಿಯು ಜಾಗೃತವಾಗುವುದೆಂದೂ ತಾನು ಸೃಷ್ಟಿಕ್ರಮ ಉಪಾಸಕನೆಂದೂ ಪೋಲೀಸ್ ಇನ್ಸ್‍ಪೆಕ್ಟರ್ ವಾಮಾಚಾರಿಯಾದ ಕೌಲಮತದವನೆಂದೂ ಕಲ್ಪಿಸಿಕೊಳ್ಳುವುದು ಗಂಭೀರ ಪರಿಸ್ಥಿತಿಯಲ್ಲೂ ನಗು ತರಿಸುತ್ತದೆ. ಇತರರ ನಡವಳಿಕೆಗಳಲ್ಲಿ ಕ್ಷುಲ್ಲಕತನ ಕ್ಷುದ್ರತೆ ಕಂಡು ಸಿಡಿಯುವ ಕೃಷ್ಣಪ್ಪಗೌಡನ ಈ ನಡವಳಿಕೆ, ನಂಬಿಕೆಯಿಲ್ಲದಿದ್ದರೂ ದೇವರನ್ನು ಸ್ತುತಿಸುವ ಆಚರಣೆ ಡಾಂಭಿಕತೆಯಲ್ಲದೆ ಇನ್ನೇನು? ಅವನೊಳಗೇನಿದೆಯೋ, ಅವನಿಗೇನು ಬೇಕೋ ಅವನೆಂದೂ ತಿಳಿಯಲಿಲ್ಲವೆಂದೇ ತೋರುತ್ತದೆ. ವಾರಂಗಲ್ ಜೈಲಿನಿಂದ ಬಿಡಿಸಿಕೊಂಡು ಬರುವಾಗ ಪರಮೇಶ್ವರಯ್ಯ ಆಡುವ, ‘...ಯಾವಾಗಲೂ ರಾಜನ ಕಣ್ಣಿಗೆ ಬೀಳದಂತೆ ಬದುಕಬೇಕು. ಆದರೆ ಅದು ನಿನ್ನ ಜಾಯಮಾನಕ್ಕೆ ಸಾಧ್ಯವಿಲ್ಲ, ನಿನ್ನ ಹಣೆಬರಹ...’ ಮಾತು ಮಾತ್ರ ಸಾರ್ವಕಾಲಿಕ ಸತ್ಯ. ಆ ಮಾತಿನ ಪರಿಣಾಮವೋ ಎನ್ನುವಂತೆ ಕೃಷ್ಣಪ್ಪಗೌಡ ತನ್ನ ಹಳ್ಳಿಗೆ ಹಿಂದಿರುಗಿ ರೈತನಾಗುವುದು ಆತನ ಬದುಕಿಗೆ ಹೊಸದಾರಿ ತೆರೆಯುತ್ತದೆ.

ಅಗಾಧ ಶ್ರೀಮಂತನಾದರೂ ತನ್ನನ್ನು ಗೌರವದಿಂದ ಕಂಡ ಗೋಪಾಲ ರೆಡ್ಡಿಯ ಸ್ನೇಹದಿಂದ ಈತನ ಅಹಂ ಮತ್ತೂ ಮೇಲೆದ್ದಿತ್ತು. ಆಗಲೇ ರಾಜಕಾರಣದ ಮೆಟ್ಟಲೇರಿದ್ದ. ದೇಶದ ಮಟ್ಟದಲ್ಲಿ ಹೆಸರಿತ್ತು. ವಿರೋಧ ಪಕ್ಷದ ದೊಡ್ಡದೊಡ್ಡವರೂ ಇವನ ಹೆಸರು ಕೇಳಿಯೇ ತಣ್ಣಗಾಗುತ್ತಿದ್ದರು. ಯಾರ ವಿರುದ್ಧ ಮಾತಾಡಲೂ ಹಿಂದೆಮುಂದೆ ನೋಡದೆ, ಹೆಣ್ಣು-ಹೆಂಡಗಳ ಎಲ್ಲ ರುಚಿಯನ್ನೂ ಸವಿದ ಕೃಷ್ಣಪ್ಪ, ಅಹಮಿಕೆಯ ಪರಾಕಾಷ್ಟೆಯಲ್ಲಿದ್ದ ಎನ್ನಬಹುದು. ಗೋಪಾಲ ರೆಡ್ಡಿಯ ಸಾವಿನ ನಂತರ ತುಸು ಮೆತ್ತಗಾದವನು ಹಿತೈಷಿಗಳ ಸಲಹೆಯ ಮೇರೆಗೆ ‘ಊಟ ಉಪಚಾರಗಳನ್ನು ನೋಡಿಕೊಳ್ಳಬಲ್ಲ ಹೆಣ್ಣೆಂದು ಸೀತೆಯನ್ನು- ಅಷ್ಟಕ್ಕೇ ಲಾಯಕ್ಕಾದವಳನ್ನು ಮಾಡಿಕೊಳ್ಳುವುದನ್ನೇ ಅವನೂ ಬಯಸಿ..’ ಮದುವೆಯಾಗಿದ್ದ. ಇಲ್ಲಿಯೂ ಆತನ ಗರ್ವದ ಪೊರೆಯನ್ನೇ ಕಾಣಬಹುದು.

ಮುಂದೆ ಪರಮೇಶ್ವರಯ್ಯ ತಾನು ರೇಸಿನಲ್ಲಿ ಗೆದ್ದ ಹಣದಲ್ಲಿ ಸೀತೆಯ ಕೈಗೆ ಹತ್ತು ಸಾವಿರ ಕೊಟ್ಟಾಗ ಸೀತೆ ಅಧೀರಳಾಗುವ ಸಂದರ್ಭ, ಕೃಷ್ಣಪ್ಪ ಗೌರಿಯೊಡನೆ ಸೀತೆಯನ್ನು, ‘...ತುಂಬಾ ಸ್ಟಿಂಜಿ ವುಮನ್- ಹಣದಲ್ಲೂ ಸ್ಪಿರಿಟ್‌ನಲ್ಲೂ.’ ಅನ್ನುತ್ತಾನೆ. ಇದರಿಂದ ಸಿಟ್ಟುಗೊಂಡ ಗೌರಿ ತಕ್ಷಣವೇ, ‘ನೀವಿಷ್ಟು ನಿಕೃಷ್ಟವಾಗಿ ಕಾಣೋ ಹೆಂಗಸಿನ ಜೊತೆ ಯಾಕಿದೀರಿ? ನಿಮ್ಮ ಗರ್ವಾನ್ನ ಬೆಳೆಸಿಕೊಳ್ಳೋಕೇಂತ್ಲೇ ನಿಮಗಿಂತ ಕೀಳಾದ ಹೆಣ್ಣನ್ನ ಹುಡುಕಿ ಮಾಡಿಕೊಂಡಂತಿದೆ’ ಅನ್ನುವುದು ಕೃಷ್ಣಪ್ಪನನ್ನು ಅರಿತ ಗೌರಿಗೂ ಆತನ ಗರ್ವದ ಪರಿಚಯವಿತ್ತು ಮತ್ತು ಅದನ್ನವಳು ಸಹಿಸುತ್ತಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

‘ಅಪಾರ್ಥಕ್ಕೆ ಎಡೆಗೊಡದೆ ನಾನು ಹೇಳಬೇಕೂಂತ ಇರೋದನ್ನ ಹೇಳಕ್ಕೇ ಆಗಲ್ವೋ... ನಮ್ಮ ಕ್ರಿಯೆಗಳ ಪರಿಣಾಮ ಹೀಗೂ ಆಗಬಹುದು ಹಾಗೂ ಆಗಬಹುದು ಅನ್ನೋ ಆತಂಕಾನ ಕಳಕೊಳ್ಳದಂತೆ...’ ಅಂತನ್ನುವ ಗೌಡ ಮಾತು ಮುಗಿಸಲಾರದೆ ಹೋಗುವುದು ಆತನೊಳಗಿನ ಗೊಂದಲಕ್ಕೆ ದೊಡ್ಡ ಸಾಕ್ಷಿಯಾಗುತ್ತದೆ. ‘ದೇವರಿದ್ದಾನೆಂದು ಖಂಡಿತವಾಗಿ ಗೊತ್ತಿರುವ ಒಬ್ಬನ ನಂಬಿಕೆಗಿಂತ ದೃಢವಾಗಿ ಗೊತ್ತಿಲ್ಲದೆಯೂ ದೇವರನ್ನು ನಂಬುವವನ ನಂಬಿಕೆಯೇ ಹೆಚ್ಚಿನದು’ ಅನ್ನುವ ಕೃಷ್ಣಪ್ಪನ ವಾದ ತನ್ನ ಸಮಾಜ ಸುಧಾರಕ ಕೈಂಕರ್ಯಗಳೆಲ್ಲ ಎರಡನೇ ರೀತಿಯ ನಂಬಿಕೆಗಳಂತೆ ಎನ್ನುವದು. ಅಲ್ಲಿಯೂ ತನ್ನ ಪ್ರಯತ್ನವೇ ಮೇಲಿನದೆನ್ನುವ ಭಾವ.

ದೆಹಲಿಯಿಂದ ಗೌರಿಯ ಟೆಲಿಗ್ರಾಂ ಬಂದಾಗ ಅವನು ಯೋಚಿಸುವ ರೀತಿ ಮಾತ್ರ, ಅಹಂಕಾರಿಯ ಇನ್ನೊಂದು ಮುಖವಾದ ಸ್ವಾರ್ಥಿಯದು. ತಾನು ಬರೆಸಿದ ಪತ್ರಕ್ಕೆ ಆಕೆ ಮುಂದಿನ ಭಾನುವಾರ ಬರುವುದಾಗಿ ಟೆಲಿಗ್ರಾಂ ಕೊಟ್ಟಿದ್ದರೆ, ಈತ- ಆಕೆ ದೆಹಲಿಗೆ ಬಂದು ಆರು ತಿಂಗಳಾದವು, ಬಂದವಳೇ ತನ್ನನ್ನು ಕಾಣಲು ಬರಲಿಲ್ಲ. ಈಗ ಅವಸರ ಪಡದೆ ಎರಡು ದಿನ ತಡೆದು ಬರುತ್ತಿದ್ದಾಳೆ- ಎಂದೆಲ್ಲ ಯೋಚಿಸುವುದು ಸ್ವಾರ್ಥವಲ್ಲವೆ?

ಸಹೋದ್ಯೋಗಿಗಳೂ ತಮ್ಮ ಭಿನ್ನಾಭಿಪ್ರಾಯಗಳಿದ್ದರೂ ತನ್ನ ಮಾತಿಗೆ ಬೆಂಬಲಿಸುತ್ತಾರೆನ್ನುವುದೂ ಆತನಿಗೆ ಹರ್ಷ ಕೊಡುತ್ತದೆ. ಅನಾರೋಗ್ಯದ ಸಮಯದಲ್ಲೂ ತನ್ನ ಮಾತಿಗೆ ಬೆಲೆಯಿದೆಯೆಂದು ಖುಷಿಪಡುವುದು ಅಹಮಿಕೆಯಲ್ಲದೆ ಇನ್ನೇನು! ಹಾಗೆಯೇ, ವಾಟರ್ ಥೆರಪಿಗೆ ಅನುಕೂಲವಾಗಲೆಂದು ವೀರಣ್ಣನ ಗೆಸ್ಟ್‌ಹೌಸಿಗೆ ವರ್ಗಾಯಿಸಲ್ಪಟ್ಟ ಗೌಡನಿಗೆ ‘...ಅಲ್ಲಿಗೆ ತನ್ನನ್ನು ನೋಡಲು ಬರುತ್ತಿದ್ದ ಗುಂಪು ಗುಂಪು ಜನರ ಸಂಪರ್ಕವಿಲ್ಲದೆ ತಾನು ಮುಖ್ಯ ವ್ಯಕ್ತಿಯಾಗಿದ್ದೇನೆನ್ನುವ ನೆಮ್ಮದಿ ಇಲ್ಲವಾಗಿತ್ತು...’ ಎನ್ನುವಲ್ಲಿಯೂ ಅನಾರೋಗ್ಯಪೀಡಿತನಾಗಿರುವ ವ್ಯಕ್ತಿ ಬಯಸುವ ವಿಶ್ರಾಂತಿ ಮತ್ತು ಆರೈಕೆಯ ಹೊರತಾದ ವಿಶೇಷ ಗಮನವನ್ನು ಆತ ಬಯಸುತ್ತಿದ್ದನೆನ್ನುವುದು ಸ್ಪಷ್ಟವಾಗುತ್ತದೆ.

ದೇಹಶಕ್ತಿ ಕುಂದಿದಾಗ ಮನಸ್ಸು ಇನ್ನಷ್ಟು ಆತ್ಮವಿವೇಚನೆಯಲ್ಲಿ ತೊಡಗಿಕೊಳ್ಳುವುದು ಸ್ವಾಭಾವಿಕ. ಕೃಷ್ಣಪ್ಪನಿಗೂ ಅದು ತಪ್ಪಲಿಲ್ಲ. ತಾನಾಗಿಯೇ ಏಳಲಾಗದ ಸ್ಥಿತಿಯಲ್ಲಿ, ಹಾಸಿಗೆಯಲ್ಲಿ ಮಲಗಿ ತನ್ನ ಹಿಂದಿನ ದಿನಗಳ ಮೆಲುಕಿನಲ್ಲಿ ಮತ್ತೆ ಗುಡ್ಡದ ಮೇಲಿನ ಬೈರಾಗಿಯನ್ನು ನೆನೆಯುತ್ತಾನೆ. ‘ಅವನಿಗೆ ಉತ್ತರಕೊಡಬೇಕೆನ್ನಿಸುವಂಥ ಪ್ರಶ್ನೆಯನ್ನು ಕೇಳಲು ತನಗೆ ಹೊಳೆಯಲೇ ಇಲ್ಲವೆಂದು... ...ಆಗ (ಮನಸ್ಸು) ವ್ಯಗ್ರವಾಗಿದ್ದದ್ದು ನಿಜ’ ಎಂದೂ ಅಂದುಕೊಳ್ಳುವ ಈ ಕೃಷ್ಣಪ್ಪನ ದೇಹದೊಂದಿಗೆ ಮನಸ್ಸೂ ಮೆತ್ತಗಾಗಿದೆ. ಜೊತೆಗೇ ಆಗಿನ ಮನಸ್ಥಿತಿಯ ಬಗ್ಗೆ ಸಂಶಯವೂ ಹುಟ್ಟುತ್ತದೆ. ಬೈರಾಗಿಯೊಡನೆ ತನ್ನನ್ನು ಹೋಲಿಸಿಕೊಳ್ಳುವ ಆತ, ಗುಹೆಯೊಳಗೆ ಹೊಕ್ಕ ಸರ್ಪವನ್ನು ನಾಯಿ ಹಿಡಿದಾಗ, ಆ ಹಿಂಸೆಯನ್ನು ತಾಳಲಾರದ ಬೈರಾಗಿಯ ‘...ಕೂರ್ಮ ರೂಪದ ತಪಸ್ಸಿನ ಬಗ್ಗೆ’ ಆಳವಾದ ಅನುಮಾನವನ್ನು ಪಡುವುದು ಮಾತ್ರ ‘ತಾನು ಅಂಥ ಅಂಜುಬುರುಕನಲ್ಲ, ಢೋಂಗಿಯಲ್ಲ’ ಅನ್ನುವಂತೆಯೇ ಕಾಣುತ್ತದೆ.

ತನ್ನ ಸ್ಥಿತಿಯ ಬಗ್ಗೆ ಮರುಕ ಬೀರುವವರತ್ತ ನಿರಾಸಕ್ತಿ ತೋರಿಸುತ್ತಲೂ ತನ್ನನ್ನು ಗೌರವಿಸುವವರನ್ನು ಪುರಸ್ಕರಿಸುತ್ತಲೂ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವ ಕೃಷ್ಣಪ್ಪಗೌಡ ಆಂತರಿಕವಾಗಿ ಬದಲಾಗುತ್ತಾ ಮೆತ್ತಗಾಗುತ್ತಾ ಹೋಗುವುದನ್ನು ಕಾಣಬಹುದು. ನಾಗೇಶನಿಗೆ, ಆತನ ಅಕ್ಕನಿಗೆ, ನರ್ಸ್ ಜ್ಯೋತಿಯ ಗೆಳೆಯನಿಗೆ ಸಹಾಯ ಮಾಡುತ್ತಲೂ, ನಾಗರಾಜ, ರೆಹಮಾನ್ ಅವರತ್ತ ತುಸು ಸೌಹಾರ್ದಯುತವಾಗಿ ನಡೆದುಕೊಳ್ಳುವ ಗೌಡ, ವೀರಣ್ಣನ ಉಪಕೃತಿಯ ಸುಳಿಯಲ್ಲಿ ಇಷ್ಟವಿಲ್ಲದೆಯೂ ಸಿಲುಕುತ್ತಾನೆ. ಪರಿಸರ, ಪರಿಸ್ಥಿತಿ ಅವನನ್ನು ಅವಲಂಬಿತನನ್ನಾಗಿಸುತ್ತವೆ. ಇವೆಲ್ಲದರ ಪರಿಣಾಮ ಮಾತ್ರ ಪತ್ನಿ ಸೀತೆಯ ಮೇಲೆ. ತನ್ನೆಲ್ಲ ಅಸಹಾಯಕತೆಯನ್ನು ಕೋಪವಾಗಿಸಿಕೊಂಡು ಅವಳ ಮೇಲೆ ಕೈಮಾಡುವುದು, ಅವಳನ್ನು ಗುದ್ದುವುದು, ಅವನತ್ತ ಓದುಗರಿಗೆ ಬೆಳೆಯುವ ಅನುಕಂಪವನ್ನು ಕಸಿದುಕೊಳ್ಳುತ್ತವೆ.

ಕಾದಂಬರಿಯ ಅಂತ್ಯದಲ್ಲಿ ಕೃಷ್ಣಪ್ಪ ಗೌಡ ತನಗೆ ತನ್ನೊಳಗೂ ತನ್ನ ಕಾರ್ಯಕ್ಷೇತ್ರವಾದ ರಾಜಕಾರಣದಲ್ಲೂ ಇಂಟೆಗ್ರಿಟಿ ಸಾಧ್ಯವಾಗುತ್ತಿಲ್ಲ ಅನ್ನುವಲ್ಲಿ ಆತನ ಆಂತರಿಕ ಬದಲಾವಣೆ ತಕ್ಕಮಟ್ಟಿಗೆ ಆಗಿದೆಯೆಂದು ಕಂಡುಬರುತ್ತದೆ. ಆದರೂ ಆತನಿಗೆ ಕನಸುಗಳಿವೆ. ‘...ನಮ್ಮ ದೈನಿಕಗಳೇ ಹೇಗೆ ಪ್ರಭೆ ಪಡೆಯೋದು ಸಾಧ್ಯ? ಯಾವತ್ತೂ ಚರಿತ್ರೇಲಿ ದಡಹತ್ತದೇ ಇದಾರಲ್ಲ, ಅವರಿಗೆ ಸಿಟ್ಟು ಬರೋ ಹಾಗೆ ಮಾಡಕ್ಕೆ ಸಾಧ್ಯವಾದರೆ ಆ ಸಿಟ್ಟು ಸಮಾಜದ ಕ್ಷುದ್ರತೇನ ಸುಟ್ಟೀತು, ಅಲ್ವಾ? ಆ ಆಸೆ ಇನ್ನೂ ಉಳ್ಕಂಡಿದೆ’ ಅನ್ನುತ್ತಾನೆ ಗೌರಿಯೊಡನೆ. ಅದಕ್ಕಾಗಿ ಆತ ರಾಜಕಾರಣಕ್ಕೆ ರಾಜೀನಾಮೆ ಕೊಟ್ಟು ತನ್ನ ಹಳ್ಳಿಗೆ ಹಿಂದಿರುಗಿ ಮಗುವಿನಂತೆ ತೆವಳುವ ಸ್ಥಿತಿಯಿಂದ ಕೋಲೂರಿ ನಡೆಯುವುದನ್ನು ಕಲಿತು ಮೊದಲಿಂದ ಎಲ್ಲವನ್ನೂ ಆರಂಭಿಸಬೇಕೆನ್ನುವ ನಿರ್ಧಾರ ತಳೆಯುವಲ್ಲಿಗೆ ಕಥೆ ಮುಗಿಯುತ್ತದೆ. ಈ ಹಂತದಲ್ಲಿ ಕೃಷ್ಣಪ್ಪಗೌಡನ ಅಹಮಿಕೆಯೂ ಕರಗಿದಂತೆಯೇ ಕಂಡುಬರುತ್ತದೆ.

ಕಾದಂಬರಿಯ ಹೆಸರು ‘ಅವಸ್ಥೆ’ ನಾಯಕ ಕೃಷ್ಣಪ್ಪಗೌಡನ ವಿವಿಧ ಸ್ಥಾನಪಲ್ಲಟಗಳನ್ನು ಅವಸ್ಥಾಂತರಗಳನ್ನು ಸೂಚಿಸುತ್ತದೆ. ಬಾಲ್ಯದಲ್ಲಿ ಎಲ್ಲ ಚಿಂತೆಗಳಿಂದ ಹೊರತಾಗಿ ನಿರಂಬಳ ಬಾಲಕನಾಗಿ ಕೊಳಲೂದುತ್ತಾ ದನ ಮೇಯಿಸುತ್ತಿದ್ದ ಹುಡುಗ ಪರಮೇಶ್ವರಯ್ಯನೆಂಬ ಅವಧೂತನಂತಹ ವ್ಯಕ್ತಿಯಿಂದ ಶಾಲಾ ವಿದ್ಯಾರ್ಥಿಯಾದ. ಕ್ಷುದ್ರತೆಯನ್ನು ಕಂಡು ರೇಗುವ, ವಿರೋಧಿಸುವ, ಅನ್ಯಾಯದ ವಿರುದ್ಧ ಸಿಡಿಯುವ ಕ್ರಾಂತಿಕಾರಿಯಾದ. ಪೋಲೀಸರ ದುರ್ವರ್ತನೆಯನ್ನು ಅನುಭವಿಸಿದ. ರೈತನಾಗಿ ಸಂಘಟಕನಾಗಿ ಬೆಳೆದ. ರಾಜಕಾರಣಿಯೂ ಆಗಿ, ಯಾರದೋ ಆಟದಲ್ಲಿ ದಾಳವಾಗುವ ಹಂತದಲ್ಲಿ ಹೊರಬರುವ ನಿರ್ಧಾರ ಮಾಡಿದ ಕೃಷ್ಣಪ್ಪನಲ್ಲಿ ದ್ವಂದ್ವಗಳು, ಗೊಂದಲಗಳು ಸದಾ ಮನೆ ಮಾಡಿದ್ದವು. ಪರಮೇಶ್ವರಯ್ಯನವರ ಮಾರ್ಗದರ್ಶನ ಆತನ ವ್ಯಕ್ತಿತ್ವ ರೂಪಿಸುವಲ್ಲಿ ಬಹಳಷ್ಟು ಕೆಲಸ ಮಾಡಿದ್ದನ್ನೂ ನಾವು ಕಾಣಬಹುದು.

ಮುಕ್ತಾಯದ ಮೊದಲು:

ಕಥನ ಶೈಲಿಯ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ, ‘ಅವಸ್ಥೆ’ಯಲ್ಲಿ ಒಂದಿಷ್ಟು ಅನಾವಶ್ಯಕ ವಿಷಯಗಳನ್ನು ತುರುಕಿದಂತೆ ಅನ್ನಿಸಿದರೆ, ‘ಸಂಸ್ಕಾರ’ದಲ್ಲಿ ಹಲವಾರು ಕಡೆಗಳಲ್ಲಿ ನಿರೂಪಕ ತಾನೇ ಪ್ರಾಣೇಶಾಚಾರ್ಯನಾಗಿ ಮಾತಿನಲ್ಲಿ, ತರ್ಕದಲ್ಲಿ, ಸ್ವಚಿಂತನೆಯಲ್ಲಿ ತೊಡಗಿಕೊಳ್ಳುವಂತೆ ಕಾಣುತ್ತದೆ. ಆಗೆಲ್ಲ ಓದುಗರಲ್ಲಿ ಕಥೆಗಾರ ಮತ್ತು ಪಾತ್ರದ ನಡುವೆ ಯಾರು-ಯಾರೆನ್ನುವ ಗೊಂದಲವುಂಟಾಗುವ ಪರಿಸ್ಥಿತಿ ನನ್ನರಿವಿಗೆ ಬಂತು. ಅದಕ್ಕಿಂತ ಹೆಚ್ಚಾಗಿ ನನ್ನ ಗಮನ ಸೆಳೆದದ್ದು ಈ ಕೆಳಗಿನ ಪ್ರಸಂಗ:

‘ಸಂಸ್ಕಾರ’ದಲ್ಲಿ: ಭಾಗ- ಎರಡು: ಅಧ್ಯಾಯ- ಮೂರು, ನಾಲ್ಕು: ಪುಟ- ೬೩, ೬೪, ೬೫:

‘ನಾರಣಪ್ಪನ ಶವ ಸಂಸ್ಕಾರದ ಬಗ್ಗೆ ಮಠದ ಗುರುಗಳನ್ನೇ ಕೇಳೋಣ; ಹಾಗೆಯೇ ತ್ರಯೋದಶಿಯ ದಿನ ಮಠದಲ್ಲಿ ಆರಾಧನೆಯೂ ಇದೆ, ಪ್ರಸಾದ ಸ್ವೀಕರಿಸಿದಂತೆಯೂ ಆಗುತ್ತದೆ’ ಎಂದು ಹೊರಡುವ ಬ್ರಾಹ್ಮಣರು ದೂರ್ವಾಸಪುರದಿಂದ ಹೊರಟು ಕೈಮರಕ್ಕೆ ಹೋಗಿ ಅಲ್ಲಿ ಆದಿನ ತಂಗಿದ್ದು, ಮರುದಿನ ಇಪ್ಪತ್ತು ಮೈಲಿ ನಡೆದು ಇನ್ನೊಂದು ಅಗ್ರಹಾರ ತಲುಪಿ ಅಂದು ರಾತ್ರೆ ಅಲ್ಲಿ ತಂಗಿದ್ದು, ಅದರ ಮರುದಿನ- ತ್ರಯೋದಶಿಯಂದು ಮಧ್ಯಾಹ್ನ ಪೂಜೆಯ ಸಮಯಕ್ಕೆ ಮಠ ತಲುಪಿದರು. ಈ ಅನುಕ್ರಮದಲ್ಲಿ ನೋಡಿದರೆ, ಏಕಾದಶಿಯಂದು ಬ್ರಾಹ್ಮಣರೆಲ್ಲ ದೂರ್ವಾಸಪುರದಿಂದ ಹೊರಟು ಸಂಜೆಗೆ ಕೈಮರ ಸೇರಿದರು. ಅಲ್ಲಿ ಜ್ಯೋತಿಷಿ, ಪಂಡಿತ ಸುಬ್ಬಣ್ಣಾಚಾರ್ಯರ ಮನೆಯಲ್ಲಿ ಅಂದು- ಏಕಾದಶಿಯ ರಾತ್ರೆಗೆ, ಬಿಸಿಬಿಸಿ ಅನ್ನ-ಸಾರು (‘ಒಳಗಿನ ಪರಮಾತ್ಮನಿಗೆ ತಾಗುವಂತೆ ಸುರಿದು’) ಉಂಡದ್ದು ಹೇಗೆ? ಮರುದಿನ- ದ್ವಾದಶಿಯಂದು ‘ದ್ವಾದಶಿ ಪಾರಣೆ’ಯಾಗದೆ ಬರೀ ಮುಖ ತೊಳೆದು ಅವಲಕ್ಕಿ-ಮೊಸರು ತಿಂದು ಹೊರಟದ್ದು ಹೇಗೆ? ಇಡೀ ಕಾದಂಬರಿಯಲ್ಲಿ ಬರುವ ಎಲ್ಲ ಬ್ರಾಹ್ಮಣರ ಅನುಷ್ಠಾನಗಳನ್ನು ಅವಲೋಕಿಸಿದರೆ, ಆಧುನಿಕ ತಾರೀಕು ಪಟ್ಟಿಗಳಿಲ್ಲದೆ ತಿಥಿ-ವಾರ-ನಕ್ಷತ್ರಗಳಲ್ಲೇ ದಿನಗಣತಿಯಿಡುವ ಅವರ‍್ಯಾರೂ ದಿನ-ಕಾಲಮಾನದ ಲೆಕ್ಕ ತಪ್ಪುವವರಲ್ಲ. ಅಂಥಾದ್ದರಲ್ಲಿ ಇಂಥ ದೊಡ್ಡ ಪ್ರಮಾದವಾಗಲು ಹೇಗೆ ಸಾಧ್ಯ? ಇದಕ್ಕೆ ಉತ್ತರ ನಿರೀಕ್ಷಿಸಲೆ?

ಕಾದಂಬರಿಗಳ ಲೋಕದಲ್ಲಿ ಹೊಸತನ ಮತ್ತು ಹೊಸ ಭರವಸೆ ಹುಟ್ಟಿಸಿದ ‘ಸಂಸ್ಕಾರ’ ಹಾಗೂ ಅಲೆಯೆಬ್ಬಿಸಿದ ‘ಅವಸ್ಥೆ’ಯಂತಹ ಕೃತಿಗಳನ್ನು ಓದಿ ನನಗೆ ತೋಚಿದ್ದನ್ನು ಗೀಚಲು ದೊರೆತ ಅವಕಾಶಕ್ಕೆ ನಾನು ಋಣಿ. ಈ ಓದಿನಿಂದ ಯು.ಆರ್.ಎ. ಬಗೆಗೆ ವೈಯಕ್ತಿಕವಾಗಿ ನನ್ನ ನಿಲುವು ಬದಲಾಗದಿದ್ದರೂ, ಸಾಹಿತಿ ಯು.ಆರ್.ಎ. ಅವರ ಕೃತಿಗಳನ್ನು ಓದಲು ಬಾಗಿಲು ತೆರೆದುಕೊಂಡಿದೆ. ಅದಕ್ಕೂ ನಾನು ಕೃತಜ್ಞಳು. ಹಿಂದೆ ಇಲ್ಲದಿದ್ದ ಹೊಸತೊಂದು ನೋಟ ಈ ಓದಿನಿಂದ ದೊರಕಿದೆ ಅನ್ನುವುದೂ ನನಗೆ ಖುಷಿಯ ವಿಚಾರ; ಆ ನೋಟಕ್ಕೆ ನಾನು ಆಭಾರಿ.

8 comments:

ಸೀತಾರಾಮ. ಕೆ. / SITARAM.K said...

೧೯೮೫-೮೭ ರ ಸಮಯದಲ್ಲಿ ಓದಿದ ಅನ೦ತಮೂರ್ತಿಯವರ ಎರಡು ಅಪರೂಪದ ಕಾದ೦ಬರಿಗಳ ಮೆಲುಕನ್ನು ಮಾಡಿಕೊಟ್ಟಿರಿ. ಅನ೦ತಮೂರ್ತಿಯವರ ಕಥೆಗಳು ಚೆನ್ನಾಗಿರುತ್ತವೆ. ಆಕಾಶ ಮತ್ತು ಬೆಕ್ಕು ಎನ್ನುವ ಅವರ್ ಕಥಾ ಸ೦ಕಲನ ಚೆನ್ನಾಗಿದೆ. ರೂಪಾ೦ತರ ಎ೦ಬ ಕತೆ ತೀವ್ರ ಸ೦ಕೀರ್ಣ ಸ೦ಕೇತಗಳ ಅಪರೂಪದ ಕತೆ.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಸೀತಾರಾಮ್ ಸರ್. ಯು.ಆರ್.ಎ. ಕಥೆಗಳಲ್ಲಿ ಕೆಲವೇ ಕೆಲವನ್ನು ಮಾತ್ರ ಓದಿದ್ದೇನೆ. ರೂಪಾಂತರ ಓದಿಲ್ಲ, ತಿಳಿಸಿದ್ದಕ್ಕೆ ವಂದನೆಗಳು.

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿ ಕಾದಂಬರಿಗಳ ಬಗೆಗೆ ತಿಳಿಸಿದ್ದಿರಿ
ನಾನೂ ಇದನ್ನು ಓದಿಲ್ಲ
ಓದುವ ಆಸೆ ಮಾಡಿದ್ದಿರಿ
ಅಭಿನಂದನೆಗಳು

sunaath said...

ಜ್ಯೋತಿ,
ಉತ್ತಮ ವಿಮರ್ಶೆ. ಅನಂತಮೂರ್ತಿಯವರ ಬಗೆಗಿನ ನಮ್ಮ ಅಭಿಪ್ರಾಯ ಏನೇ ಇರಲಿ, ಅವರ ಸಾಹಿತ್ಯದ ವಿಮರ್ಶೆಯನ್ನು ನಿಷ್ಪಕ್ಷಪಾತವಿಲ್ಲದೆ ಮಾಡಬೇಕು ಎನ್ನುವ ಧೋರಣೆ ಸರಿಯಾಗಿದೆ. ಆ ಗುರಿಯನ್ನು ಸಾಧಿಸಿದ್ದೀರಿ.

ತೇಜಸ್ವಿನಿ ಹೆಗಡೆ said...

ಅಕ್ಕ,

ಮೊದಲಿಗೆ : ನಿಮ್ಮಂತೇ ನನ್ನಲ್ಲೂ ಮಾಧ್ಯಮದವರ ಪ್ರಭಾವಕ್ಕೋ ಇಲ್ಲಾ ಕೆಲವೊಂದು ಆತ್ಮೀಯರ ಮಾತುಗಳಿಂದ ಅನಂತ ಮೂರ್ತಿಯವರ ಪ್ರತಿ ಒಂದು ಋಣಾತ್ಮಕ ಛವಿ ನನ್ನ ಮನದಲ್ಲೂ ಮೂಡಿತ್ತು. ಆದರೆ ಸಂಸ್ಕಾರ ಹಾಗೂ ಘಟಶ್ರಾದ್ಧ ಪುಸ್ತಕಗಳನ್ನೋದಿದ ಮೇಲೆ ಆ ಛವಿ ಮರೆಯಾಗುವ ಬದಲು ಇನ್ನೂ ಗಾಢವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ!

ಸಂಸ್ಕಾರದಲ್ಲಿ ಪ್ರಾಣೇಶಾಚಾರ್ಯರು ಹೇಗೆ ಅಧೋಗತಿಯ ಆಳವನ್ನು ನೋಡಿ ಮೇಲೇರಲು ಯತ್ನಿಸಿದರು, ಯಾವ ರೀತಿ ಅವರ ಆಂತರ್ಯ ನಿಜವಾಗಿಯೂ ಸಂಸ್ಕಾರವನ್ನು ಹೊಂದಲು ಬಯಸಿತು ಎನ್ನುವುದನ್ನು ವಿವರಿಸಿದೆ ನಿಜ. ಆದರೆ ಜೊತೆಗೇ ಹಲವಾರು ಪಂಗಡಗಳ, ಧಾರ್ಮಿಕ ವಿಧಿವಿಧಾನಗಳ, ಜಾತಿ/ಉಪಜಾತಿಗಳೊಳಗಿನ ಸಂಪ್ರದಾಯ, ಆಹಾರ ವಿಚಾರಗಳನ್ನು ತುಂಬಾ ತುಚ್ಛವಾಗಿ ಲೇವಡಿ ಮಾಡಿದ್ದಾರೆ ಅನಂತಮೂರ್ತಿಯವರು. ಎಲ್ಲವನ್ನೂ, ಎಲ್ಲರನ್ನೂ generalize ಮಾಡಲು ಹೋಗಿ ಎಡವಿದಂತೆ ಅನಿಸಿತು. ಪ್ರಾಣೇಶಾಚಾರ್ಯರ ಪಾತ್ರ ಮಾತ್ರ ಸರಿಯಾಗಿದ್ದು ಉಳಿದುದೆಲ್ಲಾ ಪೂರ್ವಾಗ್ರಹ ಪೀಡಿತದಂತೇ ನನಗೆ ಅನಿಸಿದ್ದು ಸುಳ್ಳಲ್ಲ.

ನಿಮ್ಮ ಸುಂದರ ಹಾಗೂ ಮನೋಜ್ಞ ವಿಮರ್ಶೆಗಳನ್ನೋದಿ "ಅವಸ್ಥೆ"ಯನ್ನೂ ಒಮ್ಮೆ ಓದಬೇಕೆಂದೆನಿಸಿದೆ.

ಸುಪ್ತದೀಪ್ತಿ suptadeepti said...

ಗುರುಮೂರ್ತಿ, ಸುನಾಥ್ ಕಾಕಾ ಮತ್ತು ತೇಜು, ಧನ್ಯವಾದಗಳು.

ಗುರುಮೂರ್ತಿ, ನನ್ನ ಸ್ವಂತ ಅಭಿಪ್ರಾಯಗಳು ನಿಮಗೆ ಸ್ಫೂರ್ತಿಯಾಗಿರುವುದು ನಿಮ್ಮ ಅಭಿರುಚಿ ಉತ್ತಮವಾಗಿರುವುದನ್ನು ತೋರುತ್ತದೆಯಷ್ಟೆ. ಓದಿ, ನಿಮಗೇನನಿಸಿತು, ಹೇಳಿ.

ಕಾಕಾ, ನಿಷ್ಪಕ್ಷಪಾತ ಅಭಿಪ್ರಾಯ ಮಂಡನೆ ನನ್ನ ಧ್ಯೇಯವಾಗಿತ್ತು, ನಿಜ. ಅದನ್ನು ಸಾಧಿಸಿದ್ದೇನೆ ಅಂತ ನಿಮ್ಮಿಂದ ಕೇಳಿ ಖುಷಿಯಾಗಿದೆ. ಈ ನಾಯಕರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹೇಳುತ್ತೀರ?

ತೇಜು, ಸಂಸ್ಕಾರ ಮತ್ತು ಅವಸ್ಥೆ- ಇವೆರಡೂ ಕಾದಂಬರಿಗಳಲ್ಲಿ ಪೂರ್ವಾಗ್ರಹ ಪೀಡಿತ ಸನ್ನಿವೇಶಗಳು, ವಿವರಣೆಗಳು ಸಾಕಷ್ಟಿವೆ. ಅವನ್ನೆಲ್ಲ ಬರೆಯುತ್ತಾ ಹೋದಲ್ಲಿ ಲೇಖನದ ಮಿತಿ ಮೀರುತ್ತದೆನ್ನುವ ಕಾರಣಕ್ಕಾಗಿ ಇಬ್ಬರು ನಾಯಕರ ಪಾತ್ರಗಳನ್ನೂ ಅವರೊಳಗಿನ ತಾಕಲಾಟಗಳನ್ನೂ ಮುಖ್ಯವಸ್ತುವಾಗಿ ಇಟ್ಟುಕೊಂಡೆ. ಈ ಚೌಕಟ್ಟಿನ ಮಿತಿಯೊಳಗೆ ಬರೆಯುವುದೂ ಒಂದು ಸವಾಲೇ ಆಗಿತ್ತು. ಅದನ್ನು ಸರಿಯಾಗಿ ನಿಭಾಯಿಸಿದ್ದೇನೋ ಇಲ್ಲವೋ ತಿಳಿಯದು. ಅವಸ್ಥೆಯನ್ನು ಕೆಲವರು "ಅದು ಬರೀ ಅವಸ್ಥೆ" ಅಂದಿದ್ದಾರೆ. ಯೋಚನೆ ಮಾಡಿ ಓದಿಗಿಳಿ, ಆಯ್ತಾ?

ಆನಂದ said...

ಬ್ಲಾಗ್ ಲೋಕದಲ್ಲೇಕೋ ಹಳೆಯ ಪುಸ್ತಕಗಳ ಚರ್ಚೆ ಶುರುವಾದಂತಿದೆ. ಈಗಷ್ಟೇ‌ ದಾಟು ಬಗ್ಗೆ ಬರೆದ ಬ್ಲಾಗ್ ಓದಿ ಬಂದೆ.
ಅನಂತಮೂರ್ತಿಯವರ ಹಳೆಯ ಕಾದಂಬರಿಗಳ ನೆನಪು ಮಾಡಿಕೊಟ್ಟಿದ್ದೀರಿ. ನಾನು ಮೆಚ್ಚಿದ ಕಾದಂಬರಿಗಳಲ್ಲಿ ಇವೂ ಎರಡು. ನನ್ನ ಅಭಿರುಚಿಗಳು ಬದಲಾದವೋ‌ ಏನೋ ಆ ನಂತರ ಬಂದ ದಿವ್ಯ, ಭವ ಎಲ್ಲವೂ‌ ಸಪ್ಪೆ ಎನ್ನಿಸಿಬಿಟ್ಟವು. ಅವರ ಕಾದಂಬರಿಗಳಿಗಿಂತ ಅವರ ಕಥೆಗಳೇ‌ ಇನ್ನೂ‌ ನೆನಪಿನಲ್ಲಿವೆ. ಚಿಕ್ಕಂದಿನಲ್ಲಿ ಓದಿದ 'ಸೂರ್ಯನ ಕುದುರೆ' ಇನ್ನೂ‌ ನೆನಪಿದೆ.
ಅವರು ಬರೆದ ಕೆಲವು ಕವಿತೆಗಳನ್ನು ಕೂಡ ಅಲ್ಲಲ್ಲಿ ಓದಿದ್ದೇನೆ. ಅಷ್ಟೇನೂ‌ ಹಿಡಿಸಲಿಲ್ಲ.
ನಿಮ್ಮ ವಿಮರ್ಶೆ ಚೆನ್ನಾಗಿದೆ. ಆದರೆ ಅವರ ಘಟಶ್ರಾದ್ಧ ಮುಂತಾದ ಕಥೆಗಳನ್ನೂ‌ ಉಲ್ಲೇಖಿಸಿದ್ದರೆ ಇನ್ನೂ‌ ಚೆನ್ನಾಗಿರುತ್ತಿತ್ತೇನೋ...
ಸಾಧ್ಯವಾದಲ್ಲಿ ಒಮ್ಮೆ ಇದನ್ನೂ ನೋಡಿ

ಸುಪ್ತದೀಪ್ತಿ suptadeepti said...

ಆನಂದ್, ಧನ್ಯವಾದಗಳು.
ಲೇಖನದಲ್ಲೇ ತಿಳಿಸಿದಂತೆ, ಶ್ರೀ ನಾಗಾ ಐತಾಳರು ಸಂಪಾದಿಸಿರುವ "ಅಭಿನವ" ರವಿ ಪ್ರಕಟಿಸಿರುವ "ಅನಂತ ಮುಖದ ಮೂರ್ತಿ" ಗ್ರಂಥಕ್ಕಾಗಿ ಕಳೆದ ಅಕ್ಟೋಬರಿನಲ್ಲಿ ಬರೆದ ಲೇಖನವಿದು. ಪುಸ್ತಕದ ಬಿಡುಗಡೆ ಡಿಸೆಂಬರ್ ಇಪ್ಪತ್ತೊಂದರಂದು ಬೆಂಗಳೂರಲ್ಲಿ ನಡೆದಿದೆ. ನಂತರವೇ ಇದನ್ನು ಬ್ಲಾಗಿನಲ್ಲಿ ಹಾಕಿದ್ದು.

ಈ ಬರಹದ ಮಿತಿ ಮತ್ತು ವ್ಯಾಪ್ತಿ ಈ ಎರಡು ಕಾದಂಬರಿಗಳ ನಾಯಕರ ಒಳ ಸಂಘರ್ಷ ಮತ್ತು ತಾಕಲಾಟಗಳಷ್ಟೇ ಆದ್ದರಿಂದ ಆ ಚೌಕಟ್ಟಿನೊಳಗೇ ಬರೆದಿದ್ದೇನೆ. ಹಾಗಾಗಿ ಬೇರೆ ಕೃತಿಗಳನ್ನು ಅಲ್ಲಿ ಉಲ್ಲೇಖಿಸಿಲ್ಲ, ವ್ಯಾಖ್ಯಾನಿಸಿಲ್ಲ.

ನೀವು ತಿಳಿಸಿರುವ ಕೊಂಡಿಗಳನ್ನು ಅನುಸರಿಸಿ ಹೋಗಿ ಓದುತ್ತೇನೆ, ಧನ್ಯವಾದಗಳು.