ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Friday, 1 January, 2010

ಮತ್ತೊಂದು ಹೊಸತು

ಓದುಗರಿಗೆಲ್ಲ ಹೊಸವರ್ಷದ ಶುಭಾಶಯಗಳು.

ಯಾರನ್ನೂ ಯಾವುದನ್ನೂ ಲೆಕ್ಕಿಸದ ಕಾಲದ ಲೆಕ್ಕದಲ್ಲಿ ಇನ್ನೂ ಒಂದು ಅಂಕೆ ಸವೆದಿದೆ. ಕಳೆದ ಕಾಲವೆಲ್ಲವನ್ನೂ ಕಳೆದುಕೊಳ್ಳದೆ ಕಲಿತುಕೊಳ್ಳುತ್ತಾ ಮುಂದೆ ಸಾಗುವುದರಲ್ಲಿ ಸಮಯದ ಸಾರ್ಥಕತೆಯನ್ನು ಕಂಡುಕೊಂಡರೆ ಮನುಜಮತಕ್ಕೇ ಹಿತವಲ್ಲವೆ?

ಹೊಸತೊಂದರ ಆರಂಭ ಎಲ್ಲ ಹಿತ ಸುಖಗಳಿಗೆ ನಾಂದಿಯಾಗಲಿ. ಜಗಜೀವನ ಮಂಗಳವಾಗಲಿ.


ಎಲ್ಲ ಗದ್ದಲಗಳ ನಡುವೆಯೂ
ಮತ್ತದೇ ಸೂರ್ಯ, ಹಗಲು, ಬೆಳಕು;
ಗೋಡೆ ಮೇಲಿನ ಚಿತ್ರ ಮಾತ್ರ ಹೊಸದು
ಸುತ್ತೆಲ್ಲ ಅದೇ ರಾಗ, ಅದೇ ತಾಳ, ಅದೇ ಹಾಡು
ಪಲ್ಲವಿಯಲ್ಲೇ ತಿರುಗಣೆ

ಮುಂದೇನು? ಪ್ರಶ್ನೆಗಳಿವೆ ಹಲವಾರು
ಕೇಳಿದವರಿಗಂತೂ ಉತ್ತರ ತಿಳಿಯದು
ಕೇಳಿಸಿಕೊಂಡವರಿಗೆ ಅವರದೇ ತಲೆನೋವು
ತರಾವರಿ ಗುಳಿಗೆಗಳು ಮಾರಾಟಕ್ಕಿವೆ, ಕೊಳ್ಳುವವರಿಲ್ಲ

ಹೊಸತನದ ಗಾಳಿಯಲ್ಲಿ ಗುಂಡುಗಳ ಹಾರಾಟ
ಮೂಗಿನೊಳಗೆ ಗೊಂದಲದ ಹೊಗೆ
ಉಸಿರಿನ ವಿಷ ಬೆನ್ನಲ್ಲಿ ಕಾಣದು
ಕೊಪ್ಪರಿಗೆಯೊಳಗೇ ಕ್ರೂರಿಗಳ ಸಾಮ್ರಾಜ್ಯ
ಕೊಳ್ಳುಬಾಕನ ಹೆಣದಡಿಯಲ್ಲೂ ಹೂಳುವ ಗುತ್ತಿಗೆ
ಕತ್ತಿ ಹಿಡಿದವನ ಕೈ ಕಾಣದ ಸಾಮಾನ್ಯ ಕುತ್ತಿಗೆ

ಎಷ್ಟು ನೋವಿಗೆ ಎಷ್ಟು ನಲಿವು
ಲೆಕ್ಕ ಇಟ್ಟವರಿದ್ದೀರಾ?
ಎಲ್ಲಿಯ ಸ್ವಾರ್ಥಕ್ಕೆ ಎಲ್ಲಿಯ ಬಲಿ
ಸೂತ್ರ ಹಿಡಿದವರಿದ್ದೀರಾ?
ಯಾರ ನೆರಳಿಗೆ ಯಾರ ಜೀವ
ಸೂಕ್ಷ್ಮ ಕಂಡವರಿದ್ದೀರಾ?

ಗಾಳಿಗೋಪುರದಂಥ ಅರಗಿನರಮನೆಗಳು
ನೆಲಕಚ್ಚಿದಾಗಿಂದ ಕೆಚ್ಚಿನ ಕೆಸರಲ್ಲೂ
ಕುಸಿದದ್ದೇ ಬಂತು, ಕಿಸಿದದ್ದೇ ಬಂತು
ಜಾರಿದವರೆಲ್ಲ ಜಾಣರಾಗಲಿಲ್ಲ
ಎದ್ದ ಜಾಣರ ಹೆಸರು ಕಾಣಲೇ ಇಲ್ಲ

ಸುಖನಿದ್ರೆ ಎಲ್ಲರ ಸೊತ್ತಲ್ಲ
ಮತ್ತದೇ ಚಂದ್ರ, ಇರುಳು, ಕತ್ತಲು

ಅಷ್ಟಾದರೂ, ಕಂಡಷ್ಟೇ ಆಕಾಶದಲ್ಲಿ
ದಿಟ್ಟಿಸಿ ಎಣಿಸಲು ಚುಕ್ಕಿಗಳಿದ್ದಾವೆ
(೦೨-ಜನವರಿ-೨೦೦೯)

11 comments:

ಸೀತಾರಾಮ. ಕೆ. / SITARAM.K said...

ಚೆ೦ದದ ಕಾವ್ಯ. ನಮ್ಮ ಸುತ್ತಲಿನ ನಿತ್ಯ ವಾತಾವರಣದಲ್ಲಿರದ ಹೊಸತನ ವರ್ಷದಲ್ಲೇನಿದೇ ಎ೦ಬ ಗ೦ಭೀರ ಪ್ರಶ್ನೆ, ಭಯದ ವಾತಾವರಣ, ಸ್ವಾರ್ಥ ವಾತಾವರಣ, ದುಡ್ಡಿನ ಸುತ್ತ ಗಿರಕಿ ಹೊಡೆಯುತ್ತಿರುವ ಪ್ರಪ೦ಚ- ಎಲ್ಲದರ ಮಧ್ಯ ವಿಶಣ್ಣವಾದ ಮಾನವತೆ- ಚುಕ್ಕಿ ಎಣಿಕೆಯ ಆಶಾವಾದ - ಸು೦ದರ ಚಿತ್ರಣ.

ಸೀತಾರಾಮ. ಕೆ. / SITARAM.K said...

happy new year wishes

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಸೀತಾರಾಮ್ ಸರ್.

ನಿಮಗೂ ನಿಮ್ಮ ಬಂಧುಮಿತ್ರರಿಗೂ ಹೊಸವರುಷವು ಹರುಷ ತರಲಿ.

ತೇಜಸ್ವಿನಿ ಹೆಗಡೆ said...

ಪ್ರಿಯ ಅಕ್ಕ,

ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ತುಂಬಾ ಸುಂದರವಾಗಿದೆ ಕವನ. ಸುಂದರಕ್ಕಿಂತಲೂ ವಾಸ್ತವಿಕವಾಗಿದೆ.

ಯಾಕೋ "ಉಸಿರಿನ ವಿಷ ಬೆನ್ನಲ್ಲಿ ಕಾಣದು" ಈ ಸಾಲು ತುಂಬಾ ಮನತಟ್ಟಿತು.

sunaath said...

ಜ್ಯೋತಿ,
ಈ ಎಲ್ಲ ಕಠಿಣ ವಾಸ್ತವದ ನಡುವೆ ನಿನ್ನ ಕವಿತೆ ಹೊಸದು.
ಈ ಕಾವ್ಯಸೌರಭ ಆಗಸದಲ್ಲಿ ಕಾಣುವ ಚುಕ್ಕಿಗಳಷ್ಟೇ ಹೊಸದು!

shivu.k said...

ಸುಂದರವಾದ ಕವನ...

ಎಲ್ಲಾ ವಾಸ್ತವ ಚಿತ್ರಣವನ್ನು ಕಟ್ಟಿಕೊಟ್ಟಿದ್ದೀರಿ...

ಹೊಸ ವರ್ಷದ ಶುಭಾಶಯಗಳು.

ಚುಕ್ಕಿಚಿತ್ತಾರ said...

ಕವಿತೆ ಸು೦ದರವಾಗಿದೆ.
”ಅಷ್ಟಾದರೂ, ಕಂಡಷ್ಟೇ ಆಕಾಶದಲ್ಲಿ
ದಿಟ್ಟಿಸಿ ಎಣಿಸಲು ಚುಕ್ಕಿಗಳಿದ್ದಾವೆ”
ಎಷ್ಟೇ ಕಷ್ಟ ನಷ್ಟಗಳಿದ್ದರೂ ಮನುಷ್ಯನ ಆಶಾವಾದವೇ ಆತನ ಬದುಕಿಗೆ ಪ್ರೇರಣೆ.

Sushrutha Dodderi said...

ಇಷ್ಟ ಆಯ್ತೂಜೀ.. ನಿಮಗೂ ಹೊಸ ವರ್ಷ ಖುಶಿ ತರ್ಲಿ.

ಅಂದ್‍ಹಾಗೇ, ಸಿಗ್ರೀ- ಇಂಡಿಯಾದಲ್ಲಿದೀರಂತಲ್ಲಾ?

ಸಾಗರದಾಚೆಯ ಇಂಚರ said...

ಹೊಸ ವರ್ಷವು ನಿಮಗೆ ಶುಭವನ್ನೂ, ಸುಖವನ್ನೂ ತರಲಿ

sritri said...

`ದಿಟ್ಟಿಸಿ ಎಣಿಸಲು ಚುಕ್ಕಿಗಳಿದ್ದಾವೆ..'

ಅಷ್ಟಿದೆಯಲ್ಲ, ಸಾಕು.

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು. ನನ್ನ ಉತ್ತರ ತಡವಾಗಿದ್ದಕ್ಕೆ ಕ್ಷಮೆಯಿರಲಿ.

ತೇಜು, ನಿನಗೂ ನಿನ್ನ ಮನೆಯವರೆಲ್ಲರಿಗೂ ಹೊಸವರ್ಷದ ಹಾಗೂ ಸಂಕ್ರಾಂತಿಯ ಶುಭ ಹಾರೈಕೆಗಳು.

ಕಾಕಾ, ನಿಮ್ಮ ಪ್ರೀತಿಯ ಮುಖ ಎಂದಿಗೂ ನಿತ್ಯ ನೂತನವಾದ್ದು. ಅದರ ಸುಖ ನಮ್ಮದು.

ಶಿವು, ನಿಮಗೂ ನಿಮ್ಮ ಬಂಧು ಬಾಂಧವರಿಗೂ ಮತ್ತೆ ಹೊಸ ವರ್ಷದ ಹಾಗೂ ಸಂಕ್ರಾಂತಿಯ ಶುಭ ಹಾರೈಕೆಗಳು.

ಚುಕ್ಕಿಚಿತ್ತಾರ, ಸ್ವಾಗತ. ಹೀಗೇ ಈ ಅಕ್ಷರಲೋಕಕ್ಕೆ ಬರುತ್ತಿರಿ ಬರೆಯುತ್ತಿರಿ ಅನ್ನುವ ಆಶಾವಾದ ನನ್ನದು.

ಸುಶ್, ನಿನಗೂ ಧ.ವಾ. ಹಾಗೂ ಬೆ.ವಿ. ಊರಲ್ಲಿದ್ದೇನೆ. ಸದ್ಯ ಬೆಂಗಳೂರಿಗೆ ಬರೋದಿದೆ, ನಿಮ್ಮನ್ನೆಲ್ಲ ಭೇಟಿಯಾಗೋದೇ ಆ ಪ್ರಯಾಣದ ಉದ್ದೇಶ. ಆಯ್ತಾ?

ಗುರುಮೂರ್ತಿ, ನಿಮಗೂ ಅಷ್ಟೇ; ಹೊಸಕಾಲ ಹರ್ಷದಾಯವಾಕವಾಗಿರಲಿ.

ವೇಣಿ, ಅಷ್ಟಾದರೂ ಇವೆಯಲ್ಲ ಅನ್ನುವ ನೆಮ್ಮದಿಯೇ ಎಷ್ಟೋ ಬದುಕುಗಳ ನಾವೆಗೆ ದಾರಿದೀಪ, ದಿಕ್ಸೂಚಿ; ಅಲ್ವಾ?