ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday 7 February, 2010

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೩

ಉಪ್ಪಿನ ಕೆರೆಯ ಕೌತುಕ ನಗರಿ:
ಭಾನುವಾರ, ಸೆಪ್ಟೆಂಬರ್ ೬; ಸೋಮವಾರ, ಸೆಪ್ಟೆಂಬರ್ ೭

ಸಂಜೆ ಐದೂವರೆಯ ಹೊತ್ತಿಗೆ ಉಸ್ಸಪ್ಪಾಂತ ಹೋಟೆಲ್ ತಲುಪಿದೆವು. ಸೆಖೆಯಿದ್ದರೂ ಬಿಸಿಬಿಸಿ ಶವರಿನಡಿಯಲ್ಲಿ ದಣಿವಾರಿಸಿಕೊಂಡು ಊರು ಸುತ್ತಲು ಹೊರಟಾಗ ಗಂಟೆ ಆರೂಮುಕ್ಕಾಲರ ಆಸುಪಾಸು. ಮೊದಲಿಗೆ ಯೂಟಾ ರಾಜ್ಯದ ರಾಜಧಾನಿಯ ಹೃದಯದತ್ತ ಹೊರಟೆವು. ಏರಿನ ದಾರಿಯಲ್ಲಿ ಸಾಗುತ್ತಲೇ ದೇವಳದ ಗೋಪುರದಂತೆ ಕೊಂಚಕೊಂಚವಾಗಿ ಗೋಚರಿಸಿ ತನ್ನ ಸ್ವರೂಪವನ್ನು ತೆರೆದಿಟ್ಟಿತು ಅಲ್ಲಿನ ಕ್ಯಾಪಿಟಲ್.

ಅದರ ಮುಂದಿನ ರಸ್ತೆಯಲ್ಲಿ ಒಂದು ಗಸ್ತು ಹೊಡೆದು, ಒಂದೆರಡು ಸಲ ಕ್ಯಾಮರಾ ಕಣ್ಣು ಹೊಡೆದು, ಚಾರಿತ್ರಿಕ ಖ್ಯಾತಿಯ ಮಾರ್ಮನ್ ಚರ್ಚ್ ಇರುವ ಟೆಂಪಲ್ ಸ್ಕ್ವಾರ್ ಕಡೆ ಓಡಿತು ಬಂಡಿ. ಅಲ್ಲಿ ತಲುಪಿದಾಗ ಏಳೂಕಾಲು.




ಅಸೆಂಬ್ಲಿ ಹಾಲ್- ಹೊರಗಡೆಯಿಂದ


ಅಸೆಂಬ್ಲಿ ಹಾಲ್- ಒಳಗಡೆಯಿಂದ
ಪ್ರತಿದಿನವೂ ಇಲ್ಲಿ ಧಾರ್ಮಿಕ ಸಂಗೀತ ಕಾರ್ಯಕ್ರಮಗಳು ಜರಗುತ್ತವಂತೆ.


ಟ್ಯಾಬರ್’ನ್ಯಾಕಲ್- ಹೊರಗಡೆಯಿಂದ


ಟ್ಯಾಬರ್’ನ್ಯಾಕಲ್- ಒಳಗಡೆಯಿಂದ
ಇದರ ಸೂರು (ಮೇಲಿನ ಚಿತ್ರದಲ್ಲಿ ನೋಡಬಹುದು) ವಿಶಿಷ್ಟ ರೀತಿಯಲ್ಲಿ ವಿನ್ಯಾಸ ಮಾಡಲಾಗಿದ್ದು ಮುಖ್ಯ ವೇದಿಕೆಯಲ್ಲಿ ಮಾತಾಡಿದರೆ ಧ್ವನಿವರ್ಧಕವಿಲ್ಲದೆ ಇಡೀ ಸಭಾಂಗಣಕ್ಕೆ ಕೇಳಿಸುವದಂತೆ. ವಾರಕ್ಕೊಂದು ಬಾರಿ ಇಲ್ಲಿಂದಲೇ ಧಾರ್ಮಿಕ ಆರ್ಗನ್ ಸಂಗೀತ ಕಾರ್ಯಕ್ರಮ ಆಕಾಶವಾಣಿ ಮೂಲಕ ಪ್ರಸಾರವಾಗುವುದಂತೆ.


ಮುಖ್ಯ ಚರ್ಚ್- ಇದರೊಳಗಡೆ ಮಾರ್ಮನ್ನರಿಗೆ ಮಾತ್ರ ಪ್ರವೇಶ


ಉತ್ತರದ ವಿಸಿಟರ್ ಸೆಂಟರಿನೊಳಗೆ, ಮಾಳಿಗೆಯಲ್ಲಿ ಜೀಸಸ್


ಸಾಲ್ಟ್ ಲೇಕ್ ಸಿಟಿಯ ಕನ್ವೆಂಶನ್ ಸೆಂಟರ್: ಸಾಲ್ಟ್ ಪ್ಯಾಲೇಸ್

ಎಂಟೂವರೆಯ ಹೊತ್ತಿಗೆ ಹಿಮಾಲಯನ್ ಕಿಚನ್ ರೆಸ್ಟಾರೆಂಟಿನ ಒಳಹೊಕ್ಕಾಗ ಹಸಿವೆ ಕಾಡಿದ್ದು ಸುಳ್ಳಲ್ಲ. ರುಚಿಯಾಗಿತ್ತು ಊಟ. ನಾನ್ ಮತ್ತು ನೇಪಾಲಿ ಸ್ಪೆಶಲ್ ದಾಲ್. ಹೋಟೆಲ್ ಸೇರಿದಾಗ ನಿದ್ರೆಯೂ ಕಾಡುತ್ತಿತ್ತು.

ಮರುದಿನ, ಸೋಮವಾರ, ಕಾರಿನೊಳಗಿನ ಸಂತೆಯನ್ನೆಲ್ಲ ಸ್ವಲ್ಪ ಸರಿಪಡಿಸಿಕೊಂಡು, ದಾರಿ ಖರ್ಚಿಗೆ ಬೇಕಾಗುವಷ್ಟನ್ನೇ ಕೈಗೆಟಕುವಂತೆ ಇಟ್ಟುಕೊಂಡು ಕ್ಯಾಲಿಫೋರ್ನಿಯಾ ಕಡೆಗೆ, ಪಶ್ಚಿಮಾಭಿಮುಖರಾದೆವು. ದಾರಿಯಲ್ಲಿ ಮತ್ತೂ ಒಂದೆರಡು ನಿಲುಗಡೆಗಳಾದವು, ಈ ನೋಟಗಳಿಗಾಗಿ...








ಗ್ರೇಟ್ ಸಾಲ್ಟ್ ಲೇಕಿನ ನೀರು ಉಪ್ಪುಪ್ಪೇ ಇದೆಯಾ ಅನ್ನುವ ಪರೀಕ್ಷೆಗೆಂದು ನೀರ ಬದಿಗಿಳಿದಾಗ ಅಸಾಧ್ಯ ದುರ್ನಾತ! ಅಸಂಖ್ಯಾತ ನೊಣಗಳ ಗದ್ದಲ. ಬಂಡೆ, ನೆಲವೆಲ್ಲ ಕಪ್ಪು ಕೆಸರಿಂದ ಸಿಂಪರಣೆಗೊಂಡಂತೆ ಕಾಣುವಷ್ಟು ನೊಣಗಳ ರಾಶಿ. ಅಲ್ಲೇ ಮನಸಾರೆ ನಗಲಾರದೆ, ಕಾರಿನೊಳಗೆ ಕೂತು ನಕ್ಕಿದ್ದೆ- ನಮ್ಮ ಪೇಚಿಗೆ.

ಒಂದಾನೊಂದು ಕಾಲದಲ್ಲಿ ಈ ಪ್ರದೇಶ ಸಾಗರದಾಳದಲ್ಲಿತ್ತು, ಕಾಲಾಂತರದಲ್ಲಿ ನೀರಪಾತಳಿಯಿಂದ ಮೇಲೆದ್ದು ಬಂದಾಗ ಸಾಗರದ ಉಪ್ಪು ನೀರು ಈ ಕೆರೆಯಲ್ಲುಳಿದದ್ದು ಇನ್ನೂ ಇದೆ, ಉಪ್ಪಾಗಿಯೇ ಇದೆ ಅನ್ನುವುದು ಈ ಉಪ್ಪಿನಕೆರೆಯ ಹಿನ್ನೆಲೆ.



ಕ್ಯಾಲಿಫೋರ್ನಿಯಾದ ಸಾಕ್ರಮೆಂಟೋ/ ಸ್ಯಾನ್ ಫ್ರಾನ್ಸಿಸ್ಕೋ ತನಕವೂ ಬರುವ ಹೈವೇ ೮೦ರ ಪಕ್ಕದಲ್ಲಿ ‘ಉಪ್ಪಿನ ಹೊಲ’





‘ಉಪ್ಪು ಬೇಕೇ ಉಪ್ಪು...’


‘...ಊಟದ ಸವಿಗೆ ಉಪ್ಪು...’


ಹೈವೇ ೮೦ರ ಬದಿಯಲ್ಲಿ ‘ಗೋಲ್ಕೊಂಡಾ ಸಮ್ಮಿಟ್’!
ಅದಕ್ಕೂ ತುಸು ಮೊದಲು ‘ಮೊಗಲ್ ಸ್ಟ್ರೀಟ್’ ಅನ್ನುವ ದಾರಿಫಲಕವನ್ನೂ ನೋಡಿದ್ದೆವು.


ಅಂತೂ ಇಂತೂ ಹತ್ತು ದಿನಗಳ ಪ್ರವಾಸ ಮುಗಿಸಿ ಮನೆಗೆ ಬಂದು ಸೇರಿದಾಗ ರಾತ್ರಿ ಹತ್ತರ ಹತ್ತಿರ. ಒಂದಿಷ್ಟು ಊಟ ಮಾಡಿ ಹಾಯ್ ಎಂದು ಉಸಿರು ಬಿಟ್ಟು ನಮ್ಮ ಗೂಡಿನ ನಮ್ಮ ಬೆಡ್ದಿನ ಮೇಲೆ ಬಿದ್ದುಕೊಂಡಾಗ...
...
...
...
ನಿಮ್ಮೆಲ್ಲರ ನೆನಪಾಗಲೇ ಇಲ್ಲ!

2 comments:

Badarinath Palavalli said...

ಮೇಡಂ,

ಕ್ಯಾನಿಯನ್ ಕಂಟ್ರಿ ತೋರಿಸಿದ್ದಕ್ಕಾಗಿ ಧನ್ಯವಾದಳು.

ಫೋಟೋಗಳು ಚೆನ್ನಾಗಿವೆ.

- ಬದರಿನಾಥ ಪಲವಳ್ಳಿ

Pl. visit my Kannada Poems blog:
www.badari-poems.blogspot.com

ಸುಪ್ತದೀಪ್ತಿ suptadeepti said...

Thank you sir.