ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Saturday 6 June, 2009

ಬರವಣಿಗೆಯಲ್ಲಿ ಮಾಹಿತಿಗಳ ಪ್ರಾಮುಖ್ಯ-೦೨

"ವಸಂತಕಾಲದಲ್ಲಿ ಮಾತ್ರ ಹೂಗಳು ಅರಳುವುದಿಲ್ಲ. ಪಂಡಿತಪಾಮರ ಕವಿಗಳು ಕಂಡಿರುವ ರೀತಿಯಲ್ಲಿ ನಾನು ಕಾಲವನ್ನು ಕಾಣಲಾಗದು. ಶಬ್ದಗಳನ್ನು ಹಿಡಿದು ಓದುವುದಾದರೆ ನಿಮಗೆ ಭಾವ ಸ್ಪಂದನ ಸಾಧ್ಯವಾಗದು. ಸೃಜನಶೀಲತೆಗೆ ಕಾಲದ ಹಂಗು ಇರುವುದಿಲ್ಲ.-- ಮೊಗಳ್ಳಿ."

ಕೆಂಡಸಂಪಿಗೆಯಲ್ಲಿ ಮೊಗಳ್ಳಿ ಗಣೇಶ್ ಅವರ "ಗತಿ" ಕಾದಂ-ವಾಹಿ (ಕಾದಂಬರಿ-ಧಾರಾವಾಹಿ)ಗೆ ಓದುಗರೊಬ್ಬರು ಬರೆದ ಪ್ರತಿಕ್ರಿಯೆ- "ಮಾಗಿಯಲ್ಲಿ ವಸಂತವೆ? ಅಚ್ಚರಿ! ಪರಮಾಚ್ಚರಿ!!..."-ಗೆ ಮೊಗಳ್ಳಿಯವರು ಹೀಗೆ ಸಮರ್ಥನೆ ಕೊಟ್ಟುಕೊಂಡಿದ್ದರು. ಅದರ ಸಂದರ್ಭ?

"ಗತಿ" ಧಾರಾವಾಹಿಯ ಇಪ್ಪತ್ತೆಂಟನೆಯ ಕಂತು: "ಪ್ರಾತಃಕಾಲದ ಹೊಳೆಯಲ್ಲಿ ಮಿಂದು".
ಅದರ ಮೊದಲೆರಡು ವಾಕ್ಯಗಳು ಹೀಗಿವೆ:
"ಪ್ರಾತಃಕಾಲದ ಮಾಗಿಯ ಚಳಿ ಎಚ್ಚರಿಸಿತ್ತು. ಇಬ್ಬನಿ ಕರಗಿ ನೀರಾಗಿ ತೊಟ್ಟಿಕ್ಕುತ್ತಿತ್ತು."

ಮುಂದಿನ ಸಾಲುಗಳಲ್ಲಿಯೇ ಕಾಡಿನ (ಸುಂದರ ವಸಂತದ ಉಲ್ಲಾಸದ) ವರ್ಣನೆ:
"ಕಾಡೆಲ್ಲ ಉಲಿಯುತ್ತಿತ್ತು. ಹಸಿರು ಸಿರಿಯ ಕಂಪು ಗಾಳಿಯಲಿ ಬೆರೆತು ಜೀವಜಾಲ ಝೇಂಕರಿಸುತ್ತಿತ್ತು. ಕಾಡಿನ ನೂರಾರು ಹೂಗಳು ಅರಳಿ ಮಧು ತುಂಬಿ ದುಂಬಿಗಳ ಕರೆಯುತ್ತಿದ್ದವು... ...ಗೀಜಗನ ಹಕ್ಕಿಗಳಂತು ತಮ್ಮ ಅಮರ ಲೋಕಕ್ಕೆ ಯಾವ ತಡೆಯೂ ಇಲ್ಲ ಎಂಬಂತೆ ವರ್ತಿಸುತ್ತಿದ್ದವು. ತರಾವರಿ ಬಣ್ಣದ ಹೂಗಳು ಮೋಹಕವಾಗಿ ಕಂಗೊಳಿಸುತ್ತಿದ್ದವು. ನರ್ತಿಸುತ್ತಿದ್ದ ನವಿಲುಗಳು ನಮ್ಮನ್ನು ಕಂಡು ಪೊದೆಗಳಲ್ಲಿ ಮರೆಯಾದವು... ...ಸೃಷ್ಟಿಯ ತರಾವರಿ ಹೂಗಳಿಂದ ಇಡೀ ಕಾಡು ಕಂಪು ಸೂಸುತ್ತಿತ್ತು..."

ಅಧ್ಯಾಯದ ಮೊದಲೆರಡು ವಾಕ್ಯಗಳಿಗೂ ನಂತರ ಅಲ್ಲಲ್ಲಿ ಕಂಡುಬರುವ ಈ ವರ್ಣನೆಗಳಿಗೂ ಸಂಬಂಧವೇ ಇಲ್ಲವೆಂದು ಓದುಗರಿಗೆ ಅನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಓದುತ್ತಿರುವಾಗ ನನಗೂ ಹಾಗೇ ಅನಿಸಿತ್ತು. ಕೊನೆಯಲ್ಲಿದ್ದ ಈ ಪ್ರತಿಕ್ರಿಯೆ-ಉತ್ತರಗಳನ್ನು ಗಮನಿಸಿದಾಗ ಮತ್ತೊಮ್ಮೆ ಇದನ್ನೇ ಬರೆಯುವುದರಲ್ಲಿ ಅರ್ಥವಿಲ್ಲವೆಂದು ಸುಮ್ಮನಾಗಿದ್ದೆ. ಆದರೆ, ಒಂದು ಕಥಾನಕದೊಳಗೆ ಕಾಲಮಾನದ ವರ್ಣನೆ ಎಷ್ಟು ಸಮಂಜಸವಾಗಿರಬೇಕು? ಎಷ್ಟು ವಸ್ತುನಿಷ್ಠವಾಗಿರಬೇಕು? ಲೇಖಕರ ಕಲ್ಪನೆಗೆ ಮಿತಿ ಪರಿಧಿ ಎಲ್ಲಿ, ಹೇಗೆ ಇರಬೇಕು? ಇರಬೇಕೇ ಬೇಡವೆ? ಇವೆಲ್ಲ ಪ್ರಶ್ನೆಗಳು ಎದ್ದಿದ್ದವು. ಇವನ್ನೆಲ್ಲ ಒಮ್ಮೆ ನಿಮ್ಮೊಡನೆಯೂ ಹಂಚಿಕೊಂಡಿದ್ದೆ.
ಆ ಪ್ರಶ್ನಾವಳಿ-ಸಂವಹನ ಇಲ್ಲಿದೆ; ಇನ್ನೊಮ್ಮೆ ಓದಿ ನೋಡಿ.

ಮತ್ತೆ ಮತ್ತೆ ಅದೇ ಪ್ರಶ್ನೆ ನನ್ನನ್ನು ಕಾಡುತ್ತದೆ; ಕಾಡುತ್ತಲೇ ಇರುತ್ತದೆ. ಇಲ್ಲಿ ಮೊಗಳ್ಳಿಯವರು ಹೇಳಿದ ರೀತಿ- "...ಪಂಡಿತಪಾಮರ ಕವಿಗಳು ಕಂಡಿರುವ ರೀತಿಯಲ್ಲಿ ನಾನು (ಮೊಗಳ್ಳಿ) ಕಾಲವನ್ನು ಕಾಣಲಾಗದು..." ಅಂದರೇನು? ಪಂಡಿತ-ಪಾಮರ ವಿರುದ್ಧ ಪದಗಳು. ಅಂದರೆ, ಅವರು ಪಂಡಿತರೂ ಅಲ್ಲ, ಪಾಮರರೂ ಅಲ್ಲ, ಕವಿಗಳೂ ಅಲ್ಲ- ಎಂದಾಗುತ್ತದೆ. ಮತ್ಯಾರು?

ಇಲ್ಲಿ ನಾನು ಮೊಗಳ್ಳಿಯವರೊಬ್ಬರ ಮೇಲೆ ವಾಗ್ಯುದ್ಧ ಮಾಡುತ್ತಿಲ್ಲ. ನಾವೆಲ್ಲ ಬರವಣಿಗೆಯಲ್ಲಿ ತೊಡಗಿಕೊಂಡವರು. ಒಂದಲ್ಲ ಒಂದು ರೀತಿಯಲ್ಲಿ ಸೃಜನಶೀಲತೆಯ ಕನ್ನಡಿಯಲ್ಲಿ ಲೋಕದ ಹೊಸ ಬಿಂಬ ಕಾಣುವವರು. ಆದರೆ ಹೊಸ ಬಿಂಬವೆಂದರೆ, ಮಾಗಿಯಲ್ಲೂ ವಸಂತನನ್ನು ಕಾಣುವುದೆ?

ಈ ಅಧ್ಯಾಯದ ಮೊದಲ ವಾಕ್ಯದ ಎರಡನೆಯ ಪದ ‘ಮಾಗಿ’ ಇಲ್ಲಿಲ್ಲದೇ ಹೋಗಿದ್ದಿದ್ದರೆ ಈ ಎಲ್ಲ ಗೊಂದಲಗಳೇ ಇರುತ್ತಿರಲಿಲ್ಲ. ಕಾಡಿನ ಮುಂಜಾನೆಯಲ್ಲಿ ಚಳಿ ಇರುತ್ತದೆ. ವಸಂತದ ಉಲ್ಲಾಸ ಹೊತ್ತ ಮುಂಜಾನೆಯೂ ಅದಕ್ಕೆ ಹೊರತಾಗದು.

ಇದೇ ಕಾದಂ-ವಾಹಿಯ ಇಪ್ಪತ್ತಾರನೆಯ ಕಂತಿನಲ್ಲೂ (ಕಾಡದಾರಿಯ ಸೂರ್ಯಕಾಂತಿ ನೆನಪು- ಕಂತಿನಲ್ಲಿ) ಇಂತಹುದೇ ಆಭಾಸವಿತ್ತು. ಅಲ್ಲಿ ಕಥಾನಾಯಕ ಅವನ ಸಹಚರನೊಡನೆ ಕಾಡಿನಲ್ಲಿ ಸಂಚರಿಸುತ್ತಾ ಸೂರ್ಯಕಾಂತಿಯ ಹೊಲಗಳ ನೆನಪನ್ನು ಮಾಡಿಕೊಳ್ಳುತ್ತಾನೆ. ಹಾಗೆಯೇ ಕಾಡಿನಲ್ಲಿ ಲಾಂಟಾನಾ ಹೂಗಿಡಗಳ ಪೊದೆಗಳನ್ನು ವರ್ಣಿಸಲಾಗಿದೆ. ಈ ಕಂತಿನ ಕೊನೆಯಲ್ಲಿ ಓದುಗರೊಬ್ಬರು ಬರೆದ: "ವಿಜಯನಗರ ಕಾಲದಲ್ಲಿ ಲಾಂಟಾನಾ ಭಾರತದಲ್ಲಿರಲಿಕ್ಕಿಲ್ಲ, ಅದು ೧೮೦೯ ಸಮಯದಲ್ಲಿ ನಮ್ಮ ದೇಶಕ್ಕೆ ಅಲಂಕಾರಿಕ ಗಿಡವಾಗಿ ಬಂದದ್ದು..." ಎನ್ನುವರ್ಥದ ಕಮೆಂಟಿಗೆ ಅವರು ವಿಜಯನಗರದ ಭೂಭಾಗ ಆಫ್ರಿಕಾದ ಕೆಲವೊಂದು ಭೂಭಾಗಕ್ಕೆ ಹೊಂದುತ್ತದೆಂದೂ ಕಾಂಟಿನೆಂಟಲ್ ಷಿಫ್ಟ್ ಸಮಯದಲ್ಲಿ ಈ ಭಾಗವು ಆಫ್ರಿಕಾದಿಂದ ಬೇರೆಯಾದ್ದರಿಂದ ಈ ಹೋಲಿಕೆಯೆಂದೂ ಉತ್ತರಿಸಿದ್ದಾರೆ. ಆದರೆ, ಲಾಂಟಾನಾ ದಕ್ಷಿಣ ಅಮೆರಿಕಾ ಭೂಖಂಡದ ಮೂಲಸಸ್ಯ ಪ್ರಭೇದ. ಕಾಂಟಿನೆಂಟಲ್ ಷಿಫ್ಟ್ ಮತ್ತು ಇದಕ್ಕೆ ಸಂಬಂಧವಿಲ್ಲ. ಈ ವಿವರಣೆಯೂ ನನಗೆ ಸರಿಕಂಡಿರಲಿಲ್ಲ; ಆದರೂ ಅದನ್ನು ಕೆದಕಲು ಹೋಗಿಲ್ಲ.

ಅದರ ನಂತರ, ಅದೇ ಕಂತಿನ ಇನ್ನೊಂದು ವಿಷಯ ಸೂರ್ಯಕಾಂತಿಯ ಬಗ್ಗೆ ನಾನು ಈ ಪ್ರತಿಕ್ರಿಯೆ ಬರೆದಿದ್ದೆ:

"‘...ಬೆಳೆದು ನಿಂತ ಸೂರ್ಯಕಾಂತಿ ಹೊಲಗಳ ನಡುವೆ ...’-- ಮೊಗಳ್ಳಿಯವರೇ ಇದನ್ನೊಂದಿಷ್ಟು ಪರಿಶೀಲಿಸಿ. ವಿಜಯನಗರ ಕಾಲದಲ್ಲಿ ಭಾರತದಲ್ಲೆಲ್ಲೂ ಸೂರ್ಯಕಾಂತಿಯನ್ನು ಬೆಳೆಯಾಗಿ ಬೆಳೆಯುತ್ತಿರಲಿಲ್ಲ ಅನ್ನುವ ನನ್ನ ಊಹೆಗೆ ಈ ವೆಬ್-ಸೈಟ್ ಪೂರಕ ಮಾಹಿತಿ ಕೊಟ್ಟಿದೆ. ಒಮ್ಮೆ ನೋಡಿಕೊಳ್ಳಿ:
http://www.commodityonline.com/commodities/oil-oilseeds/refinedsunfloweroil.php
"Sunflower was introduced in India as an oilseed crop for the first time in 1969."
ವಿವರಣೆಗಳು ಚೆನ್ನಾಗಿ ಹೊಂದುತ್ತವೆ ಅಂದ ಮಾತ್ರಕ್ಕೆ ಅದು ಕಥಾನಕದ ಆ ಕಾಲಕ್ಕೆ, ವಾತಾವರಣಕ್ಕೆ ಹೊಂದಬೇಕಾದ್ದೂ ನಿಮ್ಮಂಥಾ ಒಳ್ಳೆಯ ಲೇಖಕನ ಬರವಣಿಗೆಯಲ್ಲಿರಬೇಕಾದ factual correctness ಅಲ್ಲವೆ? ವಿವರಣೆಗಳ ವಿವರಗಳನ್ನು ಪರಿಶೀಲಿಸಿ ಬರವಣಿಗೆಯನ್ನು ಸಶಕ್ತವಾಗಿಸುವಿರೆಂದು ಆಶಿಸುತ್ತೇನೆ. -ಜ್ಯೋತಿ...."

ಇದಕ್ಕೆ ಇಂದಿನತನಕ ಯಾವುದೇ ಉತ್ತರವಿಲ್ಲ. ಇದೇ ಹಿನ್ನೆಲೆಯಲ್ಲಿ ನಾನು ಈ ಹಿಂದೆ "ಬರವಣಿಗೆಯಲ್ಲಿ ಮಾಹಿತಿಗಳ ಪ್ರಾಮುಖ್ಯ" ಎನ್ನುವ ಪ್ರಶ್ನೆಯನ್ನು ನಿಮ್ಮೆಲ್ಲರ ಮುಂದೆ ತೆರೆದಿಟ್ಟಿದ್ದೆ; ಅದಕ್ಕೆ ಹಲವರು ಉತ್ತರಿಸಿದ್ದೀರಿ. ಆದರೂ... ನನ್ನ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳು ದೊರೆತಿಲ್ಲ. ಯಾರೇ ಆದರೂ ಪ್ರಸಿದ್ಧ ಲೇಖಕರಾದ ಮಾತ್ರಕ್ಕೆ ವಿವರ-ಮಾಹಿತಿಗಳ ನಿಖರತೆ ಗಾಳಿಗೊಡ್ಡಬಹುದೆ? ಇಲ್ಲಿ, ಈ ಲೇಖನದ ಮಿತಿಯಲ್ಲಿ ಮೊಗಳ್ಳಿಯವರ ಗತಿ ಕಾದಂ-ವಾಹಿಯು ಒಂದು ಉದಾಹರಣೆ ಮಾತ್ರ. ಇಂಥ ಹಲವಾರು ಸನ್ನಿವೇಶಗಳು ನಮಗೆ ಓದುಗರಾಗಿ, ಬರಹಗಾರರಾಗಿ ಎದುರಾಗಬಹುದು. ಅವನ್ನು ಹೇಗೆ ಎದುರಿಸಬೇಕು, ನಿಭಾಯಿಸಬೇಕು ಅನ್ನುವ ದಿಕ್ಕಿನತ್ತ ನನ್ನ ನೋಟ.

ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ, ಮೊಗಳ್ಳಿಯವರತ್ತ ಬೊಟ್ಟು ಮಾಡುವ ಉದ್ದೇಶ ನನ್ನದಲ್ಲ; ಅದೊಂದು ಉದಾಹರಣೆ ಮಾತ್ರ. ‘ಗತಿ’ಯ ಬದಲು ಬೇರೆ ಯಾರದೇ/ಯಾವುದೇ ಕಥಾನಕದಲ್ಲಿ ಇಂಥ ಆಭಾಸಗಳು ಸಿಕ್ಕಿದರೂ ಈ ಪ್ರಶ್ನೆ ಎತ್ತುತ್ತಿದ್ದೆ. ಈ ಲೇಖನದ ಗುರಿ ಇಷ್ಟೇ... ಇಂಥ ಗೊಂದಲಗಳು ನಮ್ಮ ಬರವಣಿಗೆಗಳಲ್ಲಿ ನುಸುಳದಂತೆ ಜಾಗ್ರತೆ ವಹಿಸೋಣ. ನೀವೇನೆನ್ನುತ್ತೀರಿ?

29 comments:

ಶಾಂತಲಾ ಭಂಡಿ (ಸನ್ನಿಧಿ) said...

ಜೋತಿ ಅಕ್ಕ...
ನಿಮ್ಮ ಈ ಬರಹ ತುಂಬ ಇಷ್ಟವಾಯಿತು. ಇದರ ಹಿಂದಿನ ಭಾಗವೂ ಸಹ ಓದಿದಾಗ ತಲೆದೂಗುವಂತೆಯೇ ಇತ್ತು. ಅದಕ್ಕೆ ಸುನಾಥ ಅಂಕಲ್ ಬರೆದ ವಿವರಣೆ ಸಹ ನಿಮ್ಮ ಬರಹದಷ್ಟೇ ಇಷ್ಟವಾಗಿತ್ತು.

ನಾನಿನ್ನೂ ಪುಟ್ಟವಳು. ಇಂಥಹ ಬರಹಗಳ ಬಗ್ಗೆ ಇಷ್ಟವಾಯಿತು ಅಂತ ಮಾತ್ರ ಹೇಳಬಲ್ಲೆ.

ಹಾಗೆಯೇ ನನ್ನದೊಂದು ಸಂದೇಹ. ಹೊಸತಾಗಿ ನಿನ್ನೆ ನನ್ನ ಬ್ಲಾಗಲ್ಲಿ ನಾಲ್ಕು ಸಾಲು ಬರೆದು ಹಾಕಿದ್ದೇನೆ. ಕ್ಯಾಲಿಫೋರ್ನಿಯಾದಲ್ಲಿ ಪಾರವಾಳಗಳು ಇಲ್ಲ (ಬೆರಳೆಣಿಕೆಯಷ್ಟಿವೆ ಅಂತ ಕೇಳಿದ್ದೇನೆ)ಅನ್ನುವುದು ಗೊತ್ತಿದ್ದಾಗ್ಯೂ ಪಾರವಾಳ ಜಾತಿಯ ಆ ಹಕ್ಕಿ ನನಗೆ ಪಾರಿವಾಳದ ಹಾಗೆಯೇ ಅನ್ನಿಸುತ್ತದೆ. ಕೆಲವೊಮ್ಮೆ ಆ ಹಕ್ಕಿಯನ್ನು ನನ್ನ ಮನಸ್ಸು ಪಾರಿವಾಳ ಅಂತಲೇ ಕೂಗುತ್ತದೆ.‘ಶ್...ಸುಮ್ಮನಿರು, ಪಾರಿವಾಳ ಗೂಡು ಕಟ್ಟಿದೆ’ ಅಂತಲೇ ಬರೆಯುವುದು ಮನಸ್ಸಿಗೆ ಹಿತವೆನ್ನಿಸುತ್ತದೆ. ಈ ಥರಹದ ಬರಹಗಳಿಂದಾಗುವ ಪರಿಣಾಮದ ಬಗ್ಗೆ ಯೋಚಿಸಿ, ಹುಡುಕಿ ಬರೆಯುವಂಥ ಸಾಮರ್ಥ್ಯದ ಬಗ್ಗೆ ಯೋಚಿಸದೆಯೇ ಆ ಹೊತ್ತಿಗೆ ಖುಷಿಪಟ್ಟುಕೊಳ್ಳುವುದಕ್ಕಾಗಿಯೋ ಅಥವಾ ಮನಸ್ಸನ್ನು ಹಗುರಗೊಳಿಸಕೊಳ್ಳಲಿಕ್ಕಾಗಿಯೋ ಹೀಗೆ ಬರೆಯುವುದು ತಪ್ಪಾಗಬಹುದ?
ನಿಮ್ಮ ಬರಹಕ್ಕೆ ನನ್ನ ಈ ಸಂದೇಹ ತುಂಬ ಸನಿಹದ್ದಾದ್ದರಿಂದ ನನ್ನ ಸಂದೇಹವನ್ನು ನಿಮ್ಮ ಮುಂದಿಡಲು ಅವಕಾಶವಾಯಿತು. ಅದಕ್ಕಾಗಿ ನಿಮಗೆ ಧನ್ಯವಾದ ಕೂಡ.

ಶಾಂತಲಾ ಭಂಡಿ (ಸನ್ನಿಧಿ) said...

ಜ್ಯೋತಿ ಅಕ್ಕಾ...
ಮೇಲಿನ ಕಾಮೆಂಟಲ್ಲಿ ನಿಮ್ಮ ಹೆಸರನ್ನು ತಪ್ಪಾಗಿ ಟೈಪಿಸಿದ್ದೇನಲ್ಲ, Sorry ಕೇಳುವುದಕ್ಕಾಗಿ ಈ ಕಾಮೆಂಟು :-)

ಶಾಂತಲಾ ಭಂಡಿ (ಸನ್ನಿಧಿ) said...

ಪಾರಿವಾಳ ಅನ್ನುವುದನ್ನೂ ತಪ್ಪಾಗಿ ಟೈಪಿಸಿದ್ದೇನೆ, ಜ್ವರ ಇಳಿದ ಮೇಲೆಯೇ ನಾನು ಕಾಮೆಂಟಿಸುವುದು ಒಳ್ಳೆಯದಿತ್ತು ಅನ್ನಿಸ್ತಿದೆ :-)

sunaath said...

ಕವಿಸ್ವಾತಂತ್ರ್ಯವೆನ್ನುವ ನೆಪದಲ್ಲಿ ಬೇಕಾದ್ದನ್ನು ಬರೆದರೆ ಅದು ಕುಡುಕನ ಜಲ್ಪನೆಯಾದೀತು. ಅಮವಾಸ್ಯೆಯ ರಾತ್ರಿ ಎಂದು ಸ್ಪಷ್ಟಪಡಿಸಿ ಹುಣ್ಣಿಮೆಯ ವರ್ಣನೆ ಬರೆಯುವದು ಸರಿಯೆ?

ಇನ್ನು ಪಾರಿವಾಳದಂತೆ ಕಾಣುವ ಹಕ್ಕಿಯನ್ನು ಪಾರಿವಾಳವೆಂದು
ಕರೆದಾಗ ಅದರಲ್ಲಿ ಕಾಣುವದು ಆತ್ಮೀಯತೆಯ ಭಾವ. ಅದು ತಪ್ಪೆಂದು ನಾನು ಹೇಳಲಾರೆ.

sritri said...

ಜ್ಯೋತಿ, ಬರಹದ ಹಾದಿಯ ಆರಂಭದ ಹಂತದಲ್ಲಿರುವ ನಮ್ಮೆಲ್ಲರಿಗೂ ಉಪಯುಕ್ತವೆನಿಸುವ ಲೇಖನ. ಹಲವು ಸಲ ಈ ರೀತಿಯ ವಿಪರ್ಯಾಸಗಳನ್ನು ಹಲವಾರು ಕಥೆ/ಕಾದಂಬರಿಗಳಲ್ಲಿಯೂ ಗಮನಿಸಿದ್ದೇನೆ. ಲೇಖಕರು ಉದ್ದೇಶಪೂರ್ವಕವಾಗಿಯೇ ಹಾಗೆ ಬರೆದಿದ್ದರೂ ಅದು ಓದುಗರನ್ನು ಗೊಂದಲದಲ್ಲಿ ದೂಡುವುದುಂಟು.

ಶಾಂತಲಾ, ನಾನೂ ನಿನ್ನ ಹಾಗೆಯೇ. ಹೆಸರು ತಿಳಿಯದ ಗಿಡ/ಮರ/ಪಕ್ಷಿಗಳಿಗೆ ನನಗಿಷ್ಟವಾದ ಹೆಸರಿಡುವುದುಂಟು. ಮೊನ್ನೆ ಡಿ.ಸಿಯಲ್ಲಿ ಕ್ಯಾಪಿಟಲ್ ಹಿಲ್‍ಗೆ ಹೋಗುವ ದಾರಿಯುದ್ದಕ್ಕೂ ಬೇವಿನ ಮರವನ್ನೇ ಹೋಲುವ ಮರಗಳಿರುವುದನ್ನು ನೋಡಿ ಅದಕ್ಕೆ ನಾನಿಟ್ಟ ಹೆಸರು ಬೇವಿನ ಮರದ ಬೀದಿ ಎಂದು. (ಬೆಂಗಳೂರಿನ ಮಲ್ಲೇಶ್ವರದ ಬೀದಿಯೊಂದನ್ನು ನೆನೆದು)

ಆದರೆ, ನಾನು ಅದೇ ಪ್ರದೇಶವನ್ನು ಆಧರಿಸಿ ಕಥೆಯೊಂದನ್ನು ಬರೆದರೆ,(ಬರೆಯಲ್ಲ , ಹೆದರಬೇಡಿ :)-) ಅಲ್ಲಿ ಬೇವಿನ ಮರವೇ ಇದೆಯೆಂದು ಬರೆದರೆ ಅದು ಎಷ್ಟರಮಟ್ಟಿಗೆ ಸರಿಯಾದೀತು ಎಂಬ ನನ್ನ ಪ್ರಶ್ನೆ ಮಾತ್ರ ಹಾಗೇ ಉಳಿಯಿತು.

ಸುಪ್ತದೀಪ್ತಿ suptadeepti said...

ಶಾಂತಲಾ, ಸುನಾಥ್ ಕಾಕಾ, ವೇಣಿ,
ಧನ್ಯವಾದಗಳು.

ಶಾಂತಲೆ,
ಪಾರಿವಾಳದಂಥ ಈ ಪುಟ್ಟ ಹಕ್ಕಿಗಳು "Doves". ಇವನ್ನು ಪಾರಿವಾಳಗಳ ಇನ್ನೊಂದು ಪ್ರಭೇದವೆಂದೇ ಪರಿಗಣಿಸಲಾಗಿದೆ, ಆದ್ದರಿಂದ ಅವನ್ನು ಸಾಮಾನ್ಯ ಪರಿಭಾಷೆಯಲ್ಲಿ ಪಾರಿವಾಳಗಳೆಂದೇ ಕರೆದರೆ ತಪ್ಪೇನಿಲ್ಲ ಅಂತ ನನ್ನ ಅಭಿಪ್ರಾಯ.

ಕಾಕಾ,
ನಿಮ್ಮ ಸ್ಪಷ್ಟವಾದ ಮಾತುಗಳಿಗೆ ಹುಣ್ಣಿಮೆ ಚಂದಿರನ ಬೆಳಕು. ಹಿಂದಿನ ಕಂತಿನಲ್ಲೂ ನೀವು ಹೀಗೆಯೇ ನಿಖರವಾಗಿ ಉತ್ತರಿಸಿದ್ದಿರಿ. ಅದರ ಧೈರ್ಯದ ಮೇಲೆಯೇ ಈ ಲೇಖನ ಬರೆಯುವ ಹೆಜ್ಜೆ ಇಟ್ಟದ್ದು ನಾನು. ನಿಮ್ಮ ಪ್ರತಿಕ್ರಿಯೆಗಳಿಗೆ ಆಭಾರಿ.

ವೇಣಿ,
ಡಿ.ಸಿ.ಯಲ್ಲಿ ಬೇವಿನ ಮರದ ಬೀದಿಯನ್ನು ಚಿತ್ರಿಸಿದರೆ ಆಭಾಸವಾದೀತು; ನಿನ್ನ ಮಾತು ನಿಜ. ಆದರೆ, ಡಿ.ಸಿ.ಯನ್ನು ಹೋಲುವ ಕಲ್ಪಿತ ನಗರವೊಂದನ್ನು ವರ್ಣಿಸಿ ಅಲ್ಲಿ ಮಾವು ಬೇವುಗಳನ್ನು ನೆಟ್ಟು ಕೋಗಿಲೆಗಳನ್ನು ಹಾಡಲು ಬಿಡಬಹುದಲ್ಲ. ಅಂಥ ಕಥೆ ಬರಲಿ.

ಅಲ್ಲೆಲ್ಲ ಸುತ್ತಾಡುವಾಗ, ಮೇರಿಲ್ಯಾಂಡ್, ವರ್ಜೀನಿಯಾ ಕಡೆಗಳಲ್ಲಿ ಬೇವಿನ ಮರಗಳಂಥ ಮರಗಳನ್ನು ನೋಡಿ, ನಾನು ಎಲೆ ಕೊಯಿದು ಚಿವುಟಿ ಮೂಗಿಗೆ ಹಿಡಿದು ಪರೀಕ್ಷಿಸಿದ್ದಂತೂ ಹೌದು. ಬೇವಲ್ಲವೆಂಬ ನಿರಾಸೆಯೂ, ಹೌದಾಗಿದ್ದಲ್ಲಿ ಅದಕ್ಕೂ ಪೇಟೆಂಟ್ ಮಾಡುತ್ತಿದ್ದರೆಂಬ ವಿಡಂಬನೆಯೂ ನನ್ನ ಮನದಲ್ಲಿ ಸುಳಿದದ್ದೂ ಉಂಟು. "ಆದದ್ದೆಲ್ಲಾ ಒಳಿತೇ ಆಯಿತು..."!

turanga said...

ಅಕಾಲದಲ್ಲಿ ಅರಳುವ ಹೂಗಳ ಬಳಕೆಗೆ ಇನ್ನೊಂದು ಉದಾಹರಣೆ -

ಹಸ್ತೇ ಲೀಲಾಕಮಲಮಲಕಂ ಬಾಲಕುಂದಾನುವಿದ್ಧಂ
ನೀತಾ ಲೋಧ್ರಪ್ರಸವರಜಸಾ ಪಾಂಡುತಾಮಾನನಶ್ರೀಃ |
ಚೂಡಾಪಾಶೇ ನವಕುರವಕಂ ಚಾರು ಕರ್ಣೇ ಶಿರೀಷಂ
ಸೀಮಂತೇ ಚ ತ್ವದುಪಗಮಜಂ ಯತ್ರ ನೀಪಂ ವಧೂನಾಮ್ ||

ಇದು ಕನ್ನಡದಲ್ಲಿ

ಮಾಟ ತಾವರೆಯು ಕೈಗೆ, ಕುರುಳಿನಲಿ ಬಾಲಕುಂದ ಮಾಲೆ
ಲೋಧ್ರಪುಷ್ಪಗಳ ಸೂಸು ಹುಡಿಯು ಚೆಲುವಾದ ಮೊಗದ ಮೇಲೆ |
ಚೆಂದ ಕುರುವಕವು ಹೆಳಲಿನಲ್ಲಿ, ಸಿರಸಲವು ಕಿವಿಯ ಬಳಿಗೆ
ಬೈತಲಲ್ಲಿ ಕಡವಾಲ ಹೂವು ಅಲ್ಲಿರುವ ಹೆಣ್ಣುಗಳಿಗೆ ||

ಸುಪ್ತದೀಪ್ತಿ suptadeepti said...

ತುರಂಗ, ಪ್ರತಿಕ್ರಿಯೆಗೆ ಧನ್ಯವಾದಗಳು.
ನೀವು ತಿಳಿಸಿರುವ ಪದ್ಯದಲ್ಲಿರುವ ಆರು ರೀತಿಯ ಹೂಗಳು ಆ ಕಾವ್ಯದಲ್ಲಿ ಬರುವ ಆ ಪ್ರದೇಶದ ಹೆಣ್ಣುಗಳ ಆರು ಋತುಗಳ ಅಲಂಕಾರದ ಬಗ್ಗೆ ಇದೆಯೆ? ಅಥವಾ ದಿನದಿನವೂ ಆ ಹೆಣ್ಣುಗಳು ಇಂಥ ಅಲಂಕಾರ ಮಾಡಿಕೊಳ್ಳುತ್ತಿದ್ದರೆಂದೆ? ಈ ಪದ್ಯದ ಕಾವ್ಯ-ಸಂದರ್ಭ ವಿವರಣೆಯಿಲ್ಲದೆ ಅದನ್ನು ‘ಅಕಾಲದಲ್ಲಿ ಅರಳುವ ಪುಷ್ಪಗಳ ಬಗ್ಗೆ ವಿವರಣೆ’ ಎಂದು ಸಾರಾಸಗಟಾಗಿ ಬದಿಗೊತ್ತಲು ನನ್ನ ಮನಸ್ಸು ಒಪ್ಪುತ್ತಿಲ್ಲ, ಕ್ಷಮಿಸಿ.

turanga said...

ದಿನದಿನವೂ ಹೆಣ್ಣುಗಳು ಇಂತಹ ಅಲಂಕಾರ ಮಾಡಿಕೊಳ್ಳುತ್ತಿದ್ದರು ಎಂದು. ಪದ್ಯದ ಕಾವ್ಯ, ಸಂದರ್ಭ, ಸದ್ಯಕ್ಕೆ ಒಂದು "ಒಗಟಾಗಿ" ಬಿಟ್ಟಿದ್ದೇನೆ. ಒಗಟು ಬಿಡಿಸುವಿದು ಬಹಳ ಕಷ್ಟವಿಲ್ಲ ಎಂದು ನಂಬಿದ್ದೇನೆ!

sunaath said...

ಇದು ಕಾಳಿದಾಸನ ಮೇಘದೂತದಲ್ಲಿ ಬರುವ ವರ್ಣನೆಯೆ? ಹಾಗಿದ್ದರೆ,ಇದು deliberate! ಯಕ್ಷರ ನಾಡಾದ ಅಲಕಾಪುರಿಯಲ್ಲಿ, ಯಾವುದೇ ಕಾಲದಲ್ಲಿಯೂ ಎಲ್ಲ ತರಹದ
ಹೂವುಗಳೂ ಅರಳಬೇಕಲ್ಲವೆ?

turanga said...

ಹೌದು. ಸಂಸ್ಕೃತದ ಶ್ಲೋಕ ಕಾಲಿದಾಸನ ಮೇಘದೂತದ್ದು. ಕನ್ನಡದ ಅನುವಾದ ಬೇಂದ್ರೆಯವರದು. ಇದು ಬರುವ ಸಂದರ್ಭ ನೋಡಿದರೆ, deliberate.(ಆದರೆ, ಕಾಲಿದಾಸನದು ಎಂದ ಮಾತ್ರಕ್ಕೆ deliberate ಅಲ್ಲ! ಅವನೂ ಅಲ್ಲಿ, ಇಲ್ಲಿ, ಹೋಮರನ ಹಾಗೆ ತೂಕಳಿಸಿರುವ ಸಂಭವ ಉಂಟಷ್ಟೆ?!). ಇದರ ಉದ್ದೇಶ ಅಲಕೆಯ ವೈಭವವನ್ನು ನೇರವಾಗಿ ಹೇಳದೆ ಸೂಚಿಸುವುದು.

ಸುಪ್ತದೀಪ್ತಿ suptadeepti said...

ಅಲಕಾಪುರಿಯಲ್ಲಿ ಅಕಾಲವೆಂಬುದೆಲ್ಲಿ? ಅಲ್ಲಿ ಎಲ್ಲವೂ ಸಕಾಲವೇ, ಸಕಾರಣವೇ!

ತುರಂಗ ಮತ್ತು ಕಾಕಾ, ಇಬ್ಬರಿಗೂ ಧನ್ಯವಾದಗಳು, ವಂದನೆಗಳು.

ತುರಂಗ, ತಾವ್ಯಾರೆಂದು ತಿಳಿಸುವಿರಾ? ಇ-ಮೈಲ್ ಮಾಡಿ, ಪ್ಲೀಸ್.

turanga said...

ಶ್ರೇಷ್ಠವಾದ ಕುದುರೆಗಳಿಗೆ ಉಚ್ಚೈಶ್ರವಸ್ಸು, ಬೂಸೆಫ಼ಲಸ್, ಸೆಕ್ರೆಟೇರಿಯೆಟ್ ಎಂದೆಲ್ಲಾ ಹೆಸರಿಡುವುದು ಸರಿ. ಇತರ ಕುದುರೆಗಳು ಅನಾನಿಮಸರಾಗಿರುವುದೇ ಒಳ್ಳೆಯದಲ್ಲವೇ?!

sunaath said...

ಪಂಚಕಲ್ಯಾಣಿಯು ಇತರರಿಗೆ ಅನಾಮಿಕವಾಗಿರಲಿ, ಆದರೆ ಬೋಧಿಸತ್ವನಿಗಾದರೂ ತನ್ನ ಕುರುಹನ್ನು ತಿಳಿಸಬಹುದಲ್ಲವೆ/

ಸುಪ್ತದೀಪ್ತಿ suptadeepti said...

ಕಾಕಾ, ತುರಂಗ,
ನಿಮ್ಮಿಬ್ಬರ ಸಂವಾದ ಸೊಗಸಾಗಿದೆ.

ಗುರುತರಿಯದ ಗಿಡ-ಮರ-ಹಕ್ಕಿ-ನದಿಗಳಿಗೂ ನಮ್ಮ ಮನಸ್ಸಿಗೆ ಹಿಡಿಸುವ ಪ್ರೀತಿಯ ಹೆಸರು ಇಡುವ ಸಹೃದಯರು ನಮ್ಮ ನಡುವಿರುವಾಗ, ತುರಂಗ, ನೀವು ಅನಾಮಿಕರಾಗಿಯೇ ಇರಲು ಇಚ್ಛಿಸುತ್ತೀರಾದರೆ ಅಡ್ಡಿಯಿಲ್ಲ. ನಿಮ್ಮ ಸಂತೋಷವೇ ಮುಖ್ಯ.

turanga said...

ತುರಂಗ ಅನಾನಿಮಸನಾಗಿರಲು ಇಷ್ಟಪಡುವುದೇ ಒಂದು ಕುರುಹಾಗಿರಬಹುದಲ್ಲವೆ?!

sritri said...

ತುರಂಗ ಅನಾನಿಮಸನಾಗಿರಲು ಇಷ್ಟಪಡುವುದೇ ಒಂದು ಕುರುಹಾಗಿರಬಹುದಲ್ಲವೆ?!

ಇಲ್ಲೇನೋ ಅಸ್ಪಷ್ಟ ಕುರುಹು ಸಿಗುವಂತಿದೆ :)

turanga said...

ಒಬ್ಬರಿಗೆ ಅಸ್ಪಷ್ಟವಾಗಿರುವ ಕುರುಹು ಇನ್ನೊಬ್ಬರಿಗೆ ಸ್ಪಷ್ಟವಾಗಿರಹುದು. ಈ ವಾಕ್ಯವೇ ಮತ್ತೊಂದು ಕುರುಹಾಗಿರಬಹುದು.

ಸುಪ್ತದೀಪ್ತಿ suptadeepti said...

ಕಪ್ಪು-ಬಿಳುಪಿನ ನಡುವೆ ಸ್ಪಷ್ಟ-ಅಸ್ಪಷ್ಟಗಳ ತೂಗುಯ್ಯಾಲೆಯಲ್ಲಿ ಪ್ರಿಯವಾದ ಉತ್ತರವನ್ನು ಆರಿಸಿಕೊಳ್ಳೋದು ಎಷ್ಟು ಕಷ್ಟ?

ಸ್ವಾರಸ್ಯಕರವಾಗಿದೆ ಈ ತುರಂಗದ ಹುಡುಕಾಟ.

Anonymous said...

Jyothi,

An excellent article. It made me read it again and again. Let me respond to this with the following example:

One of my poems had the following line:

"ಮಲ್ಲಿಗೆಯ ಮೊಗ್ಗುಗಳ ಇಬ್ಬನಿಯು ಸವಿದಂತೆ"

I actually got a response from one fo the readers saying the above line is against life sciences. The fact that wetness actually is harmful for plants forces us to cover them with plastic sheets etc.

And, here was my response:

The line with ‘ibbani’ was one of the two lines in the poem which made me think a lot, while writing. To be honest, even I was not satisfied with the usage of ‘savidaMte’ in the beginning. But, it is indeed natural to have ‘ibbani’ on ‘moggu’. Covering it with plastic is not natural. That said, the real problem is to argue whether ‘savidaMte’ was the right word there. But, this is a poem. A poem is a work of art, and not a work of science. When two beautiful things – ‘moggu’ and ‘ibbani’ in this case - get together, it is indeed a ‘savi’. I hoped the reader took the essence out of that line and not the literal meaning. In the end, I give it to you, as far as this line goes, my argument is still weak.

Jyothi, after reading your article, I am convicned that every piece of art needs to be inside the boundaries of science.

As for my example, like I said earlier, my argument was weak. Now, I am more than ever convinced about this! Thank you for such a nice write up.

ಸುಪ್ತದೀಪ್ತಿ suptadeepti said...

D.S.,
ನಿನ್ನ ಉತ್ತರಕ್ಕಾಗಿ ಧನ್ಯವಾದಗಳು.

ಕೆಲವೊಮ್ಮೆ ಓದುಗರಿಗೆ ನಮಗೆ ಕಾಣದ ತಪ್ಪು ಕಂಡುಬರುತ್ತದೆ. ಅದನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದರಿಂದ ನಾವೇನೂ ಸಣ್ಣವರಾಗುವುದಿಲ್ಲ ಎಂದು ನನ್ನ ನಂಬಿಕೆ.

ನಿನ್ನ ಕವನದ ಸಾಲಿನಲ್ಲಿ "ಮಲ್ಲಿಗೆಯ ಮೊಗ್ಗುಗಳು ಇಬ್ಬನಿಯ ಸವಿದಂತೆ" ಅಂತಿದ್ದಿದ್ದರೆ (ಉ-ಕಾರ ಅ-ಕಾರಗಳು ಆಚೀಚೆಯಾಗಿದ್ದಿದ್ದರೆ!) ಆಗ ಯಾವುದೇ ಆಕ್ಷೇಪವಿರುತ್ತಿರಲಿಲ್ಲ, ಅಲ್ಲವೆ?

Srivathsa Joshi said...
This comment has been removed by the author.
Srivathsa Joshi said...

DS ಬರೆದಂತೆ "ಮಲ್ಲಿಗೆಯ ಮೊಗ್ಗುಗಳ ಇಬ್ಬನಿಯು ಸವಿದಂತೆ" ಸಾಲಿನಲ್ಲಿ ಆಕ್ಷೇಪಾರ್ಹ ಅಂಶವಿರಲಿಕ್ಕಿಲ್ಲ- ಕಲೆಯ ದೃಷ್ಟಿಯಿಂದಲೂ, ವಿಜ್ಞಾನದ ದೃಷ್ಟಿಯಿಂದಲೂ. ಆದರೆ ಮಲ್ಲಿಗೆ ಬೆಳೆಗಾರರ ವಾಣಿಜ್ಯ ದೃಷ್ಟಿಯಿಂದ (I think i successfully covered art, science and commerce :-) ಆಕ್ಷೇಪ ಬರಬಹುದು. ಏಕೆ ಗೊತ್ತೇ? ’ಮೊಗ್ಗುಗಳ’ ಎಂಬ ಪದ ಕವನದಲ್ಲಿ ಬಂದಿರುವುದರಿಂದ ಅದು ದ್ವಿತೀಯಾ ವಿಭಕ್ತಿ (ಮೊಗ್ಗುಗಳನ್ನು) ಕರ್ಮಪದ ಎನಿಸಿಕೊಳ್ಳುತ್ತದೆ. ಮಲ್ಲಿಗೆಯ ಮೊಗ್ಗುಗಳನ್ನು ಸವಿಯಬೇಕೆಂದು ಇಬ್ಬನಿಗೆ ಆಸೆ. ಆದರೆ ಹಾಗೆ ಇಬ್ಬನಿಯು ಮೊಗ್ಗುಗಳನ್ನು ಸವಿದದ್ದೇ ಆದರೆ ಆ ಮೊಗ್ಗುಗಳು ಕಮರಿಹೋಗುತ್ತವೆ ಎಂಬುದು ಮಲ್ಲಿಗೆ ಬೆಳೆಗಾರನ ಚಿಂತೆ.
ಜ್ಯೋತಿ ಹೇಳಿದಂತೆ "ಮಲ್ಲಿಗೆಯ ಮೊಗ್ಗುಗಳು ಇಬ್ಬನಿಯ ಸವಿದಂತೆ" ಎಂದರೆ ಮೊಗ್ಗುಗಳು ಕರ್ತೃಪದ, ಇಬ್ಬನಿಯ (ನ್ನು) ಕರ್ಮಪದ ಆಗುತ್ತದೆ. ಆಗಲೂ ಬೆಳೆಗಾರ‍ನಿಗೆ ಚಿಂತೆಯೇ. ಮೊಗ್ಗುಗಳು ಹಾಗೆ ಇಬ್ಬನಿಯನ್ನು ಸವಿಯದಿರಲಿ ಎಂದೇ ಆತ ಪ್ಲಾಸ್ಟಿಕ್ ಕವರ್ ತೊಡಿಸುತ್ತಾನೆ!
:-)

turanga said...

ಇದು ನಮ್ಮ ಮತ್ತು ಪಾಶ್ಚಿಮಾತ್ಯ ಕಾವ್ಯಮೀಮಾಂಸೆಯಲ್ಲಿ ಸಾಕಷ್ಟು ವಿಚಾರವಾಗಿರುವ ವಿಷಯ. ಒಂದು ಉದಾಹರಣೆಗೆ ಕೆಳಗಿನ ಕೊಂಡಿ ನೋಡಿ -
http://books.google.com/books?id=_UhEvnIZjT4C&dq=indian+poetics&printsec=frontcover&source=bl&ots=zpYzLPagR4&sig=ulBvkCfPXn7qGnyD98rqN942CqE&hl=en&ei=jFI1StuJJYX2sQOJ6sX5Dg&sa=X&oi=book_result&ct=result&resnum=4#PPA169,M1

(ಇದು ಸರಿಯಾಗಿ ಕೆಲಸ ಮಾಡದಿದ್ದರೆ,"ಇಂಡಿಯನ್ ಪೊಯೆಟಿಕ್ಸ್" ಗೂಗ್ಲಿದರೆ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ತೀ. ನಂ. ಶ್ರೀಕಂಠಯ್ಯನವರ "ಭಾರತೀಯ ಕಾವ್ಯಮೀಮಾಂಸೆ"ಯ ಇಂಗ್ಲಿಷ್ ಅನುವಾದ ಸಿಕ್ಕುತ್ತದೆ. ಅದರ ೧೨ನೆಯ ಅಧ್ಯಾಯ ಈ ಕೊಂಡಿ.)

ಇದನ್ನು ಕನ್ನಡದಲ್ಲೇ ಓದಲು ನನ್ನ ಹತ್ತಿರ ಪುಸ್ತಕ ಎರವಲು ಪಡೆಯುವ ಸೌಕರ್ರ್ಯ ಇರುವವರು (ಉದಾಹರಣೆಗೆ, ಜ್ಯೋತಿ ಅವರು; ಇದು ತುರಂಗಾನ್ವೇಷಣೆಗೆ ಇನ್ನೊಂದು ಸುಳಿವು!) ನನ್ನನ್ನು ಸಂಪರ್ಕಿಸಬಹುದು.

turanga said...

ಮೇಲಿನ ಕಾಮೆಂಟಿನಲ್ಲಿ

ಸೌಕರ್ರ್ಯ - ತಪ್ಪು
ಸೌಕರ್ಯ - ಸರಿ

ಸುಪ್ತದೀಪ್ತಿ suptadeepti said...

ವತ್ಸ, ಧನ್ಯವಾದಗಳು.
ನಿಮಗೆ ಮೊದಲೇ ಉತ್ತರಿಸಲಿಲ್ಲ, ಕ್ಷಮಿಸಿ. ಅಸಡ್ಡೆಯೇನಲ್ಲ; ಕಾರಣ ಇಲ್ಲಿ ಬೇಕಿಲ್ಲ.

ನಿಮ್ಮ ಪ್ರತಿಕ್ರಿಯೆಗಳು ವಾಣಿಜ್ಯದ ದೃಷ್ಟಿಯಿಂದ ಸಮಂಜಸವೇ ಆಗಿವೆ. ಮೊಗ್ಗುಗಳು ಇಬ್ಬನಿಯನ್ನು ಸವಿದರೂ ಇಬ್ಬನಿಯು ಮೊಗ್ಗುಗಳನ್ನು ಸವಿದರೂ ಬೆಳೆಗಾರನಿಗೆ ನಷ್ಟವೇ. ಕಾವ್ಯಾತ್ಮಕವಾಗಿ ನೋಡಿದರೆ ಮೊಗ್ಗುಗಳು ಇಬ್ಬನಿಯಲ್ಲಿ ಮೀಯುವುದಾಗಲೀ ಇಬ್ಬನಿಯನ್ನು ಸವಿಯುವುದಾಗಲೀ ಸಮಂಜಸ ಅಭಿವ್ಯಕ್ತಿಗಳು. ಇಬ್ಬನಿಯು ಮೊಗ್ಗುಗಳನ್ನು ಸವಿಯುವುದು ಹೊಸ ಪ್ರಯೋಗವಾಗಬಹುದು (ವಾಣಿಜ್ಯ ದೃಷ್ಟಿಯಿಂದ ಇದು ಖಂಡಿತ ಹಾನಿಕಾರಕ). ಹಾಗೆಯೇ, ಓದುಗರಿಗೆ ಅದು ವಿಚಿತ್ರ ಅನಿಸಬಹುದು, ಸಹಜ.


ತುರಂಗ, ಧನ್ಯವಾದಗಳು.
ಅಂತರ್ಜಾಲದಲ್ಲಿ ಓದುವದಕ್ಕಿಂತ ಪುಸ್ತಕ ಓದುವುದೇ ಇಷ್ಟ. ನಿಮ್ಮ ಮನೆಯ ಕಡೆ ಬರುವವಳಿದ್ದರೆ ಫೋನ್ ಮಾಡಿ ತಿಳಿಸುತ್ತೇನೆ, ಪುಸ್ತಕವನ್ನು ಪಡೆಯುತ್ತೇನೆ. ಮತ್ತೊಮ್ಮೆ ಧನ್ಯವಾದಗಳು.

turanga said...

ಶ್ರೀವತ್ಸ ಅವರೆ,

"ಮಲ್ಲಿಗೆಯ ಮೊಗ್ಗುಗಳ ಇಬ್ಬನಿಯು ಸವಿದಂತೆ"ಯಲ್ಲಿ "ಮೊಗ್ಗುಗಳ"ವನ್ನು ಷಷ್ಠೀ ವಿಭಕ್ತಿ ಮಾಡಿಕೊಂಡರೆ, ಇಬ್ಬನಿ ಬೇರೆ ಏನನ್ನಾದರೂ ಸವಿದು, ಬೆಳೆಗಾರರನ್ನೂ, ಕಲೆಗಾರರನ್ನೂ. ವಿಜ್ಞಾನಿಗಳನ್ನೂ ನಿಶ್ಚಿಂತರಾಗಿರುವಂತೆ ಮಾಡಬಹುದು.

Sree said...

ಅಕ್ಕಾ, ಬಹಳ ಮುಖ್ಯವಾದ ಪ್ರಶ್ನೆ ಎತ್ತಿದ್ದೀರಿ...ಉದ್ದೇಶಪೂರ್ವಕವಾಗಿಯಲ್ಲದೇ ಹಾಗೇ ಸುಮ್ನೆ - carelessಆಗಿ ವಾಸ್ತವವನ್ನು ತಿರುಚುವುದು ಸರಿಯಲ್ಲ ಅಂತ ನನಗನ್ನಿಸುತ್ತೆ. ಅದೇ ಉದ್ದೇಶಪೂರ್ವಕವಾಗಿ - ಉದಾಹರಣೆಗೆ ಮ್ಯಾಜಿಕ್ ರಿಯಲಿಸ್ಮ್‌ನಂಥದ್ದೇನೋ ಹೇಳಹೊರಟಾಗ ಇದೇ ತಿರುಚುವಿಕೆಗೆ ಹೊಸ ಅರ್ಥಗಳ ಸೃಷ್ಟಿಯ ಶಕ್ತಿ ಬರುತ್ತೆ ಅಲ್ವಾ...(ಅಮಿತಾವ್ ಘೋಷ್ ನೆನಪಾಗ್ತಿದಾರೆ)
ಮಾಗಿಯೂ ವಸಂತವೂ ಒಟ್ಟಿಗೇ ಬಂದಂಥದ್ದೇನನ್ನೋ ಬಣ್ಣಸಿದ್ದರೆ ಆಗ ಆ ವಿವರಣೆಗೆ poetic license ಇರ್ತಿತ್ತು, ಆದ್ರೆ ಈಗ ಆ liberty ಓದುಗರನ್ನು ಹಗುರವಾಗಿ ಪರಿಗಣಿಸಿದಂತೆ ಅನ್ನ್ಸುತ್ತೆ...

ಸುಪ್ತದೀಪ್ತಿ suptadeepti said...

ಶ್ರೀಮಾತಾ, ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಕಡೆ ಬಾರದೆ ಬಹಳ ದಿನಗಳೇ ಆದವಲ್ಲ!

ವಾಸ್ತವವನ್ನು ಉದ್ದೇಶ ಪೂರ್ವಕ, ಒಂದು ನಿರ್ದಿಷ್ಟ ಕಲೆಗಾರಿಕೆಯ ನೆಲೆಯಲ್ಲಿ ತಿರುಚುವುದಕ್ಕೂ (ಮ್ಯಾಜಿಕ್ ರಿಯಲಿಸಂ) ಬರವಣಿಗೆಯ ಓಘದಲ್ಲಿ ಆಭಾಸ ಉಂಟಾಗುವುದಕ್ಕೂ (ಮಾಗಿಯಲ್ಲಿಯೂ ವಸಂತ) ನಡುವಿನ ವ್ಯತ್ಯಾಸ ಬಹಳ ಬಹಳ ತೆಳುವಾದದ್ದು. ಅಲ್ಲಿಯೇ ಗೊಂದಲವೂ ಹುಟ್ಟುವುದು. ಅದರ ಕಡೆಗೆ ನಮ್ಮೆಲ್ಲರ ಗಮನ ಸೆಳೆಯುವುದಕ್ಕಾಗಿಯೇ ಈ ಬರಹ. ಈ ದಿಕ್ಕಿನಲ್ಲಿ ನಾವೆಲ್ಲ ಜಾಗೃತರಾದರೆ ಇಂಥ ಆಭಾಸಗಳು ನಮ್ಮ ಬರವಣಿಗೆಯಲ್ಲಿ ಆಗಲಾರದು ಅನ್ನುವುದು ನನ್ನ ಉದ್ಡೇಶ.