ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday, 28 January, 2009

ಬರವಣಿಗೆಯಲ್ಲಿ ಮಾಹಿತಿಗಳ ಪ್ರಾಮುಖ್ಯ-೦೧

ಓದುಗರೆ,
ಇತ್ತೀಚೆಗೆ ಇಂಥದೊಂದು ಪ್ರಸಂಗ ನನಗೆ ಎದುರಾಯ್ತು. ನಿಮ್ಮೆಲ್ಲರ ಅಭಿಪ್ರಾಯ ತಿಳಿಯೋಣ ಅಂದುಕೊಂಡೆ.

ದೊಡ್ಡ ಹೆಸರು ಮಾಡಿದ ಬರಹಗಾರರೊಬ್ಬರ ಬರಹವೊಂದನ್ನು ಓದಿದೆ. ಅದರಲ್ಲಿ ಇದ್ದಂತಹ ವಿವರ-ವಿಶ್ಲೇಷಣೆಗಳು ಬರಹದ ಚೌಕಟ್ಟಿನೊಳಗೆ ಸಮಂಜಸವಾಗಿರಲಿಲ್ಲ; ಮಾತ್ರವಲ್ಲ ವಿಷಯದ ವ್ಯಾಪ್ತಿಗೆ ಹೊಂದುತ್ತಲೇ ಇರಲಿಲ್ಲ. "ಚೆನ್ನಾಗಿರುತ್ತದೆ" ಎಂದು ಭಾವಿಸಿದ್ದರೇನೋ; ಚಂದದ, ಸುಂದರ ಪದಗಳನ್ನೆಲ್ಲ ತುಂಬಿಸಿ ಪುಟಭರ್ತಿ ಮಾಡಿದ್ದರು. ಓದೋಕೆ ಖಂಡಿತಾ ಚೆನ್ನಾಗಿತ್ತು. ಆದರೆ, ವಿಷಯಕ್ಕೂ ವಿವರಕ್ಕೂ ಹೊಂದಿಕೆಯಾಗದೆ, ಓದುವಾಗ ಕಲ್ಲೆಡವಿದಂತೆ, ಮುಗ್ಗರಿಸುವಂತೆ ಆಗುತ್ತಿತ್ತು. ಆಭಾಸವೆನಿಸುತ್ತಿತ್ತು. ಅದರ ಬಗ್ಗೆ ಅವರ ಗಮನ ಸೆಳೆದವರಿಗೆ ಉಡಾಫೆಯ ಉತ್ತರ ಬಂದಿದೆ. ನನಗೆ ಸೋಜಿಗವಾಗಿದೆ.

ಬರಹದಲ್ಲಿ ನಾವು ಬರೆಯುವ ವಿವರಗಳು, ಮಾಹಿತಿಗಳು ಸತ್ಯವಾಗಿರಬೇಕೇ ಬೇಡವೆ?
ಕಾಲ್ಪನಿಕ ಕಥೆಯಲ್ಲಿ ಏನು ಬರೆದರೂ ನಡೆಯುತ್ತದೆಂದು-
"ದೆಹಲಿಯಲ್ಲಿ ಸಮುದ್ರ ತೀರದಲ್ಲಿ ಮರಳಾಟವಾಡ"ಲಾದೀತೆ?
"ಕೇರಳದಲ್ಲಿ ಗಂಗೆಯ ದಡದಲಿ ವಿಹರಿಸ"ಲಾದೀತೆ?

ಸಹಬ್ಲಾಗಿಗರೆ, ಓದುಗರೆ,

:-ಇಂಥದ್ದು ಎದುರಾದರೆ ನೀವು ಏನು ಮಾಡುತ್ತೀರಿ?
:-ನಿಮ್ಮ ದೃಷ್ಟಿಯಲ್ಲಿ ಸೃಜನಶೀಲ ಸಾಹಿತ್ಯದ ಪರಿಭಾಷೆಯೇನು?
:-ಕಾಲ್ಪನಿಕ ಕಥೆಯಲ್ಲೂ ಕಲ್ಪನೆಗೂ ವಾಸ್ತವಕ್ಕೂ ಇರುವ ನಂಟಿನ ಎಳೆಯ ಬಗ್ಗೆ ನೀವೇನನ್ನುತ್ತೀರಿ?
:-ಯಾವುದೇ ಕೃತಿಯಲ್ಲಿ ಕಾಲಮಾನ, ವಾಸ್ತವಾಂಶ, ಭೌಗೋಳಿಕ ಲಕ್ಷಣ, ಐತಿಹಾಸಿಕ ಚಾರಿತ್ರಿಕ ವಿವರಗಳು ಎಷ್ಟು ನಿಖರವಾಗಿರಬೇಕು?

ಎಲ್ಲದರ ಜೊತೆಗೆ, ಬರಹಗಳಲ್ಲಿ- ವ್ಯಾಕರಣ ದೋಷಗಳು, ಅಕ್ಷರ ಲೋಪಗಳು, ಅಕ್ಷರ ದೋಷಗಳು, ಮತ್ತು ಬರವಣಿಗೆ ಚಿಹ್ನೆ (ಪ್ರಶ್ನಾರ್ಥಕ, ಆಶ್ಚರ್ಯಸೂಚಕ, ವಿವಿಧ ವಿರಾಮಗಳು, ಇತ್ಯಾದಿ) ದೋಷಗಳು ಎಲ್ಲಿಯ ತನಕ ಕ್ಷಮ್ಯ?

ನನ್ನ ಗೊಂದಲಕ್ಕೆ ನಿಮ್ಮಲ್ಲಿ ಉತ್ತರಗಳಿವೆ. ಕೊಡುತ್ತೀರಿ ತಾನೆ?

21 comments:

Sushrutha Dodderi said...

ಜ್ಯೋತೀಜೀ, ಎಷ್ಟೊಂದು ವರ್ಷಗಳಿಂದ ಬರೀತಿದೀರ.. ನಿಮಗೇ ಇಷ್ಟೊಂದು ಗೊಂದಲಗಳಿದ್ರೆ ಇನ್ನು ನಮ್ ಕತೆ ಏನು? :O

shivu.k said...

ಜ್ಯೋತಿ ಮೇಡಮ್,

ನಿಮ್ಮ ಈ ಪ್ರಶ್ನೆಗಳು ನನ್ನನ್ನೂ ಎಚ್ಚರಗೊಳಿಸಿವೆ....ಬೇರೆಯವರ ಬರಹ ಓದಿ ಅವರ ಲೇಖನಗಳ ತಪ್ಪು ಒಪ್ಪುಗಳನ್ನು ಗುರುತಿಸುವುದು....ಲೇಖನಕ್ಕೆ ಸಂಭಂದಿಸಿದ ಮಾಹಿತಿಯಾಚೆಗಿನ ಕಪೋಲ ಕಲ್ಪಿತ ಬರಹಗಳು ಇದ್ದರೆ ಅವು ಬೇಗ ಗೊತ್ತಾಗಿಬಿಡುತ್ತವೆ.....
ಆದ್ರೆ ನಮ್ಮದೇ ಬರವಣಿಗೆಯಲ್ಲಿ ಮೈಮರೆತು ಅಥವ ಭಾವೋದ್ವೇಗದಿಂದಲೋ, ಉತ್ಪ್ರೇಕ್ಷೆಯಿಂದಲೇ ನಾವು ಮಾಡುವ ತಪ್ಪುಗಳು ನಮಗೆ ಗೊತ್ತಾಗುವುದಿಲ್ಲ....ಅದನ್ನು ಇತರ ಬ್ಲಾಗ್ ಗೆಳೆಯರು ನೋಡಿ ತಿದ್ದಬೇಕು....ಈ ವಿಚಾರದಲ್ಲಿ ನನ್ನ ತಪ್ಪುಗಳನ್ನು ಹೇಳಿದರೆ ಖಂಡಿತ ಪ್ರಾಮಾಣಿಕವಾಗಿ ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ...ತಿದ್ದಿಕೊಳ್ಳುತ್ತೇನೆ....ಇದು ನಮ್ಮಲ್ಲೇ ಒಬ್ಬರಿಂದ ಒಬ್ಬರಿಗೂ ಆರೋಗ್ಯಪೂರ್ಣವಾದ ರೀತಿಯಲ್ಲಿ ಆಗಬೇಕು.....ಇದರಿಂದ ಸಾಮೂಹಿಕ ಬೆಳವಣಿಗೆ ಸಾಧ್ಯವೆಂದು ನನ್ನ ಅಭಿಪ್ರಾಯ.....

ಆಹಾಂ! ನೀವು ಮನಃಪೂರ್ವಕವಾಗಿ ನಗಬೇಕಿದ್ದರೆ ನನ್ನ ಬ್ಲಾಗಿಗೆ ಹೊಸದಾಗಿ ಹಾಕಿರುವ ನಡೆದಾಡುವ ಭೂಪಟಗಳನ್ನು ನೋಡಲು ಬನ್ನಿ.....

ಸುಪ್ತದೀಪ್ತಿ suptadeepti said...

ಸುಶ್, ಶಿವು- ಇಬ್ಬರಿಗೂ ಧನ್ಯವಾದಗಳು.

@ ಸುಶ್, ಮೊದಮೊದಲು ಗೊಂದಲಗಳಿರಲಿಲ್ಲ, ಯಾಕಂದ್ರೆ ಆಗ ಬರೆಯೋರೆಲ್ಲ ಇವೆಲ್ಲವನ್ನೂ ಕಡೆಗಣಿಸುತ್ತಿರಲಿಲ್ಲ (ಅಥವಾ ತಪ್ಪುಗಳಿದ್ದದ್ದು ನನಗೇ ಗೊತ್ತಾಗುತ್ತಿರಲಿಲ್ಲ). ಈಗೀಗ ಬರವಣಿಗೆಯೂ ಉಡಾಫೆಯ ಮಟ್ಟಕ್ಕೆ ಹೋಗಿರುವುದನ್ನು ಕಂಡಾಗ ಬೇಸರ, ಗೊಂದಲ.

ನನ್ನ ಪ್ರಶ್ನೆಗಳಿಗೆ ನಿನ್ನ ಉತ್ತರಗಳನ್ನು ಹೇಳುವಂಥವನಾಗುತ್ತೀಯ?

@ ಶಿವು, ನೀವು ಹೇಳಿದ್ದು ನಿಜ. ಬೇರೆಯವರ ಬರಹದಲ್ಲಿ ತಪ್ಪು ಹುಡುಕುವುದು ಸುಲಭ. ನಮ್ಮ ಲೇಖನಿಯನ್ನೂ ಶುದ್ಧವಾಗಿರಿಸಿಕೊಳ್ಳಬೇಕಾದ್ದು ಮೊದಲಾಗಿ ನಮ್ಮ ಕರ್ತವ್ಯ. ನಾವು ಬರೆದದ್ದನ್ನು ತಕ್ಷಣ ಪೋಸ್ಟ್ ಮಾಡಿಬಿಡುವ ಮೊದಲು ಎರಡು-ಮೂರು ಬಾರಿ ಓದಿಕೊಂಡರೆ ಭಾವೋದ್ವೇಗ/ ಉತ್ಪ್ರೇಕ್ಷೆಯನ್ನು ಕಂಡುಹಿಡಿಯಬಹುದು, ತಿದ್ದಿಕೊಳ್ಳಬಹುದು.

ನಿಮ್ಮ ಬ್ಲಾಗಿಗೆ ಭೇಟಿ ಕೊಡುತ್ತೇನೆ.

Unknown said...

ಜ್ಯೋತಿ,

ಇತ್ತೀಚೆ ಬಿಡುಗಡೆಯಾಗಿ ಜಗತ್ತಿನಲ್ಲೆಲ್ಲ ಪ್ರಸಿದ್ಧವಾಗಿ ಎಲ್ಲಲ್ಲೂ ಪ್ರಶಸ್ತಿ ಬಾಚುತ್ತಿರುವ "ಸ್ಲಂಡಾಗ್"ನಲ್ಲಿ "ಕೌನ್ ಬನೇಗಾ ಕರೋಡ್‍ಪತಿ" ಲೈವ್ ನಡೆಯುತ್ತೆ; ಅಮಿತಾಬ್ ಸ್ಲಂಮ್ಮಿನಲ್ಲಿ ನಡೆದುಕೊಂಡು ಬರುತ್ತಾನೆ (ಯಾಕೆ?); ಕೊಳಗೇರಿಯಲ್ಲಿ ಬೆಳೆದಿರುವ ಹುಡುಗ ಇಂಗ್ಲೀಷಿನಲ್ಲಿ, ಅದೂ ಬ್ರಿಟಿಷ್ ಎಕ್ಸೆಂಟಲ್ಲಿ ಮಾತಾಡುತ್ತಾನೆ (ನಾನು ಇಂಗ್ಲಂಡಿಗೆ ಬಂದು ಐದು ವರ್ಷವಾದರೂ, ನನ್ನ ಇಂಗ್ಲೀಷ್ ಎಕ್ಸೆಂಟ್ ಶುದ್ಧ ಕನ್ನಡದ್ದು); ಏನಂತೆ.. "ದೆಹಲಿಯಲ್ಲಿ ಸಮುದ್ರ ತೀರದಲ್ಲಿ ಮರಳಾಟ ಆಡಿ ಹತ್ತಿರದಲ್ಲೇ ಇರುವ ಕೇರಳದ ಗಂಗೆಯ ದಡದಲಿ ವಿಹರಿಸಬೇಕು"...ಇದು ನವ್ಯೋತ್ತರ ರೋಮ್ಯಾಂಟಿಕ್ ವರ್ಚುವಲ್ ರಿಯಲಿಸಂನ ಕಾಲ!

- ಕೇಶವ (www.kannada-nudi.blogspot.com)

ಸುಪ್ತದೀಪ್ತಿ suptadeepti said...

ಧನ್ಯವಾದ ಕೇಶವ್. ನೀವು ಹೇಳಿದ ಸಮಾನಾಂತರ ಲೋಕಕ್ಕೆ ನಾನು ಪ್ರವೇಶಿಸಿಲ್ಲ. ಸ್ಲಂ ಡಾಗ್... ಸಿನೆಮಾದಲ್ಲಿ ನಡೆಯುವದೆಲ್ಲವೂ ಕಾಲ್ಪನಿಕ ಕಥೆಯಲ್ಲವೆ? ಅದ್ಯಾವುದಾದರೂ ನಿಜವಾದ ಸಲೀಮ್-ಜಮಾಲ್-ಲತಿಕಾ ಜೀವನವನ್ನೇ ಆಧರಿಸಿದ ಜೀವನಗಾಥೆಯಲ್ಲವಲ್ಲ. ಕಥೆ ಕಥೆಯೇ, ಜೀವನ ಜೀವನವೇ, ಬರವಣಿಗೆ ಬರವಣಿಗೆಯೇ. ವರ್ಚುವಲ್ ರಿಯಲಿಸಂ ಬೇಡವೆನ್ನುತ್ತಿಲ್ಲ; ಯಾವ ಮಟ್ಟದಲ್ಲಿರಬೇಕೆನ್ನುವುದು ನನ್ನ ಪ್ರಶ್ನೆ, ಅಷ್ಟೇ.

ಇಂಗ್ಲೆಂಡಿನ ತೀರದಲ್ಲೊಂದು "ದೆಹಲಿ"ಯನ್ನು ಕಲ್ಪಿಸಿ ಅದರ ಮರಳದಡದಲ್ಲಿ ಅಲೆಯಾಟವಾಡಿದರೆ ತಪ್ಪೇನಿಲ್ಲ.

Anonymous said...

ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ Quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
ಧನ್ಯವಾದಗಳು,
ಶಮ, ನಂದಿಬೆಟ್ಟ
http://minchulli.wordpress.com

ಸುಪ್ತದೀಪ್ತಿ suptadeepti said...

ಶಮ, ನನ್ನ ಅಕ್ಷರಲೋಕಕ್ಕೆ ಸ್ವಾಗತ. ನಿಮ್ಮ ಬ್ಲಾಗಲ್ಲೇ ನಿಮಗೆ ಉತ್ತರ ಬರೆದಿದ್ದೇನೆ. ಹೀಗೇ ಬರುತ್ತಿರಿ.

sunaath said...

ಜ್ಯೋತಿ,
ಅತ್ಯಂತ ಜಟಿಲವಾದ ಪ್ರಶ್ನೆಗಳನ್ನು ಓದುಗರ ಎದುರಿಗೆ ಇಟ್ಟಿದ್ದೀಯಾ. ಉತ್ತರಿಸುವ ಮುನ್ನ ದೀರ್ಘ ಆಲೋಚನೆ ಮಾಡಬೇಕಾದ ಪ್ರಶ್ನೆಗಳಿವು.
ಸೃಜನಶೀಲ ಸಾಹಿತ್ಯದ ಪರಿಭಾಷೆ ಏನು ಎನ್ನುವದು ಮೊದಲ ಪ್ರಶ್ನೆ.
ನನಗೆ ಹೊಳೆಯುವಂತೆ, ಯಾವ ಸಾಹಿತ್ಯವು ಓದುಗನಲ್ಲಿ ರಸಾನುಭವವನ್ನು ಉಂಟು ಮಾಡುವದೊ ಅದೇ ಸೃಜನಶೀಲ ಸಾಹಿತ್ಯ. ಈ ಪರಿಭಾಷೆಯ ಮೇರೆಗೆ ಪುಟ್ಟ ಹುಡುಗರಿಗೆ ಹೇಳುವ ಅಜ್ಜಿ ಕತೆಗಳೂ ಸಹ ಸೃಜನಶೀಲ ಸಾಹಿತ್ಯವೇ ಸರಿ. ಕೆಲವೊಮ್ಮೆ ಅದ್ಭುತರಮ್ಯ ಕತೆಗಳನ್ನು ಗೂಢ ಉದ್ದೇಶದಿಂದ ಹೇಳುವದೂ ಉಂಟು. ಬೇತಾಳ-ವಿಕ್ರಮ ಕತೆಗಳು, ಬತ್ತೀಸ ಪುತಳಾ ಕತೆಗಳು ಹಾಗೂ ರಾಜಾ ವಿಕ್ರಮಾದಿತ್ಯನ ಕತೆಗಳು ನೋಡಲು ಅಡಗೂಲಜ್ಜಿ ಕತೆಗಳಂತೆ ಕಂಡರೂ ಸಹ, ಅವುಗಳ ಉದ್ದೇಶವು ರಾಜರಿಗೆ ನೀತಿಪಾಠವನ್ನು ಹೇಳುವದಾಗಿದೆ: ಪ್ರಜೆಗಳಿಗಾಗಿ ಅರಸನ duties ಏನು, ಅರಸನ obligations ಏನು? ಎನ್ನುವದನ್ನು ಹೇಳುವದರ ಜೊತೆಜೊತೆಗೇ ಈ ಕತೆಗಳು ರಸಾನುಭವ ಸೃಷ್ಟಿಯನ್ನೂ ಮಾಡುತ್ತವೆ. ಆದುದರಿಂದ ಇಂತಹ ಕತೆಗಳೂ ಸಹ ಸೃಜನಶೀಲ ಸಾಹಿತ್ಯವೇ.

ಬೇಂದ್ರೆಯವರು ಸೃಜನಶೀಲ ಸಾಹಿತ್ಯದ ಉದ್ದೇಶವನ್ನು ಸಖೀಗೀತದಲ್ಲಿಈ ರೀತಿಯಾಗಿ ಹೇಳುತ್ತಾರೆ:
“ಇರುಳು ತಾರೆಗಳಂತೆ ಬೆಳಕೊಂದು ಹೊಳೆಯುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ;
ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿದೆ.”
ಅಂದರೆ ಸೃಜನಶೀಲ ಸಾಹಿತ್ಯದ ಉದ್ದೇಶವು To give light and delight to the reader.
ಅವರ ಮತ್ತೊಂದು ಕವನದ ಸಾಲುಗಳು ಹೀಗಿವೆ:
“ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ”
ಇದು ಕವಿ ಹಾಗೂ ಸಹೃದಯ ಓದುಗನ ನಡುವಿನ ಸಂಬಂಧ.
ಇಂತಹ ಸಂಬಂಧವನ್ನು ಸೃಷ್ಟಿಸುವ ಸಾಹಿತ್ಯವೇ ಸೃಜನಶೀಲ ಸಾಹಿತ್ಯ.

ಎರಡನೆಯದಾಗಿ ಕಾಲ್ಪನಿಕ ಕತೆಯಲ್ಲಿ ಕಲ್ಪನೆಗೂ ವಾಸ್ತವಕ್ಕೂ ಇರುವ ನಂಟಿನ ವಿಚಾರ.
ಕಲ್ಪನೆ ಹಾಗೂ ಸಂಭಾವ್ಯತೆಯ ಉತ್ತಮ ನಂಟನ್ನು ಹೊಂದಿದ ಯುರೋಪಿಯನ್ ಸಾಹಿತ್ಯದ ಕೆಲವು ಕತೆಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿವೆ. ಒಂದು ಎಚ್.ಜಿ.ವೆಲ್ಸ್ ಬರೆದ 'ಗ್ರಹಸಮರ' ಕತೆ. ಮತ್ತೊಂದು ಫ್ರೆಂಚ್ ಲೇಖಕ ಜೂಲ್ಸ್ ವರ್ನ್ ಬರೆದ ಕೃತಿ: “ಎಂಬತ್ತು ದಿನಗಳಲ್ಲಿ ಜಗತ್ತಿನ ಪ್ರಯಾಣ”.
ಈ ಎರಡೂ ಕೃತಿಗಳಿಗೆ ಒಂದು ವೈಜ್ಞಾನಿಕ ಉದ್ದೇಶವಿದೆ. ಆದುದರಿಂದ ಇಂತಹ ಕಾಲ್ಪನಿಕ ಕೃತಿಗಳಲ್ಲಿ ಅಸಂಬದ್ಧ ಕಲ್ಪನೆ ಸಲ್ಲದು. ಅದು ಸಂಭಾವ್ಯತೆಯ ಲಕ್ಷ್ಮಣರೇಖೆಯನ್ನು ದಾಟಕೂಡದು. ಆದರೆ ಅದ್ಭುತರಮ್ಯ ಕಾಲ್ಪನಿಕ ಕತೆಗಳಿಗೆ ವಾಸ್ತವತೆಯ ಚೌಕಟ್ಟಿನ ಅವಶ್ಯಕತೆ ಎಳ್ಳಷ್ಟೂ ಇಲ್ಲ. ಉದಾಹರಣೆಗೆ ವಿಕ್ರಮಾದಿತ್ಯನ ಕತೆಗಳು. ಅದರಂತೆ ನೀತಿಪಾಠದ ಕತೆಗಳಿಗೆ ವಾಸ್ತವತೆ ಬೇಕಾಗಿಲ್ಲ. ಉದಾಹರಣೆಗೆ ಪುಣ್ಯಕೋಟಿಯ ಕತೆ.

ಮೂರನೆಯ ಪ್ರಶ್ನೆ: ವಿವರಗಳ ನಿಖರತೆ.
ನಮ್ಮ ಅನೇಕ ಐತಿಹಾಸಿಕ ಕಾದಂಬರಿಗಳು “ಕಾದಂಬರಿಯ ಬೆಳವಣಿಗೆ” ಎನ್ನುವ ನೆಪದಲ್ಲಿ ಅನೈತಿಹಾಸಿಕ ಪಾತ್ರಗಳನ್ನು, ಘಟನೆಗಳನ್ನು ಧಾರಾಳವಾಗಿ ಚಿತ್ರಿಸುತ್ತವೆ. ಇದು ದೊಡ್ಡ ತಪ್ಪು. ಓದುಗನಿಗೆ ಇದು ತಪ್ಪು ಮಾಹಿತಿ
ನೀಡುತ್ತದೆ. ಇಂತಹ ಕಥಾನಕಗಳನ್ನು ಆಧರಿಸಿ, ಚಲನಚಿತ್ರಗಳನ್ನು ಅಥವಾ ಟೀವಿ ಚಿತ್ರಗಳನ್ನು ನಿರ್ಮಿಸಿದಾಗ ಲಕ್ಷಾನುಲಕ್ಷ ಜನರು ತಪ್ಪು ಗ್ರಹಿಕೆಗೆ ಒಳಗಾಗುತ್ತಾರೆ. ಉದಾಹರಣೆಗೆ ಸಂಜಯ ಖಾನ ನಿರ್ಮಿಸಿದ ಟೀವಿ ಧಾರಾವಾಹಿ ಟಿಪ್ಪು ಸುಲ್ತಾನ; ಶಾಹ್ ರುಖ್ ಖಾನನ ಚಲನಚಿತ್ರ ‘ಅಶೋಕ’; ಹೃತಿಕ ರೋಶನ್ನನ ‘ಜೋಧಾ ಅಕಬರ’ ಇತ್ಯಾದಿ.
ಭಾರತದ ಮೊದಲ ಕಾವ್ಯ ಎನ್ನುವ ಹೆಗ್ಗಳಿಕೆಯನ್ನು ಪಡೆದ ‘ರಾಮಾಯಣ’ದಲ್ಲಿ ನಿಖರವಾದ ಅನೇಕ ಭೌಗೋಲಿಕ ವಿವರಗಳನ್ನು ದಾಖಲಿಸಲಾಗಿದೆ. ಕನ್ನಡದ ವರಕವಿ ಅಂಬಿಕಾತನಯದತ್ತರ ಕವನಗಳಲ್ಲಿ ನೂರಕ್ಕೆ ನೂರರಷ್ಟು ಯಥಾರ್ಥತೆ ಇರುತ್ತದೆ. ಉದಾಹರಣೆಗೆ ಅವರ ‘ಬಾರೊ ಸಾಧನಕೇರಿಗೆ’ ಕವನದಲ್ಲಿ ಮನೆಯ ಸುತ್ತಲಿನ ಬೇಲಿಯನ್ನು ವರ್ಣಿಸುವಾಗ ‘ಬೇಲಿಗೂ ಹೂಬೆರಳಿದೆ’ ಎಂದು ಬರೆದಿದ್ದಾರೆ. ಇದು ಆ ಕಾಲದ ಧಾರವಾಡದ ವಾಸ್ತವತೆ. ಹೀಗಾಗಿ ಈ ಸಾಲಿಗೆ documentary value ಇದೆ.
ಇದಿಷ್ಟು ನನ್ನ ಅನಿಸಿಕೆ.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ವಿವರವಾದ ಉತ್ತರಕ್ಕೆ ಧನ್ಯವಾದಗಳು. ಮಾಹಿತಿಗಳ ನಿಖರತೆ ಮತ್ತು ಕಲ್ಪನೆ-ವಾಸ್ತವದ ನಂಟಿನ ವಿಚಾರದಲ್ಲಿಯೇ ನನಗೆ ಬಹಳ ಗೊಂದಲವಿದ್ದದ್ದು. ಅದನ್ನು ನೀವು ಸುಲಭದಲ್ಲಿ ನಿವಾರಿಸಿದ್ದೀರಿ.

ನಿಮ್ಮ ಈ ಉತ್ತರವನ್ನು, ಸದ್ಯದಲ್ಲೇ ನಾನು ಬರೆಯಲಿಚ್ಛಿಸಿದ ಒಂದು ಲೇಖನದಲ್ಲಿ ಬಳಸಿಕೊಳ್ಳಬಹುದೆ? ಬೇಡವೆಂದಾದರೂ ಬೇಸರವೇನೂ ಇಲ್ಲ.

JAYADEVA PRASAD MOLEYAR said...

ಜ್ಯೋತಿಯವರೆ,

ಈ ವಿಷಯದ ಬಗ್ಗೆ ನಾನೂ ಕೂಡಾ ತುಂಬಾ ಮಂಡೆಬಿಸಿ ಮಾಡಿಕೊಂಡಿದ್ದೇನೆ. ನನಗಂತೂ ಒಂದು ಕತೆ ಸಹಜವಾಗಿರುವುದು ಬಹಳ ಮುಖ್ಯ.ಸಹಜತೆಯಿಂದ ಮನ ತಟ್ಟಿದ ಬಳಿಕವೇ ಅದರಲ್ಲಿರುವ ವೈಚಾರಿಕತೆ ನನಗೆ ಸ್ವೀಕೃತವಾಗುತ್ತದೆ. ಯಾವುದೋ ಒಂದು ಪೊಯ್ಂಟ್ ಸಾಧನೆಗಾಗಿ ಕತೆಯನ್ನು ಅಸಹಜವಾಗಿ ಅನುಕೂಲಕ್ಕೆ ತಕ್ಕಂತೆ ಕಟ್ಟುವುದು ನನಗೆ ಇಷ್ಟವಾಗುವುದಿಲ್ಲ. ವಿವರಣೆಗಳಲ್ಲೂ ಸಹಜತೆ ಮುಖ್ಯ. ನೀವು ತಿಳಿಸಿದಂತೆ ದೆಹಲಿಯ ಸಮುದ್ರ ಇತ್ಯಾದಿ ಕತೆಯನ್ನು ಸ್ವೀಕರಿಸಲು ನನಗೆ ಅಡ್ಡಿಯಾಗುತ್ತದೆ.

ಜಯದೇವ ಪ್ರಸಾದ

sunaath said...

ಜ್ಯೋತಿ,
ನೀನು ನನ್ನ ಅನುಮತಿ ತೆಗೆದುಕೊಳ್ಳುವ ಅವಶ್ಯಕತೆ ಇದೆಯೆ?
ನನ್ನ ಎಲ್ಲ ಲೇಖನಗಳ ಯಾವ ಭಾಗವನ್ನೂ ನೀನು ಉಪಯೋಗಿಸಬಹುದು. Here is the blank cheque!

ಸುಪ್ತದೀಪ್ತಿ suptadeepti said...

ಜಯದೇವ ಪ್ರಸಾದ್,
ನಮಸ್ಕಾರ, ಸ್ವಾಗತ ಮತ್ತು ಧನ್ಯವಾದಗಳು. ಸಹಜವಾಗಿರುವುದು ಯಾವಾಗಲೂ ಮನಸ್ಸಿಗೆ ಹತ್ತಿರವೇ. ನಿಜ.


ಕಾಕಾ,
ನಿಮ್ಮ ಪ್ರೀತಿಗೆ ವಂದನೆಗಳು. ಬರೆದಾಗ ತಿಳಿಸುತ್ತೇನೆ.

Anonymous said...

Sahithya itself is like Ameaba (which has an existance but no shape). Based upon the recently aquired aversion towards most of the mediocre blog sahithya, I would say Sahithya is bullshit and a substitute to commonsense.
D.M.Sagar

ಸುಪ್ತದೀಪ್ತಿ suptadeepti said...

ಸಾಗರ್, ನಿನ್ನ ಅಭಿಪ್ರಾಯವನ್ನು ಖಂಡಿತಾ ಒಪ್ಪಲಾರೆ. ಪೂರ್ವಾಗ್ರಹ ಪೀಡಿತ ನಿಲುವು ನಿನ್ನದು.

ಸಾಹಿತ್ಯ ಅಮೀಬಾದಂತೆ ಅನ್ನುವುದಾದರೂ, ಅದಕ್ಕೆ ನಿಶ್ಚಿತರೂಪವಿಲ್ಲ, ಸರಿ. ಆದರೆ, ಸಾಹಿತ್ಯ ಬಹುರೂಪಿ.

ಬ್ಲಾಗ್ ಸಾಹಿತ್ಯವೇ ಅಲ್ಟಿಮೇಟ್ ಅಲ್ಲ. ಅದರ ಆಧಾರದ ಮೇಲೆ ಸಾಹಿತ್ಯವೆಲ್ಲ ಪೊಳ್ಳು ಅನ್ನುವುದೂ ಸರಿಯಲ್ಲ. Think again.

Anonymous said...

Hi Deepti,
That was just my opinion, but not a judgement. If I think seriously and convince myself that sahithya is a means of voicing out one's inner feelings, then I will have the difficulty that I won't be having enough time to give proper justice to my inner voice. So, I am avoiding it.
In fact, every man (who does not have time in the marathon of life) should avoid it. oh no.., I don't want to feel!.-D.M.Sagar

Anonymous said...

ಜ್ಯೋತಿ ಮೇಡಮ್, ಒಳ್ಳೆಯ ವಿಚಾರವನ್ನೇ ಚರ್ಚೆಗೆ ಎತ್ತಿಕೊಂಡಿದ್ದೀರಿ.
ತಪ್ಪು ಹುಡುಕುವುದಕ್ಕಾಗಿ ಹೇಳುತ್ತಿರುವುದಲ್ಲ, ಆದರೆ ತಲೆಬರಹದಲ್ಲಿರುವ "ಪ್ರಾಮುಖ್ಯತೆ" ತಪ್ಪು ಪದಪ್ರಯೋಗ ಎಂದು ಎಲ್ಲೋ ಓದಿದ್ದೇನೆ. ಪ್ರಮುಖ (ನಾಮ ವಿಶೇಷಣ)-> ಪ್ರಾಮುಖ್ಯ (ನಾಮಪದ). ಅದಕ್ಕೆ ’ತೆ’ಗಳಿಕೆ ಬೇಡ.
======
ಇನ್ನು ದೆಹಲಿಯಲ್ಲಿ ಸಮುದ್ರದ ರೀತಿಯಂತೆಯೇ ನಾಗಪುರ (ಮಹಾರಾಷ್ಟ್ರದ ನಗರ)ದ ಬಗ್ಗೆ ಒಂದು ಹಿಂದಿ ಪನ್ ನೆನಪಾಗುತ್ತಿದೆ.

"ನಾಗ್ಪುರ್ ಮೇ ಬೀಚ್ ಹೈ ಕ್ಯಾ?"
"ನಹೀಂ, ಕ್ಯೋಂಕೀ ನಾಗ್ಪುರ್ ಬೀಚ್ ಮೆ ಹೈ!"
:-)

ಸುಪ್ತದೀಪ್ತಿ suptadeepti said...

ಸಾಗರ್,
ನಿನ್ನ ಅಭಿಪ್ರಾಯ ನಿನ್ನದು. ಆದರೆ, ಅದರ ತೀವ್ರತೆ ಆತಂಕಕಾರಿಯಾಗಿದೆ. ಸಾಹಿತ್ಯವನ್ನು ಪ್ರೀತಿಸುತ್ತಿದ್ದ, ಈಗಲೂ ಒಳಗೊಳಗೇ ಪ್ರೀತಿಸಿ ಗೌರವಿಸುತ್ತಾ ಇರುವ ನೀನು, ಹೀಗೆ ಸ್ಟೇಟ್ಮೆಂಟ್ ಕೊಟ್ಟರೆ ಅದರಿಂದ ಕೆಲವರಿಗಾದರೂ ಅಚ್ಚರಿ-ಆಘಾತವಾಗುತ್ತೆ (ನನಗಾಗಿದ್ದೂ ಅದೇ).

ಒಳ್ಳೆಯ ಸಾಹಿತ್ಯವನ್ನು ಅವಾಯ್ಡ್ ಮಾಡಬೇಡ, ಆವಾಹಿಸಿಕೋ ಅಂತಷ್ಟೇ ನನ್ನ ಸಲಹೆ. You can feel and think at the same time. You are a special person. Don't pretend to be someone else. Be yourself.

ಸುಪ್ತದೀಪ್ತಿ suptadeepti said...

ವತ್ಸ, ನಿಮ್ಮ ಪ್ರತಿಕ್ರಿಯೆಯ ಎದುರುನೋಡುತ್ತಿದ್ದೆ. ಇಂದಿಗಾಯಿತೇ ದರುಶನ...

ಪ್ರಾಮುಖ್ಯ- ಪ್ರಾಮುಖ್ಯತೆ- ಗೊಂದಲ ಇದನ್ನು ಬರೆದ ದಿನವೇ ಇತ್ತು. ಮೊದಲು ಪ್ರಾಮುಖ್ಯ ಅಂತಲೇ ಬರೆದು ಪಬ್ಲಿಷ್ ಮಾಡಿ, ನಂತರ ಕನ್ಫ್ಯೂಸ್ ಆಗಿ ಪ್ರಾಮುಖ್ಯತೆ ಅಂತ ಬರೆದುಬಿಟ್ಟೆ (ಎಲ್ಲೂ ಸರಿ-ತಪ್ಪುಗಳನ್ನು ಹುಡುಕಲು ಹೋಗಿಲ್ಲ, ಅದೂ ನನ್ನ ತಪ್ಪು). ಈಗ ತಿದ್ದಿಕೊಳ್ಳುತ್ತೇನೆ.

"ನಾಗ್ಪುರ್ ಬೀಚ್ ಮೇ ಹೈ, ಇಸೀಲಿಯೇ ನಾಗ್ಪುರ್ ಮೇ ಬೀಚ್ ನಹೀಂ ಹೈ" ಅಲ್ಲವೆ!

ಧನ್ಯವಾದಗಳು.

Harisha - ಹರೀಶ said...

ಕಾಗುಣಿತ ತಪ್ಪು ಬಿಟ್ಟು ಬೇರೆ ಏನೂ ನನಗೆ ತಿಳಿಯೋದೇ ಇಲ್ಲ!
ಇನ್ನು ಅಭಿಪ್ರಾಯ ಎಲ್ಲಿಂದ ತಿಳಿಸಲಿ?

ಸುಪ್ತದೀಪ್ತಿ suptadeepti said...

ಹರೀಶ್, ಕಾಗುಣಿತ ತಪ್ಪುಗಳನ್ನೇ ಆಗಲಿ, ಗುರುತಿಸಿ ತಿದ್ದಿಕೊಂಡರೆ, ಅದೂ ಉತ್ತಮ ಪ್ರಯತ್ನವೇ. ಇಲ್ಲವಾದಲ್ಲಿ-
"ಒಟ್ಟೆ ಅಸಿವಿಗೆ ಹನ್ನ ತಿನ್ನಬೇಕಾ?" ಅಂತ ಕೇಳಿದರೆ ಆಗುವಂಥ ನಗೆಬರಹ ಸಿದ್ಧವಾಗುತ್ತದೆ.

ವಿ.ರಾ.ಹೆ. said...

'ಪ್ರಾಮುಖ್ಯತೆ' ಬಗ್ಗೆ ಹುಡುಕುತ್ತಾ ಇಲ್ಲಿಗೆ ಬಂದೆ ! ನಿಮ್ಮಲ್ಲಿನ (ನಿಮ್ಮಲ್ಲಿದ್ದ?) ಗೊಂದಲಗಳು ನನ್ನಲ್ಲೂ ಇವೆ :)