ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday, 14 December, 2008

ಆತ್ಮ ಚಿಂತನ -೧೨ -- ದ್ವೈತ - ಅದ್ವೈತ

ಓದುಗರೇ,
ಹಿಂದಿನ ಸಂಚಿಕೆಯಲ್ಲಿ, 'ದ್ವೈತ-ಅದ್ವೈತಗಳಲ್ಲಿ ನಿಮಗೆ ಯಾವ ಸಿದ್ಧಾಂತ ಇಷ್ಟ' ಎಂಬ ಪ್ರಶ್ನೆ ಕೇಳಿದ್ದೆ. ಕೆಲವು ಉತ್ತರಗಳೂ ಬಂದಿವೆ. ಅವನ್ನು ಇಲ್ಲಿ ಮತ್ತೆ ಪೋಣಿಸುವುದಿಲ್ಲ. ಆ ಪ್ರಶ್ನೆ ಕೇಳಲು ಕಾರಣವಾದ ಆ ಒಂದು ಚರ್ಚೆಯ ಮುಖ್ಯ ಭಾಗವನ್ನು ಕೊಡುತ್ತೇನೆ...

ಹಿಂದಿನ ಒಕ್ಕಣೆಯಲ್ಲೇ ಹೇಳಿದಂತೆ, ಊರಲ್ಲಿದ್ದಾಗ ಈ ಚರ್ಚೆ ನಡೆದದ್ದು ಕಟ್ಟಾ ದ್ವೈತಿಯಾಗಿರುವ ನಮ್ಮ ಸಂಬಂಧಿಯೊಬ್ಬರೊಡನೆ (ನಾನವರನ್ನು ಅಣ್ಣ ಎಂದೇ ಕರೆಯುವುದು). ಅವರು ಬಹಳಷ್ಟು ತಿಳಿದವರು. ವೈದಿಕ ಧರ್ಮದ ಒಳಹೊರಗನ್ನೇ ಅಧ್ಯಯನ ಮಾಡಿ ಅದರ ಅಧ್ಯಾಪನವನ್ನೇ ಬದುಕಾಗಿ ಮಾಡಿಕೊಂಡವರು. ವೇದಾಂತದ ಪಾಠ ಹೇಳುವವರು.

ಯಾವುದೋ ಮಾತುಮಾತಿನ ನಡುವೆ, "ನನಗೆ ಅದ್ವೈತ ಸಿದ್ಧಾಂತ ಇಷ್ಟ" ಎಂದೆ ನಾನು.
ಅದಕ್ಕೆ ಅವರು, "ಯಾಕೆ? ಅದ್ಯಾಕೆ? ಅದ್ರಲ್ಲೇನು ವಿಶೇಷ? ಅದು ಹೇಗಾಗ್ತದೆ? ದೇವರು ಮತ್ತು ಮನುಷ್ಯ ಒಂದೇ ಹೇಗೆ?" ಅಂದರು (ಸ್ವಲ್ಪ ಮಟ್ಟಿಗೆ ಕಸಿವಿಸಿಗೊಂಡರು ಅನ್ನಬಹುದು). ನಮ್ಮ ಸಂವಾದದ ಹೃಸ್ವ ಪಠ್ಯರೂಪ ನಿಮಗಾಗಿ...

***************************************************************************

ನಾನು: ದೇವರು ಮತ್ತು ಮನುಷ್ಯ ಅಲ್ಲ, ಜೀವಾತ್ಮ ಮತ್ತು ಪರಮಾತ್ಮ ಒಂದೇ ಅಂತ. ಯಾಕೆ ಅಂದ್ರೆ... ಪರಮಾತ್ಮನನ್ನು, ದೇವರನ್ನು ನಾವು ನಿರ್ಗುಣ, ನಿರಾಕಾರ, ವಿಶ್ವರೂಪ, ವಿಶ್ವಂಭರ... ಅಂತೆಲ್ಲ ವಿವರಿಸ್ತೇವೆ. ಸರ್ವವ್ಯಾಪಿ ಅಂತ ಕರೀತೇವೆ. ಶಕ್ತಿರೂಪ ಅಂತ ಹೇಳ್ತೇವೆ. ಹಾಗಿರುವಾಗ ಅವನ ಒಳಗೇ ಇರುವ ನಾವು ಅವನಿಂದ/ ಅದರಿಂದ ಬೇರೆ ಆಗಿರುವುದು ಹೇಗೆ ಸಾಧ್ಯ? ಆ ಶಕ್ತಿ ನಮ್ಮೆಲ್ಲರನ್ನೂ ಒಳಗೊಂಡಿರುವಾಗ ನಾವು ಬೇರೆಯಾಗಿರುವ ಪ್ರಶ್ನೆಯೇ ಇಲ್ಲವಲ್ಲ.

ಅಣ್ಣ: ಹಾಗಾದ್ರೆ ದೇವರು ಬೇರೆ ಇಲ್ಲ ಅಂತಲಾ? ನಾವೇ ಎಲ್ಲರೂ ದೇವರಾ?

ನಾನು: ಹಾಗಲ್ಲಣ್ಣ, ನಾವೇ ಎಲ್ಲರೂ ದೇವರು ಅಂತಲ್ಲ. ದೇವರ ತುಣುಕುಗಳು ಅಂತ. ಮರದ ಕೊಂಬೆ, ರೆಂಬೆ, ಹೂ, ಹಣ್ಣು, ಎಲ್ಲವೂ ಮರದ ಭಾಗಗಳು; ಎಲ್ಲ ಸೇರಿ ಒಂದು ಮರ ಅಲ್ವಾ? ಹಾಗೇನೇ.

ಅಣ್ಣ: ಹಾಗಾದ್ರೆ, ನಮಗೂ ಆ ದೇವರಿಗಿರುವಷ್ಟೇ ಜ್ಞಾನ ಇರಬೇಕಿತ್ತಲ್ಲ, ಯಾಕಿಲ್ಲ? ದೇವರ ತುಣುಕು ಅಂತಾದ್ರೆ ನಮಗೂ ಅದೇ ಶಕ್ತಿ ಇರಬೇಕಲ್ಲ.

ನಾನು: ಹೌದು, ಆ ಶಕ್ತಿಯ ಒಂದು ತುಣುಕು ನಮ್ಮಲ್ಲೂ ಉಂಟು, ಆದ್ರೆ ನಮ್ಮ ದೇಹ ಅನ್ನುವ ಮಾಯೆ ಆವರಿಸಿದೆ. ಆದ್ದರಿಂದ ನಮಗೆ ಗೊತ್ತಿಲ್ಲ, ಅಷ್ಟೇ.

ಅಣ್ಣ: ಗೊತ್ತಿಲ್ಲ ಅಂತಾದ್ರೆ ನಾವು ಆ ದೇವರ ತುಣುಕು ಹೇಗಾಗ್ತದೆ?

ನಾನು: ಈಗ- ಹತ್ತು ಬತ್ತಿ ಹಾಕಿ, ಒಂದು ಲೋಟ ಎಣ್ಣೆ ಹಾಕಿದ ದೊಡ್ಡ ಕಾಲುದೀಪದಲ್ಲಿರುವ ದೀಪಕ್ಕೂ ಎರಡೇ ಬತ್ತಿ ಹಾಕಿ, ಎರಡು ಚಮಚ ಎಣ್ಣೆ ಹಾಕಿದ ಹಣತೆಯ ದೀಪಕ್ಕೂ ವ್ಯತ್ಯಾಸ ಇಲ್ವಾ? ಹಾಗೇನೇ ನಮಗೂ ಆ ಸರ್ವಶಕ್ತ ದೇವರಿಗೂ ವ್ಯತ್ಯಾಸ....

ಅಣ್ಣ: ಹ್ಙಾ! ಹಾಗಾದ್ರೆ, ದೊಡ್ಡ ದೀಪವೂ ಸಣ್ಣ ದೀಪವೂ ಒಂದೇ ಅಲ್ಲ ಅಂತಾಯ್ತು. ಅದ್ವೈತ ಎಲ್ಲಿ ಬಂತು?

ನಾನು: ದೊಡ್ಡದೂ ದೀಪವೇ, ಪರಮಾತ್ಮ; ಸಣ್ಣದೂ ದೀಪವೇ, ಜೀವಾತ್ಮ... ದ್ವೈತ ಎಲ್ಲುಂಟು? ಅವುಗಳ ಶಕ್ತಿ ಬೇರೆ ಬೇರೆ, ಅಷ್ಟೇ. ಮೂಲದಷ್ಟು, ದೊಡ್ಡ ದೀಪದಷ್ಟು ಬೆಳಕು, ಶಾಖ ಸಣ್ಣ ದೀಪಕ್ಕಿಲ್ಲ. ಆ ನೆಲೆಯಲ್ಲಿ ಮಾತ್ರ ಅವೆರಡೂ ಬೇರೆ ಬೇರೆ. ಇದೇ ಸಣ್ಣ ದೀಪದ ಮೇಲೆ ಒಂದು ಮಣ್ಣಿನ ಬುರುಡೆ ಇಟ್ರೆ ಆಗ ಅದರ ಬೆಳಕು, ಶಾಖ ಇನ್ನೂ ಸೀಮಿತ. ಅದು ನಮ್ಮ ಈ ದೇಹ. ನಮ್ಮ ಸೀಮಿತ ವಲಯ. ಅದರಿಂದಾಚೆ ನಮಗೆ ಜ್ಞಾನ ಇಲ್ಲ, ಶಕ್ತಿ ಇಲ್ಲ. ಆ ಬುರುಡೆಯನ್ನು ತೆಗೆದಾಗ, ದೀಪದ ವಿಸ್ತಾರವಾದ ಬೆಳಕು, ಪ್ರಖರ ಶಾಖ ಗೊತ್ತಾಗುತ್ತದೆ, ಅಲ್ವಾ? ಹಾಗೇ ಈ ಆತ್ಮವೂ ಕೂಡಾ. ದೊಡ್ಡ ದೀಪದಿಂದ ತಂದ ಸಣ್ಣ ದೀಪ. ಬುರುಡೆಯೊಳಗಿದ್ದಾಗ ಅಜ್ಞಾನ, ಲೌಕಿಕ ಪೊರೆ. ಬುರುಡೆ ತೆಗೆದಾಗ ಅದೇ ದೀಪದ ಕುಡಿ, ಪರಮಾತ್ಮನ ತುಣುಕು, ಜೀವಾತ್ಮ.

ಅಣ್ಣ: ಛೇ; ಒಪ್ಪೋದಿಲ್ಲ. ಜೀವಾತ್ಮ ಪರಮಾತ್ಮ ಒಂದೇ ಅಂತಾದ್ರೆ ಪರಮಾತ್ಮನಿಗಿರುವ ಶಕ್ತಿ, ಜ್ಞಾನ ನಮಗೆ ಯಾಕಿಲ್ಲ? ದೊಡ್ಡ ದೀಪವೂ ಶಾಖ ಕೊಡ್ತದೆ, ಸಣ್ಣ ದೀಪವೂ ಶಾಖ ಕೊಡ್ತದೆ. ಆದ್ರೆ ನಮಗೆ ಪರಮಾತ್ಮನ ಜ್ಞಾನ ಯಾಕಿಲ್ಲ?

ನಾನು: ಈಗ, ನಮ್ಮ ಮನೆಯ ವಯರುಗಳಲ್ಲಿ ಬರುವ ಕರೆಂಟ್ ಮತ್ತು ಜೋಗದಲ್ಲಿ ಉತ್ಪಾದನೆಯಾಗುವ ಕರೆಂಟ್ ಒಂದೇನಾ ಬೇರೆ ಬೇರೆನಾ?

ಅಣ್ಣ: ಅದೂ.... ಕರೆಂಟ್ ಒಂದೇ. ಅದೇ ಕರೆಂಟ್ ಇಲ್ಲಿ ಬರುದಲ್ವಾ?

ನಾನು: ಹಾಗಾದ್ರೆ, ಅಲ್ಲಿ ಉತ್ಪಾದನೆಯಾದ ಅಷ್ಟೂ ಕರೆಂಟ್ ಇಲ್ಲಿಗೇ ಬರ್ತದಾ?

ಅಣ್ಣ: ಇಲ್ಲ, ಇಲ್ಲ. ಪೂರ್ತಿ ಇಲ್ಲಿಗೇ ಬರುದಿಲ್ಲ.

ನಾನು: ಹೌದಲ್ವ! ಅಲ್ಲಿ ಉತ್ಪಾದನೆಯಾದ ಕರೆಂಟ್ ಪೂರಾ ಇಲ್ಲಿಗೇ ಬಂದ್ರೆ ನಮ್ಮ ವಯರಿಂಗ್ ಸುಟ್ಟು ಹೋಗ್ತದೆ. ನಮ್ಮ ಟಿವಿ, ಫ್ರಿಜ್, ವಾಷಿಂಗ್ ಮೆಶೀನ್ ಎಲ್ಲವೂ ಸುಟ್ಟು ಹೋಗ್ತದೆ, ಅಲ್ವ. ಹಾಗೇನೇ, ಪರಮಾತ್ಮನ ಪೂರ್ಣ ಶಕ್ತಿ ನಮಗೆ ಬಂದ್ರೆ ನಾವು ತಡೆಯೋದಕ್ಕೆ ಸಾಧ್ಯ ಇಲ್ಲ. ನಮ್ಮ ಮಿತಿಯಲ್ಲಿ ಸಾಧ್ಯ ಇರುವಷ್ಟು ಶಕ್ತಿಯನ್ನು ಮಾತ್ರ ನಮಗೆ ವಿತರಿಸಿದ್ದಾನೆ. ಆದ್ರೆ, ಅದ್ರಲ್ಲೂ ನಾವು ಪೂರ್ಣ ಪ್ರಮಾಣವನ್ನು ಉಪಯೋಗಿಸಿಕೊಳ್ತಾ ಇಲ್ಲ. ನಮ್ಮ ಸುತ್ತ ಪೊರೆ ಕಟ್ಟಿಕೊಂಡಿದ್ದೇವೆ. ಕಂಬದಿಂದ ನಮ್ಮ ಮನೆಗೆ ಬರುವ ವಯರಿಗೆ ಕೇಸಿಂಗ್ ಇರ್ತದೆ. ಅದನ್ನು ಮುಟ್ಟಿದ್ರೆ ನಮಗೆ ಶಾಕ್ ಬರುದಿಲ್ಲ. ಆದ್ರೆ, ಆ ಕೇಸಿಂಗ್ ತೆಗೆದ್ರೆ ನಮಗೆ ಶಾಕ್ ಹೊಡೀತದೆ, ಅಲ್ವ? ಅದೇ ಥರ, ನಮ್ಮ ಈ ದೇಹದ ಪೊರೆ ತೆಗೆದ್ರೆ, ನಮಗೆ ನಮ್ಮ ಸತ್ಯ ರೂಪ ಗೊತ್ತಾಗ್ತದೆ, ನಮ್ಮ ಪೂರ್ಣ ಶಕ್ತಿ ಗೊತ್ತಾಗ್ತದೆ. ಅದೇ ಮಾಯೆಯ ಪೊರೆ. ನಮ್ಮ ದೇಹವೇ ನಮ್ಮನ್ನು ಮುಸುಕಿದ ಮಾಯೆ. ಅದನ್ನು ಮೀರಿದ್ರೆ, ಆ ಮಾಯೆಯನ್ನು ಕಳೆದುಕೊಂಡ್ರೆ, ನಮಗೂ ದೇವರಿಗೂ ವ್ಯತ್ಯಾಸ ಇಲ್ಲ. ಆ ಮೂಲ ಶಕ್ತಿಯ ಒಂದು ಸೆಳಕು ನಾವಾಗಿರುವುದು ಗೊತ್ತಾಗ್ತದೆ. ಜೋಗದಲ್ಲಿ ಉತ್ಪಾದನೆಯಾಗುವ ಒಟ್ಟೂ ಕರೆಂಟ್ ಮೂಲ ಶಕ್ತಿ, ದೇವರ ಹಾಗೆ. ನಮ್ಮ ಮನೆಯ ಒಂದೊಂದು ಬಲ್ಬ್, ನಾವು, ಒಂದೊಂದು ವ್ಯಕ್ತಿಯ ಹಾಗೆ. ಎಲ್ಲರ ಒಳಗಿರುವುದು ಅದೇ ಕರೆಂಟ್. ಜೋಗದ ಕರೆಂಟ್ ಬೇರೆ, ಇಲ್ಲಿ ಬಲ್ಬಿನ ಕರೆಂಟ್ ಬೇರೆ ಅಂತ ಹೇಳ್ತೀರ?

ಅಣ್ಣ: ಇಲ್ಲ, ಕರೆಂಟ್ ಎಲ್ಲ ಒಂದೇ...

ನಾನು: ಹಾಗೇನೇ ಜೀವಾತ್ಮ ಮತ್ತು ಪರಮಾತ್ಮನ ಸಂಬಂಧ ಕೂಡಾ. ಆ ಅಗಾಧ ಶಕ್ತಿಯ ಪುಟ್ಟ ಪುಟ್ಟ ತುಣುಕುಗಳು ನಾವು. ಒಂದೊಂದು ಬಣ್ಣದ, ಒಂದೊಂದು ಆಕಾರದ, ಒಂದೊಂದು ಸಾಮರ್ಥ್ಯದ, ಒಂದೊಂದು ರೂಪದ ಬಲ್ಬುಗಳು. ನಾವೆಲ್ಲರೂ ಬೇರೆ ಬೇರೆ, ಆದ್ರೆ ನಮ್ಮೊಳಗಿನ ಶಕ್ತಿಯ ಮೂಲ, ಒಂದೇ. ಅದೇ ದೇವರು. ಸರ್ವಶಕ್ತ. ಪರಮಾತ್ಮ. ನಮ್ಮನ್ನೆಲ್ಲರನ್ನೂ ನಡೆಸುತ್ತಿರುವುದು ಅದೇ ಶಕ್ತಿ. ಆದ್ರೆ, ನಂನಮ್ಮ ಬಲ್ಬ್ ನಂನಮ್ಮ ಮಿತಿ; ಅಷ್ಟೇ. ಈ ಬಲ್ಬ್ ಇದ್ದಾಗ ಪೊರೆ. ಅದು ಕಳಚಿದಾಗ, ಎಲ್ಲವೂ ಒಂದೇ ಕರೆಂಟ್.
I rest my case...

ಅಣ್ಣ: ಹ್ಮ್!....

***************************************************************************

ಓದುಗರೇ, ನನ್ನ ವಾದವೇ ಸರಿ ಅಂತ ವಾಗ್ಯುದ್ಧಕ್ಕೆ ನಿಮ್ಮನ್ನು ಕರೆಯುತ್ತಿಲ್ಲ. ಸುಮ್ನೇ ನಾನು ಒಳಗೊಂಡ ಒಂದು ಚರ್ಚೆಯನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ್ದೇಶ ಮಾತ್ರ ನನ್ನದು.

"ದೇಹವೆಂಬುದು ನಮ್ಮನ್ನು ಆವರಿಸಿದ ಮಾಯೆ, ಆ ಮಾಯೆ ಕಳೆದರೆ ನಮಗೆ ನಮ್ಮ ಶಕ್ತಿ ಗೊತ್ತಾಗುತ್ತದೆ" ಅಂದಾಗ, ಯಾರಿಗೂ ಈ ದೇಹವನ್ನು ತ್ಯಜಿಸಲು ಕರೆ ಕೊಟ್ಟದ್ದಲ್ಲ. ದೇಹವೆಂಬ ಮಾಯೆಯೊಳಗಿದ್ದೂ ಅದನ್ನು ಮೀರಿ ಸಾಧನೆ ಮಾಡಿದ ಶರೀಫ ಸಾಹೇಬರಂತೆ, ಪುರಂದರ, ಕನಕ ಮುಂತಾದ ದಾಸ ವರೇಣ್ಯರಂತೆ, ಈ ದೇಹದೊಳಗಿದ್ದೂ ಅರಿವಿನ ಪರಿಧಿಯನ್ನು ಮಾಯೆಯ ಪೊರೆ ಮೀರಿ ವಿಸ್ತರಿಸಬಹುದು ಎನ್ನುವುದಕ್ಕೆ ಸೂಚನೆ ಮಾತ್ರ. ನಮ್ಮ ನಮ್ಮ ಅರಿವಿನ ನೆಲೆಯನ್ನು ಅರಿತು ಅದನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾತ್ರ ನಮ್ಮದು.

ಇಂಥ ಸಿದ್ಧಾಂತಗಳ ಸುತ್ತಮುತ್ತಲ ವಾದಸರಣಿಗಳು, ವಿವರಣೆಗಳು, ಖಂಡನೆ-ಮಂಡನೆಗಳು, ಪಾಂಡಿತ್ಯ ಪ್ರದರ್ಶನಗಳು, ವಿಶ್ಲೇಷಣೆಗಳು ಎಲ್ಲವೂ ಕೊನೆಗೆ ನೆಲೆಗೊಳ್ಳುವುದು ಒಂದು ಬಿಂದುವಿನಲ್ಲಿ; ಅದು ಪರಮಾತ್ಮ. ಎಲ್ಲರ ಗಮ್ಯವೂ ಅದೇ.
ಇದೇ ದಾರಿಯಲ್ಲಿ ನನ್ನ ಪಯಣ, ಈ ಅಲ್ಪ ಅರಿವಿನೊಡನೆ. ಅಷ್ಟೇ.

"ಇಷ್ಟೆಲ್ಲ ಪಾರಮಾರ್ಥಿಕವಾಗಿ ಮಾತಾಡುವ ನನಗೆ 'ಹರಿವ ಲಹರಿ'ಯಲ್ಲಿ ಕೇಳಿದಂಥ ತುಂಟತನದ ಸಹವಾಸ ಯಾಕೆ?"
ಪ್ರಶ್ನೆ ಸಹಜವೇ!

ಲೌಕಿಕ ಲೌಕಿಕವೇ, ಅಧ್ಯಾತ್ಮ ಅಧ್ಯಾತ್ಮವೇ.
ದೇಹಕ್ಕೆ, ಬುದ್ಧಿಗೆ, ಮನಸ್ಸಿಗೆ ತಟ್ಟುವಂಥ ವಿಷಯ ದೈನಂದಿನ ಬದುಕಿನ ಪಯಣಕ್ಕೆ ಬೇಕಾದ್ದು; ನಿಮ್ಮೆಲ್ಲರ ಪ್ರೀತಿಯ ಹಾಗೆ.
ಮನಸ್ಸಿಗೆ, ಪ್ರಜ್ಞೆಗೆ ನಿಲುಕುವಂಥ ವಿಷಯ ದೇಹ ಮೀರಿದ ಪಯಣಕ್ಕೆ ಬೇಕಾದ್ದು; ದೇವರ ಪ್ರೀತಿಯ ಹಾಗೆ.
ಎರಡೂ ಒಟ್ಟಾದಾಗ.... ನಾನು ನಾನಾಗುತ್ತೇನೆ, ಸಂಪೂರ್ಣವಾಗಿ; ಹೌದಲ್ವ!?

11 comments:

sunaath said...

ಜ್ಯೋತಿ,
ನೀನು ಅದ್ವೈತವನ್ನು ಹಾಗೂ ಮಾಯೆಯನ್ನು ವಿವರಿಸಿದ ರೀತಿ beautiful!
ನೀನು ಹೇಳಿದ್ದನ್ನೇ ಶಂಕರಾಚಾರ್ಯರೂ ಸಹ ತಮ್ಮ "ದಕ್ಷಿಣಾಮೂರ್ತಿ ಸ್ತೋತ್ರ"ದಲ್ಲಿ ಹೇಳಿದ್ದಾರೆ.

Harisha - ಹರೀಶ said...

ಚೆನ್ನಾಗಿದೆ ನೀವು ಅದ್ವೈತವನ್ನು ವಿವರಿಸಿರುವ ರೀತಿ.

ಸುಪ್ತದೀಪ್ತಿ suptadeepti said...

ಕಾಕಾ ಮತ್ತು ಹರೀಶ್, ಧನ್ಯವಾದಗಳು.

ಕಾಕಾ, ನಾನು ಯಾವುದೇ ಗೀತೆಯನ್ನು, ಸ್ತೋತ್ರಗಳನ್ನು, ಪುರಾಣ-ಪುಣ್ಯಕಥೆಗಳನ್ನು, ವೇದಾಂತಗಳನ್ನು, ಜ್ಞಾನಭಂಡಾರಗಳೆಂದು ಕರೆಯಲ್ಪಡುವ ಯಾವುದನ್ನೂ ಅಧ್ಯಯನ ಮಾಡಿಲ್ಲ. ಸುಮ್ಮನೆ ನನ್ನೊಳಗಿನ ಆಲೋಚನೆಗಳನ್ನು ನನಗೆ ಸೂಕ್ತವೆಂದು ಕಾಣುವ ಉದಾಹರಣೆಗಳ ಮೂಲಕ ಹೇಳಿದ್ದೇನೆ. ನಿಮಗೆ ಇಷ್ಟವಾಗಿದ್ದು ನನ್ನ ಟೊಪ್ಪಿಗೆಗೊಂದು ಗರಿಯಾಗಿದೆ.

Unknown said...

ಜ್ಯೋತಿ,
ದ್ವೈತ ಅದ್ವೈತಗಳನ್ನು ಉದಾಹರಣೆಗಳ ಮೂಲಕ, ಹೋಲಿಕೆಗಳ ಮೂಲಕ (ಕರಂಟು- ವಯರು, ಮರ-ಎಲೆ, ದೀಪ-ಬತ್ತಿ) ವಿವರಿಸಿ ವಾದ ಮಾಡಿ ಗೆಲ್ಲುವುದು ತುಂಬ ಸುಲಭ. ವಾಕ್ಚಾತುರ್ಯ ಚೆನ್ನಾಗಿರುವವರು ಗೆಲ್ಲುತ್ತಾರೆಯೇ ವಿನಃ ದ್ವೈತವೂ ಸೋಲುವುದಿಲ್ಲ, ಅದ್ವೈತವೂ ಸೋಲುವುದಿಲ್ಲ.

ಅದ್ವೈತಿ ಶಂಕರಾಚಾರ್ಯರೇ "ಭಜ ಗೋವಿಂದಂ"ನಲ್ಲಿ ವ್ಯಾಕರಣ ಮೀಮಾಂಶೆಯಿಂದ ಆಧ್ಯಾತ್ಮ ಸಿದ್ಧಿಯಾಗುವುದಿಲ್ಲವೆಂದು ಹೇಳಿಲ್ಲವೇ?

ಅಧ್ಯಾತ್ಮವೆಂಬುದು ದ್ವೈತದಲ್ಲೂ ಇಲ್ಲ, ಅದ್ವೈತದಲ್ಲೂ ಇಲ್ಲ; ಆಸ್ತಿಕನಲ್ಲೂ ಇಲ್ಲ, ನಾಸ್ತಿಕನಲ್ಲೂ ಇಲ್ಲ; ಇದರ ಆಳ ಬಲ್ಲವನೇ ಬಲ್ಲ!

- ಕೇಶವ www.kannada-nudi.blogspot.com

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗೆ ಧನ್ಯವಾದಗಳು, ಕೇಶವ್.

ಈ ಸಂವಾದದಲ್ಲಿ ನಾನಾಗಲೀ ಅಣ್ಣನಾಗಲೀ ಗೆದ್ದ-ಸೋತ ಭಾವ ಇಲ್ಲ. ಗೆಲ್ಲುವುದಕ್ಕೆ ವಾದ ಮಾಡಿದ್ದಲ್ಲ. ನನಗೆ, ವೈಯಕ್ತಿಕವಾಗಿ, ಅದ್ವೈತ ಇಷ್ಟ ಅನ್ನುವುದನ್ನು ಅವರಿಗೆ ಉದಾಹರಣೆಗಳ ಮೂಲಕ ವಿವರಿಸಿದೆ, ಅಷ್ಟೇ. ಅವರ ಸ್ವಂತ ಅಭಿಪ್ರಾಯ ಇದರಿಂದ ಬದಲಾಗಿಲ್ಲ, ಬದಲಾಯಿಸುವ ಉದ್ದೇಶವೂ ನನಗಿಲ್ಲ.

ಈ ಎರಡು ತತ್ವಗಳಲ್ಲಿ ಯಾವುದು ಮೇಲು ಅಥವಾ ಯಾವುದು ಸತ್ಯ ಅನ್ನುವ ಚರ್ಚೆ ನನ್ನ ಉದ್ದೇಶವೇ ಅಲ್ಲ. ಇಲ್ಲಿ ಅದನ್ನು ಬರೆದದ್ದೂ ಆ ದೃಷ್ಟಿಯಿಂದಲ್ಲ.

ತತ್ವಗಳು, ಮಾರ್ಗಗಳು, ನಿಷ್ಠೆ/ ಭಕ್ತಿಯ ದಾರಿಗಳು ಅವರವರ ಭಾವಕ್ಕೆ ಹೊಂದಿಕೊಂಡದ್ದು. ಅದನ್ನು ಅಲುಗಿಸುವ ಪ್ರಯತ್ನ ನಾನು ಮಾಡುತ್ತಿಲ್ಲ. ಅಂಥ ಭಾವನೆ ಈ ಬರಹ ಕೊಟ್ಟಿದ್ದರೆ, ಎಲ್ಲ ಓದುಗರೂ ನನ್ನನ್ನು ಕ್ಷಮಿಸಬೇಕು.

ನನ್ನ ಆಲೋಚನೆಗಳನ್ನು ಹಂಚಿಕೊಳ್ಳುವದಕ್ಕಾಗಿ ಮಾತ್ರವೇ ಇದನ್ನು ಇಲ್ಲಿ ಬರೆದಿದ್ದೇನೆ.

shivu.k said...

ಮೇಡಮ್,

ನೀವು ಅದ್ವೈತವನ್ನು ಮತ್ತು ಅದರ ಮಾಯೆಯನ್ನು ಅದ್ಬುತವಾಗಿ ವಿವರಿಸಿದ್ದೀರಿ....ಮತ್ತು ತುಂಬಾ ಚೆನ್ನಾಗಿ ಬರೆಯುತ್ತೀರಿ.....

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಶಿವು.

Anonymous said...

I was looking out for some convincing thoughts on Advaita. Came across this post. beautifully explained. Thank you
Swarna

ಸುಪ್ತದೀಪ್ತಿ suptadeepti said...

Hello Swarna, Thanks for your comments. Hope it helped you in your journey.

Mukund said...

Jyothi

What you have stated will mean that "Jeevatma" is a part of "Paramatma". For a movement we will accept it, it will not prove that the "Deha" what "Jeeva" has, a "Maya".

You are giving an example of light or Current. By example you can not prove advaita. Let me give an example. There is a City say "Mysore" it is in "Karnataka", which is in "India". Hence Mysore is part of Karnataka and India, however they are not the same. It will be only a part and will remain as it is. It will never one and the same.

Even according to Dwaita the power which Jeeva has, have been given by "Paramatma". In one form Paramatma also there with Jeeva. That does not mean that both are same. they are separate.

One can not deny the Dwaita since it is very apparent to all.

ಸುಪ್ತದೀಪ್ತಿ suptadeepti said...

ನಮಸ್ತೆ ಮುಕುಂದ್, ನಮ್ಮ ಪರಸ್ಪರ ಪರಿಚಯ ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ (೨೦೧೧-ಅಕ್ಟೋಬರಲ್ಲಿ ನೀನಾಸಂ-ನಲ್ಲಿ ಭೇಟಿಯಾದ ಮುಕುಂದ್ ನೀವೇನಾ?)

ನೀವಂದಂತೆಯೇ, -ಜೀವಾತ್ಮವು ಪರಮಾತ್ಮನ ಒಂದಂಶ/ ಒಂದು ಭಾಗ- ಅನ್ನುವುದನ್ನು ನಾನು ಪ್ರತಿಪಾದಿಸುತ್ತಿರುವುದು ನಿಜ. ನಿಮ್ಮ ಉದಾಹರಣೆ- ಮೈಸೂರು ನಗರವು ಕರ್ನಾಟಕ ರಾಜ್ಯದ, ಭಾರತ ದೇಶದ ಒಂದು ಭಾಗ, ಅವೆರಡೂ ಒಂದೇ ಅಲ್ಲ ಎನ್ನುವುದು- ಕೂಡಾ ಅದನ್ನೇ ಹೇಳುತ್ತಿರುವುದಲ್ಲ! ಜೀವಾತ್ಮವು ಪರಮಾತ್ಮನ ಅಖಂಡತೆಯೊಳಗೊಂದು ಬಿಂದು. ಅದರ ಹೊರತಾಗಿ ಇದು ಇರಲಾರದು. ಆ ಅಖಂಡತೆಯ ಒಂದು ತುಣುಕು ಜೀವಾತ್ಮ ತನ್ನ ಅನನ್ಯತೆಯನ್ನೇ ಗುರುತಾಗಿಸಿಕೊಂಡಿದೆ ಹಾಗೂ ತನ್ನ-ಪರಮಾತ್ಮನ ಸಂಬಂಧವನ್ನು ಮಾಯೆಯ ಕಾರಣವಾಗಿ ಮರೆತಿದೆ (ನಮ್ಮನೆಗೆ ಕರೆಂಟ್ ಕಂಬದಿಂದ ಬಂದಿತೆಂದೋ, ನಮ್ಮೂರಿನ ಸಬ್-ಸ್ಟೇಶನ್ನಿನಿಂದ ಬಂತೆಂದೋ ಹೇಳಿದಂತೆ).
ಇರಲಿ ಬಿಡಿ, ಇವೆಲ್ಲ ವೈಯಕ್ತಿಕ ವಿಚಾರಧಾರೆಗಳು, ನಂಬಿಕೆ-ವಿಶ್ವಾಸಗಳು. ನನ್ನ ನಿಲುವನ್ನು ನೀವು ಒಪ್ಪಲೇಬೇಕಾಗಿಲ್ಲ. ಈ ನನ್ನ ಅಭಿಪ್ರಾಯಗಳನ್ನು ಈ ಭಿತ್ತಿಯಲ್ಲಿ ಹಂಚಿಕೊಂಡೆ ಅಂದ ಮಾತ್ರಕ್ಕೆ ಯಾವುದೇ ರೀತಿಯ ಪ್ರಚಾರಕಾರ್ಯಕ್ಕೆ ಇಳಿದಿದ್ದೇನೆಂದಲ್ಲ. ಹೀಗೇ, ಸುಮ್ಮನೆ, ಹಂಚಿಕೊಂಡೆ, ಅಷ್ಟೇ.