ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday, 24 October 2007

ಆತ್ಮ ಚಿಂತನ-೦೬

ವಿಶೇಷ ಸೂಚನೆ: ಹಿಂದಿನ ಸಂಚಿಕೆಯಲ್ಲಿ ತಿಳಿಸಿದ, ಕಳೆದ ನವೆಂಬರಿನಲ್ಲಿ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ "ಪ್ರೇತಗಳ ಮದುವೆ" ಲೇಖನದ ಸಾರಾಂಶವನ್ನು ಈ ಕಂತಿನಲ್ಲಿ ಕೊಡಮಾಡುತ್ತಿಲ್ಲ, ಮುಂದಿನ ಕಂತಿಗೆ ಮುಂದೂಡಲಾಗಿದೆ. ಈ ಕಂತಿನಲ್ಲಿ ಅದಕ್ಕಿಂತ ವಿಶೇಷವಾದ ಒಂದು ನಿರೂಪಣೆಯನ್ನು ಬರೆಯಬೇಕಾಗಿದೆ....

ಪಟ್ಟಣದ ಗೌಜಿ-ಗಲಾಟೆಯಿಂದ ದೂರವಾಗಿ ಒಂದು ಆಶ್ರಮದಂಥ ವಾತಾವರಣ. ಅಲ್ಲಿನ ದೊಡ್ಡ ಕಟ್ಟಡದ ಒಂದು ವಿಶಾಲ ಕೋಣೆಯಲ್ಲಿ ಹಲವಾರು ಪುಟ್ಟ ಪುಟ್ಟ ಗುಂಪುಗಳಲ್ಲಿ ಗುಜು-ಗುಜು ನಡೆಯುತ್ತಿದೆ. ಅಂಥದ್ದೊಂದು ಪುಟ್ಟ ಗುಂಪಿನ ಕಡೆ ನಮ್ಮ ಗಮನ. ನೂರಕ್ಕೂ ಹೆಚ್ಚು ಆಸಕ್ತರು ಸೇರಿದ್ದ ಒಂದು ಕಾರ್ಯಾಗಾರದಲ್ಲಿ ಅವರೂ ಭಾಗಿಗಳು. ಸೋಮವಾರ, ಮಂಗಳವಾರಗಳ ಪೂರ್ವಾಹ್ನ, ಅಪರಾಹ್ನಗಳಲ್ಲಿ ವಿವರಣೆಗಳು, ಪ್ರಾತ್ಯಕ್ಷಿಕೆಗಳು ನಡೆದಿವೆ. ಇದೀಗ, ಬುಧವಾರದ ಅಪರಾಹ್ನ, ಪ್ರಯೋಗದ ಸಮಯ. ಇವರ ಗುಂಪಿನಲ್ಲಿ ಒಬ್ಬ ಮಹಿಳೆ `ಅವಳು'. ಇನ್ನೊಬ್ಬ ಮಹಿಳೆ `ಇವಳು'. ಸದ್ಯಕ್ಕೆ `ಆತ' ಇಲ್ಲೊಬ್ಬ ನೋಡುಗ, ಅಷ್ಟೇ. `ಇವಳ' ಎಡಗಡೆಗೆ `ಅವಳು' ಮತ್ತು ಬಲಗಡೆಗೆ `ಆತ' ತ್ರಿಕೋನಾಕೃತಿಯಲ್ಲಿ ಕುರ್ಚಿಗಳಲ್ಲಿ ಆಸೀನರಾಗಿ, ತಮ್ಮೊಳಗೆ ಪಿಸು-ಪಿಸು ಮಾತಾಡುತ್ತಿದ್ದಾರೆ. ಪರಸ್ಪರ ನಮಸ್ಕಾರ ವಿನಿಮಯಗಳ ಬಳಿಕ `ಅವಳು' ಮತ್ತು `ಇವಳ' ನಡುವೆ ಸಂಭಾಷಣೆ ಸಾಗುತ್ತದೆ, ಅದರ ಸಂಕ್ಷಿಪ್ತ ರೂಪಾಂತರ ಹೀಗಿದೆ:

`ಅವಳು': ನೀನೀಗ ಸಂಪೂರ್ಣವಾಗಿ ನಿರಾಳವಾಗಿದ್ದೀ... ನಿನ್ನ ದೇಹದ ಯಾವ ಭಾಗಗಳೂ ಸೆಟೆದುಕೊಂಡಿಲ್ಲ... ಕಣ್ಣು ಮುಚ್ಚಿ ನಿಧಾನವಾಗಿ, ದೀರ್ಘ ಉಸಿರಾಟ ನಡೆಸು... ಉಸಿರಿನೊಡನೆ ಹೊಸ ಚೇತನವೂ ನಿನ್ನನ್ನು ಸೇರುತ್ತಿದೆ. ನಿಃಶ್ವಾಸದೊಡನೆ ನಿನ್ನ ನಿಶ್ಶಕ್ತಿಯನ್ನೂ, ನಿರುತ್ಸಾಹವನ್ನೂ ಹೊರಗೆ ಹಾಕು... ನಿಧಾನವಾಗಿ ಉಸಿರಾಡು... ದೀರ್ಘವಾಗಿ ಉಸಿರಾಡು... ನಿನ್ನ ಮನಸ್ಸಿನ ಯೋಚನೆಗಳನ್ನೆಲ್ಲ ಚಿತ್ರ ರೂಪದಲ್ಲಿ ನೋಡು... ನಿಧಾನವಾಗಿ ಹಳೆಯ ನೆನಪುಗಳನ್ನು ತೆರೆಗೆ ತಂದುಕೋ... ನಿನ್ನ ಬಾಲ್ಯದ ನೆನಪು... ಅಥವಾ ನಿನಗೆ ಬೇಕೆನಿಸಿದ ನೆನಪಿನ ತುಣುಕು ನಿನ್ನ ಮನದ ಭಿತ್ತಿಯ ಮೇಲೆ ಕಾಣುತ್ತದೆ... ಅದನ್ನು ವಿವರವಾಗಿ ನೋಡು... ಅದರ ವಿವರಗಳನ್ನು ನನಗೆ ಹೇಳಬಲ್ಲೆ, ಆದರೆ ನಿನ್ನ ನಿರಾಳವಾದ ಪ್ರಜ್ಞಾವಸ್ಥೆ ಕಲಕುವುದಿಲ್ಲ. ಈಗ ನಿನ್ನ ನೆನಪಿನ ತುಣುಕನ್ನು ನನಗೆ ವಿವರಿಸು...

`ಇವಳು': ಸಣ್ಣ ಜಲಪಾತ... ತುಂತುರು ನೀರಿನ ಕೆಳಗೆ ನಿಂತಿದ್ದೇನೆ. ನೀರು ತಣ್ಣಗಿದೆ... ಖುಷಿಯಾಗುತ್ತಿದೆ... ಈ ಸ್ಥಳ... ಈ ಸ್ಥಳ ನನಗೆ ಗೊತ್ತು, ನಾನೆಂದೂ ಇಲ್ಲಿಗೆ ಬಂದಿಲ್ಲ... ಆದರೂ ನನಗೆ ಈ ಜಾಗ ಪರಿಚಿತ...

`ಅವಳು': ನೀನು ಹೇಗಿದ್ದೀ... ಅದನ್ನು ವಿವರಿಸುತ್ತೀಯಾ? ನಿನ್ನ ಕಾಲುಗಳು ಹೇಗಿವೆ? ಪಾದರಕ್ಷೆಗಳು ಇವೆಯೇ? ಹೇಗಿವೆ? ಯಾವ ರೀತಿಯ ಬಟ್ಟೆ ಧರಿಸಿದ್ದೀ? ಈಗ ಹೇಳು...

`ಇವಳು': ನಾನು... ಸುಮಾರು ಇಪ್ಪತ್ತರ ತರುಣಿ... ಬರಿಗಾಲು... ಬಟ್ಟೆ... ಚರ್ಮದ ಥರ... ಕಂದು ಬಣ್ಣದ ಒರಟು ಬಟ್ಟೆ... ಹೇಗೋ ಸುತ್ತಿಕೊಂಡಿದ್ದೇನೆ... ಕಟ್ಟಿಕೊಂಡಿದ್ದೇನೆ... ನೀರಿನಡಿಯಲ್ಲಿ ನಿಂತಿದ್ದೇನೆ. ಇಲ್ಲಿಗೇ ಯಾವಾಗಲೂ ಸ್ನಾನಕ್ಕೆ ಬರುತ್ತೇನೆ... ಖುಷಿಯಾಗುತ್ತಿದೆ... ಸುತ್ತಲಿನ ಗಿಡಗಳೆಲ್ಲ ನನಗೆ ಪರಿಚಿತ... ಇದು ಭಾರತದ ಒಂದು ಹಳ್ಳಿ, ನನಗೆ ಗೊತ್ತು...

`ಅವಳು': ಸಂತೋಷ... ಯಾವ ಹಳ್ಳಿ ಗೊತ್ತಾ? ಅಲ್ಲಿ ಯಾರೆಲ್ಲ ಇದ್ದಾರೆ? ನೋಡು...

`ಇವಳು': ಗೊತ್ತಿಲ್ಲ... ಹತ್ತು ಹನ್ನೊಂದು ಗುಡಿಸಲುಗಳ ಹಳ್ಳಿ... ಇದು ನನ್ನ ಗಂಡನ ಊರು... ವರ್ತುಲಾಕಾರದ ಮನೆಗಳು, ಮೇಲೆ ಹುಲ್ಲಿನ ಮಾಡು... ನನಗೆ ಖುಷಿಯಾಗುತ್ತಿದೆ...

`ಅವಳು': ಓಹ್, ನಿನಗೆ ಮದುವೆಯಾಗಿದೆ. ಗಂಡ ಅಲ್ಲಿ ಇದ್ದಾನೆಯೇ? ನಿನಗೆ ಯಾಕೆ ಖುಷಿಯಾಗಿದೆ?

`ಇವಳು': ಗಂಡ ಇಲ್ಲಿಲ್ಲ... ನಾನು ಗರ್ಭಿಣಿ, ಅದಕ್ಕೇ ನನಗೆ ಖುಷಿಯಾಗಿದೆ...

`ಅವಳು': ಸಂತೋಷ... ಈ ವಿಷಯ ಬೇರೆ ಯಾರಿಗಾದರೂ ಗೊತ್ತಿದೆಯೇ?

`ಇವಳು': ಇಲ್ಲ, ಹಳ್ಳಿಯಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ... ನನ್ನ ಗಂಡ ಈ ವಿಷಯವನ್ನು ನನ್ನ ಅಮ್ಮ-ಅಪ್ಪನಿಗೆ ತಿಳಿಸಲು ಹೋಗಿದ್ದಾನೆ... ನನಗೆ ಖುಷಿಯಾಗಿದೆ...

`ಅವಳು': ಈಗ ಆ ನೆನಪಿನ ದಾರಿಯಲ್ಲಿ ಮುಂದಕ್ಕೆ ಹೋಗು... ಮುಂದೇನಾಗುತ್ತದೆ ನೋಡು...

`ಇವಳು': (ಬಿಕ್ಕಳಿಸಲು ಪ್ರಾರಂಭಿಸುತ್ತಾಳೆ... ಕಣ್ಣೀರು ಜಿನುಗುತ್ತದೆ...) ನನಗೆ ನೋವಾಗುತ್ತಿದೆ, ಬೇಸರವಾಗುತ್ತಿದೆ... ತೊರೆಗೆ ಹೋಗುವಾಗ ಜಾರಿ ಬಿದ್ದೆ... ಐದು ತಿಂಗಳ ಗರ್ಭಿಣಿ... ಬಿದ್ದೆ.... ಮಗುವನ್ನು ಕಳೆದುಕೊಂಡೆ... ನನ್ನ ಮಗುವನ್ನು ಕಳೆದುಕೊಂಡೆ... (ಬಿಕ್ಕಳಿಕೆ...)

`ಅವಳು': ನಿನಗೆ ನೋವಾಗಿದೆ, ನಿಜ... ನಿನ್ನ ಗಂಡ ಅಲ್ಲಿದ್ದಾನೆಯೇ? ಅವನಿಗೆ ಗೊತ್ತಿದೆಯೇ?

`ಇವಳು': ಹೌದು, ಅವನೂ ಇಲ್ಲೇ ಇದ್ದಾನೆ... ಅವನು... ಇವನೇ... ನನ್ನ ಈಗಿನ ಗಂಡನೇ ಅವನು. ಅವನಿಗೂ ಬೇಸರವಾಗಿದೆ, ಆದರೂ ನನ್ನನ್ನು ಸಂತೈಸುತ್ತಿದ್ದಾನೆ... ನನಗೆ ಆಸರೆಯಾಗಿದ್ದಾನೆ... ನನ್ನ ಜೊತೆಗಿದ್ದಾನೆ... (ಬಿಕ್ಕಳಿಕೆ...)

`ಅವಳು': ಅದೇ ನೆನಪಿನ ದಾರಿಯಲ್ಲಿ ಇನ್ನೂ ಮುಂದುವರಿದು ನೋಡು... ನಿನಗೆ ಬೇರೆ ಮಕ್ಕಳಾಗಿವೆಯೇ? ಮುಂದೆ ನಿನಗೆ ಏನಾಗುತ್ತದೆ? ನೋಡಿ ಹೇಳು...

`ಇವಳು': ಈ ಹಳ್ಳಿ ಬೇಡ... ಬೇರೆ ಕಡೆ ಹೋಗುವಾ ಅಂದ್ರೆ ನನ್ನ ಗಂಡ ಕೇಳುತ್ತಿಲ್ಲ... ಇದು ಅವನ ಹಳ್ಳಿ, ಅವನ ಸಂಬಂಧಿಕರೆಲ್ಲ ಇಲ್ಲೇ ಇದ್ದಾರೆ. ಅದಕ್ಕೇ ಬೇರೆ ಕಡೆ ಹೋಗಲು ಅವನಿಗೆ ಇಷ್ಟ ಇಲ್ಲ... ನನಗೆ ಇಲ್ಲಿ ಇರಲಾಗುತ್ತಿಲ್ಲ. ಬೇರೆಯವರ ಕೆಡುನುಡಿ ಕೇಳಲಾಗುತ್ತಿಲ್ಲ... ಕೊನೆಗೂ ಒಪ್ಪಿಕೊಂಡ... ಬೇರೆ ಕಡೆ... ಯಾರೂ ಇಲ್ಲದಲ್ಲಿ... ಕಾಡಿನ ನಡುವೆ, ಒಂದು ಪುಟ್ಟ ತೊರೆಯ ಬದಿ ನಮ್ಮ ಗುಡಿಸಲು ಮಾಡಿದ್ದೇವೆ...

`ಅವಳು': ಒಳ್ಳೆಯದು... ಇನ್ನೂ ಮುಂದೆ ಹೋಗಿ ಅವಳ ಜೀವನದಲ್ಲಿ ಇನ್ನೂ ಏನಾಗುತ್ತದೋ ನೋಡು...

`ಇವಳು': ಓಹ್, ನಮಗಿಬ್ಬರಿಗೂ ಬಹಳ ವಯಸ್ಸಾಗಿದೆ... ತೊರೆಯ ಬದಿಯಲ್ಲಿ, ಕಾಡಿನೊಳಗೆ ಶಾಂತವಾಗಿ, ನೆಮ್ಮದಿಯಾಗಿ ಇದ್ದೇವೆ... ಮಕ್ಕಳಿಲ್ಲ... ನಾವಿಬ್ಬರೇ... ಅದೇ ಕೊರಗು... ಓಹ್... (ನಿಟ್ಟುಸಿರು)

`ಅವಳು': ನಿನ್ನ ಆ ಜೀವನದ ತುಣುಕು ನಿನ್ನ ಈಗಿನ ಜೀವನಕ್ಕೆ ಹೇಗೆ ಹೊಂದಿಕೆಯಾಗುತ್ತದೆ ನೋಡು... ಈ ನೆನಪು ನಿನಗೆ ಹೇಗೆ ಮುಖ್ಯವಾಗುತ್ತದೆ?

`ಇವಳು': ಓಹ್... ಬೆಂಕಿ... ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ... ಕಾಡ್ಗಿಚ್ಚು... ಸುತ್ತಲೂ ಬೆಂಕಿ... ಗಂಡ ಮತ್ತು ನಾನು... ಇಬ್ಬರೂ... ಬೆಂಕಿಯಲ್ಲಿ... ಉರಿ... ನೋವು... (ಕಣ್ಣ ಕೊನೆಗಳಲ್ಲಿ ನೀರು ಜಿನುಗುತ್ತದೆ)

`ಅವಳು': ಅಲ್ಲಿಂದ ನೀನು ತೇಲಬಲ್ಲೆ... ತೇಲಿ ಮೇಲೆ ಹೋಗಿ ನೋಡು... ನಿನಗೆ ಯಾವುದೇ ನೋವು ತಗಲದು... ಮೇಲಿಂದ ನೋಡು...

`ಇವಳು': ಇಬ್ಬರೂ ವೃದ್ಧರು... ನಿಶ್ಶಕ್ತರು... ಬೆಂಕಿಗೆ ಆಹುತಿಯಾದರು... ನನ್ನ ಪಕ್ಕದಲ್ಲೇ ಅವನೂ ಇದ್ದಾನೆ... ಜೊತೆಜೊತೆಗೆ ಎರಡು ಬೆಳಕಿನ ಗೋಳಗಳ ಹಾಗೆ... ಒಟ್ಟಿಗೆ ಕೆಳಗೆ ನೋಡುತ್ತಿದ್ದೇವೆ...

`ಅವಳು': ಮತ್ತೇನು ನಡೆಯುತ್ತಿದೆ? ಈ ಜೀವನ ನಿನಗೆ ಹೇಗೆ ಪ್ರಸ್ತುತ?

`ಇವಳು': ಬಹುಶಃ... ಅವನ ಪ್ರೀತಿ... ಮತ್ತು ಆಸರೆ.... ಅವನಿಲ್ಲ... ಎಲ್ಲಿ ಹೋದ? ಜೊತೆಗೇ ಇದ್ದ... ಈಗಿಲ್ಲ... ಎಲ್ಲಿ ಹೋದ... ನಾನು ಒಂಟಿ... ನನಗೆ ಶಕ್ತಿಗುಂದುತ್ತಿದೆ... ಸಾಕಾಗಿದೆ... ನಾನು ಹಿಂದಕ್ಕೆ ಬರಬೇಕು... ಪ್ರಸ್ತುತಕ್ಕೆ ಬರಬೇಕು...

`ಅವಳು': ಬರಬಹುದು... ನೀನು ನಿಧಾನವಾಗಿ ಉಸಿರಾಡು... ಉಸಿರಿನ ಮೇಲೆ ಗಮನ ಇಡು... ನಿಧಾನವಾಗಿ ನಿನ್ನ ನೆನಪನ್ನು ಪ್ರಸ್ತುತಕ್ಕೆ ತಂದುಕೋ... ಪ್ರಜ್ಞೆಯನ್ನು ಜಾಗೃತಿಗೆ ತಂದುಕೋ... ಹಗುರಾಗಿ ಕಣ್ಣು ತೆರೆ...

`ಇವಳು': ಉಸ್.... ಸುಸ್ತಾಗುತ್ತಿದೆ... ನೀರು ಬೇಕು...

`ಅವಳು': ಆಗಬಹುದು... ಬಹಳ ತೀಕ್ಷ್ಣವಾದ ಕ್ಷಣಗಳನ್ನು "ಅನುಭವಿಸಿ" ಹಿಂತಿರುಗಿದ್ದೀ... ಶಕ್ತಿಗುಂದುತ್ತದೆ... ಸುಧಾರಿಸಿಕೋ...

`ಇವಳು': ಧನ್ಯವಾದಗಳು... ನಾನು ಈ ಅನುಭವ ಪಡೆಯಲು ಸಹಕಾರಿಯಾಗಿದ್ದಕ್ಕೆ ಧನ್ಯವಾದಗಳು...

`ಅವಳು': ಪ್ರತಿವಂದನೆಗಳು. ಈಗ ಹೇಗನಿಸುತ್ತಿದೆ? ಆ ಜೀವನದ ತುಣುಕುಗಳು ನಿನಗೆ ಹೇಗೆ ಪ್ರಸ್ತುತ ಅಂತ ನಿನ್ನ ಭಾವನೆ?

`ಇವಳು': ಪ್ರಸ್ತುತ ಇರಬೇಕು. ನಾನು ಯಾವಾಗಲೂ ನನ್ನ ಗಂಡನನ್ನು ಛೇಡಿಸುತ್ತಿದ್ದೆ, ಪ್ರಶ್ನಿಸುತ್ತಿದ್ದೆ, ನನ್ನೊಳಗೆ ಅಚ್ಚರಿಪಟ್ಟುಕೊಳ್ಳುತ್ತಿದ್ದೆ... ನಾವಿಬ್ಬರು ಇದೊಂದು ಜನ್ಮದಲ್ಲಿ ಮಾತ್ರ ಜೊತೆಯಾಗಿದ್ದೇವಾ... ಅಥವಾ ಹಿಂದೆ ಬೇರೆ ಯಾವುದೋ ಜನ್ಮದಲ್ಲೂ ಜೊತೆಯಾಗಿದ್ದೆವಾ... ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ...

`ಅವಳು': ನಿನ್ನ ಅನುಭವ ನಿನಗೆ ಬೇಕಾದ ಒಂದು ಉತ್ತರ ಕೊಟ್ಟಿದೆ. ಸಂತೋಷ.

`ಇವಳು': ಆದರೆ... ಈ ಎಲ್ಲವನ್ನೂ ನಾನು "ಭಾವಿಸಿದೆ". ಯಾವುದನ್ನೂ ನನ್ನ ಮನದ ಭಿತ್ತಿಯಲ್ಲಿ "ಕಂಡಿಲ್ಲ". ಅದು ಸಹಜವಾ? ಅಥವಾ ಇವೆಲ್ಲ ನನ್ನ ಕಲ್ಪನೆಯಾ? ನೆನಪು ಒಂದು ಭಾವನೆಯ ರೂಪದಲ್ಲಿ ಮಾತ್ರ ಗೋಚರವಾಗಿದ್ದು ಯಾಕೋ ಸರಿ ಅನಿಸುತ್ತಿಲ್ಲ...

`ಅವಳು': ಸರಿ, ನಮ್ಮ ಗುರುಗಳನ್ನೇ ಕೇಳೋಣ... (ಅವಳು ಹೋಗಿ ಈ ಕಾರ್ಯಾಗಾರದ ಮುಖ್ಯ ಸೂತ್ರಧಾರ, ಗುರು, ಡಾ. ಬ್ರಯಾನ್ ವೈಸ್'ರನ್ನು ಕರೆತರುತ್ತಾಳೆ.)

ಡಾ. ವೈಸ್: ಏನಾಯ್ತು? ಏನು ವಿಶೇಷ ನಡೀತು ಇಲ್ಲಿ?

`ಇವಳು': ನನಗೆ ಯಾವುದೋ ನೆನಪು ಇದ್ದಕ್ಕಿದ್ದ ಹಾಗೆ ಬಂತು. ಆದರೆ ಅದು ನಿಜವಾದ ಒಂದು ಜನ್ಮದ ನೆನಪಾ ಅಥವಾ ನನ್ನ ಕಲ್ಪನೆಯಾ ಅನ್ನುವ ಅನುಮಾನ... ಯಾಕಂದ್ರೆ, ನಾನು ಯಾವುದನ್ನೂ "ಕಾಣಲಿಲ್ಲ", ಎಲ್ಲವನ್ನೂ "ಭಾವಿಸಿದೆ". ತೀವ್ರವಾದ ಅನುಭೂತಿ ಇತ್ತು, ಚಿತ್ರಣ ಇರಲಿಲ್ಲ. ಆ ಜೀವನದಲ್ಲಿ ನನ್ನ ಗಂಡನಾಗಿದ್ದವನ ಮುಖ ಕಾಣಲಿಲ್ಲ; ಆದರೆ ಅವನು ಇವನೇ, ಈಗಿನ ಗಂಡನೇ ಅಂತ ಖಚಿತವಾಗಿ ಗೊತ್ತಿತ್ತು. ಇದೆಲ್ಲ ಕಲ್ಪನೆಯೇ? (ಪೂರ್ಣ ಸಂವಾದದ ವಿವರಣೆಯನ್ನು ಡಾ. ವೈಸ್ ಕೇಳಿ ತಿಳಿಯುತ್ತಾರೆ.)

ಡಾ. ವೈಸ್: ಇಲ್ಲ, ಕಲ್ಪನೆ ಅಲ್ಲ. ಕೆಲವರಿಗೆ ಚಿತ್ರಕ-ರೂಪದಲ್ಲಿ ನೆನಪುಗಳ ಅನುಭವ ಆಗೋದಿಲ್ಲ, ಗಾಢವಾದ ಅನುಭೂತಿಯ ರೂಪದಲ್ಲಿ ಇರುತ್ತದೆ ಮತ್ತು ಅದು ಸಾಧ್ಯ ಕೂಡಾ. ಇದು ಅಸಹಜ ಅಲ್ಲ. ನೀನೊಬ್ಬಳೇ ಅಲ್ಲ, ಇಂಥ ಅನುಭವ ಪಡೆದವರು ಹಲವರಿದ್ದಾರೆ. ನನ್ನ ಬಳಿ ಬಂದ ಸುಮಾರು ನಾಲ್ಕು ಸಾವಿರಕ್ಕೂ ಮೀರಿದ ವ್ಯಕ್ತಿಗಳ ಪೈಕಿ ಇಂಥವರು ಬಹಳ ಜನ ಇದ್ದಾರೆ... ಅಲ್ಲದೆ ನೀನು ಕಲ್ಪಿಸಿಕೊಂಡು ಹೇಳಿದಲ್ಲಿ ಆ ಕ್ಷಣಗಳಲ್ಲಿ ಸೂಕ್ತ ಭಾವನೆಗಳು ನಿನ್ನ ಮುಖದಲ್ಲಿ ಸ್ಪಷ್ಟವಾಗಿ ಬರುವ ಸಾಧ್ಯತೆ ಇಲ್ಲ. ಪ್ರಜ್ಞೆಯೊಳಗೆ ಎಲ್ಲವನ್ನೂ ಅನುಭವಿಸಿಕೊಂಡಿದ್ದಲ್ಲಿ ಮಾತ್ರ ಮುಖದಲ್ಲಿ ಅದರ ಭಾವನೆ ಹೊಮ್ಮುವುದಕ್ಕೆ ಸಾಧ್ಯ. ಆದ್ದರಿಂದ ಇದು ಕಲ್ಪನೆ ಅಲ್ಲ. ನೀನು ವಿವರಿಸಿದ ಆಧಾರದ ಮೇಲೆ, ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ ನೀನು ಅಲ್ಲಿ, ಭಾರತದಲ್ಲಿ ಇದ್ದಿರಬೇಕು ಅಂತ ನನ್ನ ಒಂದು ಅಂದಾಜು...

`ಅವಳು': ಇದೊಂಥರಾ ವಿಶೇಷ ಅನುಭವ... ಇವಳ ಮುಖದಲ್ಲಿ ಸಂತೋಷ, ಬೇಸರ, ದುಃಖ, ನೋವು, ನಿರಾಸೆ, ಬೆಂಕಿ ಹೊತ್ತಿಕೊಂಡಾಗಿನ ಭಯ... ಎಲ್ಲವೂ ಸ್ಪಷ್ಟವಾಗಿದ್ದವು... ಕಣ್ಣಲ್ಲಿ ನೀರು ಜಿನುಗುತ್ತಿತ್ತು. ನನಗಂತೂ ಇದು ಮೊದಲ ಅನುಭವ, ಗಾಬರಿಯಾಗುತ್ತಿತ್ತು....

`ಆತ': ನೀವು ಅದನ್ನು ಬಹಳ ಸೂಕ್ಷ್ಮವಾಗಿ, ನಾಜೂಕಾಗಿ ನಿಭಾಯಿಸಿದಿರಿ, ಅಭಿನಂದನೆಗಳು; ಡಾ. ವೈಸ್, ನಿಮಗೆ ಧನ್ಯವಾದಗಳು.

`ಇವಳು': ಡಾ. ವೈಸ್, ನಿಮಗೆ ಹಾಗೂ, `ಅವಳಿಗೆ' ನನ್ನ ಧನ್ಯವಾದಗಳು...

`ಅವಳು': ನಿಮಗಿಬ್ಬರಿಗೂ ಪ್ರತಿವಂದನೆಗಳು. ಡಾ. ವೈಸ್ ನಿಮಗೆ ನನ್ನದೂ ಧನ್ಯವಾದಗಳು.

ಇಲ್ಲಿ ನಿರೂಪಿತವಾದದ್ದು ಯಾವುದೇ ಕಲ್ಪಿತ ಕಥೆಯಲ್ಲ. ಟೆಕ್ಸಾಸ್'ನ ಆಸ್ಟಿನ್ ನಗರದ "ದ ಕ್ರಾಸಿಂಗ್ಸ್" ಎಂಬಲ್ಲಿ ಡಾ. ಬ್ರಯಾನ್ ವೈಸ್ ಮತ್ತವರ ಮಡದಿ ಕಾರೋಲ್ ವೈಸ್ ನಡೆಸಿಕೊಟ್ಟ "ಪಾಸ್ಟ್ ಲೈಫ್ ಥೆರಪಿ ವರ್ಕ್'ಶಾಪ್" ಎನ್ನುವ ಐದು ದಿನಗಳ ಕಾರ್ಯಾಗಾರದಲ್ಲಿ ನಡೆದ ಒಂದು ಘಟನೆ. ಇಲ್ಲಿ `ಅವಳು' ಮಿಸ್ ಮೇರಿ. `ಆತ' ನನ್ನ ಪತಿ, ಮಹಾದೇವ್. ಮತ್ತು `ಇವಳು' ಇವಳೇ, ನಾನೇ... ಇನ್ನೂ ಯಾವುದೋ ಲೋಕದಲ್ಲಿದ್ದೇನೆ... ಮದುವೆಯಾಗಿ ಇಪ್ಪತ್ತು ವರ್ಷಗಳು ಮುಗಿಯುತ್ತಿರುವಾಗ, ಎರಡು ಸಾವಿರ ವರ್ಷಗಳ ಹಿಂದಿನ ಪ್ರೇಮಿಯನ್ನು ಮತ್ತೆ ಪಡೆದು ಬಂದಿದ್ದೇನೆ!! ಈ ಜೀವನಕ್ಕೆ ಇನ್ನೇನು ಬೇಕು?

20 comments:

Anonymous said...

ಅಬ್ಬಾ! ಕಲ್ಪನೆಗಿಂತ ರೋಚಕವಾಗಿರುವ ನಿನ್ನ ಅನುಭವವನ್ನು ಓದಿ ಮೈ ಜುಂ ಎಂದಿತು. ಇದು ಕಲ್ಪನೆಯಲ್ಲವೆಂದು ವೈಸ್ ಅವರು ವಿವರಿಸಿದ್ದರೂ ಆ ಬಗ್ಗೆ ಇನ್ನೂ ನನಗೆ ಅನುಮಾನವಿದೆ. ಈ ಜನ್ಮದಲ್ಲಿ ನಮ್ಮ ಅನುಭವಕ್ಕೇ ಬಂದಿರದ ಘಟನೆಗಳನ್ನು ಕಾಣಲು(ಭಾವಿಸಲು)ಸಾಧ್ಯವಿದೆಯೇ? ಆ ಬಗ್ಗೆ ಇನ್ನಷ್ಟು ಮಾಹಿತಿಗಳು ಬರಲಿ.

Anonymous said...

oh great!!!!!!!!!!!!!

-MALA

ಸುಪ್ತದೀಪ್ತಿ suptadeepti said...

@ಶ್ರೀತ್ರಿ: ಸಾಧ್ಯವಿದೆ ಅನ್ನುತ್ತಾರೆ ಡಾ. ವೈಸ್. ಅವರ ಐದು ಪುಸ್ತಕಗಳ ತುಂಬಾ ಇಂಥ ರೋಚಕ ಸಂಗತಿಗಳೇ ತುಂಬಿವೆ. ಆ ಕಾರ್ಯಾಗಾರದಲ್ಲೂ ನನಗಾದ ಅನುಭವಕ್ಕಿಂತ ಮಿಗಿಲಾದ ಅನುಭವ ಪಡೆದವರಿದ್ದಾರೆ, ಅವನ್ನೆಲ್ಲ ಅಲ್ಲೇ ಕೂತು ನೋಡಿ ನಾನೂ ನಿನ್ನಂತೆಯೇ ಸೋಜಿಗಪಟ್ಟುಕೊಂಡೆ. ಆದರೂ ನನ್ನದು ಕಲ್ಪನೆಯಲ್ಲ, ನಿಜವಾಗಿಯೂ ಒಂದಾನೊಂದು ಜನ್ಮದ ನೆನಪು ಅನ್ನುವ ಬಗ್ಗೆ ನನಗೇ ಇನ್ನೂ ಪೂರ್ಣವಾಗಿ ನಂಬಿಕೆ ಬಂದಿಲ್ಲ. `ವಿಚಿತ್ರ ಆದರೂ ನಿಜ' ಅನ್ನುವ ಸುದ್ದಿಗಳನ್ನು ಓದಿಯೂ ಸಂಶಯದ ಪರಿಧಿಯಲ್ಲಿ ಸುಳಿದಾಡುವ ಎಳೆಯರಂತೆ ಇದ್ದೇನೆ.

@ಮಾಲಾ: ಧನ್ಯವಾದಗಳು.... ಮತ್ತೇನು ಹೇಳಲಿ?

Anonymous said...

Human Mind is powerful enough to create and destroy its own needs and wants in its own way to establish it as a truth. This "FACT" is true only for the Mind (So called Mind) which experienced and expressed special feelings. Only "SUPTA"DEEPTHI can decide the degree of belief on these and not the intrepretation by the Dr.

ಸುಪ್ತದೀಪ್ತಿ suptadeepti said...

@ GK: ನಮಸ್ಕಾರ. ನಿಮ್ಮ ವಿವರಣೆ ಸರಿ... ನಮ್ಮ ಬಲ ಮೆದುಳಿಗೂ ಎಡ ಮೆದುಳಿಗೂ ಇರುವ ವ್ಯತ್ಯಾಸ ಇದೇ. ಅವೆರಡರ ಸಂದಿಗ್ಧದಲ್ಲಿ ನಾನು ಈಗ ಸಿಲುಕಿರುವುದು. ಒಂದು- `ನಡೆದುದೆಲ್ಲವೂ ಪೂರ್ವಸ್ಮೃತಿ, ಪೂರ್ಣ ಸತ್ಯ' ಅನ್ನುತ್ತಿದೆ; ಇನ್ನೊಂದು- `ಬರೀ ಕಟ್ಟುಕಥೆ, ನಿನ್ನ ಸಮಾಧಾನಕ್ಕೆ ನಿನ್ನ ಮನಸ್ಸು ಕಟ್ಟಿದ ಕಲ್ಪಿತ ಮಂದಿರ' ಅನ್ನುತ್ತಿದೆ. ಎರಡು ಧೋರಣೆಗಳೂ ನನ್ನವೇ! ಎರಡನ್ನೂ ಸ್ವೀಕರಿಸುವುದು ಕಷ್ಟ, ಅಷ್ಟೇ.

parijata said...

ಜೀನಾ ಸೆರ್ಮಿನಾರಾ ಅನ್ನುವವರು ಬರೆದ 'Many Mansions', ಸ್ವಾಮಿ ಜಗದಾತ್ಮಾನಂದರು ಬರೆದ 'ಬದುಕಲು ಕಲಿಯಿರಿ' ಎಂಬ ಪುಸ್ತಕಗಳನ್ನೂ, ಅಂತರ್ಜಾಲದಲ್ಲಿ, ಪತ್ರಿಕೆಗಳಲ್ಲಿ ಇಂಥದನ್ನು ಓದಿ "ಹೀಗೂ ನಡೆಯಬಹುದೇ?" ಎಂದು ಚಿಂತಿಸಿದ್ದೆ. ಮನಸ್ಸು ಒಪ್ಪಿಕೊಂಡಿತ್ತಾದರೂ ಬುದ್ಧಿ ಒಪ್ಪಿಕೊಳ್ಳಲು ಸ್ವಲ್ಪ ತಕರಾರು ಮಾಡುತ್ತಿತ್ತು. ನಿಮ್ಮ ಈ ಬರೆಹವನ್ನು ಓದಿದ ಮೇಲೆ ಮನಸ್ಸಿನದೇ ಮೇಲುಗೈಯಾಗಿದೆ :)

ಕೇಸೀ ಹೇಳುವ ಪ್ರಕಾರ ಹಿಂದಿನ ಜನ್ಮಗಳ ಸಂಬಂಧಗಳು - ಪ್ರೀತಿಯುತವಾಗಿರಲಿ ಅಥವಾ ದ್ವೇಷಯುತವಾಗಿರಲಿ, ಮುಂದಿನ ಜನ್ಮಗಳಲ್ಲಿಯೂ ಅದೇ ರೀತಿಯಲ್ಲಿ ವ್ಯಕ್ತವಾಗುತ್ತವೆ. ಒಮ್ಮೊಮ್ಮೆ ಕೆಲವು ವ್ಯಕ್ತಿಗಳನ್ನು ನೋಡಿದಾಕ್ಷಣ ನಮಗೆ ಉಂಟಾಗುವ ಭಾವನೆಗಳಿಗೆ ಪೂರ್ವಜನ್ಮಗಳ ಅನುಭವಗಳೇ ಕಾರಣ ಎಂದು ಅವರು ಹೇಳುತ್ತಾರೆ. ನಿಮ್ಮ ಅನುಭವದ ಬಗ್ಗೆ ಓದಿ ಇದು ನಿಜವಿರಬಹುದೆಂದು ಅನ್ನಿಸುತ್ತಿದೆ...

ಸುಪ್ತದೀಪ್ತಿ suptadeepti said...

@ ಪಾರಿಜಾತ: ನಿಮ್ಮ ಅನಿಸಿಕೆ ಸರಿ ಅನ್ನಿಸುತ್ತದೆ. ನನಗಾದ ಅನುಭವ ನನ್ನೊಬ್ಬಳದೇ ಅಲ್ಲ, ಇಂಥ ಸಾವಿರಾರು ಅನುಭವಗಳ ದಾಖಲೆಯಿದೆ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಡಾ. ವೈಸ್ ಇತರರಲ್ಲಿ.

ಹಿಂದೊಮ್ಮೆ ಮಾತಾಡುವಾಗ ನೀವು ಜೀನಾ ಅವರ ಪುಸ್ತಕದ ಬಗ್ಗೆ ತಿಳಿಸಿದ್ದಿರಿ, ಅದನ್ನು ಕೊಂಡಿದ್ದೇನೆ. ಓದಬೇಕಷ್ಟೇ. ಡಾ. ಕೇಸೀ ಅವರ ಪುಸ್ತಕವನ್ನೂ ಓದಬೇಕೆಂದಿದೆ. "ಬದುಕಲು ಕಲಿಯಿರಿ" ಪುಸ್ತಕವೂ ಭಾರತದಲ್ಲಿ ನಮ್ಮ ಮನೆಯ "ಜ್ಞಾನಕೋನ"ದಲ್ಲಿ ಇರಬೇಕು. ನಿಜ, ನಮ್ಮೆಲ್ಲ ಸಂಬಂಧಗಳು- ಸ್ನೇಹ, ಪ್ರೀತಿ, ದ್ವೇಷ, ಮರುಕ, ಆಸಕ್ತಿ... ಇತ್ಯಾದಿ ಬೇರೆ ಬೇರೆ ನೆಲೆಗಳಲ್ಲಿದ್ದರೂ- ಯಾವುದೋ ಜನ್ಮದ ಅನುಬಂಧದ ಮೇಲೆಯೇ ಈ ಜನ್ಮದಲ್ಲಿ ಮತ್ತೆ ಅಂಟಿಕೊಳ್ಳುತ್ತವೆ. ತೀರಾ ಹೊಸ ಸಂಬಂಧಗಳು ಹೊಸೆದುಕೊಳ್ಳಲಾರವೆಂದೇನೂ ಇಲ್ಲ, ಆದರೆ ಅವು ಅಪರೂಪ.

ಮನಸ್ವಿನಿ said...

ಅಬ್ಬ!! ಇನ್ನೇನೂ ಹೇಳಲಾರೆ.

ಸುಪ್ತದೀಪ್ತಿ suptadeepti said...

@ ಮನಸ್ವಿನಿ: ಧನ್ಯವಾದಗಳು... :)

sunaath said...

ಆಧುನಿಕ ಮನೋವಿಜ್ಞಾನಿಗಳಾದ ಫ್ರಾಯ್ಡ್ ಮೊದಲಾದವರು ಇಂತಹ ಘಟನೆಗಳನ್ನು ಪರೀಕ್ಷಿಸಿ,ತಾವು ಒಪ್ಪದಿದ್ದರೆ ಅದಕ್ಕೆ ಕಾರಣಗಳನ್ನು ನೀಡುತ್ತಿದ್ದರು. ಆದರೆ ಆಧುನಿಕ ಮನೋವಿಜ್ಞಾನಿಗಳಿಗೆ "ಯೋಗ ಮನೋವಿಜ್ಞಾನ"ದ ಅರಿವಿಲ್ಲ.
It is possible to travel back in time and space ಅಂತ ನನಗೆ ಅನಿಸುತ್ತದೆ. ನಿಮ್ಮ ಅನುಭವ stunning ಎಂದಷ್ಟೇ ಹೇಳಬಲ್ಲೆ.

ಸುಪ್ತದೀಪ್ತಿ suptadeepti said...

ಸುಧೀಂದ್ರ, ನಮಸ್ಕಾರ.
ಡಾ. ಬ್ರಯಾನ್ ವೈಸ್ ಆಧುನಿಕ ಮನೋವಿಜ್ಞಾನಿಯಾಗಿ ತರಬೇತಿ ಪಡೆದವರು, ಅಕಸ್ಮಾತ್ತಾಗಿ ಈ ದಾರಿಯನ್ನು ಹಿಡಿದರು, ಮುಂದುವರೆದರು. ಇಂಥ ಅನುಭವಗಳು ಮನಸ್ಸನ್ನು ಮೀರಿದ್ದು, ಆತ್ಮದ ನೆನಪಿನ ತುಣುಕುಗಳು ಅನ್ನುವುದು ಅವರ ಅಭಿಪ್ರಾಯ, ಅದಕ್ಕೆ ಸಾಕಷ್ಟು ಪುರಾವೆಗಳನ್ನೂ ಅವರು ಒದಗಿಸಿತ್ತಾರೆ. ಯೋಗ-ವಿಜ್ಞಾನದ ಬಗ್ಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇಲ್ಲದಿದ್ದರೂ ಅದನ್ನು ಗೌರವದಿಂದ ಕಾಣುತ್ತಾರೆ, ಅದರೆ ಬಗ್ಗೆ ಆದರ ತೋರುತ್ತಾರೆ. "ಭಾರತೀಯ ಧರ್ಮ ಶಾಸ್ತ್ರದಲ್ಲಿ ಇವೆಲ್ಲ ಬಹಳ ಗಂಭೀರವಾಗಿ, ಗಹನವಾಗಿ, ನಿತ್ಯವಾಗಿ ಇರುವ ವಿಷಯಗಳು" ಎಂದು ವಿನಮ್ರವಾಗಿ ನುಡಿಯುತ್ತಾರೆ. ಅವನ್ನು ತಿಳಿಯುವ ಕುತೂಹಲ ಅವರಿಗಿದೆ. ಆದರೆ, ಅವರಿಗೆ ತಿಳಿಸುವಷ್ಟು ಜ್ಞಾನ ನಮಗಿಲ್ಲವಲ್ಲ.

Harisha - ಹರೀಶ said...

ಅದ್ಭುತವಾಗಿದೆ. ಮನಸ್ಸು ಹಿಂದೆ ನೋಡಿರದ ಎಷ್ಟೋ ವಿಷಯಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ನಿಮ್ಮ ಅನುಭವವೇ ಸಾಕ್ಷಿ.

ಸುಪ್ತದೀಪ್ತಿ suptadeepti said...

ಹರೀಶ್, ಇಲ್ಲಿ ಕಲ್ಪನೆ ಗೌಣ. ಇವೆಲ್ಲ "ಆತ್ಮದ ನೆನಪಿನ ತುಣುಕುಗಳು" ಅನ್ನುವುದು ಡಾ. ವೈಸ್ ಅವರ ಅಭಿಪ್ರಾಯ. ನನಗಂತೂ ಆಗಿದ್ದು ಅನುಭೂತಿ; ಅನುಭವವನ್ನೂ ಮೀರಿದ್ದು.

Anonymous said...

ಓದಿರಲಿಲ್ಲ. ಈಗ ಓದಿದೆ.
ಆತ್ನಗಳ ಬಗ್ಗೆ ಆಸಕ್ತಿ ಹುಟ್ಟುತ್ತಿದೆ. ಆತ್ಮಸಂಗಾತಕ್ಕೆ ಆನುಂಟು ಎಂದು ಯಾವುದಾದರೂ ಆಥ್ಮ ಹೇಳಿದರೆ ಸಂತೋಷ
ಜೋಗಿ

ಸುಪ್ತದೀಪ್ತಿ suptadeepti said...

ನಮಸ್ಕಾರ ಜೋಗಿ, `ಆತ್ಮ ಸಂಗಾತಕ್ಕೆ ಆನುಂಟು' ಅನ್ನುವ ಹಿನ್ನೆಲೆಯನ್ನೇ ಮುಖ್ಯವಾಗಿಸಿ ಡಾ. ವೈಸ್ ಬರೆದ ಪುಸ್ತಕವೇ "Only Love Is Real". ಅದನ್ನು ನಾನಿನ್ನೂ ಓದಿಲ್ಲ; ಅದರ ತುಂಬ ಆತ್ಮ-ಸಂಗಾತಿಗಳ ಪುನರ್ಮಿಲನಗಳ ವಿವರಗಳೇ ತುಂಬಿವೆಯಂತೆ... ಓದಬೇಕು.

Sheela Nayak said...

ಪ್ರಿಯ ಸುಪ್ತದೀಪ್ತಿಯವರೇ,
ಖಂಡಿತವಾಗಿಯೂ ನಿಮ್ಮ ಅನುಭವ ಸುಳ್ಳಲ್ಲ... ನಿಮ್ಮ ಅನುಭವ ನೋಡಿ ನನಗಾದ ಅನೇಕ ಅಲೌಕಿಕ ಅನುಭವಗಳಲ್ಲಿ ಒಂದನ್ನು ಹಂಚೋಣ ಎಂದನಿಸುತಿದೆ..ನಾನು ಶಾಲೆ, ಕಾಲೇಜು ದಿನಗಳಲ್ಲಿ ಹುಡುಗರೊಡನೆ ಮಾತಾಡಲು ಬಹಳ ಸಂಕೋಚ ಪಡುತ್ತಿದ್ದೆ. ಆದರೆ ನನ್ನನ್ನು ನೋಡಲು ಬಂದ ನನ್ನ ಭಾವಿ ಪತಿಯೊಡನೆ ನನಗೆ ಮಾತಾಡಲು ಯಾವುದೇ ಸಂಕೋಚವಾಗಲಿಲ್ಲ.೧೭ ವರ್ಷದ ಹಿಂದೆ ಆ ಘಟನೆ ನಡೆದಾಗ ನನಗೆ ನನ್ನ ನಡವಳಿಕೆಯ ಬಗ್ಗೆ ಆಶ್ಚ್ರ್ಯವಾಗಿತ್ತು. ಈ ಹಿಂದೆ ನಾನು ಅವರನ್ನು ಎಲ್ಲಿಯೂ ನೋಡಿರಲಿಲ್ಲ. ಆದರೂ ನನ್ನ ಮನಸ್ಸಿಗೆ ಅವರು ನನಗೆ ಬಹಳ ಪರಿಚಿತರೇ ಎಂದು ಅನಿಸಿತ್ತು. ಇದೇ ಭಾವನೆ ಮಾತ್ರ ಅವರ ಮನೆಯವರನ್ನು ನೋಡಿ ಆಗಿರಲಿಲ್ಲ. ಈ ಪ್ರಶ್ನೆ ನನ್ನನ್ನು ಮದುವೆಯಾದ ೬,೭ ವರ್ಷಗಳ ತನಕ ಕಾಡಿಸಿತ್ತು.
ನನ್ನ ತಾಯಿ ಯಾವಾಗಲೂ ಹೇಳುತ್ತಿದ್ದರು..... ಸಂಬಂಧಗಳು ಪೂರ್ವ ಜನ್ಮದ ಋಣದಿಂದ ಆಗುತ್ತದೆ. ಅಲ್ಲದೆ ಕೆಲವೊಮ್ಮೆ ನಾವು ಮಾರ್ಗ ಅಥವಾ ಟಿ.ವಿಯಲ್ಲಿ , ಅಷ್ಟೇ ಯಾಕೆ ಹೀಗೆ ಬ್ಲಾಗ್ ಜಾಲಾಡಿಸುವಾಗ ಅಕಸ್ಮಾತ್ತಾಗಿ ಓದಲು ಸಿಗುವ ಬ್ಲಾಗ್ ಲೇಖಕರು ನಮಗೆ ಬಹಳ ಪರಿಚಿತರಂತೆ ಭಾವನೆ ಹುಟ್ಟುತ್ತದೆಯಲ್ಲವೇ? ನಮ್ಮ ಭಾರತೀಯರ ನಂಬಿಕೆಯಂತೆ ಪುನರ್ಜನ್ಮವೆಂಬುದು ಇದೆ ಎಂದು ಇದರಿಂದ ನಿರೂಪಿತವಾಗುತ್ತದೆಯಲ್ಲವೇ? ಈ ಪುನರ್ಜನ್ಮದ ಬಗ್ಗೆ ಅನೇಕ ಪತ್ರಿಕೆಗಳು ಜನರ ಅನುಭವಗಳ ಬಗ್ಗೆ ಲೇಖನಗಳನ್ನು ಬರೆದಿವೆ... ಆದರೆ ಅದರಲ್ಲಿ ಸ್ವಲ್ಪ ಮಟ್ಟದಲ್ಲಿ ವೈಪರೀತ್ಯ ಇರುವುದನ್ನು ನಾವು ಕಾಣಬಹುದು... (ಪತ್ರಿಕೆಗಳ ಮಾರಾಟ ಅವರ ಮುಖ್ಯ ಧ್ಯೇಯ, ಅಲ್ಲದೆ ಜನರಿಗೆ ಯಾವಾಗಲೂ ಯಾವುದೇ ವಿಷಯವಿರಲಿ.. ಅದು ರಾಗ ರಂಜಿತವಾಗಿರಬೇಕು)
ಇಂತಹ ಅನುಭೂತಿ ಹೆಚ್ಚಿನವರಿಗೂ ಆಗಿರಬಹುದು.
ಭಾರತದಲ್ಲಿ ನಾವೆಲ್ಲಾ ನಮ್ಮ ಜನ್ಮಾಂತರದ ಸಂಬಂಧಗಳನ್ನು
( ಈಗಿನ ಯುವಜನಾಂಗ) ಮೂಡ ನಂಬಿಕೆಯೆಂದು ತಿರಸ್ಕಾರ ಮಾಡುತ್ತಿರಲು ಪ್ರಾರಂಭಿಸುತ್ತಿರುವಾಗೆ ಪಾಶ್ಚಿಮಾತ್ಯರರು ಈ ಬಗ್ಗೆ ಹೊಸ ಸಂಶೋಧನೆ ಪ್ರಾರಂಭಿಸಿರುವುದು ನಿಜಕ್ಕೂ ಸ್ವಾಗತಾರ್ಹ!
ಇನ್ನೊಂದು ಮಾತು, ದಯವಿಟ್ಟು ನೀವು ನಿಮ್ಮ ಚೀನಾದ ಹೆಣದ ಮದುವೆಯ ಬ್ಲಾಗ್ ಗೂ ನಾನು ಪ್ರತಿಕ್ರಿಯೆ ಬರೆದುದನ್ನು ಗಮನಿಸಿ.

ಸುಪ್ತದೀಪ್ತಿ suptadeepti said...

@KSNayak20: ನಮಸ್ಕಾರ, ನನ್ನ ಅಕ್ಷರಲೋಕಕ್ಕೆ ಸ್ವಾಗತ. ನಿಮ್ಮ ಯಾವ ಅನಿಸಿಕೆಗಳಿಗೂ ಸ್ವಾಗತವಿದೆ... ಬಂದಿದ್ದಕ್ಕೆ, ಓದಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

Shiv said...

ಸುಪ್ತದೀಪ್ತಿಯವರೇ,

ನಂಬಲು ತುಂಬಾ ಕಷ್ಟಪಡುತ್ತಿದ್ದೇನೆ..ಆದರೆ ನೀವು ಇಷ್ಟು ಸ್ಪಷ್ಟವಾಗಿ ಹೇಳುತ್ತಿರುವುದು ನೋಡಿ ನಂಬಲೇಬೇಕಾಗಿದೆ..
ವಿಸ್ಮಯಕಾರಿ ಜಗತ್ತು !

ಸುಪ್ತದೀಪ್ತಿ suptadeepti said...

ನಮಸ್ಕಾರ ಶಿವ್, ಮೊದ-ಮೊದಲು ನಂಬಲು ನನಗೂ ಕಷ್ಟವಾಗಿತ್ತು. "ಭ್ರಮೆಯೇ ಇದು?!" ಅನ್ನುವ ಪರಾಮರ್ಶೆಯಲ್ಲಿದ್ದೆ. ಈಗೀಗ ನಂಬಿಕೆ ಮೂಡಿದೆ. ಇನ್ನೊಮ್ಮೆ "ರೆಗ್ರೆಷನ್"ಗೆ ಒಳಗಾಗುವ ಆಸೆ ಮೂಡುತ್ತಿದೆ, ಏನನ್ನು ಕಂಡುಕೊಳ್ಳುವೆನೋ ಅನ್ನುವ ಗಾಬರಿಯೂ ಜೊತೆಗಿದೆ, ಅನ್ನಿ.

Anonymous said...

I assume this is the same Dr. Brian Vies who is the author of "Many Lives, Many Masters". I have been planning to read that book for some time now, but have been postponing it forever. I thought he lived in Florida, didn't know he moved to Austin.

From what I knew, he talked about his patient Catherine and how wonderfully the patient got cured after she "got into" her previous births. Your narration seems to match a similar approach.

Considering that I am a third person, it is quite hard to believe. Moreso since you question it yourself.

I do agree and understand that mind is extremely complex. But, Dr. Vies' experiments (if I can call that) makes us believe that it is very easy to travle through births. With that argument, I assume it is very easy to get hold of God as well.

I do agree that what you experienced must be something wonderful and divine. But, we can never validate the authenticity of it all and thus we come back to square one.

I also know that Dr. Vies is a profound believer in a school of thought that says thatw e keep meeting the same people in every birth. So, my mother in this birth could be my daughter in the next birth, but will be somewhere around. Were you aware of this hypothesis of Dr. Vies? The reason I am asking is, if you were aware, then you 'may' have been prejudiced to think on those lines.

Doesn't he also say that the soul keeps dividing (or multiplying, however you want to call) and that explains the population increase?

There are a lot of things which we cannot understand or have answers to. I certainly won't dismiss them. So, I agree that what you went through must be something amazing and certainly something different. But, at the same time, since I don't know the answers, I question them.

In the end, what matters is if the whole experience helped you in any way. Take the silver lining and absorb it for your benefit.

Very well narrated!!!

ಸಮಾಧಿ ಸ್ಥಿತಿಯಲ್ಲಿ ಜಗವನ್ನೇ ಗೆಲ್ಲಬಹುದೇನೋ. ಆದರೆ ಅಂತಹ ಸ್ಥಿತಿಯನ್ನು ಅಪ್ಪುವುದು ಸುಲಭದ ಕೆಲಸವಲ್ಲ. ಋಷಿ ಮೂಲ, ನದಿ ಮೂಲದ ಜೊತೆಗೆ ಆತ್ಮದ ಮೂಲ ಕೂಡ....