ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday 18 July, 2007

ಆತ್ಮ ಚಿಂತನ-೦೪

ಪಕ್ಕದೂರಿಗೆ ಹೋಗಿದ್ದ ನಾನು ಹಿಂತಿರುಗುತ್ತಾ ರೇಡಿಯೋ ಕೇಳುತ್ತಿದ್ದೆ. ಅಲ್ಲಿ ಅಮೆರಿಕನ್-ಚೈನೀಸ್ ಲೇಖಕಿಯ ಪರಿಚಯ-ಸಂವಾದ ನಡೆಯುತ್ತಿತ್ತು. ಅವಳು ತನ್ನ ಕಾದಂಬರಿಗಳ ಬಗ್ಗೆ ಹೇಳುತ್ತಾ, ತನ್ನ ಸಂಸ್ಕೃತಿಯಲ್ಲಿ ಆತ್ಮಗಳ ಬಗೆಗಿರುವ ನಂಬಿಕೆ ಆಚಾರಗಳನ್ನು ಇಷ್ಟಿಷ್ಟು ತಿಳಿಸಿದಳು. ನನಗೊಂದಿಷ್ಟು ಅಚ್ಚರಿಯಾದರೂ, "ಆತ್ಮ ಚಿಂತನ"ದ ಹೆಸರಲ್ಲೇ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಇಚ್ಛೆಯೂ ಆಯಿತು... ಪರಿಣಾಮ ಇಲ್ಲಿದೆ:

ಚೀನಾದ ಸಂಸ್ಕೃತಿಯಲ್ಲಿ ವ್ಯಕ್ತಿ ತೀರಿಕೊಂಡ ಮೇಲೆ ಆತ್ಮವು ೩ (ಮೂರು) ಪಾಲಾಗುತ್ತದೆ; ಒಂದು ಪಾಲು ದೇಹದ ಜೊತೆಗೆ ಗೋರಿಗೆ, ಇನ್ನೊಂದು ಪಾಲು "ಹಿರಿಯರ ಜಾಗ"ದಲ್ಲಿ ತನಗಾಗಿ ಇರಿಸಿದ ಪುಟ್ಟ ಮರದ ಪೆಟ್ಟಿಗೆಗೆ, ಮತ್ತು ಮಗದೊಂದು ಪಾಲು ಪರಲೋಕಕ್ಕೆ- ಹೋಗುತ್ತದೆ. "ಹಿರಿಯರ ಜಾಗ"ದಲ್ಲಿ ಉಳಿಯುವ ಪಾಲು ತನ್ನ ಮನೆತನಸ್ಥರ ಮೇಲೆ ಕಾವಲು ಕಣ್ಣು ಇಡುತ್ತದೆ, ಯಾ ತೊಂದರೆ ಕೊಡುತ್ತದೆ (ತೀರಿಕೊಂಡ ವ್ಯಕ್ತಿಯ ವೈಯಕ್ತಿಕ ಸ್ವಭಾವಕ್ಕೆ ಅನುಗುಣವಾಗಿ) ಅನ್ನುವುದು ಅವರ ನಂಬಿಕೆ.

ವಾರ್ಷಿಕವಾಗಿ ಹಿರಿಯರ ದಿನ ಆಚರಿಸುವಾಗ, ಅವರೆಲ್ಲರೂ ದೈಹಿಕವಾಗಿ ಬದುಕಿದ್ದಿದ್ದರೆ ಬೇಕಾಗಿದ್ದಿರಬಹುದಾದ ವಸ್ತುಗಳನ್ನು (ಬಟ್ಟೆ-ಬರೆ, ಊಟೋಪಚಾರಗಳಿಂದ ಹಿಡಿದು, ಕಂಪ್ಯೂಟರ್, ಐ-ಪಾಡ್, ಸೆಲ್-ಫೋನುಗಳ ವರೆಗೆ) ಕಾಗದಗಳಲ್ಲಿ ಮಾಡಿ ಅವರಿಗೆ ಅರ್ಪಿಸಿ, ನಂತರ ಬೆಂಕಿಯ ಮೂಲಕ ಹಿರಿಯರ ಆತ್ಮಗಳಿಗೆ ತಲುಪಿಸುವ ಸಂಪ್ರದಾಯವಿದೆ. ತೀರಿಕೊಂಡವರನ್ನು ಈ ರೀತಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ಮನೆಯವರಿಗೆ ಇರುತ್ತದೆ. ಈ ಜವಾಬ್ದಾರಿ ಎಲ್ಲಿಯವರೆಗಿದೆ ಅಂದರೆ, ಒಂದು ಮನೆಯ ಮಗ/ಮಗಳು ಮದುವೆಯಾಗಿಲ್ಲದೇ ತೀರಿಹೋದರೆ, ಅಂಥವರಿಗೆ "ಸರಿಯಾಗಿ" (ಅದರ ಅರ್ಥ ಆ ಲೇಖಕಿ ವಿವರಿಸಲಿಲ್ಲ) ಅಂತ್ಯಕ್ರಿಯೆ ಮಾಡದೇ, ಅವರು ಪ್ರಾಪ್ತ ವಯಸ್ಕರಾದಾಗ ಅವರಿಗೂ "ಮದುವೆ" ಮಾಡುವ ಕ್ರಮ ಇದೆ. ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಡುವುದೇ ಹೆಣ್ಣುಹೆತ್ತವರ ದೊಡ್ಡ ಜವಾಬ್ದಾರಿ. ಆದರೆ, ಈ ಸತ್ತುಹೋಗಿರುವ ಮಗಳನ್ನು ಯಾರೂ ಮದುವೆಯಾಗಲಾರರು. ಅದಕ್ಕಾಗಿ ಒಮ್ಮೊಮ್ಮೆ, ಹಣ ತುಂಬಿದ ಥೈಲಿಯನ್ನು ಬೀದಿಗೆ ಎಸೆದು ಯಾರಾದರೂ ಅದನ್ನು ಎತ್ತಿಕೊಳ್ಳುತ್ತಾರೇನೋ ಅಂತ ಕಾಯುತ್ತಿರುತ್ತಾರೆ. ಹಾಗೆ ಯಾರಾದರೂ ಎತ್ತಿಕೊಂಡರೆ (ಗಂಡಸರೇ ಎತ್ತಿಕೊಳ್ಳುತ್ತಾರೆ ಅನ್ನುವ ಭ್ರಮಾಧೀನ ನಂಬಿಕೆ ಇಲ್ಲಿ ಕೆಲಸ ಮಾಡುವುದನ್ನು ಕಾಣುತ್ತೇವೆ) ಕೂಡಲೇ ಹೋಗಿ ಅವರನ್ನು "ತಮ್ಮ ಮಗಳ ವಧುದಕ್ಷಿಣೆಯನ್ನು ಸ್ವೀಕರಿಸಿದ್ದಕ್ಕೆ" ಅಭಿನಂದಿಸುತ್ತಾರೆ! (ಇದನ್ನು ಮಾತ್ರ ಹೇಳಿದ ಲೇಖಕಿ, ತೀರಿಕೊಂಡ ಗಂಡಿನ ಮದುವೆಯನ್ನು ಅವನ ಮನೆಯವರು ಹೇಗೆ ಮಾಡುತ್ತಾರೆ ಅನ್ನುವುದನ್ನು ತಿಳಿಸಲಿಲ್ಲ.)

ಇವಲ್ಲದೆ, ನಮ್ಮ ಹಿಂದಿನ ಕಾಲದ ಭಾರತೀಯ ಸಮಾಜದಲ್ಲಿ ಬಹುಮಟ್ಟಿಗೆ ಇದ್ದಂತೆಯೇ ಸಂಪ್ರದಾಯಸ್ಥ ಚೀನಾದಲ್ಲಿಯೂ ವಿದ್ಯಾವಂತ ಮಹಿಳೆಯರು ಕಡಿಮೆ. ಇದ್ದರೂ, ಅವರೆಲ್ಲ ಮುಂದೆ ತಮ್ಮ ಕುಲೋದ್ಧಾರಕ ಮಗಂದಿರನ್ನು ವಿದ್ಯಾವಂತರನ್ನಾಗಿ ಮಾಡುವ ಒಂದೇ ಉದ್ದೇಶದಿಂದ ವಿದ್ಯೆ ಕಲಿತಿರುತ್ತಾರೆ. ಮಗಳು ಹುಟ್ಟುತ್ತಲೇ ಪರರಿಗಾಗಿಯೇ ಇರುವವಳು ಅನ್ನುವ ಸಂಪ್ರದಾಯ ಬದ್ಧ ನಂಬಿಕೆಯಿದೆ. ಅವಳನ್ನು ಮದುವೆ ಮಾಡಿ ಇನ್ನೊಂದು ಮನೆಗೆ ಕಳಿಸಿಕೊಡಲೆಂದೇ ಹೆತ್ತವರು ಅವಳನ್ನು ಬೆಳೆಸುತ್ತಾರೆ. ಗಂಡನ ಮನೆಯಲ್ಲಿ ಅತ್ತೆಯದೇ ರಾಜ್ಯಭಾರವಾದರೆ ಈ ಹುಡುಗಿಯನ್ನು ಕೇಳುವವರೇ ಇಲ್ಲ. ಅಲ್ಲಿ ಅವಳ ಜವಾಬ್ದಾರಿ ಹಿರಿದು. ಗಂಡ ಮತ್ತವನ ಮನೆಯವರಿಗೆ ಊಟ ನೀಡುವ ಹೊಣೆಗಾರಿಕೆ ಈಕೆಯದು. ಏನೂ ಸಿಗದ ಬಡತನವಿದ್ದರೆ, ಇವಳು ತನ್ನ ಮೈಯ ಮಾಂಸವನ್ನೇ ಕತ್ತರಿಸಿಯಾದರೂ ಅವರಿಗೆ ಅಡುಗೆ ಮಾಡಿ ಬಡಿಸಬೇಕು ಅನ್ನುವಂಥ ನಿರೀಕ್ಷೆ ಆ ಮನೆಯವರಲ್ಲಿರುತ್ತದೆ. ಹೆಣ್ಣು ಹೆತ್ತವರು ಅವಳನ್ನು ಹಾಗೆಯೇ "ಬೌದ್ಧಿಕವಾಗಿ ತಯಾರು" ಮಾಡಿರುತ್ತಾರೆ.

"ಅಬ್ಬಬ್ಬಾ" ಅನಿಸಿತೇ? ಇವತ್ತಿಗೆ ಇಷ್ಟು ಸಾಕು. ಇದನ್ನೆಲ್ಲ ಅರಗಿಸಿಕೊಳ್ಳಿ. ಮುಂದೆ ನೋಡೋಣ, ಮೆದುಳಿಗೆ ಏನು ಆಹಾರ ಸಿಗುವುದೆಂದು.

Published from a Cyber-Center in Karkala, India.

8 comments:

Shrilatha Puthi said...

ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡವರಿಗೆ ’ಪ್ರೇತ ಮದುವೆ’ ಮಾಡುವ ಕ್ರಮ ದ.ಕ.ದ ಕೆಲವು ಸಮುದಾಯಗಳಲ್ಲಿ ಇದೆ (ಈಗ ಇಂತ ಆಚರಣೆಗಳು ಕಡಿಮೆಯಾಗಿರಬಹುದು). ಆದರೆ ಇಲ್ಲಿ ಸತ್ತ ಗಂಡು ಮತ್ತು ಹೆಣ್ಣನ್ನು ಗುರುತಿಸಿ, ನಿಜವಾಗಿ ಸಂಬಂಧ ಕೂಡಿಸುವಂತೆಯೇ ಎರಡು ಮನೆಗಳವರು ಮಾತಾಡಿ ಮದುವೆ ಮಾಡುತ್ತಾರಂತೆ!

ಸುಪ್ತದೀಪ್ತಿ suptadeepti said...

nija, namma da.ka. jilleyalli prEta maduve maaDuva saMpradaaya ide. adara baggeyE muMdina "aatma chiMtana" lEKana ardhaMbarda barediTTiddEne.... vivaragaLannu saMgrahisi illE prakaTisuttEne.

(ee kaMpyUTarinalli baraha IME illa, aaddariMda ee lipi... Odugara kShame irali.)

Jagali bhaagavata said...

ಅಲ್ಲಿ ಊರು ಸುತ್ತೋದು ಬಿಟ್ಟು, ಯಾವ್ದೋ ಸೈಬರ್ ಕಫೆ ಮುಂದೆ ಕೂತು ಆತ್ಮಚಿಂತನ ಮಾಡ್ತಿದೀರಾ???

ನಾವು ನಿಮಗೆ ಹೇಳಿದ ಕೆಲಸವನ್ನ ಮರೀಬೇಡಿ, ಆಯ್ತಾ?:-))

Anonymous said...

ಯಾವುದೋ ಕಾರಣದಿಂದ ಮದುವೆಯೇ ಬೇಡ ಎಂದು ನಿರ್ಧರಿಸಿ ಜುಗುಪ್ಸೆಯಿಂದ ಸತ್ತು ಹೋದವರನ್ನೂ ಬಿಡದೆ ಮತ್ತೆ ಮದುವೆ ಮಾಡಿಸುವುದು ಎಂಥಾ ’ಪೈಶಾಚಿಕ’ ಕೃತ್ಯ!!

Anonymous said...

Hey, are you in Karkala? When are you coming to Bangalore?
- SHREE

ಸುಪ್ತದೀಪ್ತಿ suptadeepti said...

Thanks everyone for your comments.

Yes, I'm in and around Karkala, Mangalore.

BaagavatarE, nimma kelasada kaDe gamana ide, innU sariyAda guri sikkilla.

Sritri, yAvudO kAraNadiMda ee prapaMca biTTavarigU innU illina UTa, baTTe-bare koDuva hAgE maduveyannU mADisuttAre. idaralli paiSAcikate elli baMtu?

Sheela Nayak said...

ಪ್ರಿಯ ಸುಪ್ತದೀಪ್ತಿಯವರೇ,

ಹಿಂದೆ ತರಂಗದಲ್ಲಿ ಈ ವಿಷಯದ( ಚೀನಾದಲ್ಲಿಮದುವೆಯಾಗದೇ ಸತ್ತವರ ಮದುವೆ) ಬಗ್ಗೆ ಒಂದು ಲೇಖನವನ್ನು ಓದಿದ್ದೆ. ಮದುವೆಯಾಗದೇ ಸತ್ತ ತಮ್ಮಮಗನಿಗೆ ಮದುವೆ ಮಾಡಲು ಆಗ ತಾನೆ ಸತ್ತ ಹುಡುಗಿಯ ಶರೀರಕ್ಕೆ ನಮ್ಮಲ್ಲಿ ವರದಕ್ಷಿಣೆ ಕೊಡುವಂತೆ ಭಾರಿ ಹಣ ಪಾವತಿಸಿ, ಹೆಣಗಳಿಗೆ ಮದುವೆ ಮಾಡುತ್ತಾರೆಂದು ಅದರಲ್ಲಿ ವಿವರಿಸಲಾಗಿತ್ತು.(ನೀವು ಬರೆದ ಪ್ರೇತದ ಮದುವೆಯ ತರಹ--- ಈ ಲೇಖನವನ್ನು ನಾನು ಓದಿದ್ದೆ) ಮನೆಯಲ್ಲಿ ಸತ್ತ ಮಗನ ಕಳೇಬರ ಇಟ್ಟುಕೊಂಡು ಆಗ ತಾನೆ ಸತ್ತ ಹೆಣ್ಣ ಹೆಣಕ್ಕಾಗಿ ಹುಡುಕಾಟ..... ಈ ರೀತಿ ಸತ್ತ ವರಿಗೆ ಭಾರಿ ಬೇಡಿಕೆ ಇರುವುದು, ಅಲ್ಲದೆ ಸತ್ತ ಶರೀರಗಳ ಮೂಲಕ ಕಾಸು ಮಾಡಿಕೊಳ್ಳುವುದು.....
ಹಾಗೆ ನೋಡಿದರೆ ನಮ್ಮಲ್ಲಿರುವ ಕೆಲವೊಂದು ರಿವಾಜುಗಳಿಗಗೂ, ಚೀನದವರು ಅನುಸರಿಸುತ್ತಿರುವ ನಂಬಿಕೆಗಳಿಗೂ ಸ್ವಲ್ಪ ಹೋಲಿಕೆಯಿದೆಯಲ್ಲವೇ?
ಯಾವುದೇ ನಂಬಿಕೆಯನ್ನು ಅರ್ಥವಿಲ್ಲದೆ ಆಚರಿಸಿದರೆ ಅದನ್ನು ಮೂಡನಂಬಿಕೆಯೆಂದು ಹೇಳಬಹುದೇ ಹೊರತು ಎಲ್ಲವನ್ನಲ್ಲ.... ತಾತ ಆಲದ ಮರಕ್ಕೆ ನೇಣುಹಾಕಿ ಸತ್ತನೆಂದು ಮಗ, ಮೊಮ್ಮಗನು ಹಾಗೆ ಮಾಡುವುದಲ್ಲ. ಒಟ್ಟಾರೆ ಈ ವಿಷಯವು ನಿಗೂಡವಾದದ್ದು, ಎಷ್ಟು ಅಭ್ಯಾಸ ಮಾಡಿದರೂ ಮತ್ತು ಮತ್ತು ಹೊಸ ಹೊಸ ವಿಷಯದ ಅರಿವಾಗುವುದು.( ಇದಕ್ಕೇ ಹೇಳುವುದು ಪರಮಾತ್ಮನ ಈ ಸೃಷ್ಟಿ ಒಂದು ರಹಸ್ಯ. ಇದರ ಆಳ ಎತ್ತರ ಹುಡುಕಾಡಿದಷ್ಟು ಅನಂತವಾಗುವುದು, ನಿಗೂಡವಾಗುವುದು)

ಸುಪ್ತದೀಪ್ತಿ suptadeepti said...

@KSNayak20: ಸ್ವಾಗತ, ಮತ್ತೊಮ್ಮೆ. ಧನ್ಯವಾದಗಳೂ ಕೂಡಾ.

ತರಂಗದ ಆ ಲೇಖನ ಓದಿದೆ. ಅದನ್ನೂ ಇಲ್ಲಿ ಕೊಡುವ ಯೋಚನೆಯಿದೆ... ಅದಕ್ಕೆ "ಮಿಂಘಮ್" ಅನ್ನುವ ಹೆಸರಿದೆ. ಸಾಧ್ಯವಾದರೆ, ಯಾವುದಾದರೂ ಚೀನೀಯರ ಬಳಿಯೇ ವಿಚಾರಿಸಿ ಇನ್ನಷ್ಟು ಮಾಹಿತಿ ತಿಳಿಯುವ ಕುತೂಹಲವೂ ಇದೆ, ನೋಡೋಣ.