ಹಿಪ್ನೋಥೆರಪಿ-ಭಾಗ-೦೫
ಹಿಪ್ನೋಥೆರಪಿಯಲ್ಲಿ ರಿಗ್ರೆಷನ್
ಸಂದೇಹಗಳು ಮತ್ತು ಸಾಧ್ಯತೆಗಳು - ೦೧
ಸಂದೇಹಗಳು ಮತ್ತು ಸಾಧ್ಯತೆಗಳು - ೦೧
ಈ ಕಂತಿನಲ್ಲಿ ಕೆಲವೊಂದು ಪ್ರಶ್ನೋತ್ತರಗಳನ್ನು ನೋಡೋಣ.
ನನ್ನ ಬ್ಲಾಗ್ ಬರಹಗಳಲ್ಲಿ ರಿಗ್ರೆಷನ್ ಬಗ್ಗೆ ಬರೆದಾಗ ಓದುಗರು, ಸ್ನೇಹಿತರು ಕೇಳಿದ ಸಂದೇಹಗಳಲ್ಲಿ ಎರಡನ್ನು ಇಲ್ಲಿ ಪ್ರಸ್ತುತಪಡಿಸುತ್ತೇನೆ (ಮುಂದಿನ ಕಂತುಗಳಲ್ಲಿ ಇನ್ನೂ ಕೆಲವು ಪ್ರಶ್ನೆಗಳನ್ನು ನೋಡಬಹುದು):
ಸಂದೇಹ-೦೧: ಸಮ್ಮೋಹನದಲ್ಲಿದ್ದಾಗ ವ್ಯಕ್ತಿ ಪೂರ್ವಸ್ಮೃತಿಯನ್ನು ತಂದುಕೊಳ್ಳುವುದು ಹೇಗೆ ಸಾಧ್ಯವಾಗುತ್ತದೆ?
ಸಂದೇಹ-೦೨: ಹಿಪ್ನೋಸಿಸ್ ಥೆರಪಿ, ಅಥವಾ ಪಾಸ್ಟ್ ಲೈಫ್ ರಿಗ್ರೆಷನ್‌ಗಳಿಂದ ತಂದುಕೊಳ್ಳುವ ಹಳೆಯ ಘಟನೆಗಳ ನೆನಪುಗಳು... ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳನ್ನು ನಿವಾರಿಸಲು ಯಾವ ರೀತಿಯಲ್ಲಿ ಕಾರಣವಾಗುತ್ತವೆ?
ಉತ್ತರ: ಇವೆರಡೂ ಪ್ರಶ್ನೆಗಳು ಒಂದಕ್ಕೊಂದು ಪೂರಕವಾದ್ದರಿಂದ ಒಟ್ಟಿಗೇ ಉತ್ತರಿಸುವ ಪ್ರಯತ್ನ ಮಾಡುತ್ತೇನೆ.
ಮೊದಲ ಪ್ರಶ್ನೆಗೆ ಪೂರ್ವಭಾವಿ ಉತ್ತರವಾಗಿ ಸ್ಮೃತಿ/ನೆನಪು ಅಂದರೆ ಏನು, ಎಲ್ಲಿರುತ್ತದೆ, ಹೇಗೆ "ನೆನಪು" ಆಗುತ್ತದೆ, ಎಂಬ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಯುವುದಗತ್ಯ.
ಥಿಯರಿ ಆಫ಼್ ಮೈಂಡ್:
ನಮ್ಮ ಆಗಿಂದಾಗಿನ ನೆನಪುಗಳು ಸುಮಾರು ಇಪ್ಪತ್ನಾಲ್ಕು ಘಂಟೆಗಳವರೆಗೆ, ಅಥವಾ ನಾವು ಒಮ್ಮೆ ನಿದ್ರಿಸುವವರೆಗೆ ನಮ್ಮ ಜಾಗೃತಪ್ರಜ್ಞಾವಲಯದಲ್ಲಿ (‘ಕಾನ್ಷಿಯಸ್ ಮೈಂಡ್’ನಲ್ಲಿ) ಇರುತ್ತವೆ. ನಿದ್ರಿಸಿದ ಹೊತ್ತಿಗೆ (ಅಥವಾ ಇಪ್ಪತ್ನಾಲ್ಕು ಘಂಟೆಗಳ ಬಳಿಕ) ಅವು ನಮ್ಮ ಕ್ರಿಟಿಕಲ್/ ಅನಲಿಟಿಕಲ್ ಮೈಂಡ್ (ತಾರ್ಕಿಕ ಪ್ರಜ್ಞೆ) ದಾಟಿಕೊಂಡು ಸುಪ್ತಮನಸ್ಸಿನ (ಸುಪ್ತಪ್ರಜ್ಞೆಯ, ಸಬ್-ಕಾನ್ಷಿಯಸ್ ಮೈಂಡಿನ) ಪದರಕ್ಕೆ ಸೇರುತ್ತವೆ. ನಮ್ಮೆಲ್ಲಾ ನೆನಪುಗಳು, ಪೂರ್ವ ಸ್ಮೃತಿಗಳು ಈ ಸುಪ್ತಪ್ರಜ್ಞೆಯ ಪದರಗಳಲ್ಲೇ ಹುದುಗಿರುತ್ತವೆ. ಇದರ ಆಳದ ಪದರಗಳನ್ನೇ ಅತೀಂದ್ರಿಯ ಪ್ರಜ್ಞೆ (ಸೂಪರ್ ಕಾನ್ಷಿಯಸ್) ಅನ್ನಬಹುದು. ಅತ್ಯಂತ ಹಿಂದಿನ ನೆನಪುಗಳು, ಪೂರ್ವಜನ್ಮದವೂ ಸಹ, ಇಲ್ಲೇ ಹುದುಗಿರುತ್ತವೆ ಅನ್ನುತ್ತಾರೆ ಡಾ. ವೈಸ್, ಡಾ. ನ್ಯೂಟನ್, ಓರ್ಮಂಡ್, ಗಿಲ್ ಬೋಯ್ನ್, ಮತ್ತಿತರರು.
ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದಾಗ, ಯಾವ ಕಾರಣಕ್ಕಾಗಿ ರೆಗ್ರೆಷನ್ ಬಯಸಿದ್ದಾರೆ ಅನ್ನುವುದರ ಮೇಲೆ ವ್ಯಕ್ತಿಯ ಸಬ್-ಕಾನ್ಷಿಯಸ್ ಮೈಂಡ್ (ಸುಪ್ತ ಪ್ರಜ್ಞೆ) ನೆನಪಿನ ಆಳದ ಪದರಗಳಿಂದ ಬೇಕಾದ ನೆನಪುಗಳನ್ನು ಹೆಕ್ಕಿ ತರುತ್ತದೆ. ಸಮ್ಮೋಹನದಲ್ಲಿದ್ದಾಗ ಕೆಲಸ ಮಾಡುವಂಥದ್ದು ನಮ್ಮ ಸುಪ್ತ ಪ್ರಜ್ಞೆ. ಅಲ್ಲಿಂದ ನೆನಪಿಸಿಕೊಂಡ ವಿಷಯಗಳು, ಚಿಕಿತ್ಸಕನ ಸಂದೇಶಗಳ ಮೇಲೆ ಜಾಗೃತ ಪ್ರಜ್ಞಾವಲಯಕ್ಕೂ ಹಾದು ಬರುತ್ತವೆ (ಚಿಕಿತ್ಸಕನ ಸಂದೇಶವಿಲ್ಲದಿದ್ದಲ್ಲಿ, ಸುಪ್ತಪ್ರಜ್ಞೆಯು ಈ ನೆನಪನ್ನು ಜಾಗೃತವಲಯಕ್ಕೆ ತಂದುಕೊಳ್ಳದಿರುವ ಸಾಧ್ಯತೆಯಿದೆ. ಹಾಗಾದಾಗ ವ್ಯಕ್ತಿಗೆ ಸಮ್ಮೋಹನದಿಂದ ವಾಸ್ತವಕ್ಕೆ ಬಂದಾಗ ಆ "ನೆನಪುಗಳು" ನೆನಪಿರುವುದಿಲ್ಲ). ಆದ್ದರಿಂದ ನೆನಪು ಅನ್ನುವಂಥಾದ್ದು ಜಾಗೃತ ಪ್ರಜ್ಞೆಯ ವಲಯಕ್ಕೆ ಬಂದದ್ದು ಮಾತ್ರವೇ ಆಗಬೇಕಿಲ್ಲ. ನಮ್ಮ ನೆನಪುಗಳೆಲ್ಲ ನಮ್ಮವೇ ಮತ್ತು ಸದಾ ನಮ್ಮ ಪ್ರಜ್ಞೆಯ ಪದರಗಳ ಒಳಗೆ ಹುದುಗಿರುವಂಥವು.
ಈಗಲೂ ನಮ್ಮ ಜೀವನದ ಯಾವುದೋ ಒಂದು ಘಟನೆ, ಒಂದು ಹಾಡಿನ ಗುನುಗು, ಒಂದು ಮಾತಿನ ಎಳೆ, ನಮ್ಮನ್ನು ನಮ್ಮ ಬಾಲ್ಯದ ಮರೆತೇ ಹೋದಂತಿದ್ದ ಕ್ಷಣಗಳನ್ನು ಥಟ್ಟನೆ ನೆನಪಿಗೆ ತರುತ್ತವಲ್ಲವೆ? ಸಮ್ಮೋಹನದಲ್ಲೂ ಹಾಗೆಯೇ. ಸಮ್ಮೋಹನಕ್ಕೆ ಒಳಗಾದ ಕಾರಣದ ಎಳೆ ಹಿಡಿದು ಅದಕ್ಕೆ ಪೂರಕವಾದ ನೆನಪಿನ ಎಳೆಗಳನ್ನು ಸುಪ್ತಪ್ರಜ್ಞೆ ತನ್ನದೇ ಆಳದ ಪದರಗಳಿಂದ ಮೇಲ್ಪದರಕ್ಕೆ ತಂದುಕೊಂಡು (ನೆನಪಿಸಿಕೊಂಡು), ಅದರಿಂದ ಈಗಿನ ಜೀವನಕ್ಕೆ ಅಗತ್ಯವಾದ ಸಂದೇಶವನ್ನು ಪಡೆದುಕೊಳ್ಳುತ್ತದೆ. ಅಥವಾ ಆಗಿನ ಗೊಂದಲದ ಮೇಲೆಯೇ ಈಗಲೂ ಗೊಂದಲಮಯ ಮನಸ್ಸೇ ಇರುವುದಾದರೆ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ (ಇದೀಗ ಎರಡನೇ ಪ್ರಶ್ನೆಯ ವ್ಯಾಪ್ತಿಗೆ ಬಂದೆವು).
ಮೊದಲನೆಯದಾಗಿ, ಸಮ್ಮೋಹನದಲ್ಲಿ ನೆನಪಿಸಿಕೊಳ್ಳುವ ಹಳೆಯ ನೆನಪುಗಳಿಂದ ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳೆಲ್ಲವೂ ನಿವಾರಣೆಯಾಗುವುದಿಲ್ಲ. ಹಾಗೆಯೇ, ಪ್ರಸ್ತುತ ಮನೋವ್ಯಥೆಗಳೆಲ್ಲವೂ ಪೂರ್ವಸ್ಮೃತಿಗಳ ಮೇಲೆಯೇ ನಿಂತಿರುವುದಿಲ್ಲ. ಕೆಲವೊಂದು ತೊಂದರೆಗಳು, ವ್ಯಥೆಗಳು, ಗೊಂದಲಗಳು, ಪದೇ ಪದೇ ಕಾಡುವ ಕನಸುಗಳು ಪೂರ್ವಸ್ಮೃತಿಯಲ್ಲಿ ಬೇರುಗಳಿರಿಸಿಕೊಂಡಿರುತ್ತವೆ. ಒಂದೆರಡು ನಿದರ್ಶನಗಳ ಮೂಲಕ ಇದನ್ನು ಸುಲಭದಲ್ಲಿ ವಿವರಿಸಬಹುದು.
ಎರಡು ಸರಳ ಉದಾಹರಣೆ ಕೊಡುತ್ತೇನೆ:
(೧) ಶರ್ವಾಣಿಗೆ ಯಾವಾಗಲೂ ನದಿ, ನೀರು, ಜಲಪಾತಗಳ ಬಗ್ಗೆ ಹಂಬಲ, ಒಲವು, ಒಂಥರಾ ಕುತೂಹಲ, ನೋಡಿದಷ್ಟೂ ತಣಿಯದ ಆಸಕ್ತಿ. ಇದ್ಯಾಕೆ ಹೀಗೆ ಅನ್ನುವ ಪ್ರಶ್ನೆ ಅವರನ್ನು ಹಲವಾರು ಬಾರಿ ಕಾಡಿದ್ದಿದೆ. ಉತ್ತರ ಸಿಕ್ಕಿರಲಿಲ್ಲ. ರಿಗ್ರೆಷನ್ ಥೆರಪಿ ಒಳಗಾದಾಗ ಅವರಿಗಾದ ರಿಗ್ರೆಷನ್ ಅನುಭವದಲ್ಲಿ ತಮ್ಮ ಎರಡು ಸಾವಿರ ವರ್ಷಗಳಿಗೂ ಹಿಂದಿನ ಜೀವನವೊಂದರ ತುಣುಕುಗಳಲ್ಲಿ ‘ಕಂಡುಕೊಂಡ’, ಮತ್ತು ಅದರ ನಂತರದ ಒಂದೆರಡು ದಿನಗಳಲ್ಲಿ ಅರೆ-ಮಂಪರು (ರಾತ್ರೆ ಪೂರ್ತಿನಿದ್ದೆಗೆ ಜಾರುವ ಮೊದಲು ಮತ್ತು ಬೆಳಗ್ಗೆ ಪೂರ್ತಿ ಎಚ್ಚರಾಗುವ ಮೊದಲು) ಸ್ಥಿತಿಯಲ್ಲಿದ್ದಾಗ ಕನಸಿನಂತೆ ತೋರಿಬಂದ ಕೆಲವು ವಿವರಗಳಲ್ಲಿ ಅವರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅವರ ಆ ಜೀವನದಲ್ಲಿ ನದಿ/ತೊರೆ ಮತ್ತು ಜಲಪಾತ ಅಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಅವರ ನೋವು ನಲಿವುಗಳ ಜೊತೆ ಬೆಸೆದುಕೊಂಡ ಬಂಧವಾಗಿತ್ತು. ಹಾಗೂ ಅಂದಿನ ಅವರ ಹೆಸರೂ ನೀರಿಗೆ ಸಂಬಂಧಿಸಿದ್ದಾಗಿತ್ತು. ಇವೆಲ್ಲ ಬರೀ ಕಾಕತಾಳೀಯವೇ? ಹಾಗೆಂದೇ ಅಂದುಕೊಂಡರೂ ಆ ನಂತರ ಅವರನ್ನು "ನನಗ್ಯಾಕೆ ನೀರಿನ ಮೇಲೆ ಮೋಹ?" ಅನ್ನುವ ಪ್ರಶ್ನೆ ಕಾಡಿಲ್ಲ.
(೨) ಹಲವಾರು ಬಾರಿ, ಅನೀಶ್ ಗುಹೆಯೊಂದರಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿ ಒದ್ದಾಡಿದಂತೆ ಕನಸುಬಿದ್ದು ಕಸಿವಿಸಿಗೊಂಡು, ಗಾಬರಿಗೊಂಡು, ಗಾಳಿಗಾಗಿ ಹಂಬಲಿಸುತ್ತಾ ನಡುರಾತ್ರೆ ಎದ್ದದ್ದಿದೆ. ಹಾಗೆಂದು ಅದು ಅವರ ದಿನಗಳ ಸಮತೋಲ ತಪ್ಪಿಸುವಷ್ಟು ತೀವ್ರವಾಗಿರಲಿಲ್ಲ, ಅಥವಾ ಅದನ್ನು ಅಷ್ಟು ತೀವ್ರವಾಗಿ ಅವರು ಪರಿಗಣಿಸಿರಲಿಲ್ಲ (ಪದೇ ಪದೇ ಬೀಳುವ, "ನೈಟ್-ಮೇರ್" ಎಂದು ಕರೆಯಲ್ಪಡುವ, ಭಯಾನಕ ಕನಸುಗಳಿಂದ ವ್ಯಕ್ತಿಯ ದೈನಂದಿನ ಬದುಕು ಅಲ್ಲೋಲ ಕಲ್ಲೋಲ ಆಗುವುದೂ ಇದೆ; ಕನಸಿನ ವಿವರಗಳು ನಿಜವಾಗಿಯೂ ಎದುರಿಗೇ ಬಂದಂತೆ ಭ್ರಮಿತರಾಗುವವರೂ ಇದ್ದಾರೆ. ಇದೂ ಒಂದು ಮನೋವ್ಯಥೆಯೇ). ಇವರ ನಿದರ್ಶನವನ್ನು ಎರಡನೇ ಕಂತಿನಲ್ಲಿಯೇ ತಿಳಿಸಲಾಗಿದೆ. ಅದರಂತೆಯೇ, ಕಾಕತಾಳೀಯವೋ ಎಂಬಂತೆ, ಆಮೇಲೆ ಅನೀಶ್‌ಗೆ ಅಂಥ ಕನಸು ಇಂದಿನವರೆಗೆ ಬಿದ್ದಿಲ್ಲ!!
ಈಗ ಮನೋವ್ಯಥೆಯ ವಿಚಾರಕ್ಕೆ ಬಂದರೆ, ಇಲ್ಲಿ ಹೇಳಿದ ಎರಡರಲ್ಲಿ ಯಾವುದೇ ಒಂದು ಕಾರಣಕ್ಕೆ ವ್ಯಕ್ತಿಗೆ ಮನೋವ್ಯಥೆ ಉಂಟಾಗಬಹುದು. ಪದೇ ಪದೇ ಬೀಳುವ ಕನಸೂ ಮನೋವ್ಯಥೆಗೆ ಕಾರಣವಾಗಬಹುದು. ನೀರಿನ ಬಗ್ಗೆ ತೀರದ ಕುತೂಹಲ, ಆಸಕ್ತಿ ಹೆಚ್ಚಾಗಿ, ಜೀವನ ಸುಗಮವಾಗದಷ್ಟೂ ತೀವ್ರವಾಗಿ, ತೊಂದರೆಯಾಗಬಹುದು. ಇವೇ ಅಲ್ಲದೆ ಬೇರಿನ್ಯಾವುದೇ ಕಾರಣಕ್ಕೂ ಮನೋವ್ಯಥೆ ಉಂಟಾಗಬಹುದು. ವ್ಯಕ್ತಿ ಸಮ್ಮೋಹನ ಚಿಕಿತ್ಸೆ ಬಯಸಿ ಬಂದಾಗ ಮೊದಲು ಸರಳ ಮಾತುಕತೆಯಾಡಿ ಬಂದ ಉದ್ದೇಶ, ಕಾಡುವ ವಿಷಯಗಳನ್ನು ತಿಳಿದುಕೊಂಡೇ ಸಮ್ಮೋಹಿತ ಸ್ಥಿತಿಗೆ ಚಿಕಿತ್ಸಕ ಕರೆದೊಯ್ಯುತ್ತಾರೆ. ಅಲ್ಲಿ ಸರಿಯಾದ ನಿರ್ದೇಶನಗಳನ್ನು ಕೊಡುತ್ತಾ ನೆನಪಿನ ತುಣುಕನ್ನು ಆಳದಿಂದ ಆರಿಸಿ ತರಲು ಆದೇಶಿಸುತ್ತಾರೆ. ಅದರ ಜೊತೆಗೆ ಸಂದರ್ಭಕ್ಕೆ ಸರಿಯಾಗಿ ಇತರ ಹಿನ್ನೆಲೆ, ಮುನ್ನೆಲೆಗಳನ್ನು ಪರೀಕ್ಷಿಸಲಾಗುತ್ತದೆ. ಬಳಿಕ ವ್ಯಕ್ತಿಯನ್ನು ಸಮ್ಮೋಹನದಿಂದ ಎಚ್ಚರಿಸಿ ವಾಸ್ತವಕ್ಕೆ ಕರೆತಂದು, ಆ ಎಲ್ಲ ನೆನಪಿನ ತುಣುಕುಗಳು ಈಗಿನ ಜೀವನಕ್ಕೆ ಹೇಗೆ ಪ್ರಸ್ತುತವೆಂಬುದನ್ನು ವಿಶ್ಲೇಷಿಸಲಾಗುತ್ತದೆ. ಚಿಕಿತ್ಸಕನ ನಿರ್ದೇಶನದಲ್ಲಿ, ಕಣ್ಗಾವಲಿನಲ್ಲಿ, ವ್ಯಕ್ತಿ ತನ್ನ ಹಳೆಯ ನೆನಪುಗಳನ್ನು ಕೆದಕಿ ಅಲ್ಲಿಂದ ಒಂದಿಷ್ಟು ರಾಡಿಯನ್ನು ಜಾಗೃತ ಪ್ರಜ್ಞೆಯ ಮೂಲಕ ಹೊರಹಾಕಿ ಒಳಗಿನ ನೀರನ್ನು ಸ್ವಲ್ಪ ತಿಳಿಗೊಳಿಸಿಕೊಳ್ಳಬಹುದು. ಈ ಮೂಲಕ ಕಾಡುವ ವ್ಯಥೆ ದೂರಾಗುತ್ತದೆ.
ಮುಂದಿನ ಕಂತುಗಳಲ್ಲಿ ಇನ್ನಷ್ಟು ಸಂದೇಹಗಳನ್ನು, ಪ್ರಶ್ನೆಗಳನ್ನು ಪರಿಶೀಲಿಸೋಣ.
(ಭಾಮಿನಿ, ಜೂನ್ ೨೦೧೧.)
No comments:
Post a Comment