ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 9 June 2008

ನಮ್ಮ-ನಿಮ್ಮೊಳಗೆ -೦೪

ಸುನಾಥ ಕಾಕಾರ ಸಂದೇಹ:
"ಸದ್ಗುಣಗಳ ಬಗೆಗೆ ನನಗೆ ಯಾವಾಗಿನಿಂದಲೂ ಒಂದು ಅನುಮಾನವಿದೆ. ಕೂಸು ಹುಟ್ಟಿದಾಗ ಅದು amoral ಇರುತ್ತದೆ. ಅದು ವ್ಯಕ್ತಿಯಾಗಿ ರೂಪುಗೊಳ್ಳುತ್ತಿರುವಾಗ ಅದರ ಮೇಲೆ ಪ್ರಭಾವ ಬೀರುವ ಭಾವನೆ ಎಂದರೆ ತಾನು ಯಾವ ರೀತಿಯಲ್ಲಿ behave ಮಾಡಿದರೆ, ತನಗೆ reward ಸಿಗುವದು, ಯಾವ ರೀತಿಯಲ್ಲಿ behave ಮಾಡಿದರೆ ತನಗೆ punishment ಸಿಗುವದು ಎನ್ನುವದು. ಅಂದರೆ, ಕೂಸು ವ್ಯಕ್ತಿಯಾಗುತ್ತ ಕಲಿಯುವದು survival mechanism. ಅರ್ಥಾತ್ all virtues are survival mechanisms ಮತ್ತು all bad qualities are also survival mechanisms.

ಮತ್ತೂ ಒಂದು ಆಸಕ್ತಿಕಾರಕ ವಿಷಯವಿದೆ. Wolfgang Kohler ಎನ್ನುವ ಜರ್ಮನ್ ವಿಜ್ಞಾನಿಯು, ಚಿಂಪಾಂಜಿಗಳ ಅಧ್ಯಯನ ಮಾಡುತ್ತಿದ್ದಾಗ ಹೇಳಿದ ಒಂದು ಮಾತು. "ಈ ಚಿಂಪಾಂಜಿಗಳ ಗುಂಪಿನಲ್ಲಿ ಒಂದು ಅತ್ಯಂತ ಒಳ್ಳೆಯ ಚಿಂಪಾಂಜಿ ಇದೆ; ಇದು ಅತ್ಯಂತ ದಡ್ಡ ಚಿಂಪಾಂಜಿಯೂ ಹೌದು." ಅಂದರೆ, ದಡ್ಡರಷ್ಟೇ ಒಳ್ಳೆಯವರಾಗುವರು ಎಂದೆ? ಇದಕ್ಕೆ support ಆಗಿ ಮತ್ತೊಂದು ಉದಾಹರಣೆ ಕೊಡುವೆ.

ಅನೇಕ ವರ್ಷಗಳ ಹಿಂದೆ ಜಪಾನದ ನದಿ ತೀರದಲ್ಲಿ (--ಅಥವಾ ಸಮುದ್ರ ತೀರದಲ್ಲಿ?--) ವಿಜ್ಞಾನಿಗಳು ಮಂಗಗಳ ಅಧ್ಯಯನ ನಡೆಸುತ್ತಿದ್ದರು. ನದಿ ದಂಡೆಯ ಮೇಲೆ ಸೇಂಗಾ ಕಾಳುಗಳನ್ನು ಒಗೆದಾಗ, ಉಸುಕಿನಿಂದ ಸೇಂಗಾ ಕಾಳುಗಳನ್ನು ಬೇರ್ಪಡಿಸುವ ಜಾಣ ವಿಧಾನವನ್ನು ಒಂದು ಮಂಗ ಕಂಡು ಹಿಡಿಯಿತು. ಸೇಂಗಾ ಹಾಗು ಉಸುಕಿನ mixtureಅನ್ನು ತೆರೆಗಳ ಮೇಲೆ ತೂರಿ, ಕೆಳಗೆ ಬೀಳುತ್ತಿರುವ washed ಕಾಳುಗಳನ್ನು ಹಿಡಿಯುವದೇ ಈ ವಿಧಾನ. ಎಲ್ಲ ಮಂಗಗಳೂ ಈ ವಿಧಾನ ಅನುಸರಿಸಿದವು, except ಒಂದು ಮಂಗ. ಇತರ ಮಂಗಗಳು ತೂರಿದ ಕಾಳುಗಳನ್ನು ಈ ಮಂಗ ಹಿಡಿಯಲು ಪ್ರಾರಂಭಿಸಿತು. So smart!

ಹಾಗಿದ್ದರೆ, ಯಾವುದು ಸದ್ಗುಣ? ಯಶಸ್ವಿಯಾಗುವದೇ ಸದ್ಗುಣವೆ? ಸದ್ಯದ ಜಾಗತಿಕ ನಾಗರಿಕತೆಯು ಅದನ್ನೇ ಕಲಿಸುತ್ತಿದೆಯೆಲ್ಲವೆ? ಇದು ಅತ್ಯಂತ ನೈಸರ್ಗಿಕ ಗುಣ. ಆದರೆ, ನಿಸರ್ಗವು ಎಲ್ಲಾ speciesಗಳಲ್ಲೂ ಮತ್ತೂ ಒಂದು ನೈಸರ್ಗಿಕ ಗುಣವನ್ನು ಇಟ್ಟಿದೆ. ಅದೇನೆಂದರೆ survival of the group or society is more important than the survival of the individual. ನಾವು ಯಾರನ್ನು ಕೆಟ್ಟವರೆಂದು ತಿಳಿದುಕೊಂಡಿರುತ್ತೇವೆಯೋ, ಅವರೂ ಸಹ ಆಪತ್ತಿನ ಸಮಯದಲ್ಲಿ ಸಮಾಜಕ್ಕಾಗಿ ತಮ್ಮ ಬಲಿದಾನ ಮಾಡಿದ್ದನ್ನು, ಇತಿಹಾಸದಲ್ಲಿ ನೋಡಿದ್ದೇವೆ, ಅಲ್ಲವೆ? ನಿನ್ನ ಅಭಿಪ್ರಾಯವೇನು?"

ಪ್ರತಿಕ್ರಿಯೆ:
ಸುನಾಥ ಕಾಕಾ,
ನಿಮ್ಮ ಸಂದೇಹ ನನ್ನನ್ನೂ ಅನೇಕ ಬಾರಿ ಕಾಡಿದ್ದಿದೆ. ಸೈಕಾಲಜಿ ಓದುತ್ತಿದ್ದಾಗ, "ಮಾನವ ತನ್ನ ಪರಿಸರದ ಕೂಸು" ಅನ್ನುವ ಖಡಾಖಂಡಿತ ಅಭಿಪ್ರಾಯದಲ್ಲಿದ್ದೆ. ಇದೀಗ ಆತ್ಮಜ್ಞಾನದ ಬಗ್ಗೆ ತಿಳಿದುಕೊಂಡಷ್ಟೂ ಆ ಅಭಿಪ್ರಾಯ ಸ್ವಲ್ಪಸ್ವಲ್ಪವೇ ಬದಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಒಂದೆರಡು ವಾರಗಳ ಹಿಂದೆ ಬರೆದಿಟ್ಟ ಮೊದಲ ಒಂದು ಪ್ಯಾರಾ, ಈಗ ನಿಮ್ಮ ಪ್ರಶ್ನೆಯ ಮುನ್ನೆಲೆಯಲ್ಲಿ ಪ್ರಸ್ತುತ ಎನಿಸಿದೆ. ನನ್ನ ಅಭಿಪ್ರಾಯವನ್ನು ಅದರ ನಂತರ ಮುಂದುವರಿಸಿದ್ದೇನೆ:

"ಪ್ರಜ್ಞೆ-ಸಂಸ್ಕಾರ: ನಮ್ಮ ಪ್ರಜ್ಞೆಯ ಪದರಗಳಲ್ಲಿ ಆಳವಾದ ಪದರಗಳನ್ನು ಸೂಪರ್ ಕಾನ್ಷಿಯಸ್ ಅಥವಾ ಅತೀಂದ್ರಿಯ ಪ್ರಜ್ಞೆ ಎಂದು ನಾನು ವಿಂಗಡಿಸಿಕೊಳ್ಳುತ್ತೇನೆ- ಕಲಿಕೆಯ, ಅರ್ಥೈಸುವಿಕೆಯ ಅನುಕೂಲಕ್ಕಾಗಿ. ನಮ್ಮ ತುಂಬಾ ಹಿಂದಿನ ನೆನಪುಗಳು, ಪೂರ್ವಸ್ಮೃತಿಗಳು ಈ ಅತೀಂದ್ರಿಯ ಪ್ರಜ್ಞೆಯ ಭಾಗ. ಈ ಅತೀಂದ್ರಿಯ ಪ್ರಜ್ಞೆಯೇ ನಮ್ಮ ಆತ್ಮ ಅನ್ನುವುದು ನನ್ನ ನಂಬಿಕೆ. ಸಾಮಾನ್ಯವಾಗಿ ನೆನಪಿರದ ಬಾಲ್ಯದ ದಿನಗಳ ವಿವರಗಳು, ಪೂರ್ವಜನ್ಮದ ನೆನಪುಗಳು ಈ ಆತ್ಮಸ್ಮೃತಿಯ ಭಾಗ. ಅದನ್ನೇ ನಾವು ಸಂಸ್ಕಾರ ಎಂದೂ ಕರೆಯುತ್ತೇವೆ. ಒಬ್ಬ ವ್ಯಕ್ತಿ ಯಾವುದೇ ಸಾಂಪ್ರದಾಯಿಕ ವಿದ್ಯೆಯಿಲ್ಲದಿದ್ದರೂ ತುಂಬಾ ಸಾಮಾನ್ಯ ಜ್ಞಾನವುಳ್ಳವರಾಗಿದ್ದು, ಒಳ್ಳೆಯ ನಯವಿನಯ ನಡವಳಿಕೆಯಿಂದ ಕೂಡಿದ ಅತ್ಯಂತ ಸುಸಂಸ್ಕೃತರಾಗಿದ್ದರೆ ಅಂಥವರನ್ನು "ಸಂಸ್ಕಾರವಂತರು" ಅನ್ನುತ್ತೇವೆ, ಆ ಸಂಸ್ಕಾರ ಎಲ್ಲಿಂದ ಬಂತು? ನನ್ನ ಪ್ರಕಾರ (ಬಹುತೇಕ ನಮ್ಮ ಹಿಂದೂ ಧರ್ಮದ ನಂಬಿಕೆಯೂ ಕೂಡಾ) ಅದು ಆ ವ್ಯಕ್ತಿಯ ಹಿಂದಿನ ಜನ್ಮದ ಜ್ಞಾನ, ಪೂರ್ವ ಸಂಸ್ಕಾರ. ಇವೆಲ್ಲ ಯಾಕೆ ಹೇಳಿದೆ ಅಂದ್ರೆ, ಇದೇ ಸಂಸ್ಕಾರ ಕೆಟ್ಟದ್ದೂ ಆಗಿರಬಹುದಲ್ವ! ತುಂಬಾ ಒಳ್ಳೆಯವರ ಮನೆಯಲ್ಲಿ ಹುಟ್ಟಿದ ಮಕ್ಕಳೂ ಕೆಟ್ಟವರಾದರೆ? ಆಗಿರುವ ಉದಾಹರಣೆಗಳೂ ಇವೆ. ಇವು ಕೆಟ್ಟ ಸಂಸ್ಕಾರದ ನಿದರ್ಶನಗಳು."

ನಮ್ಮೆಲ್ಲರ ನಡವಳಿಕೆಗಳು, ಬುದ್ಧಿವಂತಿಕೆಯ, ವೈಚಾರಿಕತೆಯ ಯೋಚನಾ ಧಾಟಿಗಳು ಈ ಜನ್ಮದ ಕಲಿಕೆಯಿಂದ ಎಷ್ಟು ಪ್ರಾಪ್ತವಾದದ್ದೋ ಅಷ್ಟೇ ಹಿಂದಿನ ಜನ್ಮದ/ ಜನ್ಮಗಳ ಸ್ಮೃತಿಯಿಂದ ಪ್ರೇರಿತವೂ ಆಗಿರುತ್ತವೆ. ಮೂಲತಃ ನಾವು ನಮ್ಮ ಸ್ವಭಾವಕ್ಕೆ ತಕ್ಕದಾದ ಮನೆಯನ್ನೇ ಆರಿಸಿಕೊಂಡು ಜನಿಸುವುದೇ ಇದಕ್ಕೆ ಮೊದಲ ಕಾರಣ. ಅಲ್ಲಿಂದಲೇ ನಮ್ಮ-ನಮ್ಮ ಗುಣ ನಡತೆಗಳು ಬೆಳೆಯಲಿರುವ ವಾತಾವರಣ ಅನುಕೂಲಕರವಾಗಿಯೋ ಪ್ರತಿಕೂಲಕರವಾಗಿಯೋ ಇರುವಂಥದ್ದನ್ನು ನೋಡಿಕೊಂಡೇ ಹುಟ್ಟಿರುತ್ತೇವೆ. ಈ ಜ್ಞಾನ ನಮಗೆಲ್ಲ ಮೊದಲೇ ಇರುತ್ತದೆ. ಈ ಜನ್ಮದಲ್ಲಿ ಏನೇನು ಆಗಲಿರುವುದೋ ಅದರ ಮುಖ್ಯ ಘಟನೆಗಳ ಅರಿವನ್ನು ಇರಿಸಿಕೊಂಡೇ ನಾವು ಜನಿಸಿರುತ್ತೇವೆ. ಆದರೆ, ಜನಿಸಿದ ಮೇಲೆ, ಬೆಳೆಯುತ್ತಿದ್ದಂತೆ, ಮಾನವ ದೇಹದ ಪ್ರಭಾವದಿಂದಾಗಿ, ಆ ಆತ್ಮಜ್ಞಾನ ಮಸುಕಾಗುತ್ತದೆ. ಅಮ್ನೀಶಿಯಾ ಆವರಿಸಿಕೊಳ್ಳುತ್ತದೆ. ಎಲ್ಲವನ್ನೂ ಭೌತಿಕವಾಗಿಯೇ ನೋಡಿಕೊಂಡು ಅಳಲು, ನಗಲು, ಕೊರಗಲು, ಮರುಗಲು, ನೋಯಲು, ನಲಿಯಲು ಕಲಿಯುತ್ತೇವೆ. ಭೌತಿಕತೆ ಮೀರಿ ಶಕ್ತಿ-ಸ್ವರೂಪವಾದ "ನಮ್ಮತನ"ದ ಪರಿಚಯವನ್ನೇ ಕಳೆದುಕೊಂಡುಬಿಡುತ್ತೇವೆ. ಇದು ಮಾನವ ಜೀವನದ ಪರಿಮಿತಿ; ಭೌತಿಕತೆಯ ಪೊರೆ. ಆದ್ದರಿಂದ ಪನಿಷ್ಮೆಂಟ್-ರಿವಾರ್ಡ್ ಅನ್ನುವ ಪರಿಭ್ರಮಣೆಯಲ್ಲಿ ಸಾಮಾಜಿಕವಾಗಿ ಲಾಭವಾಗುವ ನಿಟ್ಟಿನಲ್ಲಿ ಬದುಕಲು ಒಲಿಯುತ್ತೇವೆ. ಅಲ್ಲೂ ನಮ್ಮೊಳಗಿನ ಅತೀಂದ್ರಿಯ ಪ್ರಜ್ಞೆ ಕೆಲಸ ಮಾಡುತ್ತಿರುತ್ತದೆ, ಇಂಟ್ಯೂಷನ್ ಅಥವಾ ಒಳದನಿಯ ರೂಪದಲ್ಲಿ. ನಮ್ಮೊಳಗಿನ ಆ ಸಣ್ಣದೊಂದು ದನಿಯಾಗಿ ನಮ್ಮನ್ನು ಎಚ್ಚರಿಸುತ್ತಲೇ ಇರುವ ಅದನ್ನು ಕಿವಿಗೊಟ್ಟು ಕೇಳಿ ಅದರಂತೆ ನಡೆಯುವವರು ಎಷ್ಟು ಮಂದಿ?

ಈ ಎಲ್ಲ ಹಿನ್ನೆಲೆಯಲ್ಲಿ, ನಮ್ಮ ನಡತೆಗಳು, ಒಳ್ಳೆಯತನ-ಕೆಟ್ಟತನಗಳು ನಮಗೆ ನಾವೇ ಹಾಕಿಕೊಂಡ ಮಿತಿಗಳು. ಅವನ್ನು ಮೀರಿ ಬೆಳೆಯಲು ಅವಕಾಶವಿರುವ ಈ ಭೂಮಿಯಲ್ಲಿ (ಆತ್ಮದ ಕಲಿಕೆಗೆ ಭೂಮಿಗಿಂತ ಒಳ್ಳೆಯ ಪಾಠಶಾಲೆಯಿಲ್ಲ ಎನ್ನುವುದು ಸಮ್ಮೋಹನದಲ್ಲಿ "ಆತ್ಮಲೋಕ" ವೀಕ್ಷಿಸಿದ ಅನೇಕರ ಅಭಿಪ್ರಾಯ) ನಮ್ಮ ನಮ್ಮ ಫ್ರೀ-ವಿಲ್ (ಎಚ್ಚರಿಸುವ ಒಳದನಿಯೂ ಕೂಡ) ಉಪಯೋಗಿಸಿಕೊಂಡು ಸನ್ನಡತೆಯಲ್ಲೇ ಸಮಾಜಕ್ಕೆ, ಬಂಧು ಬಾಂಧವರಿಗೆ ಒಳ್ಳೆಯವರಾಗಿಯೇ ಇರುವವರು ಅಪರೂಪ. ಅಂಥವರು ಆತ್ಮ-ಶಾಲೆಯ ಕಲಿಕೆಯಲ್ಲಿ ಮುಂದಿನ ಹಂತಕ್ಕೇರುತ್ತಾರೆ. ಪಾಠ ಕಲಿಯದವರು, ವಿಲ್-ಪವರ್ ಬಳಸಿಕೊಳ್ಳದೆ, ಒಳದನಿಯ ಎಚ್ಚರಿಕೆಗೆ ಗಮನ ಕೊಡದೆ, ಪ್ರಾಪಂಚಿಕ ಪ್ರಲೋಭನೆಗಳು ಎಳೆದತ್ತ ಸೆಳೆದಾಡಿಕೊಂಡು ಅಟ್ಟಾಡಿಸಿಕೊಂಡು ಬದುಕಿದವರು ಇನ್ನೂ ಕೆಲವಾರು ಜನ್ಮಗಳಲ್ಲಾದರೂ ಈ ಪಾಠ ಕಲಿತೇ ಕಲಿಯುತ್ತಾರೆ.

ಇನ್ನು, ಒಳ್ಳೆಯತನ ದಡ್ಡತನವೇ ಯಾಕಾಗಿರಬಾರದು!? ರಾಜ್ಯಾಭಿಷೇಕದ ದಿನವೇ ಮಂಥರೆಯ ಪ್ರಚೋದನೆಯಿಂದ ಕೈಕೇಯಿಯ ಮಾತುಗಳಿಂದ ತಾನು ಕಾಡಿಗೆ ತೆರಳಬೇಕಾದಾಗ ಸಮಾಧಾನದಿಂದ ವರ್ತಿಸಿದ ಶ್ರೀರಾಮ; ಪದೇ ಪದೇ ಕಳ್ಳನೆಂದು ಕರೆದು ದೂರಿಡುವ ಗೋಪ-ಗೋಪಿಕೆಯರನ್ನೂ ತನ್ನವರೆಂದು ಪ್ರೀತಿಸಿದ ಶ್ರೀಕೃಷ್ಣ; ತನ್ನ ಒಂದು ಕೆನ್ನೆಗೆ ಏಟು ಹಾಕಿದವರಿಗೆ ಇನ್ನೊಂದು ಕೆನ್ನೆಯನ್ನೂ ತೋರಿಸಿದ ಮತ್ತು ತನ್ನನು ಶಿಲುಬೆಗೇರಿಸಿದವರನ್ನೂ ಕ್ಷಮಿಸೆಂದು ಪ್ರಾರ್ಥಿಸಿದ ಏಸುಕ್ರಿಸ್ತ; ತನ್ನನ್ನು ಅವಮಾನಿಸಿ ಬೈದು ಮಲ್ಲಯುದ್ಧಗೈದ ಸಹೋದರನನ್ನೂ ಕ್ಷಮಿಸಿ ಎಲ್ಲವನ್ನೂ ತೊರೆದು ಎದ್ದು ನಿಂತ ಬಾಹುಬಲಿ; ತಮ್ಮ ಮನೆಯವರು ತನ್ನ ಮೆತ್ತನೆಯ ನಡವಳಿಕೆಯ ದುರುಪಯೋಗ ಪಡೆಯುತ್ತಿದ್ದಾರೆ ಎನ್ನುವ ಅರಿವಿದ್ದೂ, ಅವರೆಲ್ಲರ ಕುಹಕಗಳನ್ನು ಸುಮ್ಮನೇ ಸಹಿಸಿಕೊಳ್ಳುತ್ತಿರುವ ನಮ್ಮ ನಡುವಿನ ಅನೇಕಾನೇಕ ಹಿರಿಯರು- ಇವರೆಲ್ಲರೂ ಇಂಥ ಸನ್ನಿವೇಶಗಳಲ್ಲಿ ಸಿಡಿದೆದ್ದು ಎದುರಿಸಿ ಕೋಪದಿಂದ ಎಗರಾಡುವ ಮಂದಿಯ ದೃಷ್ಟಿಯಲ್ಲಿ ದಡ್ಡರೇ ಸೈ. ಒಳ್ಳೆಯತನವೆನ್ನುವುದು ವೈಯಕ್ತಿಕ ಆಯ್ಕೆ. ಸಾಮಾಜಿಕವಾಗಿ ಅದು ವ್ಯಕ್ತಿಯ ಲೌಕಿಕ ಏಳ್ಗೆಗೆ ಅನುಕೂಲಕರ ಅಲ್ಲದಿರಬಹುದು. ಆದರೆ, ಆ ವ್ಯಕ್ತಿಯ ಆತ್ಮದ ಏಳ್ಗೆಗೆ ಖಂಡಿತಾ ಅದು ಸಹಕಾರಿ. ಆ ಆತ್ಮ ಕಲಿಯಬೇಕಾಗಿರುವ ಶಾಂತಿಯ, ಸಹನೆಯ, ಸಹಬಾಳ್ವೆಯ, ಹೊಂದಾಣಿಕೆಯ ಪಾಠವನ್ನು ವ್ಯಕ್ತಿ ಕಲಿಯುತ್ತಿರಬಹುದು. ಶ್ರೀರಾಮ, ಶ್ರೀಕೃಷ್ಣ, ಏಸು, ಬಾಹುಬಲಿ, ಮತ್ತಿತರ ಹಿರಿಯರು ನಮಗೆಲ್ಲ ಮಾದರಿಗಳಾಗಿ ನಡೆದುಹೋದರು. ಇವು ನನ್ನ ನಂಬಿಕೆಗಳು, ಅಭಿಪ್ರಾಯಗಳು.

ಕೊನೆಯದಾಗಿ, ದಡ್ಡ ಚಿಂಪಾಂಜಿ ಮತ್ತು ಜಪಾನಿನ ಜಾಣ ಮಂಗನ ಬಗ್ಗೆ: ಜಪಾನ್ ಮಂಗ ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ರಾಜಕಾರಣಿಯಾಗಿದ್ದಿರಬಹುದು. ಚಿಂಪಾಂಜಿ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದಿರಬಹುದು. ಪೂರ್ವಜನ್ಮದ ಸ್ಮೃತಿ ಬಿಟ್ಟೀತೆ?

17 comments:

Anonymous said...

Supthadeepthi avare,
neevu thumbaa chennagi bareetheera, neevu bareyuvudu thevalu antha coment maaDidu noDide, nanagoo bareya bekemba thevalanthoo ide, adre neevu bareyuvudara bagge nimma blog bagge nanage eshTu ishTa agide antha andukonDshTu bareyoke barthaa illa, ( thevalu iddavarella bareyokagalla ishTu chenda)very nice blog.
PSP

Unknown said...

ಸುಪ್ತದೀಪ್ತಿಯವರ, ಸುನಾಥ ಅವರ ಸಂದೇಹಗಳಿಗೆ ಸರಿಯಾಗಿ ಉತ್ತರಿಸಿದ್ದೀರಿ. ಅಭಿನಂದನೆಗಳು.

ಸುಪ್ತದೀಪ್ತಿ suptadeepti said...

ನಮಸ್ಕಾರ PSPಯವರೆ, ಪ್ರತಿಕ್ರಿಯೆಗೆ ಧನ್ಯವಾದಗಳು.

ವನಮಾಲಾ, ನಿಮಗೂ ಧನ್ಯವಾದಗಳು.

ಪ್ರಶ್ನೆಗೆ ಉತ್ತರವನ್ನೇನೋ ಕೊಟ್ಟಿದ್ದೆ, ಓದುಗರಿಗೆ ಅರ್ಥವಾಗುತ್ತೋ ಇಲ್ಲವೋ ಸಂಶಯವಿತ್ತು. ಇವೆರಡೂ ಪ್ರತಿಕ್ರಿಯೆಗಳು ಅದನ್ನು ನೀಗಿದವು.

ತೇಜಸ್ವಿನಿ ಹೆಗಡೆ said...

ಅಕ್ಕಾ,

ನಿಮ್ಮ ಸಂವಾದ ತುಂಬಾ ಚೆನ್ನಾಗಿದೆ... ಆದರೆ ಒಂದು ಸಂಶಯ. ಭಗವದ್ಗೀತೆಯಲ್ಲಿ ಕೃಷ್ಣನೇ ಹೇಳಿದ್ದಾನೆ.. ಆತ್ಮವೆಂಬುದು ನಿರಾಕಾರ, ನಿರ್ವಿಕಾರ, ನಿರ್ಗುಣತ್ವದಿಂದ ಕೂಡಿದ್ದು ಎಂದು. ಹೀಗಿರುವಾಗ ಪೂರ್ವಜನ್ಮದ ಸ್ಮೃತಿಯನ್ನು ಆತ್ಮದ ಮೂಲಕ ಕಾಣುವುದು ಯಾಕೋ ಸ್ಪಷ್ಟವೆನಿಸುತ್ತಿಲ್ಲ...!!!

ಸುಪ್ತದೀಪ್ತಿ suptadeepti said...

ಹೌದು ತೇಜು, ಆತ್ಮ ನಿರ್ಗುಣ, ನಿರಾಕಾರ, ನಿರ್ವಿಕಾರವಾದದ್ದು. ಅಂಥ ಆತ್ಮ ನನ್ನ-ನಿನ್ನಂತೆ ಈ ಲೋಕದ ಮಾಯೆಯೊಳಗೆ ಸಿಲುಕಲಾರದ ಎತ್ತರದಲ್ಲೂ ಇರುತ್ತದೆ. ಅಂಥ ಆತ್ಮಕ್ಕೆ ಯಾವುದೇ ಬಂಧನಗಳಿರುವುದಿಲ್ಲ. ಲೋಕ ಕಲ್ಯಾಣವೊಂದೇ ಅದರ ಗುರಿ, ಬದುಕು.

ತಾವರೆಯೆಲೆಯ ಮೇಲಿನ ನೀರಿನಂಥ ಜೀವನ ನಡೆಸಬಲ್ಲ ಅಂಥ ಆತ್ಮ ಮಾತ್ರವೇ ಕೃಷ್ಣ ಹೇಳಿದ "ದೇವತ್ವ" ಸ್ವರೂಪವನ್ನು ಹೊಂದಬಲ್ಲದು. ಅಂತೆಯೇ, ಸತತ "ಕಲಿಕೆ"ಯಿಂದ ಸದ್ಗುಣಗಳನ್ನು ರೂಢಿಸಿಕೊಂಡ ಆತ್ಮ, ಎಲ್ಲ ಬಂಧನಗಳನ್ನು, ಗುಣದೋಷ ಮಾಯೆಗಳನ್ನು ಮೀರಿದಾಗ ಸ್ವತಃ ಕೃಷ್ಣನನ್ನೇ ಸೇರಲರ್ಹವಾಗುತ್ತದೆ (ಮುಕ್ತಿಪಡೆಯುತ್ತದೆ). ಕೃಷ್ಣ ವಿವರಿಸಿದ್ದು ಅಂಥ "ಪ್ಯೂರ್" ಆತ್ಮವನ್ನು. ನಮ್ಮೊಳಗಿರುವಂಥ "ಭವಬಂಧನ ವಾಸನಾಯುಕ್ತ" ಆತ್ಮವನ್ನಲ್ಲ ಅಂತ ನನ್ನ ನಂಬಿಕೆ. ಅಂಥ ಆತ್ಮ ಅವನದ್ದೇ ಒಂದು ತುಣುಕು ಅಂತಲೂ ನನ್ನ ವಿಚಾರ.

sunaath said...

ಜ್ಯೋತಿ,
ಪೂರ್ವಜನ್ಮಗಳ ಪ್ರಜ್ಞೆ ಹಾಗು ಸಂಸ್ಕಾರ ಇವು ಸದ್ಯದ ಜನ್ಮದ ಗುಣ ಮತ್ತು ಆಸೆ-ಆಕಾಂಕ್ಷೆಗಳಿಗೆ ಕಾರಣವಾಗುವವೆಂದು ನೀನು ಹೇಳುವದು ಸರಿಯೆನ್ನುಸುತ್ತದೆ. ಈ ಪೂರ್ವಪ್ರಜ್ಞೆ ಹಾಗು ಸಂಸ್ಕಾರಗಳಿಗೇ “ವಾಸನಾ ಶರೀರ ” ಅಥವಾ “ ಸೂಕ್ಷ್ಮ ಶರೀರ ” ಎನ್ನುತ್ತಾರಲ್ಲವೆ?

ಮರುಜನ್ಮವೆತ್ತುವ ಸಮಯದಲ್ಲಿ, ಪೂರ್ವ ವಾಸನೆಗಳಿಗೆ ಹಾಗು ಆಕಾಂಕ್ಷೆಗೆ ತಕ್ಕಂತಹ ಭವಿಷ್ಯವನ್ನು ನಾವು ಅರಿತುಕೊಂಡೇ ಆಯ್ದುಕೊಳ್ಳುತ್ತೇವೆ ಎನ್ನುವ ನಿನ್ನ ಹೇಳಿಕೆ ನನಗೆ ಒಪ್ಪಿಗೆಯಾಯಿತು. ಆದರೆ ಮರುಜನ್ಮದ ಸ್ಥಳ, ದೇಹ, ಸ್ಥಿತಿ ಇತ್ಯಾದಿಗಳನ್ನು define ಮಾಡುವಲ್ಲಿ ನಮ್ಮ ‘ಕರ್ಮ’ plays a definitive role ಎಂದುಕೊಳ್ಳುತ್ತೇನೆ.
ಇನ್ನು ‘ ತನ್ನ ಆಯ್ಕೆಯಿಂದಲೇ ತಾನು ಒಳ್ಳೆಯನಾಗಿರುವದು’ tough thing; ಆದರೆ ಉನ್ನತಿಗೆ ಅನಿವಾರ್ಯ.

ನನ್ನ ಸಂದೇಹಗಳಿಗೆ ಉತ್ತರರೂಪದಲ್ಲಿ ನೀನು ಬರೆದ ಲೇಖನ ಅತ್ಯಂತ ಚೆನ್ನಾಗಿದೆ, ಅರ್ಥಪೂರ್ಣವಾಗಿದೆ, ಸಮಾಧಾನಕರವಾಗಿದೆ. ಲೇಖನದ ಕೊನೆಯಲ್ಲಿ ನೀನು ನೀಡಿದ ಮಂಗಗಳ ‘ಪೂರ್ವಜನ್ಮದ ವೃತ್ತಾಂತ(!)’ ನಗೆಯನ್ನು ಉಕ್ಕಿಸಿತು; ಆದರೆ ಅದು ನಿಜವೂ ಇರಬಹುದು!
-ಕಾಕಾ

ತೇಜಸ್ವಿನಿ ಹೆಗಡೆ said...

ಅಕ್ಕಾ,

ನಿಜವಿರಬಹುದು. ಆದರೆ ಒಮ್ಮೆ ಈ ದೇಹ ನಶಿಸಿದ ಮೇಲೆ ಎಲ್ಲಾ ಆತ್ಮಗಳೂ ಒಂದೇ ತಾನೇ? ಹಾಗಾದಾಗ ಮತ್ತೆ "ಸದ್ಗುಣ" ಆತ್ಮ, "ಭವಬಂಧನ ವಾಸನಾಯುಕ್ತ" ಆತ್ಮ ಎಂದು ಹೇಗೆ ವಿಂಗಡಿಸಬಹುದು? ನಿರ್ಗುಣತ್ವ ಸಿದ್ಧಿಸುವುದು ದೇಹಾಂತ್ಯದ ಮೇಲೆ ತಾನೆ? ಒಮ್ಮೆ ದೇಹಾಂತ್ಯವಾದ ಮೇಲೆ ಆತ್ಮ ನಿರ್ಗುಣವೇ ಅಲ್ಲವೇ?

ತೇಜಸ್ವಿನಿ ಹೆಗಡೆ said...

ಅಕ್ಕಾ,

ಆತ್ಮಗಳಲ್ಲಿಯೂ ‘ತರ ತಮ’ವಿರುತ್ತದೆ ಎಂದು ಸವಿವರವಾಗಿ ನನ್ನ ತಂದೆಯವರಿಂದು ಹೇಳಿದರು... ನಿಮ್ಮ ಸಂವಾದ ಈಗ ಮತ್ತೂ ಸ್ಪಷ್ಟವಾಯಿತು. ತುಂಬಾ ಧನ್ಯವಾದಗಳು.

ಸುಪ್ತದೀಪ್ತಿ suptadeepti said...

ಸುನಾಥ ಕಾಕಾ, ನನ್ನ ಯೋಚನೆಗಳು ನಿಮಗೆ ಸಮಾಧಾನ ಕೊಟ್ಟದ್ದು ಸಂತೋಷ. ನೀವೆಲ್ಲ ಕೇಳುವ ಪ್ರಶ್ನೆಗಳು ನನ್ನ ಯೋಚನೆಗಳನ್ನು ಒಂದು ಓಟದಲ್ಲಿ, ಓಘದಲ್ಲಿ ತಂದು ನಿಲ್ಲಿಸುತ್ತವೆ. ಆದ್ದರಿಂದ ಸಂದೇಹಗಳನ್ನು ವ್ಯಕ್ತಪಡಿಸುವ ನಿಮಗೆ ಮತ್ತು ಉಳಿದವರಿಗೆ ಧನ್ಯವಾದಗಳು.

ಚಿಂಪಾಂಜಿ ಮತ್ತು ಮಂಗಗಳ ಬಗ್ಗೆ- ಸುಮ್ಮನೇ ತಮಾಷೆಗೆ ಬರೆದೆ. ಹಾಗಿದ್ದರೂ ಇರಬಹುದು ಅನ್ನುವ ಒಂದು ಪರ್ಯಾಯ ಕುತೂಹಲಕ್ಕಾಗಿ, ಅಷ್ಟೇ.


ತೇಜು, ನಿಮ್ಮ ತಂದೆಯವರನ್ನು ಭೇಟಿಯಾಗಲೇಬೇಕೆಂಬ ನನ್ನ ಹಂಬಲ ಇನ್ನೂ ಏರುವಂತಾಯ್ತು ನಿನ್ನ ಉತ್ತರದಿಂದ. ಅವರಿಗೂ ಧನ್ಯವಾದಗಳನ್ನು ತಿಳಿಸು. ಹಾಗೇನೇ, ಅವರು ಏನೆಂದರು ಅನ್ನುವುದನ್ನು ಇಲ್ಲಿ ನೀನು ಹಂಚಿಕೊಳ್ಳಲು ಸಾಧ್ಯವೆ? ನಮ್ಮ ಅರಿವಿನ ವ್ಯಾಪ್ತಿಯೂ ವಿಸ್ತರಿಸಲಿ.

Anonymous said...

ಸುಪ್ತದೀಪ್ತಿಯವರೆ,
ಹಾಗಾದರೆ, ನನ್ನ ಆತ್ಮದ ಏಳ್ಗೆಗಾಗಿ ನಾನು(ಅಂದ್ರೆ ನನ್ನ ದೇಹ) ಲೋಕದಲ್ಲಿ ಒಳ್ಳೆಯ ಕೆಲಸ ಮಾಡಬೇಕೆ? ಇದು ಒಂದು ರೀತಿಯ ಅಹಂ ಅಲ್ಲವೇ? ಈ ಅಹಂ ನಶಿಸುವ ತನಕ ಮುಕ್ತಿಯಿಲ್ಲ ಅಲ್ಲವೇ? paradox ಆಯಿತಲ್ಲ? :-)

ನಾನೂ ಉತ್ತರ ಹುಡುಕುತ್ತಿದ್ದೇನೆ....

-seekar

ಸುಪ್ತದೀಪ್ತಿ suptadeepti said...

ಅನಾಮಿಕರೆ, "ನಾನು ಒಳ್ಳೆಯ ಕೆಲಸ ಮಾಡಿದೆ" ಅನ್ನುವ "ಮಮ"ಕಾರ ಇಲ್ಲದಿದ್ದರೆ "ಅಹಂ" ಹೇಗಾಗುತ್ತದೆ?
ನಾವು ಮಾಡಬೇಕಾದ ಕರ್ತವ್ಯಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದರೆ-
ಗುರುಹಿರಿಯರಿಗೆ, ಸಹಚರರಿಗೆ, ಸಂಗಾತಿಗಳಿಗೆ, ಸಮಾಜಕ್ಕೆ ಬದ್ಧರಾಗಿದ್ದರೆ-
ಅದು "ಅಹಂ" ಹೇಗಾಗುತ್ತದೆ? ಇವೆಲ್ಲವೂ ಒಳ್ಳೆಯತನಗಳೇ ತಾನೇ!

Anonymous said...

ಸುಪ್ತದೀಪ್ತಿಯವರೆ,
ಇಲ್ಲಿ ವಿಷಯ, ದೇಹ ತಾನು "ಸನ್ಮಾರ್ಗ"ದಲ್ಲಿ ನಡೆದು ಒಳಗಿನ ಆತ್ಮವನ್ನು ಕೊನೆಯಲ್ಲಿ ನಿರಾಕಾರನಾದ ಪರಮಾತ್ಮನಲ್ಲಿ ಲೀನವಾಗುವಂತೆ ಮಾಡುವುದು, ಅಲ್ಲವೆ? ಈ ಒಂದು ಗುರಿ ಮನಸ್ಸಿನಲ್ಲಿರದೆ, ಮನುಷ್ಯ ಬರೀ ಕರ್ತವ್ಯ ಮಾಡುತ್ತ ಹೋದರೆ ಅದು ಒಳ್ಳೆಯ ಕಾರ್ಯವಾಗಬಹುದು ಅಥವ ಕೆಟ್ಟದ್ದೂ ಆಗಬಹುದು. ಉದಾ: ಕಳ್ಳನ ಮಗ, ಫಲಾಪೇಕ್ಷೆಯಿಲ್ಲದೆ , ಕದಿ ಎನ್ನುವ ಅಪ್ಪನ ಮಾತು ಕೇಳುವ ತನ್ನ ಕರ್ತವ್ಯ ಮಾಡಿದರೆ, ಅದು ಒಳ್ಳೆಯ ಕಾರ್ಯವೆ? ಫಲಾಪೇಕ್ಷೆಯಿಲ್ಲದೆ ನಾನು ಕರ್ತವ್ಯ ಮಾಡಿದರೂ ಅದರ ಪಾಪ/ಪುಣ್ಯ ನನಗಂಟುವುದು ನಿಜ. ಇದು cause and effect ನಿಯಮ. ಇದನ್ನು ಮೀರಲು ನಾನು ಸರಿ-ತಪ್ಪುಗಳ ವಿವೇಚನೆಯನ್ನು ಬಳಸಿದೊಡನೆ,ಅಲ್ಲಿ ನನ್ನ ಅಹಂ ಬಂದು ನಿಲ್ಲುತ್ತದೆ.

-seekar

ಸುಪ್ತದೀಪ್ತಿ suptadeepti said...

ಅನಾಮಿಕ ಸೀಕರ್, ಉತ್ತರ ನಿಮ್ಮ ಮಾತಿನಲ್ಲೇ ಅಡಗಿದೆ...

ಗುರಿ ಕಣ್ಣ ಮುಂದೆ ನಿಚ್ಚಳವಾಗಿದ್ದು, ಒಳ್ಳೆಯ ಮಾನವೀಯ ನೆಲೆಯಿಂದ ತನ್ನ ನಿಸ್ವಾರ್ಥ ಕರ್ತವ್ಯವನ್ನು ಮಾಡುತ್ತಿದ್ದರೆ ಅಲ್ಲಿ "ಅಹಂ" ಪ್ರವೇಶವಾಗಲಾರದು, ಆಗಬಾರದು; ಹೌದೆ?
ನಿಸ್ವಾರ್ಥ ಮುಕ್ತಿಯ ಗುರಿಯಿಲ್ಲದ ಸಾಧನಾಪಥ ಅಹಂ-ಲೇಪಿತವಾಗಿಲ್ಲದಿದ್ದರೂ ಪಾಪರಹಿತವಾದದ್ದಲ್ಲ, ಅದು ನಿಮ್ಮ ಮಾತಿನಲ್ಲೇ ಇದೆ.

ಮುಕ್ತಿಯ ಗುರಿಯಿರಿಸಿಕೊಳ್ಳುವುದೇ ಅಹಂ-ಪೂರಿತ ಅನ್ನುವ ವಾದವೂ ಇದೆ. ಇದನ್ನು ಒಪ್ಪಲಾರೆ. ಈ 'ನಾನು ಎಂಬ ದೇಹ'ದೊಳಗಿನ ಆತ್ಮ ಆ ನಿರ್ಗುಣ ಪರಮಾತ್ಮನ ತುಣುಕಾಗಿರುವಾಗ, ಮನೆಯಿಂದ ಹೊರಗೆ ಅಲೆಯುತ್ತಿರುವ ಮಗುವನ್ನು ಮತ್ತೆ ಮನೆಗೆ ಕರೆತರುವ ಬಂಧುವಿನಂತೆ ಈ ದೇಹದ ಕೆಲಸ, ಆತ್ಮವನ್ನು ಪರಮಾತ್ಮನೆಡೆ ಒಯ್ಯುವ ಕೆಲಸ. ಇದರಲ್ಲಿ ಅಹಂ ನುಸುಳಬಾರದು. ಸುಳಿದರೆ, ನಿಸ್ವಾರ್ಥ ಅನ್ನುವ ಪದಕ್ಕೆ ಅರ್ಥವಿರುವುದಿಲ್ಲ.

Anonymous said...

**"ಗುರಿ ಕಣ್ಣ ಮುಂದೆ ನಿಚ್ಚಳವಾಗಿದ್ದು, ಒಳ್ಳೆಯ ಮಾನವೀಯ ನೆಲೆಯಿಂದ ತನ್ನ ನಿಸ್ವಾರ್ಥ ಕರ್ತವ್ಯವನ್ನು ಮಾಡುತ್ತಿದ್ದರೆ ಅಲ್ಲಿ "ಅಹಂ" ಪ್ರವೇಶವಾಗಲಾರದು, ಆಗಬಾರದು; ಹೌದೆ?"

--ಆಗಬಾರದು? ಹೌದು. ಆಗಲಾರದು? ಅಲ್ಲ. ನಿಜಜೀವನದಲ್ಲಿ ನಾನು "ಒಂದು" ರೀತಿ ಬದುಕುತ್ತೇನೆ ಎನ್ನುವುದರಲ್ಲಿ ಅಹಂ ಇದೆಯೆಂದು ನನ್ನ ಅಭಿಪ್ರಾಯ. ಇದನ್ನು ನಾವು ಆರಿಸುವ ಪ್ರತಿ ಹೆಚ್ಚೆಯಲ್ಲೂ ಕಾಣುತ್ತೇವೆ. ಊದಾ: ಕುಡಿತದ ಪಾರ್ಟಿಗೆ ಹೋಗುವುದೋ, ಭಜನೆಗೋ?

ಕಿಂಚಿತ್ತೂ ಅಹಂ ಇಲ್ಲದೆ ಈ ಜಗತ್ತಿನಲ್ಲಿ ಬದುಕಲಾರೆವು. ಬಹುಶಃ, ನಾವು ಇಲ್ಲಿರುವುದೇ ನಮಗೆ ಅಹಂ ಇದೆಯೆನ್ನುವುದಕ್ಕೆ ಸಾಕ್ಷಿ. (Just to be sure we are on the same page, ನಾನು ಅಹಂ ಅನ್ನು ಇದುವರೆಗೂ ego ಎಂದು ಬಳಸುತ್ತಿದ್ದೇನೆ.)

**"ಈ 'ನಾನು ಎಂಬ ದೇಹ'ದೊಳಗಿನ ಆತ್ಮ ಆ ನಿರ್ಗುಣ ಪರಮಾತ್ಮನ ತುಣುಕಾಗಿರುವಾಗ, ಮನೆಯಿಂದ ಹೊರಗೆ ಅಲೆಯುತ್ತಿರುವ ಮಗುವನ್ನು ಮತ್ತೆ ಮನೆಗೆ ಕರೆತರುವ ಬಂಧುವಿನಂತೆ ಈ ದೇಹದ ಕೆಲಸ, ಆತ್ಮವನ್ನು ಪರಮಾತ್ಮನೆಡೆ ಒಯ್ಯುವ ಕೆಲಸ. ಇದರಲ್ಲಿ ಅಹಂ ನುಸುಳಬಾರದು."

--ಅಹಂ ನುಸುಳಬಾರದು, ನಿಜ, ಆದರೆ ನಮಗೆ ಅರಿವಿಲ್ಲದೆಯೇ ನುಸುಳತ್ತೆ :-) ಉದಾ: ನಾನು ದೇವರ ಧ್ಯಾನದಲ್ಲಿ ತೊಡಗಿರುವುದರಿಂದ ಬೇರೆಯವರಿಗಿಂತ ಒಳ್ಳೆಯ ವ್ಯಕ್ತಿ ಅಥವ ಸರಿ ವ್ಯಕ್ತಿ ಎಂದೆನಿಸುವುದೂ ಅಹಂ!

ಕೊನೆಗೆ ನಾನು ಅಲ್ಲಿಗೇ ಬಂದು ನಿಂತೆ :-) ಅಹಂ ಹೋಗಬೇಕೆಂದು ಶ್ರಮಿಸುವುದೂ ಅಹಂ! ಒಂದಾನೊಂದು ದಿನ ಆತ್ಮ ದೇಹದಿಂದ ಬೇರ್ಪಟ್ಟು ತನಗೂ,ಗಾಳಿಗೂ,ಹುಲ್ಲಿಗೂ, ವಿಶ್ವದ ಪ್ರತಿ creationಗೂ ವ್ಯತ್ಯಾಸವೇ ಇಲ್ಲ ಎಂದು ಮನಗಾಣುತ್ತೆ. ಅದು ಅಹಂ ಇಲ್ಲದ egoless state ಆಗುತ್ತೆ. ಅಹಂ ಹೋಗಬೇಕೆಂದು ಶ್ರಮಿಸುವುದರಿಂದ ಈ ಅಹಂ ಇಲ್ಲದ ಸ್ಥಿತಿ ಒಂದು ದಿನ ಸಿಗುವುದೇ?


-ಸೀಕರ್

ಸುಪ್ತದೀಪ್ತಿ suptadeepti said...

ಅನಾಮಿಕ ಸೀಕರ್,
ಇದೀಗ ಒಂದು ವಿಷಯ ವಿಷದವಾಯ್ತು... ನೀವು ಹೇಳುತ್ತಿದ್ದ "ಅಹಂ" ಮತ್ತು ನಾನು ಹೇಳುತ್ತಿದ್ದ "ಅಹಂ" ಒಂದಿಷ್ಟು ಬೇರೆ ಬೇರೆಯೆಂದು...

ನಾನು ಇದುವರೆಗೆ "ಅಹಂ" ಪದವನ್ನು- egoistic pride, ಅಹಂಕಾರ- ಅನ್ನುವ ಅರ್ಥಗಳಲ್ಲಿ ಬಳಸುತ್ತಿದ್ದೆ, ಹೊರತಾಗಿ ಭೌತಿಕವಾಗಿ ನಮಗೆಲ್ಲ ಇರುವ ಬೇರೆ ಬೇರೆ ಗುರುತುಗಳಾದ "ನಾನು" identity ಅಲ್ಲ. ಈ identity ಅಹಂ ನಮ್ಮ ನೆಲೆಯನ್ನು ಗುರುತಿಸಿಕೊಳ್ಳಲು ಅಗತ್ಯವಾದುದು.

ಈ ಹಿನ್ನೆಲೆಯಲ್ಲಿ, ನಮ್ಮ ಕೆಲಸಗಳಲ್ಲಿ ಅಹಂಕಾರ ನುಸುಳದೆ ಬರಿಯ ನಾನು-ಭಾವ ಇರಬಹುದಷ್ಟೆ! ವ್ಯಕ್ತಿ-ವ್ಯಕ್ತಿಯಿಂದ ಬೇರ್ಪಡಿಸಿಕೊಳ್ಳಲು ಈ ಸಣ್ಣ ಅಹಂ-ಭಾವ ಬೇಕಷ್ಟೆ. ಇದು ಸಾಧನೆಗೆ ಪೋಷಕವಾಗುತ್ತದೆಯೇ ಹೊರತು ಮಾರಕವಾಗದು. ಇನ್ನೊಬ್ಬರ ತಪ್ಪಿನಿಂದ, ಗುರುಗಳ ಪಾಠದಿಂದ ತಿಳುವಳಿಕೆ ಹೊಂದಲು ಈ ಸಣ್ಣ ಅಹಂ ಬೇಕೇ ಬೇಕು. ಅದು ಅರಿವಿನ ಅಹಂ. ಈ ಅಹಂ ಇಲ್ಲದೆ, ನಿಜ, ಬದುಕಲಾರೆವು, ಬಾಳಲಾರೆವು. ಈ ಸಣ್ಣ ನಾನು ಭಾವವನ್ನೂ ಮೀರಿದರೆ ಮುಕ್ತಿಯೇ ಸರಿ. ಅಲ್ಲಿಯವರೆಗೆ ನಾವ್ಯಾರೂ ಇನ್ನೂ ಬೆಳೆದಿಲ್ಲ ಅನ್ನುವುದಕ್ಕೆ ಈ ಚರ್ಚೆಯೇ ಸಾಕ್ಷಿ. ಗುರಿಯ ಅರಿವಿದೆ, ಹಾದಿಯ ಗುರುತಿದೆ, ಸಾಗಬೇಕಾಗಿದೆ.

"ದೇವಸೇವೆಯಲ್ಲಿ (ಅಥವಾ ಯಾವುದೇ ಸೇವೆಯಲ್ಲಿ) ತೊಡಗಿಕೊಂಡದ್ದರಿಂದ ಇತರರಿಂದ ಉತ್ತಮ"ನೆಂಬ ಭಾವನೆ ಅಹಂಕಾರವಾಗುತ್ತದೆ, ಅಲ್ಲವೆ? ಅದು ಸರಿಯಲ್ಲ, ನುಸುಳವಾರದು; ಸರಿಯಾದ ಅರಿವು-ತಿಳಿವು ಇದ್ದಲ್ಲಿ ಅದು ನುಸುಳಲಾರದು ಅನ್ನುವುದು ನನ್ನ ಯೋಚನೆ. ಈ ನೆಲೆಯಲ್ಲಿ, ಮುಕ್ತಿಯ ಮಾರ್ಗ ಅಹಂಕಾರವಿಲ್ಲದ ಹಾದಿ ಅಂತ ನನ್ನ ನಂಬಿಕೆ.

ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಇಲ್ಲಿ ತಿಳಿಸುತ್ತಿರುವುದಕ್ಕಾಗಿ ಧನ್ಯವಾದಗಳು. ಈ ಪೂರ್ಣ ಸಂವಾದವನ್ನು ಒಂದು ಲೇಖನವಾಗಿಸಿ ಮುಖ್ಯಪುಟದಲ್ಲೇ ಹಾಕಲು ನಿಮ್ಮ ಅಭ್ಯಂತರವಿದೆಯೆ? ತಿಳಿಸಿ.

Anonymous said...

ಸುಪ್ತದೀಪ್ತಿಯವರೆ,
"ಗುರಿಯ ಅರಿವಿದೆ, ಹಾದಿಯ ಗುರುತಿದೆ, ಸಾಗಬೇಕಾಗಿದೆ." ಬಹಳ ಚೆನ್ನಾಗಿ ಹೇಳಿದಿರಿ. ಇದು ಬಹುಶಃ ನಮ್ಮ ಸಂವಾದದ ಸಂಕ್ಷೀಪ್ತ ಸಾರ :-) ನಿಮ್ಮ ಮುಖಪುಟದಲ್ಲಿ ಇದನ್ನು ಹಾಕಲು ನನ್ನದೇನೂ ಅಭ್ಯಂತರವಿಲ್ಲ. ಹಾಗೆಯೇ, ನಾನು ಪದೇ ಪದೇ ಇಲ್ಲಿ ಬಂದು ನಿಮ್ಮನ್ನು ಕಾಡಲು ನಿಮ್ಮದೇನೂ ಅಭ್ಯಂತರವಿಲ್ಲವಷ್ಟೇ? :-) Seriously, ನಿಮ್ಮ ಬರವಣಿಗೆಯ ಶೈಲಿ ಮತ್ತು ಯೋಚನೆಯ ಲಹರಿ ನನಗೆ ಬಹಳ ಇಷ್ಟವಾಯಿತು. ನಿಮ್ಮ ಜೊತೆಗಿನ ಪ್ರಶ್ನೋತ್ತರಗಳಲ್ಲಿ ನಾನು ಬಹಳಷ್ಟು ಕಲಿತಂತೆ ಭಾಸವಾಯಿತು. ಧನ್ಯವಾದಗಳು!

-ಸೀಕರ್

ಸುಪ್ತದೀಪ್ತಿ suptadeepti said...

ಅನಾಮಿಕ ಸೀಕರ್,
ನಿಮ್ಮ ಒಪ್ಪಿಗೆಗೆ ಧನ್ಯವಾದಗಳು. ಈ ಒಪ್ಪಿಗೆ ಕೇಳಿದ ಅರ್ಥ- 'ಈ ಸಂವಾದ ಇಲ್ಲಿಗೆ ನಿಲ್ಲಿಸಿ ಎಂದಲ್ಲ...' ಮರೆಯುವ ಮುನ್ನ ಕೇಳಿದ್ದು, ಅಷ್ಟೇ.

ಹಾಗೇನೇ, ನೀವು ಸಂದೇಹಗಳನ್ನು ವ್ಯಕ್ತಪಡಿಸುವುದಾಗಲೀ, ನಾನು ಏನೋ ನನಗರಿತ ಉತ್ತರ ಹೇಳುವುದಾಗಲೀ ಇಲ್ಲಿ ಬಾಹ್ಯ ಪ್ರಕ್ರಿಯೆಗಳಷ್ಟೇ. ಈ ಪ್ರಕ್ರಿಯೆಯಲ್ಲಿ ನಾವಿಬ್ಬರೂ ಮತ್ತು ಓದುಗರೂ ಪ್ರಶ್ನಾತೀತವಾದೊಂದು ಕಲಿಕೆಯಲ್ಲಿ ತೊಡಗಿಕೊಂಡಿರುತ್ತೇವೆ ಅನ್ನುವುದು ಸತ್ಯ. ನಿಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ.