ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೯
ಬ್ರೈನಿಗೆ ಸರ್ಪ್ರೈಸ್- ಬ್ರೈಸ್ ಕ್ಯಾನಿಯನ್
ಸೆಪ್ಟೆಂಬರ್ ೩ ಗುರುವಾರ.
ಸೆಡಾರ್ ಸಿಟಿಯಿಂದ ಹೊರಟು ಸೆಡಾರ್ ಬ್ರೇಕ್ಸ್ ನೋಡಿಕೊಂಡು, ರೆಡ್ ಕ್ಯಾನಿಯನ್ ಮುಖಾಂತರ ಬ್ರೈಸ್ ಕ್ಯಾನಿಯನ್ ತಲುಪಿದಾಗ ಅಪರಾಹ್ನ ಮೂರೂವರೆ.
ನಮ್ಮ ಕ್ಯಾಂಪ್ ಸೈಟ್ ಕಡೆ ಹೋಗಿ, ನಮ್ಮ ಹೆಸರು ಅಲ್ಲಿ ನಮೂದಾಗಿರುವುದನ್ನು ನೋಡಿ, ವಿಸಿಟರ್ ಸೆಂಟರಿಗೆ ಬಂದೆವು, ಸುಮಾರು ನಾಲ್ಕೂಕಾಲಕ್ಕೆ. ಕಾರಿನ ಸಿಗರೇಟ್ ಲೈಟರ್ ಡಮಾರ್ ಆಗಿದ್ದರಿಂದ ಕ್ಯಾಮರಾ ಬ್ಯಾಟರಿಗಳನ್ನ ಚಾರ್ಜ್ ಮಾಡಲಾಗುತ್ತಿರಲಿಲ್ಲವಲ್ಲ! ನಮ್ಮಿಬ್ಬರ ಕ್ಯಾಮರಾಗಳಿಗೂ ಒಂದೇ ತರದ ಬ್ಯಾಟರಿಗಳು ಮತ್ತು ನಮ್ಮಲ್ಲಿ ಒಂದು ಹೆಚ್ಚುವರಿ ಬ್ಯಾಟರಿಯಿತ್ತು. ನನ್ನ ಕ್ಯಾಮರಾ ಬ್ಯಾಟರಿ ಖಾಲಿಯಾಗುತ್ತಿದ್ದು, ಅದನ್ನು ವಿಸಿಟರ್ ಸೆಂಟರಿನಲ್ಲಿ ಚಾರ್ಜಿಗಿಡಲು ಕೊಟ್ಟೆವು- ಏಳು ಗಂಟೆಯ ಮೊದಲು ಪಡೆಯುತ್ತೇವೆಂಬ ಕರಾರಿನೊಡನೆ.
ಬ್ರೈಸ್ ಪಾಯಿಂಟ್ ಕಡೆ ಹೋದಾಗ ಸಣ್ಣಗೆ ಮಳೆ ಹನಿಯಲಾರಂಭಿಸಿತು. ಕಳೆದ ಬಾರಿ ಸುರಿಯುವ ಹಿಮದಡಿ ನೋಡಿದ ಕೆಂಪು-ಕಿತ್ತಳೆ-ಬೂದು ‘ಹೂಡೂ’ಗಳು ಈ ಸಲ ಎರಡೆರಡು ಬಣ್ಣಬಿಲ್ಲುಗಳ ನೆರಳಲ್ಲಿ ತಲೆಯೆತ್ತಿ ನಿಂತಿದ್ದವು.
ಅಲ್ಲಿಂದ ಮುಂದೆ- ಪರಿಯಾ ಪಾಯಿಂಟ್, ಯೊವಿಂಪಾ ಪಾಯಿಂಟ್, ರೈನ್ ಬೋ ಪಾಯಿಂಟ್ ತನಕ ಡ್ರೈವ್ ಹೋಗಿ, ಹಿಂದೆ ಬರುವಾಗ ನಡುನಡುವಿನ ತಾಣಗಳಲ್ಲೆಲ್ಲ ನಿಂತು ನೋಡಿಕೊಂಡು ಬಂದೆವು.
ಕ್ಯಾಮರಾ ಬ್ಯಾಟರಿಯನ್ನು ಹಿಂದಕ್ಕೆ ಪಡೆದು ಸನ್ ಸೆಟ್ ಪಾಯಿಂಟ್ ಕಡೆ ಸವಾರಿ ಸಾಗಿತು. ಸೂರ್ಯಾಸ್ತ ನೋಡಿ, ಅಲ್ಲಿಂದಲೇ ಶುರುವಾಗುವ ಒಂದು ಟ್ರೈಲಿನಲ್ಲಿ, ಅರೆಗತ್ತಲಿನಲ್ಲಿ ಒಂದಷ್ಟು ದೂರ ಕ್ಯಾನಿಯನ್ ಒಳಗೆ ಕೆಳಗೆ ಇಳಿದೆವು.
ಸಾಕಷ್ಟು ಮಬ್ಬು ಹರಡಿ ಹೆಜ್ಜೆ ತಪ್ಪಬಹುದೇನೋ ಅನ್ನಿಸುವ ಹಾಗಾದಾಗ ತಿರುಗಿ ಮೇಲೆ ಬಂದು ಕ್ಯಾಂಪ್ ಸೈಟ್ ಸೇರಿ ಕಾರ್ ಹೆಡ್ ಲೈಟ್ ಬೆಳಕಿನಲ್ಲೇ ಟೆಂಟ್ ಪಿಚ್ ಮಾಡಿ, ಊಟ ಮುಗಿಸಿದೆವು. ಮರುದಿನ ಸೂರ್ಯೋದಯ ನೋಡಲು ಹೋಗಬೇಕೆಂದು ನಾಲ್ಕೂವರೆಗೇ ಅಲಾರಂ ಇಟ್ಟುಕೊಂಡು ಮಲಗಿದಾಗ ರಾತ್ರೆ ಹನ್ನೊಂದೇ ದಾಟಿಹೋಯ್ತು.
ಮರುದಿನ- ಶುಕ್ರವಾರ, ಸೆಪ್ಟೆಂಬರ್ ೪.
ಅಲಾರಂ ದನಿಗೆ ಕಷ್ಟದಿಂದಲೇ ಕಣ್ಣುಬಿಟ್ಟು, ಮುಖ ತೊಳೆದುಕೊಂಡು, ಸೂರ್ಯೋದಯ ತಾಣಕ್ಕೆ ಹೋಗಿ ಸೇರಿದಾಗ ಬೇರಾವ ಕಾರ್ ಕೂಡಾ ಅಲ್ಲಿರಲಿಲ್ಲ. ಚಳಿಗಾಳಿ ಗಾಜನ್ನೇ ಕೊರೆಯುವಂತೆ ಸುಳಿಯುತ್ತಿತ್ತು. ಆಗ ನಮ್ಮ ಮೆದುಳಿಗೆ ಸೂರ್ಯನಿಲ್ಲದೆಯೇ ಬೆಳಕಾಯಿತು, ನಾವು ಒಂದು ಗಂಟೆ ಬೇಗನೇ ಬಂದಿದ್ದೆವು. ಅರುಣೋದಯ ಆರು ಗಂಟೆಗೆ. ಕಾರಲ್ಲೇ ಮುಕ್ಕಾಲು ಗಂಟೆ ಕಾದಿದ್ದು ಐದೂಮುಕ್ಕಾಲಿಗೆ ಐವತ್ತು ಹೆಜ್ಜೆ ನಡೆದು ರಿಮ್ ಬದಿಗೆ ಹೋದೆವು. ಅಲ್ಲಾಗಲೇ ಹಲವರು ಜಮಾಯಿಸಿದ್ದರು. ಗಾಳಿ ನಡುನಡುವೆ ಗಸ್ತು ತಿರುಗುತ್ತಿತ್ತು, ಎಲ್ಲರನ್ನೂ ‘ವಿಚಾರಿಸಿಕೊಳ್ಳುತ್ತಾ’. ಫ್ಲಾನೆಲ್ ಅಂಗಿಯ ಮೇಲೆ ಜಾಕೆಟ್, ಅದರ ಮೇಲೆ ಶಾಲು ಸುತ್ತಿಕೊಂಡರೂ ನನ್ನ ಮೂಗಿಗೆ ಗಾಳಿಯ ಸುತ್ತಾಟ ಮೆಚ್ಚುಗೆಯಾಗಲಿಲ್ಲ, ಗುರುಗುಟ್ಟಲು ಶುರುವಿಟ್ಟಿತು.
ಆರೂಕಾಲರ ಸಮಯ, ಪೂರ್ವ ರಂಗೇರಿದಾಗಲೂ ನನ್ನ ಮೂಗಿನ ರಂಗಿಳಿಯಲಿಲ್ಲ. ಒಸರು ಕರಗಲಿಲ್ಲ.
ಅಂತೂ ಇಂತೂ ಮರುತನನ್ನೂ ಮೂಗನ್ನೂ ಸಂಭಾಳಿಸಿಕೊಂಡು ಹೊನ್ನಹೊಳೆಯ ಎಳೆಗಳಲ್ಲಿ ಹೂಡೂಸ್ ಮೀಯುವುದನ್ನು ಸೆರೆಹಿಡಿದೆ.
ಅಲ್ಲಿಂದಲೂ ಹೊರಡುವ ಟ್ರೈಲ್ ಹಿಡಿದು ಒಂದಿಷ್ಟು ಕೆಳಗಿಳಿದೆವು.
ತಿಂಡಿ ಮುಗಿಸಿ, ಟೆಂಟ್ ಬಿಚ್ಚಿ ಹೊರಟು, ಸ್ಪೂರ್ತಿ ಕೊಡುವ ಇನ್‍ಸ್ಪಿರೇಶನ್ ಪಾಯಿಂಟ್ ಮತ್ತು ಮತ್ತೊಮ್ಮೆ ಬ್ರೈಸ್ ಪಾಯಿಂಟ್‍ಗಳಲ್ಲಿ ಸುತ್ತಾಡಿದೆವು.
ಹತ್ತು ನಲ್ವತ್ತಕ್ಕೆ ಹೊರಟು ಕ್ಯಾನಿಯನ್ನಿನ ಗೇಟಿನಿಂದ ನಾಲ್ಕು ಮೈಲು ಹೊರಗಿದ್ದ ‘ಮೊಸ್ಸಿ ಕೇವ್’ ಮತ್ತು ಅದರ ಬಳಿಯೇ ಸಾಗುತ್ತಿದ್ದ ಉಲ್ಲಸಿತ ನೀರ ಝರಿ ನೋಡಿಕೊಂಡು...
...ಹೈವೇ ಹಿಡಿದಾಗ ಹನ್ನೊಂದು ನಲವತ್ತು.
ಮುಂದಿನ ಕಂತಿನಲ್ಲಿ- ಗ್ರ್ಯಾಂಡ್ ಸ್ಟೇರ್ ಕೇಸ್ ಎಸ್ಕಲಾಂಟೇ ಮತ್ತು ಕ್ಯಾಪಿಟಲ್ ರೀಫ಼್ ಅನಾವರಣಗೊಳ್ಳಲಿವೆ.