ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday, 11 October 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೫

ಗ್ರ್ಯಾಂಡ್ ಕ್ಯಾನಿಯನ್- ಉತ್ತರ ದಡದಲ್ಲಿ ನಮ್ಮ ದೇವರು....

ಸೆಪ್ಟೆಂಬರ್ ೧ ಮಂಗಳವಾರ:
ಮೂರು ದಿನಗಳು ಬೇಗನೇ ಎದ್ದಿದ್ದ ನಾವು ಇಂದು ಸ್ವಲ್ಪ ನಿಧಾನಕ್ಕೇ ಎದ್ದೆವು. ಟೆಂಟಿನಿಂದ ಹೊರಗೆ ಬಂದಾಗ ಗೊತ್ತಾಯ್ತು, ಇಳಿಜಾರಿನಲ್ಲಿದ್ದ ನಮ್ಮ ಕ್ಯಾಂಪ್ ಸೈಟಿನ ಆಚೆಗೊಂದು ಕಣಿವೆ. ಅದರ ಹತ್ತಿರ ಹೋಗಿ ಅದೆಷ್ಟು ಆಳವಿದೆಯೆಂದು ನೋಡುವ ಇಚ್ಛೆ ಬರಲಿಲ್ಲ. ಹಾಗೇ ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿ, ಟೆಂಟ್ ಬಿಚ್ಚಿ ಹೊರಟಾಗ ಗಂಟೆ ಒಂಭತ್ತು. ನಿನ್ನೆ ರಾತ್ರೆ ಇಲ್ಲಿಗೆ ಬರುತ್ತಿರುವಾಗ ಹಾದಿ ಬದಿಯಲ್ಲಿ ಮೇಯುತ್ತಿದ್ದ ಜಿಂಕೆ ಹಿಂಡುಗಳಲ್ಲಿ ಒಂದಾದರೂ ಈ ಬೆಳಗಿನ ಬೆಳಕಲ್ಲಿ ಕ್ಯಾಮರಾ ಕಣ್ಣಿಗೆ ಬೀಳಬಹುದೆಂದು ಸ್ವಲ್ಪ ನಿಧಾನವಾಗಿಯೇ ಸಾಗಿದರೂ ಒಂದೇ ಒಂದು ಜಿಂಕೆಯೂ ನಮ್ಮ ಕಣ್ಣಿಗೂ ಬೀಳಲಿಲ್ಲ. ನಿನ್ನೆ ರಾತ್ರೆ ಬರುವ ಹಾದಿಯುದ್ದಕ್ಕೂ, ಫ್ರೀವೇ ಬದಿಯಲ್ಲೇ ಮೇಯುತ್ತಿದ್ದ ಅವುಗಳನ್ನು ಅಲ್ಲಲ್ಲಿ ಕಂಡದ್ದೆಲ್ಲ ಕನಸೇ ಎಂದು ಪ್ರಶ್ನಿಸಿಕೊಳ್ಳುವಂತಾಯ್ತು. ಹಾಗೇನೇ ಕಾರಿನ ಹೆಡ್ ಲೈಟಿನಲ್ಲಿ ಹೊಳೆಯುತ್ತಿದ್ದ ಅವುಗಳ ಹೊಂಗಣ್ಣ ಹೊಳಪು, ಮೇಯುತ್ತಿದ್ದ ಜಿಂಕೆ ಥಟ್ಟನೆ ತಲೆಯೆತ್ತಿ ನೋಡುವಾಗಿನ ಸೋಜಿಗ, ಗಾಂಭೀರ್ಯ ನೆನಪಿನಲ್ಲಿ ಅಚ್ಚಾಗಿ ಕೂತು, ಕನಸಲ್ಲವೆಂದು ಸಾಂತ್ವನ ಕೊಟ್ಟಿವೆ.

ಮೊದಲಿಗೆ ವಿಸಿಟರ್ ಸೆಂಟರ್ ಬಳಿ ಹೋಗಿ ಅಲ್ಲಿಂದ ಬ್ರೈಟ್ ಏಂಜೆಲ್ ಪಾಯಿಂಟ್ ಕಡೆಗೆ ಸಣ್ಣ ಹೈಕಿಂಗ್. ಹದವಾದ ಏರಿಳಿತಗಳ ಈ ಹೈಕ್ ಒಂದೆರಡು ಕಡೆ ಬರಿಯ ಕಾಲುಹಾದಿ ಮಾತ್ರವೇ ಗುಡ್ಡದ ನೆತ್ತಿಯಲ್ಲಿ ಹಾಯುವಾಗ (ಎಡಬಲಗಳಲ್ಲಿ ಪ್ರಪಾತ!) ಅಮೋಘ ಅನುಭವ ಕೊಡುತ್ತದೆ. ಕೊನೆಯಲ್ಲಿ ಬ್ರೈಟ್ ಏಂಜೆಲ್ ಪಾಯಿಂಟ್ ಇದೆ. ಅಲ್ಲಿಂದ ಬಲಕ್ಕೆ ಬ್ರೈಟ್ ಏಂಜೆಲ್ ಕಣಿವೆ, ಎಡಕ್ಕೆ ಏಂಜೆಲ್ಸ್ ಗೇಟ್, ದೇವ ಟೆಂಪಲ್, ಬ್ರಹ್ಮ ಟೆಂಪಲ್, ಝೋರೋವಾಸ್ಟರ್ ಟೆಂಪಲ್ ಸಾಲಿನಲ್ಲಿ ಕಾಣುತ್ತವೆ. ಇಲ್ಲಿಂದ ದೇಗುಲಗಳ ಚಿತ್ರ ತುಸುವಾದರೂ ದಕ್ಕಿತು, ಸಮಾಧಾನವಾಯ್ತು.


ಏಂಜೆಲ್ಸ್ ಗೇಟ್, ದೇವ ಟೆಂಪಲ್, ಬ್ರಹ್ಮ ಟೆಂಪಲ್, ಝೋರೋವಾಸ್ಟರ್ ಟೆಂಪಲ್ ಸಾಲಿನಲ್ಲಿ...

ದೇವ ಟೆಂಪಲ್, ಬ್ರಹ್ಮ ಟೆಂಪಲ್- ಕ್ಲೋಸ್ ಅಪ್

ಬ್ರೈಟ್ ಏಂಜೆಲ್ ಕಣಿವೆಯ ಒಂದು ಬದಿ

ಬ್ರೈಟ್ ಏಂಜೆಲ್ ಕಣಿವೆ... ಬ್ರೈಟ್ ಏಂಜೆಲ್ ಟ್ರೈಲ್ (ಕಣಿವೆಯೊಳಗೆ ಕಾಲುಹಾದಿ)... ಬ್ರೈಟ್ ಏಂಜೆಲ್ ನದಿ...

ವಿಸಿಟರ್ ಸೆಂಟರಿನ ಬದಿಯಿಂದ ಇನ್ನೂ ಎರಡು ಮೂರು ಟ್ರೈಲ್ಸ್ ಹೊರಡುತ್ತವೆ, ನಾವು ಅವು ಯಾವುದರಲ್ಲೂ ನಮ್ಮ ಶೂ ಧೂಳು ಇರಿಸಲಿಲ್ಲ. ಕಾರನ್ನೇರಿ ಉತ್ತರ ದಡದ ಇನ್ನೆರಡು ಮುಖ್ಯ ತಾಣಗಳಾದ ಪಾಯಿಂಟ್ ಇಂಪೀರಿಯಲ್ ಮತ್ತು ಕೇಪ್ ರಾಯಲ್ ಕಡೆಗೆ ಹೊರಟೆವು. ಇವೆರಡೂ ತಾಣಗಳಲ್ಲೂ ಅವಸರವಸರದಲ್ಲೇ ಕೆಲವು ಫೋಟೋ ಹೆಕ್ಕಿಕೊಂಡದ್ದಾಯ್ತು.







ಅಪರಾಹ್ನ ಮೂರು ಗಂಟೆಗೆ ಇಲ್ಲಿಂದ ನೂರಮೂವತ್ತು ಮೈಲು ದೂರದಲ್ಲಿ ಆಂಟಲೋಪ್ ಸ್ಲಾಟ್ ಕ್ಯಾನಿಯನ್ ಟೂರ್ ನಿಗದಿಯಾಗಿತ್ತು. ಬೆಟ್ಟಗುಡ್ಡದ ರಸ್ತೆಯಲ್ಲಿ ಅಲ್ಲಿಗೆ ಎರಡೂವರೆಗೆ ತಲುಪಬೇಕಾಗಿತ್ತು. ಸಾವಕಾಶ ಮಾಡುವ ಅವಕಾಶವೇ ಇರಲಿಲ್ಲ. ಕೇಪ್ ರಾಯಲ್ ಪಾರ್ಕಿಂಗ್ ಲಾಟಿನಲ್ಲಿ ಕಾರೊಳಗೇ ಕೂತು ಡಬ್ಬಿಯೂಟ ಮುಗಿಸಿ, ಪರ್ಯಾಯ ಹೈವೇ ೮೯ ಸೇರಿದಾಗ ಮಧ್ಯಾಹ್ನ ಹನ್ನೆರಡೂಮುಕ್ಕಾಲು.

ಕ್ಲಿಫ್ ಡ್ವೆಲ್ಲರ್ಸ್, ಕ್ಲಿಫ್ ವ್ಯೂ, ಮಾರ್ಬಲ್ ಕ್ಯಾನಿಯನ್, ವರ್ಮಿಲಿಯನ್ ಕ್ಲಿಫ್, ಮುಂತಾದ ಮೂಲ ಇಂಡಿಯನ್ಸ್ ಪ್ರದೇಶಗಳನ್ನು ಹಾದು, ಮರುಭೂಮಿಯಂಥ ವಿಸ್ತಾರದಲ್ಲಿ ಕೆಳಗೆಲ್ಲೋ ಕೊರಕಲಿನಲ್ಲಿ ಸಾಗುವ ಕೊಲರಾಡೊ ನದಿಯನ್ನೂ ದಾಟಿ, ಬೆಟ್ಟದ ಏರಿಳಿತಗಳಲ್ಲಿ ಸಾಗಿ ಪೇಜ್ ಎನ್ನುವ ಊರಿಗೆ ಬಂದು ಸೇರಿದಾಗ ಎರಡೂನಲ್ವತ್ತು. ಅಲ್ಲಿಂದಲೇ ಮುಂದಿನ ಟೂರ್. ಅದರ ವಿವರ ಮುಂದಿನ ಕಂತಿಗೆ.

Sunday, 4 October 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೪

ಗ್ರ್ಯಾಂಡ್ ಕ್ಯಾನಿಯನ್- ದಕ್ಷಿಣ ದಂಡೆಯಲಿ ದೇಗುಲಗಳ ನೋಟ....
ಆಗಸ್ಟ್ ೩೦, ಭಾನುವಾರ; ೩೧, ಸೋಮವಾರ

ಗ್ರ್ಯಾಂಡ್ ಕ್ಯಾನಿಯನ್ ಪಡುದಂಡೆಯಿಂದ ಅಪರಾಹ್ನ ಒಂದೂವರೆಗೆ ಹೊರಟು ವಿಲಿಯಮ್ಸ್ ಮೂಲಕವಾಗಿ ಹೈವೇ-೪೦ರಲ್ಲಿ ದಕ್ಷಿಣ ದಂಡೆಯತ್ತ ಧಾವಿಸಿದೆವು. ಇಲ್ಲಿನ ಮಾಥರ್ ಪಾಯಿಂಟ್ ಬಹು ಜನಪ್ರಿಯ. ಅಲ್ಲಿಂದ ಪಶ್ಚಿಮಕ್ಕಿರುವ ಹೋಪಿ ಮತ್ತು ಪೀಮಾ ಪಾಯಿಂಟುಗಳಿಂದ ಸೂರ್ಯಾಸ್ತವಾಗುವಾಗ ಕಣಿವೆ ಸುಂದರವಾಗಿ ಕಾಣುತ್ತದೆನ್ನುವದು ಪ್ರತೀತಿ. ಹಾಗೆಯೇ, ಅಲ್ಲಿಗೆ ಸೂರ್ಯಾಸ್ತದ (ಸುಮಾರು ಆರು ಐವತ್ತೈದರ) ಮೊದಲು ಸೇರುವ ಉದ್ದೇಶದಿಂದ ೧೯೮ ಮೈಲು ಕ್ರಮಿಸಿ, ನ್ಯಾಷನಲ್ ಪಾರ್ಕಿನ ತೆಂಕಣ ಗೇಟ್ ದಾಟಿದಾಗ ಸಂಜೆ ಆರು ಗಂಟೆ.

ದಕ್ಷಿಣ ದಿಕ್ಕಿನ ಮುಖ್ಯದ್ವಾರದ ಫಲಕ (ಫೋಟೋ ತೆಗೆದದ್ದು ಮಾತ್ರ ಮರುದಿನ ಹೆಲಿಕಾಪ್ಟರ್ ಟೂರ್ ಮುಗಿಸಿ ಬರುವಾಗ)

ಇನ್ನು ಹೋಪಿ ಪಾಯಿಂಟ್ ಕಡೆ ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ, ಪೂರ್ವಕ್ಕಿರುವ ಯಾಕಿ ಪಾಯಿಂಟ್ ಕಡೆ ಹೋಗುವ ಯೋಚನೆ ಮಾಡಿದೆವು.
ಮಾಥರ್ ಕ್ಯಾಂಪ್ ಗ್ರೌಂಡ್ ಕಡೆ ಹೋಗಿ ನಂತರ ಮಾಥರ್ ಪಾಯಿಂಟ್ ಕಡೆ ಹೋದೆವು. ಅಷ್ಟರಲ್ಲೇ ಸೂರ್ಯನಿಗೆ ಅವಸರವಾಗಿತ್ತು. ಯಾಕಿ ಪಾಯಿಂಟ್ ಕಡೆ ಕಾರ್ ಹೋಗುವ ಹಾಗಿರಲಿಲ್ಲ, ಪಾರ್ಕಿನ ಬಸ್ಸಿನಲ್ಲೇ ಹೋಗಬೇಕಿತ್ತು. ಆ ಸಮಯಕ್ಕೆ ಸರಿಯಾಗಿ ಅದೂ ಇರಲಿಲ್ಲ. ಕೊನೆಗೂ ಮಾಥರ್ ಪಾಯಿಂಟ್ ಮತ್ತು ಯಾಕಿ ಪಾಯಿಂಟ್ ನಡುವೆ ಎಲ್ಲೋ ರಸ್ತೆ ಬದಿಯ ಪಾರ್ಕಿಂಗ್ ಲಾಟಿನಲ್ಲಿ ಕಾರ್ ನಿಲ್ಲಿಸಿ, ಅಲ್ಲಿದ್ದ ಕೆಲವರ ಜೊತೆಗೆ ಸೇರಿಕೊಂಡು ಇಳಿಸೂರ್ಯನ ಹೊಂಗಿರಣದ ಕೊನೆಯ ಎಳೆಗಳನ್ನು ಬಾಚಿಕೊಂಡೆವು.
ಹೊಗೆ ತುಂಬಿಕೊಂಡಂತಿದ್ದ ಕಣಿವೆಯಲ್ಲಿ ಸೂರ್ಯಾಸ್ತ...

ಒಂದಿಷ್ಟು ನಿರಾಸೆಯಿಂದಲೇ ಕ್ಯಾಂಪ್ ಸೈಟಿಗೆ ಮರಳಿದೆವು. ಅರ್ಧಂಬರ್ದ ಬೆಳದಿಂಗಳು ಮತ್ತು ಕಾರಿನ ಹೆಡ್ ಲೈಟ್- ನಮಗೆ ಟೆಂಟ್ ನಿಲ್ಲಿಸಲು ಸಹಾಯ ಮಾಡಿದವು. ಊಟ ಮಾಡಿ ಸೂರ್ಯೋದಯವನ್ನಾದರೂ ಚೆನ್ನಾಗಿ ನೋಡುವ ಹಂಬಲದಿಂದ ಬೇಗನೇ ಮಲಗಿದೆವು.

ನಾಲ್ಕೂವರೆಗೇ ಅಲಾರ್ಮ್ ನಮ್ಮನ್ನೆಬ್ಬಿಸಿತು. ಐದೂಕಾಲಕ್ಕೆಲ್ಲ ಮಾಥರ್ ಪಾಯಿಂಟಿನ ಆಯಕಟ್ಟಿನ ಮೂಲೆಯಲ್ಲಿ ನಾವೇ ಮೊದಲಿಗರಾಗಿ ನಿಂತೆವು. ‘ಮೂರ್ಕಾಲ್’ಅನ್ನು ಸರಿಯಾಗಿ ನಿಲ್ಲಿಸಿ, ಅದರ ಮೇಲೆ ಕ್ಯಾಂಕಾರ್ಡರನ್ನು ಏರಿಸಿದ್ದಾಯ್ತು. ಬದಿಯ ದಂಡೆಯ ಕಂಬದ ಮೇಲೆ ನನ್ನ ಕ್ಯಾಮರಾ ಕೂತಿತು. ಹಾರಾಡುವ ಕುಳಿರ್ಗಾಳಿಯ ವಿರುದ್ಧ ನನ್ನ ಮೂಗು ಹೋರಾಡುತ್ತಿತ್ತು. ಮೆತ್ತನೆಯ ಟಿಶ್ಶೂ ಒತ್ತಿ ಮೂಗಿಗೆ ಸಾಂತ್ವನ ಹೇಳುತ್ತಿದ್ದೆ, ವಿಫಲವಾಗಿ. ಅದೂ ಸುಮ್ಮನಾಗದೆ ಗುರುಗುಟ್ಟಲು ಸುರುಗುಟ್ಟಲು ಮೊದಲಿಟ್ಟಿತು. ಟಿಶ್ಶೂ ದಾಸ್ತಾನು ಖಾಲಿಯಾಗಿ ಜಾಕೆಟ್ಟಿನ ತೋಳಿನಲ್ಲೇ ಸಾಂತ್ವನ ಹೇಳಬೇಕಾಯಿತು, ಕೊನೆಕೊನೆಗೆ. ಅಷ್ಟರಲ್ಲೇ ಪೂರ್ವ ಕೊಂಚ ಕೊಂಚ ಕೆಂಚಗಾಯ್ತು. ಅವನ ಮುಖ ಮಾತ್ರ ಕಾಣುತ್ತಿರಲಿಲ್ಲ. ಬೂದು ಬೂದು ಪರದೆಯೊಳಗಿಂದಲೇ ನಮ್ಮನ್ನೆಲ್ಲ ನೋಡಿ ನಗುತ್ತಿದ್ದನವ ಪೋಕರಿ.

ಅಲ್ಲೊಮ್ಮೆ ಇಲ್ಲೊಮ್ಮೆ ಇಷ್ಟೇ ಇಷ್ಟು ಮುಖ ತೋರಿಸಿದಂತೆ ಮಾಡಿ ಮತ್ತೆ ಪರದೆಯ ಎಡೆಯಲ್ಲಿ ಅಡಗುತ್ತಾ ಆಟವಾಡಿಸಿದವನನ್ನು ನೋಡಲೇಬೇಕೆಂದು ಹಲವಾರು ಜನ ಸೇರಿದ್ದರು ಆರೂಕಾಲು- ಆರೂವರೆಯ ಹೊತ್ತಿಗೆ. ಮೆಲ್ಲಗೆ ಪಿಸುಗುಡುತ್ತಿದ್ದ ಈ ಜನ ಮತ್ತು ಸುತ್ತಲ ಹಕ್ಕಿಪಕ್ಕಿಗಳ ಶಾಂತ ವಾತಾವರಣ ಕಲಕುತ್ತಾ ದೊಡ್ಡದೊಂದು ಚೀನೀ ಪ್ರವಾಸಿಗರ ತಂಡವೊಂದು ಸೇರಿದ ಮೇಲಂತೂ ನನ್ನ ಮೂಗು ಕೆಂಪುಕೆಂಪಾಗಿಬಿಟ್ಟಿತು. ಅವರ ಚಿಲಿಪಿಲಿಯ ನಡುವೆ ನನ್ನ ಮೂಗನ್ನು ಕೇಳುವವರೇ ಇಲ್ಲವಾಗಿತ್ತು. ಪರದೆಯೆಡೆಯಿಂದ ಅವನ ಛಾಯೆ ಕಂಡರೂ ಚಿಲಿಪಿಲಿ ಅಡಗಿ ಕಿಚಪಿಚವಾಗಿ ತಾರಕಕ್ಕೇರುತ್ತಿತ್ತು. ಶಾಂತಿಯ ಸಮಾಧಿಯನ್ನನುಭವಿಸಿದೆ.



ಇವಕೆ ಬೇರೆ ಹೆಸರು ಬೇಕೆ...

ಕಣಿವೆಯ ನೋಟ ಹೊಗೆ ತುಂಬಿದಂತೆ ಮಸುಕು ಮಸುಕಾಗಿತ್ತು. ಫೋಟೋಸ್ ಸರಿಯಾಗಿ ಸಿಗದೆ ಮತ್ತೆ ನಿರಾಸೆಯೇ ಆಗಿತ್ತು. ಕಣ್ಣಾಮುಚ್ಚಾಲೆಯಾಟ ಸಾಕೆನಿಸಿತು. ಕೆಂಪು ಮೂಗಿನ ತುದಿಯಿಂದಲೇ ಅವನಿಗೆ ಟಾಟಾ ಹೇಳಿ, ಭೋರಿಡುವ ಗಾಳಿಗೆ ಬೆನ್ನುಹಾಕಿ ಟೆಂಟ್ ಕಡೆ ಬಂದೆವು. ಕ್ಯಾಂಪ್ ಗ್ರೌಂಡ್ ಪರಿಧಿಯೊಳಗೆ ಬರುತ್ತಿದ್ದಂತೆಯೇ, ನಮ್ಮ ಟೆಂಟಿನಿಂದ ತುಸು ದೂರದಲ್ಲಿ ‘ಅವರಿಬ್ಬರು’ ಮಲ್ಲಯುದ್ಧದಲ್ಲಿ ತೊಡಗಿದ್ದರು. ಬೇಗ ಹೊರಡಬೇಕೆನ್ನುವ ರಾಯರ ಯೋಜನೆಯನ್ನೂ ಬದಿಗೊತ್ತಿ ಮರವೊಂದರ ಅಡಿಯಲ್ಲಿ, ಬಂಡೆಯ ಹಿಂದೆ ಕೂತು ಅವರ ಮಲ್ಲಯುದ್ಧದ ಚಿತ್ರಗಳನ್ನು ಸೆರೆಹಿಡಿದೆ. ನಿಮಗೊಂದೇ ಒಂದು ಸ್ಯಾಂಪಲ್:


ಉಪಾಹಾರ ಮುಗಿಸಿ, ತಯಾರಾಗಿ, ಎಂಟೂವರೆಯ ಹೆಲಿಕಾಪ್ಟರ್ ಟೂರಿಗೆ ಎಂಟು ಗಂಟೆಗೇ ಹಾಜರಿ ಹಾಕಿದೆವು. ಹೆಲಿಕಾಪ್ಟರ್ ಮುಂಜಾಗ್ರತಾ ವಿಡಿಯೋ ನೋಡಿ ನಮ್ಮ ಸರದಿಯ ಮೇಲೆ ಅವರು ತೋರಿದ ಹೆಲಿಕಾಪ್ಟರ್ ಒಳಗೆ ಕೂತಾಗ ಕಿವಿ ತುಂಬಿತ್ತು. ತುಂಬಿದ್ದು ಹೊರಗೆ ಬಾರದಂತೆ ದಪ್ಪನೆಯ ಹೆಡ್-ಫೋನ್ಸ್ ಹಾಕಲಾಯ್ತು. ಕೆಲವೇ ನಿಮಿಷಗಳಲ್ಲಿ, ಪೈಲಟ್ ಸೇರಿ ಎಂಟು ಜನರನ್ನು ಹೊತ್ತ ಕಾಪ್ಟರ್ ಟುಸಯಾನ್ ವಿಮಾನ ನಿಲ್ದಾಣದಿಂದ ಮೇಲೆದ್ದು ನೈಋತ್ಯಕ್ಕೆ ತಿರುಗಿ, ಪಶ್ಚಿಮಾಭಿಮುಖವಾಗಿ ಉತ್ತರಕ್ಕೆ ಹಾರಿತು. ಮುಂದಿನ ಇಪ್ಪತ್ತು ನಿಮಿಷಗಳನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ನನ್ನೊಳಗೆ ಸೆರೆಯಾದ ನೋಟಗಳಲ್ಲಿ ಕ್ಯಾಮರಾಕ್ಕೆ ದಕ್ಕಿದ್ದು ಅತ್ಯಲ್ಪ.


ನೂರು ಮಾತಿಗೂ ಮೀರಿದ ನೋಟಗಳು

ಹೆಲಿಕಾಪ್ಟರಿಗೆ ಹತ್ತುವ ಮೊದಲು ಅವರೇ ತೆಗೆದ ನಮ್ಮ ಚಿತ್ರಗಳನ್ನು ಒಳಗೆ ಅಂಗಡಿಯಲ್ಲಿ ಕೊಂಡುಕೊಂಡು ಅಲ್ಲೇ ಹತ್ತಿರದಲ್ಲಿದ್ದ ಐಮ್ಯಾಕ್ಸ್ ಥಿಯೇಟರಿಗೆ ಹೋಗಿ ಒಂಬತ್ತೂವರೆಯ ಶೋ ನೋಡಿಕೊಂಡು ಮತ್ತೆ ಕ್ಯಾಂಪ್ ಗ್ರೌಂಡಿಗೆ ಬಂದೆವು. ಟೆಂಟ್ ಬಿಚ್ಚಿ ಗುಳೇ ಎತ್ತಿದೆವು. ಗ್ರ್ಯಾಂಡ್ ಕ್ಯಾನಿಯನ್ ಒಳಗೆ ತಿರುಗಾಡಲು ನಾಲ್ಕು ರೂಟಿನ ಬಸ್ಸುಗಳಿವೆ, ನಾಲ್ಕೂ ಫ್ರೀ ಷಟಲ್. ಒಂದು ಗ್ರ್ಯಾಂಡ್ ಕ್ಯಾನಿಯನ್ ವಿಲೇಜ್ ಒಳಗಡೆಯೇ ತಿರುಗುವ ವಿಲೇಜ್ ರೂಟ್- ಬ್ಲೂ ರೂಟ್. ಇನ್ನೊಂದು ವಿಲೇಜಿನಿಂದ ಪಶ್ಚಿಮಕ್ಕೆ, ಹರ್ಮಿಟ್ಸ್ ರೆಸ್ಟ್ ತನಕ ಹೋಗುವದು- ರೆಡ್ ರೂಟ್ (ಅತ್ತ ಕಡೆ ನಂನಮ್ಮ ಕಾರುಗಳನ್ನು ಒಯ್ಯುವಂತಿಲ್ಲ, ಈ ಮುಕ್ತ ಬಸ್ಸುಗಳಲ್ಲೇ ಓಡಾಡಬೇಕು). ಮತ್ತೊಂದು ವಿಲೇಜಿನಿಂದ ಪೂರ್ವಕ್ಕೆ, ಕೈಬಾಬ್ ಟ್ರೈಲ್ ರೂಟ್- ಗ್ರೀನ್ ರೂಟ್ (ವಿಲೇಜಿನಿಂದ ಪೂರ್ವಕ್ಕೆ, ಡೆಸರ್ಟ್ ವ್ಯೂ ರಸ್ತೆಯಲ್ಲಿ ಯಾಕಿ ಪಾಯಿಂಟ್ ತನಕ). ಯಾಕಿ ಪಾಯಿಂಟಿಗೆ ಈ ಬಸ್ಸಿನಲ್ಲೇ ಹೋಗಬೇಕು. ಮುಖ್ಯ ರಸ್ತೆಯಿಂದ ಅತ್ತ ಕಡೆಗೆ ನಂನಮ್ಮ ಗಾಡಿಗಳನ್ನು ಒಯ್ಯುವಂತಿಲ್ಲ. ಕೊನೆಯದು ಟುಸಯಾನ್ ರೂಟ್- ಪರ್ಪ್ಲ್ ರೂಟ್ (ದಕ್ಷಿಣ ಗೇಟ್ ದಾಟಿ ಐಮ್ಯಾಕ್ಸ್ ಥಿಯೇಟರ್, ಟುಸಯಾನ್ ವಿಮಾನ ನಿಲ್ದಾಣ ಕಡೆಗೆ).

ಹತ್ತೂವರೆಗೆ ಬಸ್ ಹಿಡಿದು ಹರ್ಮಿಟ್ಸ್ ರೆಸ್ಟ್ ಕಡೆ ಹೋಗುತ್ತಾ, ನಡುವೆ ಮೂರ್ನಾಲ್ಕು ಪಾಯಿಂಟ್‌ಗಳಲ್ಲಿ- ಇಳಿದು, ನೋಡಿಕೊಂಡು, ಮುಂದಿನ ಬಸ್ ಹಿಡಿದು, ಮತ್ತೊಂದೆಡೆ ಇಳಿದು...

ಟ್ರೈಲ್ ವ್ಯೂ ಓವರ್ ಲುಕ್ ಪಾಯಿಂಟಿನಿಂದ...

ಕಣಿವೆಯಲ್ಲಿ ಸಮರ ನೌಕೆ

ಶಿವ ದೇಗುಲ, ಐಸಿಸ್ ದೇಗುಲ

ಐಸಿಸ್ ದೇಗುಲ

ಕಣಿವೆಯ ಬದಿಗೊಬ್ಬ ಕಾವಲುಗಾರ

...ಹೀಗೆ ಹರ್ಮಿಟ್ಸ್ ರೆಸ್ಟ್ ತಲುಪಿದೆವು. ದಕ್ಷಿಣ ದಂಡೆಯ ಕೊನೆಯ ನೋಟಕ ಸ್ಥಾನವದು. ಅಲ್ಲಿ ಪುಟ್ಟ ರೆಸ್ಟಾರೆಂಟ್, ಗಿಫ್ಟ್ ಶಾಪ್ ಎಲ್ಲ ಇವೆ. ಅಲ್ಲಿಂದ ಅದರ ಹಿಂದಿನ ಪೀಮಾ ಪಾಯಿಂಟಿಗೆ ನಡೆದುಕೊಂಡು ಬರುತ್ತಾ, ನಡುವೆ ಎಲ್ಲೋ ಕಾಲುಹಾದಿಯ ಬದಿಯಲ್ಲಿ, ಬಂಡೆಯ ಮೇಲೆ ಕೂತು, ಕಣಿವೆಯನ್ನು ನೋಡುತ್ತಾ, ಊಟ ಮಾಡಿದೆವು. ಪೀಮಾ ಪಾಯಿಂಟಿನಿಂದ ಬಸ್ ಹಿಡಿದು ಹಿಂದೆ ಬಂದು, ನಮ್ಮ ಕಾರನ್ನೇರಿ ಪೂರ್ವಕ್ಕೆ, ಡೆಸರ್ಟ್ ವ್ಯೂ ಡ್ರೈವ್ ಹಿಡಿದೆವು, ಅಪರಾಹ್ನ ಎರಡೂವರೆಗೆ. ಅಲ್ಲಿ ಪೂರ್ವದ ಗೇಟಿನ ಮೊದಲು ಸಿಗುವ ತಾಣ ಡೆಸರ್ಟ್ ವ್ಯೂ. ಅಲ್ಲೊಂದು ಹಳೆಯ ವಾಚ್ ಟವರ್.



ವಾಚ್ ಟವರ್ ಒಳಗೆ, ಮೊದಲ ಅಂತಸ್ತಿನ ಗೋಡೆಯಲ್ಲಿ ನಾವಹೋ ಇಂಡಿಯನ್ಸ್ ಚಿತ್ರಕಲೆಯ ಅನುಕರಣೆ

ಟವರ್ ಹತ್ತಿ ಕಣಿವೆಯನ್ನು ಕಣ್ಣು ತುಂಬಿಕೊಂಡು ಅಲ್ಲಿಂದ ಹೊರಟದ್ದು- ಸಂಜೆ ನಾಲ್ಕೂವರೆಗೆ. ದಾರಿಯಲ್ಲೊಬ್ಬಳು ನಾವಹೋ ಇಂಡಿಯನ್ ಹುಡುಗಿಯ ಜೊತೆಗೆ ಒಂದರ್ಧ ಗಂಟೆ ಹರಟೆ ಹೊಡೆದು ಮುಂದೆ ಸಾಗಿದೆವು. ಪೂರ್ವ, ಉತ್ತರ, ಪಶ್ಚಿಮ, ದಕ್ಷಿಣ, ಪಶ್ಚಿಮ, ಉತ್ತರ... ದಾರಿ ತಿರುಗಿದಲ್ಲೆಲ್ಲ ತಿರುಗಿ ಗ್ರ್ಯಾಂಡ್ ಕ್ಯಾನಿಯನ್ನಿನ ಉತ್ತರ ದಂಡೆಯನ್ನು ತಲುಪಿದಾಗ ಆಗಸ್ಟ್ ಮೂವತ್ತೊಂದರ ರಾತ್ರಿ ಒಂಭತ್ತು ಗಂಟೆ.

ಕಾರಿನ ಹೆಡ್ ಲೈಟಿನಲ್ಲೇ ಟೆಂಟ್ ಹಾಕಿ, ಊಟ ಮಾಡಿ, ಸ್ನಾನ ಮಾಡಲು ಶವರ್ ಹೌಸ್ ಕಡೆ ಹೋದಾಗ ಗಂಟೆ ಹತ್ತು. ಮಹಿಳೆಯರ ವಿಭಾಗದಲ್ಲಿ ಬೆಳಕಿತ್ತು. ಮಹನೀಯರಿಗೆ ಕತ್ತಲಾಗಿತ್ತು. ಅತ್ತಿತ್ತ ನೋಡುತ್ತಿದ್ದಾಗ ಬಂದ ರೇಂಜರ್ ಜೊತೆ ಇವರು ಮಾತಾಡುತ್ತಿದ್ದದ್ದು ಕೇಳಿ ಹೊರ ಬಂದೆ. "ಮುಚ್ಚುವ ಟೈಮ್ ಆಗಿದೆ" ಅಂದ. "ಹೌದಾ..." ಪೆಚ್ಚು ಮೋರೆ ಹಾಕಿದೆ. "ಎಲ್ಲಿಂದ ಬಂದ್ರಿ?" ಮುಖಭಾವ ಕೆಲಸ ಮಾಡಿತ್ತು. "ಸೌಥ್ ರಿಮ್. ನಿನ್ನೆ ಅಲ್ಲಿ ಕ್ಯಾಂಪಿಂಗ್ ಮಾಡಿದ್ದೆವು. ಇವತ್ತು ಅಲ್ಲೆಲ್ಲ ಹೈಕಿಂಗ್ ಮಾಡಿದ್ದೆವು. ಸಾಕಷ್ಟು ದಣಿದಿದ್ದೇವೆ. ಅಲ್ಲಿ ಹನ್ನೊಂದರ ತನಕ ತೆರೆದಿದ್ದರು ಇಲ್ಲೂ ಹಾಗೇ ಅಂದುಕೊಂಡಿದ್ದೆವು..." ಇಬ್ಬರ ಮುಖವನ್ನೂ ಇನ್ನೊಮ್ಮೆ ನೋಡಿ, "ಹೋಗಿ ಸ್ನಾನ ಮಾಡಿ. ನಾನು ಮತ್ತೆ ಬಂದು ಬೀಗ ಹಾಕುತ್ತೇನೆ" ಅಂದವನಿಗೆ ಪದೇ ಪದೇ ಧನ್ಯವಾದ ಹೇಳಿ ಬಿಸಿಬಿಸಿ ಶವರ್ ನೀರನ್ನು ಆನಂದಿಸಿ ಟೆಂಟ್ ಸೇರಿಕೊಂಡೆವು. ಕತ್ತಲಲ್ಲಿ ಸುತ್ತಮುತ್ತ ಏನಿತ್ತೋ ಗೊತ್ತಾಗಲಿಲ್ಲ.

(ಸಾವಕಾಶವಾಗಿ ಗ್ರ್ಯಾಂಡ್ ಕ್ಯಾನಿಯನ್ ಪೂರ್ತಿ (ಮೇಲೆ, ಕೆಳಗೆ, ಒಳಗೆ, ಹೊರಗೆ) ನೋಡುವದಾದರೆ ಒಂದು ವಾರವಾದರೂ ಬೇಕು. ಸಾಕಷ್ಟು ಹೈಕಿಂಗ್ ಟ್ರೈಲ್ಸ್ ಇವೆ. ದೇವ, ವಿಷ್ಣು, ಬ್ರಹ್ಮ- ದೇಗುಲಗಳು, ಕೃಷ್ಣ ಗೋಪುರ, ರಾಮ ಗೋಪುರ, ಬುದ್ಧ, ವೀನಸ್, ಜ್ಯುಪಿಟರ್, ಝೋರೋವಾಸ್ಟರ್, ರಾ, ಕನ್ಫ್ಯೂಷಿಯಸ್, ಒಸೈರಿಸ್, ಥೋರ್, ಸೋಲೋಮನ್, ಶೀಬಾ- ದೇಗುಲಗಳೆಲ್ಲ ಇಲ್ಲಿವೆ. ಸಾವಧಾನವಾಗಿ ಎಲ್ಲ ವ್ಯೂ ಪಾಯಿಂಟ್ಸ್ ನೋಡಿಕೊಂಡು, ಅಲ್ಲಿರುವ ಮಾಹಿತಿ ಫಲಕಗಳನ್ನು ಓದಿಕೊಂಡು ಎಲ್ಲವನ್ನೂ ಗುರುತಿಸುವುದು ಸಾಧ್ಯ. ನಮಗಷ್ಟು ಸಮಯವಿರಲಿಲ್ಲ. ಎಲ್ಲ ದೇವರನ್ನು, ದೇಗುಲಗಳನ್ನು ಅಲ್ಲಲ್ಲೇ ಬಿಟ್ಟು ಹೊರಟೆವು. ಭಕ್ತ ಜನರು ಮನ್ನಿಸಬೇಕು.)