ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೬
ಆಂಟಲೋಪ್ ಸ್ಲಾಟ್ ಕ್ಯಾನಿಯನ್ ಎಂಬ ಅಚ್ಚರಿಯ ಕಣಿವೆ....
ಅರಿಝೋನಾ ರಾಜ್ಯ.
ಸೆಪ್ಟೆಂಬರ್ ೧ ಮಂಗಳವಾರ:
ಗ್ರ್ಯಾಂಡ್ ಕ್ಯಾನಿಯನ್ ಉತ್ತರದಡದಿಂದ ಹೊರಟು ಪೇಜ್ ತಲುಪಿದಾಗ ಅಪರಾಹ್ನ ಎರಡು ಗಂಟೆ ನಲವತ್ತು ನಿಮಿಷ. ಅಲ್ಲೊಂದು ಗ್ಯಾಸ್ ಸ್ಟೇಷನ್ನಿನ ಬದಿಯಲ್ಲಿಯೇ ಇದ್ದ ಅಂಗಡಿಯ ಹಣೆಯಲ್ಲಿ "ಆಂಟಲೋಪ್ ಸ್ಲಾಟ್ ಕ್ಯಾನಿಯನ್ ಟೂರ‍್ಸ್" ಪಟ್ಟಿಯಿತ್ತು. ಒಳಗೆ, ಮೊದಲೇ ಅಂತರ್ಜಾಲದಲ್ಲಿ ಕೊಂಡುಕೊಂಡು ಮನೆಗೆ ತರಿಸಿಕೊಂಡಿದ್ದ ಟೂರ್ ಟಿಕೆಟ್ ತೋರಿಸಿದೆವು. ‘ಮೂರು ಗಂಟೆಗೆ ಟೂರ್ ಶುರುವಾಗತ್ತೆ, ಇಲ್ಲೇ ಹೊರಗೆ ಗಾಡಿ ಬರತ್ತೆ. ಅಂಗಡಿಯೊಳಗೆ ಸುತ್ತಾಡುತ್ತಿರಿ’ ಅಂದ ಕೌಂಟರಿನವ. ಅಂಗಡಿಯೊಳಗೆ ಸುತ್ತಾಡುವ ಫಲ ಅವರಿಗೆ ಸಿಕ್ಕೇ ಸಿಗತ್ತೆ, ಅದು ಅವರಿಗೂ ಗೊತ್ತು. ಅದನ್ನು ಮೀರುವ ಶಕ್ತಿಯಿಲ್ಲವೆಂದು ನಮಗೂ ಗೊತ್ತು. ಮೂರು ಗಂಟೆಗೆ ಎರಡು ನಿಮಿಷವಿರುವಾಗಲೇ ಕಂದುಬಣ್ಣದ ಹುಡುಗನೊಬ್ಬ ನಮ್ಮನ್ನೆಲ್ಲ ಕರೆದ. ಹೊರಗೆ ಒಂದು ಟ್ರಕ್ ನಿಂತಿತ್ತು; ತೋರಿಸಿ, ‘ಹತ್ತಿ’ ಅಂದ.
ಒಟ್ಟು ಹನ್ನೊಂದು ಜನರಲ್ಲಿ ಹತ್ತು ಜನ ಟ್ರಕ್ಕಿನ ಹಿಂಭಾಗದಲ್ಲಿ ಬೆಲ್ಟುಗಳಿಲ್ಲದೆ ಬೆಂಚಿನಂತಹ ಎರಡು ಸಾಲು ಸೀಟುಗಳಲ್ಲಿ ಆಸೀನರಾದೆವು (ಇದ್ದ ಬೆಲ್ಟು ಹಾಕಿಕೊಳ್ಳಲಾಗುತ್ತಿರಲಿಲ್ಲ. ಒಂದು ಬದಿ ಸಿಕ್ಕಿದರೆ ಇನ್ನೊಂದು ಬದಿ ಇರಲಿಲ್ಲ. ಒಂದು ಬದಿ ಈ ಸಾಲಿಗೆ ಇನ್ನೊಂದು ಬದಿ ಆ ಸಾಲಿಗೆ ಇದ್ದಲ್ಲಿ ಹಿಂದು-ಮುಂದಿನ ಇಬ್ಬರಿಗೂ ಸೇರಿಸಿಯೇ ಹಾಕೋದಾ ಅಂತಂದು ನಗೆಯೆದ್ದಿತ್ತು). ಒಬ್ಬರನ್ನು ಕ್ಯಾಬಿನ್ನಿನೊಳಗೆ ಹತ್ತಿಸಿ ಅವನೇ ಚಾಲಕನಾದ. ಸರಿಯಾಗಿ ಮೂರು ಗಂಟೆಗೆ ಗಾಡಿ ಹೊರಟಿತು.
ಮುಂದಿನ ಇಪ್ಪತ್ತು ನಿಮಿಷಗಳಲ್ಲಿ ಸುಮಾರು ಐದಾರು ನಿಮಿಷ ಗಾಳಿಯ ಹೊಡೆತ. ಪಕ್ಕದವರ ಮಾತೂ ಕೇಳದಷ್ಟು ಗಾಳಿ. ಕೂದಲು ಒಂದೆಳೆಯೂ ಅದರ ಜಾಗದಲ್ಲಿ ನಿಲ್ಲದಷ್ಟು ಗಾಳಿ. ಕಣ್ಣು ತೆರೆದು ಎದುರು ನೋಡಲಾರದಷ್ಟು ಗಾಳಿ. ಇಳಿಯುತ್ತಿದ್ದ ನೀರು ಒರಸಿಕೊಂಡೇ ಸರಿದುಹೋದ ಹಾದಿಯನ್ನೇ ನೋಡುತ್ತಿದ್ದೆ. ಮುಖ್ಯ ರಸ್ತೆ ಬಿಟ್ಟು ಒಂದು ಗೇಟ್ ದಾಟಿ ಮಣ್ಣಹಾದಿ ಸೇರಿತು ಟ್ರಕ್.
ಅಲ್ಲಿಂದ ಸುಮಾರು ಹದಿನೈದು ನಿಮಿಷ ಹೀಗೆ... ಸಾಗಿ....
ಮೂರು ಇಪ್ಪತ್ತಕ್ಕೆ ಗಾಡಿ ನಿಂತಾಗ ನಮ್ಮ ಮೂರು ಸುತ್ತಲೂ ಕೆಂಪು ಬಂಡೆ. ನಡುವಲ್ಲೊಂದು ಕೊರಕಲು- ಗೋಡೆ ಬಿರುಕು ಬಿಟ್ಟ ಹಾಗೆ.....
ನಮ್ಮ ಗೈಡ್ ಆ ಬಿರುಕಿನೊಳಗೆ ನಮ್ಮನ್ನೆಲ್ಲ ಕರೆದೊಯ್ದ. ಸುಮಾರು ಇಪ್ಪತ್ತೈದು ಮೂವತ್ತಡಿ ಎತ್ತರದ, ಹತ್ತು-ಹನ್ನೆರಡು ಅಡಿ ಅಗಲದ ಆ ಬಿರುಕಿನ ಒಳಗೆ ಹೋದೊಡನೆ ಸುಮಾರು ಹದಿನೈದಿಪ್ಪತ್ತು ಅಡಿ ಉದ್ದಗಲದ ಸಣ್ಣ ಬೆಳಕಿಂಡಿಯ ತಂಪು ಮಣ್ಣಿನ ನೆಲದ ಕೋಣೆ. ಅಲ್ಲಿಂದಾಚೆಗೆ ಮತ್ತೆ ಐದಡಿ ಅಗಲದ ಬಿರುಕು....
ಇಲ್ಲಿ ನಿಂತು ಅವನೊಂದು ಕಥೆ ಹೇಳಿದ-
"ಹಲವಾರು ವರ್ಷಗಳ ಹಿಂದೆ ಇಲ್ಲಿಂದ ಮೂರ್ನಾಲ್ಕು ಮೈಲು ದೂರದ ಹಳ್ಳಿಯಿಂದ ತುರುಗಳನ್ನು ಮೇಯಿಸುತ್ತಾ ಬಂದ ಹುಡುಗಿಯೊಬ್ಬಳು ಅಕಸ್ಮಾತ್ ಈ ಬಿರುಕಿನೊಳಗೆ ಇಣುಕಿದಳು. ಬೆಳಗಿನ ಬಿಸಿಲು ಓರೆಯಾಗಿ ಬೀಳುವ ಹೊತ್ತಿನಲ್ಲಿ ಈ ಗೋಡೆಗಳು ಕೆಂಪು-ಕಿತ್ತಳೆ-ಹಳದಿ ಬಣ್ಣಗಳಲ್ಲಿ ಮಿರುಗುವುದನ್ನು ನೋಡಿ ಬೆರಗಾದಳು. ಸಂಜೆ ಹಳ್ಳಿಗೆ ಹಿಂದಿರುಗಿದಾಗ ತನ್ನ ಹೆತ್ತವರಿಗೆ, ಹಿರಿಯರಿಗೆ ಇದನ್ನು ತಿಳಿಸಿದಳು. ನಂತರದ ದಿನಗಳಲ್ಲಿ ಅವರಿಗೆಲ್ಲ ಇದೊಂದು ಕೌತುಕದ ಸ್ಥಳವಾಯ್ತು. ತುರು ಮೇಯಿಸುವ ಮಕ್ಕಳಿಗೆ ಆಟದಂಗಳವಾಯ್ತು. ಕ್ರಮೇಣ ಇದನ್ನು ಪ್ರವಾಸಿಗರಿಗೆ ತೆರೆದರು. ಆದರೂ ಇದಿನ್ನೂ ನಾವಹೋ ಇಂಡಿಯನ್ ಜನಾಂಗದವರಿಗೇ ಸೇರಿದ ಜಾಗ. ಅದಕ್ಕಾಗಿ ಇಲ್ಲಿಯ ಪ್ರವಾಸಗಳಿಗೆಲ್ಲ ನಾವಹೋ ಜನರೇ ಗೈಡ್. ಇದನ್ನು ಕಂಡು ಹಿಡಿದ ಹುಡುಗಿ ನನ್ನಜ್ಜಿ. ನನ್ನ ಇಂಗ್ಲಿಷ್ ಹೆಸರು ಬ್ರಯಾನ್ (ಹಾಗೇಂತ ನೆನಪು). ಮೂಲ ಹೆಸರಿನ ಅನುವಾದ- ‘ಬಾಯ್ ಹೂ ನೆವರ್ ಲಿಸನ್ಸ್’. ಹಾಗಂತ ನನ್ನಜ್ಜ ನನ್ನನ್ನ ಕರೀತಿದ್ದರು. ನನ್ನ ಪರಿಚಯ ನನ್ನ ಭಾಷೆಯಲ್ಲೇ ಹೇಳಬೇಕೆಂದರೆ ನನ್ನಪ್ಪ, ಅವನಪ್ಪ-ಅಮ್ಮ, ನನ್ನಮ್ಮ, ಅವಳಪ್ಪ-ಅಮ್ಮ, ಇವರೆಲ್ಲರ ಮನೆತನಗಳನ್ನೂ ಹೆಸರಿಸಿಯೇ ನಾನು ಪರಿಚಯಿಸಿಕೊಳ್ಳಬೇಕು...." ಅಂತಂದು, ಮೂವತ್ತು ನಲವತ್ತು ಸೆಕೆಂಡ್ ಅದೇನೋ ಹೇಳಿದ. ತುಸುವಾಗಿ ನಡು ಬಾಗಿಸಿ ವಂದಿಸಿದ. ನಮ್ಮಲ್ಲಿ ಗೋತ್ರಾದಿಯಾಗಿ ಪ್ರವರ ಹೇಳಿಕೊಂಡು ಹಿರಿಯರಿಗೆ ನಮಸ್ಕರಿಸುವ ಕ್ರಮ ನೆನಪಾಗಿದ್ದು ಕಾಕತಾಳೀಯವೆ?
ಬಿರುಕಿನೊಳಗೆ ಎಷ್ಟು ದೂರ ಹೋಗುತ್ತೇವೆ ಅಂತೊಬ್ಬಳು ಕೇಳಿದ್ದಕ್ಕೆ ಎಂಟು ಮೈಲು ಅಂದ. ಅವಳು ಬೆಚ್ಚಿ ಬಿದ್ದಳು. ಮತ್ಯಾರೋ ಸಮಾಧಾನಿಸಿದರು, ಟೂರ್ ಇರೋದೇ ಒಂದು ಗಂಟೆ; ಅಷ್ಟು ದೂರ ಇರಲಾರದೆಂದರು. ನಸುನಕ್ಕ. ಹತ್ತಿಪ್ಪತ್ತು ಹೆಜ್ಜೆ ಮುಂದೆ ಸಾಗಿ ಮತ್ತೊಂದು ಕೊಠಡಿಯಲ್ಲಿ ನಿಂತ. ಇದು ಸುಮಾರು ಇಪ್ಪತ್ತೈದು ಅಡಿ ಅಗಲವಿದ್ದಿರಬೇಕು. ಬೆಳಕು ಸ್ವಲ್ಪ ಕಡಿಮೆಯಿತ್ತು, ಮೇಲಿನ ಬಿರುಕು ತೀರಾ ಸಣ್ಣದಿತ್ತು. ಒಂದು ಮೂಲೆಯಲ್ಲಿ ನಿಂತು ಸಾಮಾನ್ಯ ಸ್ವರದಲ್ಲಿ ಮಾತಾಡುತ್ತಾ, ಸ್ವರದ ಸೂಕ್ಷ್ಮ ಏರಿಳಿತವೂ ಹೇಗೆ ಗೋಚರವಾಗುತ್ತದೆಂದು ತೋರಿಸಿದ. ಮತ್ತೊಂದು ಮೂಲೆಯಲ್ಲಿ ನಿಂತು ಪಿಸುಗುಟ್ಟಿದರೂ ದೂರದ ತುದಿಯವರಿಗೆ ಅದು ಕೇಳುತ್ತಿತ್ತು.
ಎಲ್ಲೋ ದೂರದಲ್ಲಿ, ನಲ್ವತ್ತು ಐವತ್ತು ಮೈಲು ದೂರದಲ್ಲಿ ಜೋರಾಗಿ ಮಳೆಯಾದರೆ ಇಲ್ಲಿ ಈ ಬಿರುಕಿನೊಳಗೆ ಇದ್ದಕ್ಕಿದ್ದಂತೆ ನೆರೆ ಬರುತ್ತದೆಂದೂ ಒಮ್ಮೆ ಹನ್ನೆರಡು ಜನ ಫ್ರೆಂಚ್ ಛಾಯಾಚಿತ್ರಕಾರರ ತಂಡವೊಂದು ಅಂಥ ನೆರೆಗೆ ಸಿಲುಕಿತ್ತೆಂದೂ ವಿವರಿಸಿದ. ನೆರೆಯಲ್ಲಿ ಬಂದು ಬಿರುಕಿನಲ್ಲಿ ಸಿಲುಕಿಕೊಂಡ ಮರದ ಬೇರು ಸಹಿತ ಕಾಂಡಗಳನ್ನು ತೋರಿಸಿದ. ಬಿರುಕಿನ ಎರಡು ಬದಿಗಳಿಗೆ ಅಡ್ಡಲಾಗಿ ಸಿಲುಕಿಕೊಂಡ ಕೆಲವು ಕಾಂಡಗಳು ಮುಂದಿನ ನೆರೆಯಲ್ಲಿ ಹಾದು ಹೋಗುತ್ತವೆ; ಕೆಲವೊಮ್ಮೆ ವರ್ಷಗಟ್ಟಲೆ ಇಲ್ಲೇ ಉಳಿಯುತ್ತವೆ. ಇಂಥ ಮರ-ಗೆಲ್ಲು, ಕಲ್ಲು-ಮಣ್ಣು-ಮರಳು ನೀರಿನೊಂದಿಗೆ ರಭಸದಲ್ಲಿ ಬಂದು, ಕೊರಕಲಿನಲ್ಲಿ ಸಾಗುವಾಗ ಅವೆಲ್ಲ ಗೋಡೆಗಳಿಗೆ ಉಜ್ಜಿ ಉಜ್ಜಿ ಈ ಗೋಡೆಗಳು ನಯವಾಗಿವೆ. ಸಹಜವಾಗಿ ಗಟ್ಟಿಯಾಗಿರುವ ಈ ಮರಳುಗಲ್ಲಿನ (ಸ್ಯಾಂಡ್ ಸ್ಟೋನ್) ಪದರಗಳು ಈ ಉಜ್ಜುವಿಕೆಯಿಂದ ಸವೆದು ಬೇರೆ ಬೇರೆ ರೂಪ ತಾಳಿವೆ. ಬಿಸಿಲಿನ ರೇಖೆಯನ್ನು ಹೊಂದಿಕೊಂಡು ಬೇರೆ ಬೇರೆ ಹೊತ್ತಿನಲ್ಲಿ ಬೇರೆ ಬೇರೆ ಛಾಯೆಗಳಲ್ಲಿ ಕಾಣುತ್ತವೆ. ಹಾವು-ಹಲ್ಲಿ, ಅಪರೂಪಕ್ಕೊಮ್ಮೆ ಆಡು-ಕುರಿ-ಹಸು ನೆರೆಯಲ್ಲಿ ಬರುತ್ತವೆ... ಹೀಗೆಲ್ಲ ಹೇಳುತ್ತಲೇ ಇದ್ದ. ಮೆಲ್ಲನೆ ಪಿಸುಗುಟ್ಟುವಂತೆ ಅವನ ಮಾತು. ನಮ್ಮೊಳಗೆಲ್ಲ ಬೆರಗಿನ ಮೌನ.
ಮತ್ತೊಂದಿಷ್ಟು ಮುಂದೆ ಸಾಗಿ ಇನ್ನೊಂದು ಕೋಣೆಯಲ್ಲಿ ನಿಂತು ತನ್ನ ಬಗಲ ಚೀಲದಿಂದ ದಪ್ಪನೆಯ ಕೊಳಲನ್ನು ತೆಗೆದ. ನಮ್ಮ ಕೃಷ್ಣನ ಕಥೆಯನ್ನು ಅವನದೇ ಶೈಲಿಯಲ್ಲಿ ಹೇಳಿದ- "ಅವನು ಗೋವಳ. ಗೆಳೆಯರ ಜೊತೆಗೆಲ್ಲ ಆಡುವಾಗ ಕೊಳಲೂದುತ್ತಿದ್ದ. ಅವನ ಕೊಳಲಿಗೆ ಎಂಥ ಮಾಧುರ್ಯವಿತ್ತು ಅಂದ್ರೆ ಹುಡುಗಿಯರೆಲ್ಲ ಮರುಳಾಗ್ತಿದ್ರು. ಅವನನ್ನು ಎಲ್ಲರೂ ಲಂಪಟ, ಜಾರನೆಂದೇ ಜರೆಯುತ್ತಿದ್ದರು. ಆದರೂ ಅವನ ಕೊಳಲಿಗೆ ಮರುಳಾಗುತ್ತಿದ್ದರು. ಹಾಗೇನೇ ಅವನ ಕೊಳಲಗಾನಕ್ಕೆ ಸಾಂತ್ವನ ಶಕ್ತಿ ಇತ್ತು. ನೋವನ್ನು ದುಃಖವನ್ನು ಮರೆಸುವ ಮಾಂತ್ರಿಕತೆಯಿತ್ತು. ಅದಕ್ಕೇ ಕೊಳಲಗಾನ ಶ್ರೇಷ್ಠ. ಅದಕ್ಕೇ ನನಗೂ ಕೊಳಲು ಇಷ್ಟ..." ನೇಟಿವ್ ಇಂಡಿಯನ್ ಶೈಲಿಯಲ್ಲಿ ಕೊಳಲು ನುಡಿಸಿದ. ಗೋಡೆಗೊರಗಿ ನಿಂತ ಮೂರ್ನಾಲ್ಕು ಜನ ಹಾಗೇ ಮಣ್ಣಮೇಲೆ ಅಂಡೂರಿದರು. ಮುರಳಿಗಾನ ಮುಗಿದಾಗ ಒಬ್ಬ ತೋಳಿನಿಂದ ಕಣ್ಣೊರಸಿಕೊಂಡ. ಗುಂಪು ಮೆಲ್ಲನೆ ಹೆಜ್ಜೆಯಿಕ್ಕಿ ಮುಂದೆ ಸಾಗಿತು.
ನಡುನಡುವೆ ಫೋಟೋ ತೆಗೆಯಲು ಒಳ್ಳೆಯ ಕೋನಗಳನ್ನು, ಕ್ಯಾಮರಾ ಸೆಟ್ಟಿಂಗ್ ಸರಿಮಾಡುವುದನ್ನು ಸಲಹೆ ನೀಡುತ್ತಾ ಆತ ನಮ್ಮನ್ನೆಲ್ಲ ಇನ್ನೊಂದು ತುದಿಯಲ್ಲಿದ್ದ, ಇಳಿಜಾರಲ್ಲಿ ಐದಾರು ಅಡಿ ಎತ್ತರಕ್ಕೇರಿ ಬಲಕ್ಕೆ ತಿರುಗಿ ಬಿರುಕಿನಿಂದ ಹೊರಗೆ ಕರೆತಂದ.
ಆ ತುದಿಯಿಂದ ಈ ತುದಿಗೆ ಒಂದರ್ಧ ಮೈಲಿಯೂ ಆಗಲಾರದೇನೋ! "ನಿನ್ನ ಕಥೆ ಕೇಳ್ತಾ ಕೇಳ್ತಾ ಎಂಟು ಮೈಲಿ ಬಂದದ್ದೇ ತಿಳೀಲಿಲ್ಲ ನೋಡು" ಅಂದೆ. ಮುಗ್ಧವಾಗಿ ನಗುತ್ತಾ ನೆಲ ನೋಡಿದ ಅವನಿಗೆ ಈ ಸೌಮ್ಯ ಮುಖ ಎಲ್ಲಿಂದ ಬಂತು? ಇಲ್ಲಿ ನಮ್ಮ ಮುಂದೆ ಅಗಾಧವಾದ ಮರಳ ರಾಶಿ. "ಎರಡು ವಾರದ ಹಿಂದೆ ಅದಿರಲಿಲ್ಲ. ಹತ್ತು ದಿನದ ಹಿಂದೆ ಬಂದ ನೆರೆ ಅದನ್ನಿಲ್ಲಿ ತಂದು ಹಾಕಿದೆ. ನೆರೆ ಬಂದ್ರೆ ಎಂಟ್ಹತ್ತು ಗಂಟೆ ನೀರು ಈ ತುದಿಯಿಂದ ಆ ತುದಿಯ ನಡುವೆ ಕೊರಕಲಿನಲ್ಲೆಲ್ಲ ಸುತ್ತುತ್ತಾ ಗಿರಿಗಿಟ್ಲೆ ಹಾಕುತ್ತಾ ತಿರುತಿರುಗಿ ಗೋಡೆಗಳನ್ನೆಲ್ಲ ಉಜ್ಜುತ್ತಾ ನಿಧಾನಕ್ಕೆ ಹೊರಗೆ ಹೋಗುತ್ತೆ. ಮತ್ತೆ ಎರಡು ಮೂರು ದಿನ ಒಳಗೆಲ್ಲ ಕೆಸರು, ಪಿಚಿಪಿಚಿ. ಪ್ರಾಣಿಗಳು ಸಿಕ್ಕಿಕೊಂಡಿದ್ದರೆ ಮಾತ್ರ ವಾಸನೆಯ ಕಷ್ಟ." ಅಂದ.
"ಹವಾಮಾನ ವರದಿ ನೋಡುತ್ತಲೇ ಇರ್ತೇವೆ. ಇಲ್ಲಿಂದ ಮೇಲಕ್ಕೆ ಮಳೆಯಾಗಿದ್ದರೆ ನಾವು ಜಾಗ್ರತೆ ಮಾಡ್ತೇವೆ. ಇಲ್ಲಿಂದ ಆ ತುದಿಗೆ ನೀರು ಒಂದು ನಿಮಿಷದೊಳಗೆ ಹೋಗ್ತದೆ. ನಡುವಲ್ಲೆಲ್ಲೋ ಇದ್ದರೆ ಸಿಕ್ಕಿಬಿದ್ದ ಹಾಗೇ. ತಪ್ಪಿಸಿಕೊಳ್ಳಲು ದಾರಿಯೇ ಇಲ್ಲ. ಅದ್ಕೇ ನಾವೇ ಜಾಗ್ರತೆಯಾಗಿರ್ತೇವೆ. ನೆರೆಯ ಮೊದಲು ಇಲ್ಲಿ ನೆಲ ಹದವಾಗಿ ನಡುಗ್ತದೆ. ನಾನು ಶೂ ಹಾಕೋದೇ ಇಲ್ಲ, ಬರಿಗಾಲಲ್ಲಿ ನೆಲದ ಕಂಪನ ಬೇಗನೇ ಅರಿವಾಗ್ತದೆ... ನಾನಿದರೊಳಗೇ ಆಡುತ್ತಾ ಬೆಳೆದೆ. ನನಗೆಂದೂ ಇಲ್ಲಿ ಭಯವೇ ಇಲ್ಲ. ಹಾಗೇ, ನನಗೆಂದೂ ಇಲ್ಲಿ ಅಪಾಯವಾಗಿಲ್ಲ." ಅವನ ಮಾತು ಕೇಳುತ್ತಾ ಮತ್ತೆ ಮತ್ತೆ ಫೋಟೋಗಳಿಗಾಗಿ ಅಲ್ಲಲ್ಲಿ ನಿಲ್ಲುತ್ತಾ ಬಿರುಕಿನ ಮುಂಬಾಗಿಲಿಗೆ ಬಂದೆವು. ಟ್ರಕ್ ಏರಿ ಹೊರಟಾಗ ನಾಲ್ಕು ಮೂವತ್ತೈದು. ಒಂದು ಗಂಟೆಯ ಟೂರ್, ನಮಗೆ ಹದಿನೈದು ನಿಮಿಷಗಳ ಬೋನಸ್ ಸಿಕ್ಕಿತ್ತು. ಸಂಜೆಯ ಸಮಯವಾದ್ದರಿಂದ ರಷ್ ಇರಲೇ ಇಲ್ಲವಾದ್ದರಿಂದ ಈ ಬೋನಸ್.
ಪುನಃ ಮಣ್ಣಿನ ರಸ್ತೆಯಲ್ಲಿ, ಗಾಳಿಯ ಹಾದಿಯಲ್ಲಿ ಮಾತಿಲ್ಲದೆ ಬೆರಗಿನೊಳಗೇ ಸಾಗಿ ಬಂತು ಟ್ರಕ್. ಕೊನೆಗೆ "ಐಯಾಮ್ ಗ್ಲಾಡ್ ಐ ಮೆಟ್ ಎ ನೇಟಿವ್ ಇಂಡಿಯನ್ ಕೃಷ್ಣ" ಅಂದೆ, ಇಪ್ಪತ್ತಾರು-ಇಪ್ಪತ್ತೆಂಟರ ಅವನ ಕೈಕುಲುಕುತ್ತಾ. ಸೌಮ್ಯವಾಗಿ ಮೆಲುನಗೆ ನಕ್ಕು ತಲೆ ಬಾಗಿಸಿ ವಂದನೆ ಹೇಳಿದವ ಹಿಂದಿನ ಜನ್ಮದಲ್ಲಿ ಭಾರತೀಯನೇ ಆಗಿದ್ದನೆ?
ಪೇಜ್ ಸಿಟಿ ಬಿಟ್ಟಾಗ ಐದೂಕಾಲು. ಹೈವೇ ೮೯ ಹಿಡಿದು ಲೇಕ್ ಪವೆಲ್ ಬಳಸಿ ಅರಿಝೋನಾದಿಂದ ಯೂಟಾದೊಳಗೆ ಸಾಗಿದೆವು. ಮನಸ್ಸಿನ್ನೂ ಆಂಟಲೋಪ್ ಕ್ಯಾನಿಯನ್ನಿನ ಬಿರುಕಿನಲ್ಲೇ ಸಿಲುಕಿಕೊಂಡಿತ್ತು. ನಮ್ಮ ನಡುವೆ ಬಹುತೇಕ ಮೌನವಿತ್ತು. ಕ್ಯಾಮರಾವನ್ನು ಪೀಠಕ್ಕೇರಿಸಿದ್ದರೂ ಕೆಲವೊಂದು ಚಿತ್ರಗಳು ಸರಿಬಂದಿರಲಿಲ್ಲ, ಬೆಳಕಿನ ಕೋನ ಸರಿಯಿರಲಿಲ್ಲ. ಬೆಳಗಿನ ಹೊತ್ತಿನ ಟೂರ್ ತಗೊಳ್ಳೋದೇ ಒಳ್ಳೇದು (ಅದೇ ಹೆಚ್ಚು ಜನಪ್ರಿಯವೂ), ಸ್ವಯಂಚಾಲಿತ ಕ್ಯಾಮರಾಕ್ಕಿಂತ ಮೇಲು ದರ್ಜೆಯ ಎಸ್ಸೆಲ್ಲಾರ್ ಕ್ಯಾಮರಾ ಉತ್ತಮವಿರಬಹುದು, ಆದರೆ ಅದನ್ನು ಉಪಯೋಗಿಸಲು ಗೊತ್ತಿರಬೇಕಲ್ಲ.... ನನ್ನ ಯೋಚನೆಗಳಿಗೆ ಕಡಿವಾಣ ಬಿದ್ದದ್ದು "ಸೆಲ್ ಫೋನ್ ಚಾರ್ಜಿಗಿಡು" ಕೋರಿಕೆಯಿಂದ.
ಸೆಲ್ ಫೋನ್ ತೆಗೆದು ಚಾರ್ಜರ್ ವಯರನ್ನು ಕಾರಿನ ಸಿಗಾರ್ ಲೈಟರಿಗೆ ಸಿಕ್ಕಿಸಿದೆ. ಪವರ್ ಇಲ್ಲ. ಇದರ ಪ್ಲಗ್ ಸರಿಯಿಲ್ಲವೇನೋ ಅಂದುಕೊಂಡು ಕ್ಯಾಮರಾ ಬ್ಯಾಟರಿ ಚಾರ್ಜರನ್ನು ಲೈಟರಿಗೆ ಸಿಕ್ಕಿಸಿದೆ. ಅಲ್ಲೂ ಲೈಟ್ ಇಲ್ಲ. ಬೆಳಗ್ಗೆ ಅವರ ಸೆಲ್ ಫೋನೂ ಚಾರ್ಜ್ ಆಗಿಲ್ಲದ ಕಾರಣ ಈಗ ಗೊತ್ತಾಯ್ತು. ಕಾರಿನ ಸಿಗಾರ್ ಲೈಟರ್ ಢಮಾರ್ ಆಗಿತ್ತು. ಹಾಗಾದ್ರೆ ಈಗ ನಮ್ಮ ಕ್ಯಾಮರಾ ಬ್ಯಾಟರಿಗಳನ್ನು, ಸೆಲ್ ಫೋನುಗಳನ್ನು ಚಾರ್ಜ್ ಮಾಡುವ ಪರಿ? ನಾವು ಇವತ್ತು ರಾತ್ರೆಯೂ ಝಿಯಾನ್ ನ್ಯಾಷನಲ್ ಪಾರ್ಕಿನಲ್ಲಿ ಕ್ಯಾಪಿಂಗ್ ಮಾಡುವವರು. ಅಲ್ಲಿ ಎಲೆಕ್ಟ್ರಿಕ್ ಔಟ್ ಲೆಟ್ ಸಾಮಾನ್ಯವಾಗಿ ಇರೋದಿಲ್ಲ. ನಾಳೆ ರಾತ್ರೆಯಷ್ಟೇ ಸೆಡಾರ್ ಸಿಟಿಯಲ್ಲಿ ಹೋಟೇಲ್ ವಾಸ. ನಾಳೆಯವರೆಗೆ ಕ್ಯಾಮರಾ ಬ್ಯಾಟರಿಗಳೂ ಸೆಲ್ ಫೋನ್ ಬ್ಯಾಟರಿಗಳೂ ಬಾರವು... ಏನು ಮಾಡೋದು? ಇದ್ದ ಚಾರ್ಜರುಗಳನ್ನೆಲ್ಲ ಮತ್ತೆ ಮತ್ತೆ ಸಿಕ್ಕಿಸಿ, ಎಳೆದು, ತಿರುಗಿಸಿ, ಸಿಕ್ಕಿಸಿ... ಉಹುಂ ಪ್ರಯೋಜನವಾಗಲೇ ಇಲ್ಲ. ಈಗ ಈ ಯೋಚನೆಯ ಭಾರ ನಮ್ಮ ನಡುವಿನ ಮಾತನ್ನು ಹಿಸುಕಿತು.
ಮೌನದಲ್ಲೇ ಝಿಯಾನ್ ಕ್ಯಾಂಪ್ ಗ್ರೌಂಡ್ ತಲುಪಿದಾಗ, ನಮ್ಮ ವಾಚಿನಲ್ಲಿ ಸಮಯ ಎಂಟು, ಅಲ್ಲಿಯ ಸಮಯ: ಒಂಭತ್ತು ಗಂಟೆ. ಹದವಾದ ಬೆಳದಿಂಗಳಲ್ಲಿ ಟೆಂಟ್ ಹಾಕಿ, ನಂತರ ‘ಯೂಟಾ’ದಲ್ಲಿ ‘ಬೆಳದಿಂಗಳೂಟ’ ಮಾಡಿದೆವು. ಕಸವನ್ನೆಲ್ಲ ತುಂಬಿದ್ದ ಚೀಲವನ್ನು ಗಾಳಿಗೆ ಹಾರದಂತೆ ಸಿಕ್ಕಿಸಲು ಏನಾದರೂ ಇದೆಯಾ ಅಂತ ನೋಡುವಾಗ ಪಕ್ಕದಲ್ಲಿಯೇ ಇದ್ದ ಎಲೆಕ್ಟ್ರಿಕ್ ಔಟ್ ಲೆಟ್ ಪೋಲ್ ಕಾಣಿಸಬೇಕೆ? ನಿಧಿ ಸಿಕ್ಕಿದ ಹಾಗಾಗಿತ್ತು. ಅದು ಇದ್ದ ಕಾರಣ- ಇವೆಲ್ಲವೂ ಆರ್.ವಿ. (ರಿಕ್ರಿಯೇಷನ್ ವೆಹಿಕಲ್- ಒಂದರ್ಥದಲ್ಲಿ ಚಲಿಸುವ ಮನೆಯಂಥ ಗಾಡಿ- ನಿಲ್ಲಿಸಿಕೊಳ್ಳುವ) ಸೈಟುಗಳು. ಈ ಸೈಟುಗಳಿಗೆಲ್ಲ ನೀರು ಮತ್ತು ಕರೆಂಟ್ ಸರಬರಾಜು ಇರುತ್ತದೆ. ಬರೀ ಟೆಂಟ್ ಸೈಟ್ ಆದ್ರೆ ಏನೂ ಇರೋದಿಲ್ಲ, ಅಥವಾ ಅಪರೂಪಕ್ಕೊಮ್ಮೆ ನೀರ ನಳ್ಳಿ ಇರುತ್ತದೆ, ಕರೆಂಟ್ ಇಲ್ಲ.
ಕಂಬದ ಪ್ಲಗ್ ಬಾಕ್ಸಿನೊಳಗೆ ಒಂದು ಕ್ಯಾಮರಾ ಬ್ಯಾಟರಿ ಚಾರ್ಜಿಗಿಟ್ಟು ಮಲಗಿದೆವು, ಹತ್ತಿರದ ತೊರೆಯ ಕಲರವ ಕೇಳುತ್ತಾ.