ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday 21 June, 2009

ಶುಭ ಆಶಯಗಳು, ಶುಭ ಹಾರೈಕೆಗಳು, ಶುಭ ವಂದನೆಗಳು.


ಮೇ ತಿಂಗಳ ಎರಡನೇ ಭಾನುವಾರ ಅಮ್ಮಂದಿರ ದಿನ
ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನ


ಎಲ್ಲ ಅಪ್ಪಂದಿರಿಗೂ ಈ ನೆವನದಲ್ಲಿ ಒಂದೊಂದು ಕಾರಣಗಳಿಗಾಗಿ ಒಂದೊಂದು ನಮನಗಳು.

ನಿಮ್ಮ ಕಿರುಬೆರಳನ್ನು ಪುಟ್ಟ ಹಿಡಿಯೊಳಗೆ ಇರಿಸುವುಕ್ಕಾಗಿ;
ಹೆಗಲ ಮೇಲೇರಿಸಿಕೊಂಡು ಜಾತ್ರೆಯಲ್ಲಿ ಪಲ್ಲಕ್ಕಿಯ ದೇವರನ್ನು ಕಾಣಿಸುವುದಕ್ಕಾಗಿ;
ತೋಟದ ಕೆರೆಯಲ್ಲಿ ಈಜು ಹೊಡೆವಾಗ ಎಳೆ ಹೊಟ್ಟೆಯ ಕೆಳಗೆ ಕೈಯಿಟ್ಟು ಧೈರ್ಯ ಕೊಡುವುದಕ್ಕಾಗಿ;
ತೊರೆಯ ದಾಟುವಾಗ ಮರದ ಸೇತುವೆಯಲ್ಲಿ ಬೆನ್ನ ಹಿಂದೆಯೇ ಮೆಲ್ಲನೆ ಬರುವುದಕ್ಕಾಗಿ;
ಯಕ್ಷಗಾನದ ರಕ್ಕಸವೇಷ ನೋಡಿ ಬೆದರಿದಾಗ ಸಾಂತ್ವನ ಹೇಳುವುದಕ್ಕಾಗಿ;
ಗೇರು, ಮಾವು, ಹಲಸುಗಳನ್ನು ನಾಜೂಕಾಗಿ ಬಿಡಿಸಿ ತಿನಿಸುವುದಕ್ಕಾಗಿ;
............ .......... .......... ............

ಮಾತು ಮೌನಗಳಲ್ಲಿ ಹುದುಗಿರುವ ನೂರಾರು ಭಾವಗಳಿಗಾಗಿ....
ನಮನಗಳು ವಂದನೆಗಳು ಪ್ರಣಾಮಗಳು.

Saturday 6 June, 2009

ಬರವಣಿಗೆಯಲ್ಲಿ ಮಾಹಿತಿಗಳ ಪ್ರಾಮುಖ್ಯ-೦೨

"ವಸಂತಕಾಲದಲ್ಲಿ ಮಾತ್ರ ಹೂಗಳು ಅರಳುವುದಿಲ್ಲ. ಪಂಡಿತಪಾಮರ ಕವಿಗಳು ಕಂಡಿರುವ ರೀತಿಯಲ್ಲಿ ನಾನು ಕಾಲವನ್ನು ಕಾಣಲಾಗದು. ಶಬ್ದಗಳನ್ನು ಹಿಡಿದು ಓದುವುದಾದರೆ ನಿಮಗೆ ಭಾವ ಸ್ಪಂದನ ಸಾಧ್ಯವಾಗದು. ಸೃಜನಶೀಲತೆಗೆ ಕಾಲದ ಹಂಗು ಇರುವುದಿಲ್ಲ.-- ಮೊಗಳ್ಳಿ."

ಕೆಂಡಸಂಪಿಗೆಯಲ್ಲಿ ಮೊಗಳ್ಳಿ ಗಣೇಶ್ ಅವರ "ಗತಿ" ಕಾದಂ-ವಾಹಿ (ಕಾದಂಬರಿ-ಧಾರಾವಾಹಿ)ಗೆ ಓದುಗರೊಬ್ಬರು ಬರೆದ ಪ್ರತಿಕ್ರಿಯೆ- "ಮಾಗಿಯಲ್ಲಿ ವಸಂತವೆ? ಅಚ್ಚರಿ! ಪರಮಾಚ್ಚರಿ!!..."-ಗೆ ಮೊಗಳ್ಳಿಯವರು ಹೀಗೆ ಸಮರ್ಥನೆ ಕೊಟ್ಟುಕೊಂಡಿದ್ದರು. ಅದರ ಸಂದರ್ಭ?

"ಗತಿ" ಧಾರಾವಾಹಿಯ ಇಪ್ಪತ್ತೆಂಟನೆಯ ಕಂತು: "ಪ್ರಾತಃಕಾಲದ ಹೊಳೆಯಲ್ಲಿ ಮಿಂದು".
ಅದರ ಮೊದಲೆರಡು ವಾಕ್ಯಗಳು ಹೀಗಿವೆ:
"ಪ್ರಾತಃಕಾಲದ ಮಾಗಿಯ ಚಳಿ ಎಚ್ಚರಿಸಿತ್ತು. ಇಬ್ಬನಿ ಕರಗಿ ನೀರಾಗಿ ತೊಟ್ಟಿಕ್ಕುತ್ತಿತ್ತು."

ಮುಂದಿನ ಸಾಲುಗಳಲ್ಲಿಯೇ ಕಾಡಿನ (ಸುಂದರ ವಸಂತದ ಉಲ್ಲಾಸದ) ವರ್ಣನೆ:
"ಕಾಡೆಲ್ಲ ಉಲಿಯುತ್ತಿತ್ತು. ಹಸಿರು ಸಿರಿಯ ಕಂಪು ಗಾಳಿಯಲಿ ಬೆರೆತು ಜೀವಜಾಲ ಝೇಂಕರಿಸುತ್ತಿತ್ತು. ಕಾಡಿನ ನೂರಾರು ಹೂಗಳು ಅರಳಿ ಮಧು ತುಂಬಿ ದುಂಬಿಗಳ ಕರೆಯುತ್ತಿದ್ದವು... ...ಗೀಜಗನ ಹಕ್ಕಿಗಳಂತು ತಮ್ಮ ಅಮರ ಲೋಕಕ್ಕೆ ಯಾವ ತಡೆಯೂ ಇಲ್ಲ ಎಂಬಂತೆ ವರ್ತಿಸುತ್ತಿದ್ದವು. ತರಾವರಿ ಬಣ್ಣದ ಹೂಗಳು ಮೋಹಕವಾಗಿ ಕಂಗೊಳಿಸುತ್ತಿದ್ದವು. ನರ್ತಿಸುತ್ತಿದ್ದ ನವಿಲುಗಳು ನಮ್ಮನ್ನು ಕಂಡು ಪೊದೆಗಳಲ್ಲಿ ಮರೆಯಾದವು... ...ಸೃಷ್ಟಿಯ ತರಾವರಿ ಹೂಗಳಿಂದ ಇಡೀ ಕಾಡು ಕಂಪು ಸೂಸುತ್ತಿತ್ತು..."

ಅಧ್ಯಾಯದ ಮೊದಲೆರಡು ವಾಕ್ಯಗಳಿಗೂ ನಂತರ ಅಲ್ಲಲ್ಲಿ ಕಂಡುಬರುವ ಈ ವರ್ಣನೆಗಳಿಗೂ ಸಂಬಂಧವೇ ಇಲ್ಲವೆಂದು ಓದುಗರಿಗೆ ಅನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಓದುತ್ತಿರುವಾಗ ನನಗೂ ಹಾಗೇ ಅನಿಸಿತ್ತು. ಕೊನೆಯಲ್ಲಿದ್ದ ಈ ಪ್ರತಿಕ್ರಿಯೆ-ಉತ್ತರಗಳನ್ನು ಗಮನಿಸಿದಾಗ ಮತ್ತೊಮ್ಮೆ ಇದನ್ನೇ ಬರೆಯುವುದರಲ್ಲಿ ಅರ್ಥವಿಲ್ಲವೆಂದು ಸುಮ್ಮನಾಗಿದ್ದೆ. ಆದರೆ, ಒಂದು ಕಥಾನಕದೊಳಗೆ ಕಾಲಮಾನದ ವರ್ಣನೆ ಎಷ್ಟು ಸಮಂಜಸವಾಗಿರಬೇಕು? ಎಷ್ಟು ವಸ್ತುನಿಷ್ಠವಾಗಿರಬೇಕು? ಲೇಖಕರ ಕಲ್ಪನೆಗೆ ಮಿತಿ ಪರಿಧಿ ಎಲ್ಲಿ, ಹೇಗೆ ಇರಬೇಕು? ಇರಬೇಕೇ ಬೇಡವೆ? ಇವೆಲ್ಲ ಪ್ರಶ್ನೆಗಳು ಎದ್ದಿದ್ದವು. ಇವನ್ನೆಲ್ಲ ಒಮ್ಮೆ ನಿಮ್ಮೊಡನೆಯೂ ಹಂಚಿಕೊಂಡಿದ್ದೆ.
ಆ ಪ್ರಶ್ನಾವಳಿ-ಸಂವಹನ ಇಲ್ಲಿದೆ; ಇನ್ನೊಮ್ಮೆ ಓದಿ ನೋಡಿ.

ಮತ್ತೆ ಮತ್ತೆ ಅದೇ ಪ್ರಶ್ನೆ ನನ್ನನ್ನು ಕಾಡುತ್ತದೆ; ಕಾಡುತ್ತಲೇ ಇರುತ್ತದೆ. ಇಲ್ಲಿ ಮೊಗಳ್ಳಿಯವರು ಹೇಳಿದ ರೀತಿ- "...ಪಂಡಿತಪಾಮರ ಕವಿಗಳು ಕಂಡಿರುವ ರೀತಿಯಲ್ಲಿ ನಾನು (ಮೊಗಳ್ಳಿ) ಕಾಲವನ್ನು ಕಾಣಲಾಗದು..." ಅಂದರೇನು? ಪಂಡಿತ-ಪಾಮರ ವಿರುದ್ಧ ಪದಗಳು. ಅಂದರೆ, ಅವರು ಪಂಡಿತರೂ ಅಲ್ಲ, ಪಾಮರರೂ ಅಲ್ಲ, ಕವಿಗಳೂ ಅಲ್ಲ- ಎಂದಾಗುತ್ತದೆ. ಮತ್ಯಾರು?

ಇಲ್ಲಿ ನಾನು ಮೊಗಳ್ಳಿಯವರೊಬ್ಬರ ಮೇಲೆ ವಾಗ್ಯುದ್ಧ ಮಾಡುತ್ತಿಲ್ಲ. ನಾವೆಲ್ಲ ಬರವಣಿಗೆಯಲ್ಲಿ ತೊಡಗಿಕೊಂಡವರು. ಒಂದಲ್ಲ ಒಂದು ರೀತಿಯಲ್ಲಿ ಸೃಜನಶೀಲತೆಯ ಕನ್ನಡಿಯಲ್ಲಿ ಲೋಕದ ಹೊಸ ಬಿಂಬ ಕಾಣುವವರು. ಆದರೆ ಹೊಸ ಬಿಂಬವೆಂದರೆ, ಮಾಗಿಯಲ್ಲೂ ವಸಂತನನ್ನು ಕಾಣುವುದೆ?

ಈ ಅಧ್ಯಾಯದ ಮೊದಲ ವಾಕ್ಯದ ಎರಡನೆಯ ಪದ ‘ಮಾಗಿ’ ಇಲ್ಲಿಲ್ಲದೇ ಹೋಗಿದ್ದಿದ್ದರೆ ಈ ಎಲ್ಲ ಗೊಂದಲಗಳೇ ಇರುತ್ತಿರಲಿಲ್ಲ. ಕಾಡಿನ ಮುಂಜಾನೆಯಲ್ಲಿ ಚಳಿ ಇರುತ್ತದೆ. ವಸಂತದ ಉಲ್ಲಾಸ ಹೊತ್ತ ಮುಂಜಾನೆಯೂ ಅದಕ್ಕೆ ಹೊರತಾಗದು.

ಇದೇ ಕಾದಂ-ವಾಹಿಯ ಇಪ್ಪತ್ತಾರನೆಯ ಕಂತಿನಲ್ಲೂ (ಕಾಡದಾರಿಯ ಸೂರ್ಯಕಾಂತಿ ನೆನಪು- ಕಂತಿನಲ್ಲಿ) ಇಂತಹುದೇ ಆಭಾಸವಿತ್ತು. ಅಲ್ಲಿ ಕಥಾನಾಯಕ ಅವನ ಸಹಚರನೊಡನೆ ಕಾಡಿನಲ್ಲಿ ಸಂಚರಿಸುತ್ತಾ ಸೂರ್ಯಕಾಂತಿಯ ಹೊಲಗಳ ನೆನಪನ್ನು ಮಾಡಿಕೊಳ್ಳುತ್ತಾನೆ. ಹಾಗೆಯೇ ಕಾಡಿನಲ್ಲಿ ಲಾಂಟಾನಾ ಹೂಗಿಡಗಳ ಪೊದೆಗಳನ್ನು ವರ್ಣಿಸಲಾಗಿದೆ. ಈ ಕಂತಿನ ಕೊನೆಯಲ್ಲಿ ಓದುಗರೊಬ್ಬರು ಬರೆದ: "ವಿಜಯನಗರ ಕಾಲದಲ್ಲಿ ಲಾಂಟಾನಾ ಭಾರತದಲ್ಲಿರಲಿಕ್ಕಿಲ್ಲ, ಅದು ೧೮೦೯ ಸಮಯದಲ್ಲಿ ನಮ್ಮ ದೇಶಕ್ಕೆ ಅಲಂಕಾರಿಕ ಗಿಡವಾಗಿ ಬಂದದ್ದು..." ಎನ್ನುವರ್ಥದ ಕಮೆಂಟಿಗೆ ಅವರು ವಿಜಯನಗರದ ಭೂಭಾಗ ಆಫ್ರಿಕಾದ ಕೆಲವೊಂದು ಭೂಭಾಗಕ್ಕೆ ಹೊಂದುತ್ತದೆಂದೂ ಕಾಂಟಿನೆಂಟಲ್ ಷಿಫ್ಟ್ ಸಮಯದಲ್ಲಿ ಈ ಭಾಗವು ಆಫ್ರಿಕಾದಿಂದ ಬೇರೆಯಾದ್ದರಿಂದ ಈ ಹೋಲಿಕೆಯೆಂದೂ ಉತ್ತರಿಸಿದ್ದಾರೆ. ಆದರೆ, ಲಾಂಟಾನಾ ದಕ್ಷಿಣ ಅಮೆರಿಕಾ ಭೂಖಂಡದ ಮೂಲಸಸ್ಯ ಪ್ರಭೇದ. ಕಾಂಟಿನೆಂಟಲ್ ಷಿಫ್ಟ್ ಮತ್ತು ಇದಕ್ಕೆ ಸಂಬಂಧವಿಲ್ಲ. ಈ ವಿವರಣೆಯೂ ನನಗೆ ಸರಿಕಂಡಿರಲಿಲ್ಲ; ಆದರೂ ಅದನ್ನು ಕೆದಕಲು ಹೋಗಿಲ್ಲ.

ಅದರ ನಂತರ, ಅದೇ ಕಂತಿನ ಇನ್ನೊಂದು ವಿಷಯ ಸೂರ್ಯಕಾಂತಿಯ ಬಗ್ಗೆ ನಾನು ಈ ಪ್ರತಿಕ್ರಿಯೆ ಬರೆದಿದ್ದೆ:

"‘...ಬೆಳೆದು ನಿಂತ ಸೂರ್ಯಕಾಂತಿ ಹೊಲಗಳ ನಡುವೆ ...’-- ಮೊಗಳ್ಳಿಯವರೇ ಇದನ್ನೊಂದಿಷ್ಟು ಪರಿಶೀಲಿಸಿ. ವಿಜಯನಗರ ಕಾಲದಲ್ಲಿ ಭಾರತದಲ್ಲೆಲ್ಲೂ ಸೂರ್ಯಕಾಂತಿಯನ್ನು ಬೆಳೆಯಾಗಿ ಬೆಳೆಯುತ್ತಿರಲಿಲ್ಲ ಅನ್ನುವ ನನ್ನ ಊಹೆಗೆ ಈ ವೆಬ್-ಸೈಟ್ ಪೂರಕ ಮಾಹಿತಿ ಕೊಟ್ಟಿದೆ. ಒಮ್ಮೆ ನೋಡಿಕೊಳ್ಳಿ:
http://www.commodityonline.com/commodities/oil-oilseeds/refinedsunfloweroil.php
"Sunflower was introduced in India as an oilseed crop for the first time in 1969."
ವಿವರಣೆಗಳು ಚೆನ್ನಾಗಿ ಹೊಂದುತ್ತವೆ ಅಂದ ಮಾತ್ರಕ್ಕೆ ಅದು ಕಥಾನಕದ ಆ ಕಾಲಕ್ಕೆ, ವಾತಾವರಣಕ್ಕೆ ಹೊಂದಬೇಕಾದ್ದೂ ನಿಮ್ಮಂಥಾ ಒಳ್ಳೆಯ ಲೇಖಕನ ಬರವಣಿಗೆಯಲ್ಲಿರಬೇಕಾದ factual correctness ಅಲ್ಲವೆ? ವಿವರಣೆಗಳ ವಿವರಗಳನ್ನು ಪರಿಶೀಲಿಸಿ ಬರವಣಿಗೆಯನ್ನು ಸಶಕ್ತವಾಗಿಸುವಿರೆಂದು ಆಶಿಸುತ್ತೇನೆ. -ಜ್ಯೋತಿ...."

ಇದಕ್ಕೆ ಇಂದಿನತನಕ ಯಾವುದೇ ಉತ್ತರವಿಲ್ಲ. ಇದೇ ಹಿನ್ನೆಲೆಯಲ್ಲಿ ನಾನು ಈ ಹಿಂದೆ "ಬರವಣಿಗೆಯಲ್ಲಿ ಮಾಹಿತಿಗಳ ಪ್ರಾಮುಖ್ಯ" ಎನ್ನುವ ಪ್ರಶ್ನೆಯನ್ನು ನಿಮ್ಮೆಲ್ಲರ ಮುಂದೆ ತೆರೆದಿಟ್ಟಿದ್ದೆ; ಅದಕ್ಕೆ ಹಲವರು ಉತ್ತರಿಸಿದ್ದೀರಿ. ಆದರೂ... ನನ್ನ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳು ದೊರೆತಿಲ್ಲ. ಯಾರೇ ಆದರೂ ಪ್ರಸಿದ್ಧ ಲೇಖಕರಾದ ಮಾತ್ರಕ್ಕೆ ವಿವರ-ಮಾಹಿತಿಗಳ ನಿಖರತೆ ಗಾಳಿಗೊಡ್ಡಬಹುದೆ? ಇಲ್ಲಿ, ಈ ಲೇಖನದ ಮಿತಿಯಲ್ಲಿ ಮೊಗಳ್ಳಿಯವರ ಗತಿ ಕಾದಂ-ವಾಹಿಯು ಒಂದು ಉದಾಹರಣೆ ಮಾತ್ರ. ಇಂಥ ಹಲವಾರು ಸನ್ನಿವೇಶಗಳು ನಮಗೆ ಓದುಗರಾಗಿ, ಬರಹಗಾರರಾಗಿ ಎದುರಾಗಬಹುದು. ಅವನ್ನು ಹೇಗೆ ಎದುರಿಸಬೇಕು, ನಿಭಾಯಿಸಬೇಕು ಅನ್ನುವ ದಿಕ್ಕಿನತ್ತ ನನ್ನ ನೋಟ.

ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ, ಮೊಗಳ್ಳಿಯವರತ್ತ ಬೊಟ್ಟು ಮಾಡುವ ಉದ್ದೇಶ ನನ್ನದಲ್ಲ; ಅದೊಂದು ಉದಾಹರಣೆ ಮಾತ್ರ. ‘ಗತಿ’ಯ ಬದಲು ಬೇರೆ ಯಾರದೇ/ಯಾವುದೇ ಕಥಾನಕದಲ್ಲಿ ಇಂಥ ಆಭಾಸಗಳು ಸಿಕ್ಕಿದರೂ ಈ ಪ್ರಶ್ನೆ ಎತ್ತುತ್ತಿದ್ದೆ. ಈ ಲೇಖನದ ಗುರಿ ಇಷ್ಟೇ... ಇಂಥ ಗೊಂದಲಗಳು ನಮ್ಮ ಬರವಣಿಗೆಗಳಲ್ಲಿ ನುಸುಳದಂತೆ ಜಾಗ್ರತೆ ವಹಿಸೋಣ. ನೀವೇನೆನ್ನುತ್ತೀರಿ?